ದೇವಿಕ ಸುನೀಲ್
9740372746
[email protected]
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆದಿದ್ದು, ರಾಕೆಟ್ ಮೂಲಕ ನಭಕ್ಕೂ ಹಾರಿದ್ದಾಳೆ ಎಂದು ಹೇಳಿದರೂ, ನಮ್ಮ ಕಣ್ಣಮುಂದೆ ಒಂದು ಆಟೋ ಅಥವಾ ಟ್ರ್ಯಾಕ್ಟರ್ ಅನ್ನು ಹೆಣ್ಣೊಬ್ಬಳು ಚಲಾಯಿಸಿಕೊಂಡು ಹೋಗುತ್ತಿದ್ದರೆ ನಿಬ್ಬೆರಗಾಗಿ ನೋಡುತ್ತೇವೆ. ಇನ್ನು ಮೆಟ್ರೋ ರೈಲನ್ನು ನಾರಿಯೊಬ್ಬಳು ಚಾಲನೆ ಮಾಡುತ್ತಿದ್ದಾಳೆ ಎಂದರೆ…
ಹೌದು, ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರಿನ ಶೋಭೆ ಹೆಚ್ಚಿಸಿರುವ ಮೆಟ್ರೋ ರೈಲಿಗೆ ಜವಾರಿ ದಾವಣಗೆರೆಯ ಹೆಣ್ಣುಮಗಳಾದ ಎಸ್.ಎಂ. ಪದ್ಮಶ್ರೀ ಲೋಕೋಪೈಲೆಟ್ (ಟ್ರೇನ್ ಆಪರೇಟರ್) ಆಗಿ ಸೇರುವ ಮೂಲಕ ನಮ್ಮೂರಿನ ಕೀರ್ತಿ ಹೆಚ್ಚಿಸಿದ್ದಾರೆ.
ಪದ್ಮಶ್ರೀ ನಮಗೇಕೆ ಮೆಚ್ಚುಗೆಯಾಗುತ್ತಾಳೆ ಎಂದರೆ, ಆಕೆ ಈ ಸಾಧನೆಯನ್ನು ಮಾಡಿರುವುದು ಒಂದು ಸಾಮಾನ್ಯ ಬಡ ಕುಟುಂಬದ ಹೆಣ್ಣು ಮಗಳಾಗಿ. ದಾವಣಗೆರೆ ವಿನೋಬ ನಗರದಲ್ಲಿ ವಾಸವಾಗಿರುವ ಮಂಜುನಾಥ್ ಹಾಗೂ ಮೀನಾಕ್ಷಿ ದಂಪತಿಯ ಮೂವರು ಪುತ್ರಿಯರಲ್ಲಿ ಪದ್ಮಶ್ರೀ ಮೊದಲನೆಯವರು.
ತಂದೆ ಸ್ಥಳೀಯ ಕಾಲೇಜೊಂದರಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿಡುವಿನ ವೇಳೆಯಲ್ಲಿ ಆಟೋ ಓಡಿಸಿ, ಐದು ಜನರ ಸಂಸಾರ ನೀಗಿಸುತ್ತಿದ್ದರೂ, ಮಕ್ಕಳ ಓದಿಗೆ ಕೊರತೆ ಮಾಡದೆ ಮೂವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದು , ಅದರ ಫಲವೇ ಮೊದಲ ಮಗಳು ಲೋಕೋಪೈಲೆಟ್ ಆಗಿ ಹೊರಹೊಮ್ಮಿದ್ದು.
ಪದ್ಮಶ್ರೀ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದಾವಣಗೆರೆಯ ಈಶ್ವರಮ್ಮ ಶಾಲೆಯಲ್ಲಿ ಮುಗಿಸಿ, ಡಿಆರ್ಆರ್ ಪಾಲಿಟೆಕ್ನಿಕ್ನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ನಲ್ಲಿ ಡಿಪ್ಲೋಮಾ ಪದವಿ ಪಡೆದರು. ನಂತರ ಜಿಎಂಐಟಿ ಕಾಲೇಜಿನಲ್ಲಿ ಇದೇ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿದರು. ಕೆಲಸದ ಬೇಟೆಯಲ್ಲಿದ್ದಾಗ ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯಲ್ಲಿ ದೊರೆತ ಕೆಲಸಕ್ಕೆ ಸೇರಿಕೊಂಡರು. ಕೆಲಸ ಮಾಡುವಾಗಲೇ ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೇಲ್ ಕಾರ್ಪೊರೇಷನ್ ಲಿ.) ಕರೆದ ಪರೀಕ್ಷೆಯನ್ನು ಬರೆದು `ಟ್ರೇನ್ ಆಪರೇಟರ್’ (ಲೋಕೋಪೈಲೆಟ್) ಆಗಿ 2015 ರಲ್ಲಿ ಸೇರಿದರು.
ಮೊದಲಿಗೆ ಬೈಯ್ಯಪ್ಪನಹಳ್ಳಿಯಲ್ಲಿರುವ ತರಬೇತಿ ಕೇಂದ್ರದಲ್ಲಿ ತರಗತಿ ಹಾಗೂ ಚಾಲನಾ ತರಬೇತಿ ಪಡೆದು, ನಂತರ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಟ್ರೇನ್ ಆಪರೇಟರ್ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಪರ್ಪಲ್ ಲೈನ್ಮಾರ್ಗವಾದ ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆೆವರೆಗಿನ 18 ಕಿ.ಮೀ. ಮಾರ್ಗದಲ್ಲಿ ಪದ್ಮಶ್ರೀ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮಾರ್ಗದಲ್ಲಿ 5 ಅಂಡರ್ಗ್ರೌಂಡ್ ಸ್ಟೇಷನ್ಸ್ ಸೇರಿದಂತೆ 17 ಸ್ಟೇಷನ್ಗಳು ಬರುತ್ತವೆ.
ಮೂರು ವರ್ಷಗಳಲ್ಲಿ 50,000 ಕ್ಕೂ ಹೆಚ್ಚು ಕಿ.ಮೀ. ರೈಲು ಓಡಿಸಿದ್ದು, 2018 ಜನವರಿಯಲ್ಲಿ ಮೆಟ್ರೋದಿಂದ `ಬೆಸ್ಟ್ ಪರ್ಫಾರ್ಮರ್’ ಪ್ರಶಸ್ತಿಗೂ ನಮ್ಮೂರಿನ ಹುಡುಗಿ ಭಾಜನಳಾಗಿದ್ದಾಳೆ. ಪ್ರಶಸ್ತಿ ಜೊತೆಗೆ ನಗದು ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಚಾಲಕರ ಕಾರ್ಯಕ್ಷಮತೆ ಪರೀಕ್ಷಿಸಲೆಂದು ಚಾಲಕರಿಗೆ ಗೊತ್ತಿಲ್ಲದಂತೆ ನಡೆಸುವ ಅಣಕು ಪ್ರದರ್ಶನದಲ್ಲಿ ಸನ್ನಿವೇಶವನ್ನು ಸೂಕ್ತವಾಗಿ ನಿಭಾಯಿಸಿ, ಅಧಿಕಾರಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಮ್ಮ ಮುಖ್ಯಮಂತ್ರಿಗಳು ಚಾಲನೆ ನೀಡಿದ `ಸಿಕ್ಸ್ ಕಾರ್ ಟ್ರೇನ್’ ಅನ್ನು ಮೊದಲ ದಿನವೇ ಡ್ರೈವಿಂಗ್ ಮಾಡುವ ಅವಕಾಶ ಪದ್ಮಶ್ರೀಗೆ ಲಭಿಸಿದ್ದು, ಅದನ್ನು ನೆನೆದು ಪುಳಕಿತರಾಗುತ್ತಾರೆ.
ಕಳೆದ ತಿಂಗಳಷ್ಟೇ ಪದ್ಮಶ್ರೀ `ಸ್ಟೇಷನ್ ಕಂಟ್ರೋಲರ್’ ಆಗಿ ನೇಮಕವಾಗಿದ್ದು, ಅತ್ತಿಗುಪ್ಪೆ, ವಿಜಯನಗರ ಹಾಗೂ ಹೊಸಳ್ಳಿ ಈ ಮೂರು ಮೆಟ್ರೋ ಸ್ಟೇಷನ್ಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ಹೊಣೆಯನ್ನು ಹೊತ್ತಿದ್ದಾರೆ.
ಮೆಟ್ರೋ ರೈಲಿನ ಮಹಿಳಾ ಚಾಲಕಿಯಾಗಿ ನಿಮಗಾದ ಅನುಭವ ಹಂಚಿಕೊಳ್ಳಿ ಎಂದಾಗ, ನಾನು ಉಪನ್ಯಾಸಕಿಯಾಗಬೇಕೆಂಬ ಕನಸು ಕಂಡಿದ್ದವಳು. ಆದರೆ ಅಚಾನಕ್ಕಾಗಿ ಮೆಟ್ರೋ ರೈಲಿನ ಲೋಕೋಪೈಲಟ್ ಆಗುವ ಅವಕಾಶ ಒದಗಿ ಬಂತು. ಇದೊಂದು ವಿಶೇಷ ಅನುಭವ. ಗಾಡಿ ಚಾಲನೆ ಮಾಡುವಾಗ ಪ್ರತಿ ಸೆಕೆಂಡೂ ಮುಖ್ಯವಾಗಿರುತ್ತದೆ. ಆನ್‌ಲೈನ್ ಸೂಚನೆಗಳು ಬರುತ್ತಿರುತ್ತವೆ. ಜೊತೆಗೆ ಗಾಡಿ ಹತ್ತುವ ಪ್ರಯಾಣಿಕರ ಮೇಲೂ ಗಮನವಿರಬೇಕಾಗುತ್ತದೆ. ಒಂದು ರೀತಿ ಮಲ್ಟಿ ಟಾಸ್ಕಿಂಗ್ ಆಗಿರುತ್ತದೆ. ಇಲ್ಲಿ ಸಮಯ ಪ್ರಜ್ಞೆ ಬಹುಮುಖ್ಯ.
ಹೆಣ್ಣು ಮಕ್ಕಳಿಗೆ ಸ್ವಲ್ಪ ಕಷ್ಟದ ಕೆಲಸವೇ ಆದರೂ ಈ ವೃತ್ತಿ ನನ್ನನ್ನು ಜನರು ಗುರ್ತಿಸುವಂತೆ ಮಾಡಿದೆ. ಕೆಲವರಂತೂ ರೈಲು ಚಲಾಯಿಸುತ್ತಿರುವುದು ಹೆಣ್ಣು ಮಗಳು ಎಂದು ತಿಳಿದು, ಹತ್ತಿರ ಬಂದು ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆಗೆಲ್ಲಾ ನನ್ನ ವೃತ್ತಿಯ ಬಗ್ಗೆ ಮತ್ತಷ್ಟು ಗೌರವ ಹೆಚ್ಚಾಗುತ್ತಿತ್ತು ಎಂದು ಪದ್ಮಶ್ರೀ ಹೇಳುವಾಗ ಮೊಗದಲ್ಲಿ ಸಂತೃಪ್ತಿಯ ಭಾವ ಎದ್ದು ತೋರುತ್ತದೆ.
ಪದ್ಮಶ್ರೀ ಬಾಲ್ಯದಿಂದಲೂ ಬಹುಮುಖ ಪ್ರತಿಭೆ. ಓದಿನಲ್ಲೂ ಮುಂದೆ. ಮೆಟ್ರೋ ನಡೆಸಿದ ಕುಕ್ಕಿಂಗ್, ರಂಗೋಲಿ ಮುಂತಾದ ಸ್ಪರ್ಧೆಗಳಲ್ಲೂ ಬಹುಮಾನ ಗಳಿಸಿದ್ದಾರೆ. `ಬೆಸ್ಟ್ ಫರ್ಫಾರ್ಮೆನ್ಸ್’ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇದಲ್ಲದೆ ಇವರ ಸಾಧನೆ ಗಮನಿಸಿ ರಾಷ್ಟ್ರಮಟ್ಟದ ಶ್ರೀ ಸತ್ಯಸಾಯಿ ಬಾಲವಿಕಾಸ ಅಲ್ಯುಮ್ನಿ ಮೀಟ್ನಲ್ಲಿ `ಎಕ್ಸಲೆನ್ಸಿ ಅವಾರ್ಡ್’ ದೊರೆತಿದೆ. 2017ರ ಮಹಿಳಾ ದಿನಾಚರಣೆಯಂದು ಬೆಂಗಳೂರಿನ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪದ್ಮಶ್ರೀ ಸಂದರ್ಶನ ನಡೆಸಿ ಲೇಖನ ಪ್ರಕಟಿಸಿದೆ.
ತಾನು ಓದಿದ ಈಶ್ವರಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ `ಪ್ರಶಾಂತಿ ಧರ್ಮೋತ್ಸವ’ ದಲ್ಲಿ ಸನ್ಮಾನಿತಳಾಗಿದ್ದಾಳೆ ಪದ್ಮಶ್ರೀ. ಜಿಎಂಐಟಿ ಕಾಲೇಜಿನ ಅಲ್ಯುಮ್ನಿ ಮೀಟ್‌ನ ಮುಖ್ಯ ಅತಿಥಿಯಾಗಿ ಕರೆದು ಗೌರವಿಸಿರುವುದು ಆಕೆಯ ಸಾಧನೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
ತನ್ನ ಈ ಸಾಧನೆಗೆ ತಂದೆ-ತಾಯಿ, ಈಶ್ವರಮ್ಮ ಶಾಲೆಯ ಆಡಳಿತ ಮಂಡಳಿ ಅಲ್ಲಿನ ಗುರು ವೃಂದದವರ ಸಹಕಾರ ಹಾಗೂ ಪ್ರೋತ್ಸಾಹವೇ ಕಾರಣ ಎಂಬುದನ್ನು ಪದ್ಮಶ್ರೀ ಸ್ಮರಿಸುತ್ತಾರೆ. ಇತ್ತೀಚೆಗಷ್ಟೇ ಪದ್ಮ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರ ಅಸಿಸ್ಟೆಂಟ್ ಪ್ರೊಫೆಸರ್ ಪುನೀತ್ ಕುಮಾರ್ ಅವರನ್ನು ವಿವಾಹವಾಗಿದ್ದು, ಪತಿ ಹಾಗೂ ಕುಟುಂಬದವರ ಸಹಕಾರವೂ ತಮಗಿರುವುದರಿಂದ ವೃತ್ತಿ ನಿರ್ವಹಿಸಲು ಸುಲಭವಾಗಿದೆ ಎನ್ನುತ್ತಾರೆ.
ಇಂದು ಮಹಿಳಾ ದಿನಾಚರಣೆ. ಎಲ್ಲಾ ಸೌಲಭ್ಯಗಳನ್ನು ಹೊಂದಿ ಸಾಧನೆ ಮಾಡಿದವರಿಗಿಂತ ಬಡ ಕುಟುಂಬದಲ್ಲಿ ಹುಟ್ಟಿ ವಿದ್ಯಾರ್ಥಿ ವೇತನದಲ್ಲೇ ಓದು ಮುಗಿಸಿ, ವಿಭಿನ್ನ ವೃತ್ತಿಯಲ್ಲಿ ಮುಂದೆ ಸಾಗಿ ಸಾಧನೆಯ ಮೆಟ್ಟಿಲೇರುವುದಿದೆಯಲ್ಲ ಅಂತಹ ಸಾಧಕರು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಜವಾರಿ ಊರಿನ ನಾರಿ ಪದ್ಮಶ್ರೀ ನಮಗೆ ಹೆಮ್ಮೆಯ ಪ್ರತೀಕ ಎನಿಸುತ್ತಾರೆ. ಅವರಿವರ ಪ್ರೇರಣೆಗಿಂತ ಮೊದಲು `ನಮ್ಮೂರ ನಾರಿಯ ಸಾಧನೆ’ ಎಲ್ಲರಿಗೂ ಪ್ರೇರಣೆಯಾಗಲಿ ಅಲ್ಲವೇ….