ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ.
???? : 9448395594. [email protected]
ಬಾಹ್ಯ ಗುಡಿಗೆ ಬದಲು ದೇಹವನ್ನೇ ಗುಡಿಯಾಗಿಸಿಕೊಳ್ಳಲು ಸೂಚಿಸಿ ಜೀವನೇ ಶಿವನಾಗಬೇಕೆಂದರು.
ಇದನ್ನು ಅರ್ಥ ಮಾಡಿಕೊಂಡು ಕಾಯಕ, ದಾಸೋಹ ಮತ್ತು ಪೂಜೆಗೆ ಸಮಾನ ಸ್ಥಾನ ನೀಡಿದರೆ ಯಾವುದಕ್ಕೂ ಹೆದರಬೇಕಿಲ್ಲ.
‘ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನೆದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು. ಆದರೆ ಕಾಡುಗಲ್ಲಿನಂತಿರುವ ಮನುಷ್ಯರನ್ನು ಮೃದುಗೊಳಿಸುವುದು ಹೇಗೆ? ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನ ಬಾಹ್ಯ ಮತ್ತು ಆಂತರಿಕ ವರ್ತನೆಗೆ ಸಂಬಂಧವೇ ಇಲ್ಲ ಎನ್ನುವ ದುರಂತ ಎಲ್ಲರಲ್ಲೂ ಹೆಡೆಯಾಡುತ್ತಲಿದೆ. ಬಸವಣ್ಣನವರ `ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ’ ಕೇವಲ ಭಾಷಣ, ಬರವಣಿಗೆಯ ಸರಕಾಗುತ್ತಿದೆ. `ಒಳಗೆ ಕುಟಿಲ, ಹೊರಗೆ ವಿನಯ’. ನಡೆದಂತೆ ನುಡಿ ಇಲ್ಲ, ನುಡಿದಂತೆ ನಡೆ ಇಲ್ಲ. ದ್ವೇಷ, ಅಸೂಯೆ, ಮತ್ಸರ ಹೃದ್ಗತ ಎನ್ನಬೇಕೋ, ರಕ್ತಗತ ಎನ್ನಬೇಕೋ ತಿಳಿಯದು. ಬಸವಣ್ಣನವರು 12ನೆಯ ಶತಮಾನದಲ್ಲಿದ್ದವರು. ಇಂದಿಗೂ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಏನು ಕಾರಣ?
ವ್ಯಕ್ತಿ ದೊಡ್ಡವನಾಗುವುದು ಜಾತಿ, ಅಧಿಕಾರ, ಬುದ್ಧಿವಂತಿಕೆಯಿಂದ ಎಂದೆಲ್ಲ ಹೇಳುವರು. ಬಸವಣ್ಣನವರಿಗೆ ಉನ್ನತ ಜಾತಿಯಲ್ಲಿ ಜನಿಸಿದ್ದರು. ಬಿಜ್ಜಳನ ರಾಜ್ಯದಲ್ಲಿ ಪ್ರಧಾನಿಯಾಗಿದ್ದರು. ಬುದ್ಧಿವಂತಿಕೆಗೆ ಕೊರತೆ ಇರಲಿಲ್ಲ. ಆದರೆ ಅವರು ದೊಡ್ಡವರಾಗಿದ್ದು, ಇಂದಿಗೂ ಉಳಿದುಕೊಂಡು ಬಂದಿರುವುದು ಜಾತಿ, ಅಧಿಕಾರ, ಬುದ್ಧಿವಂತಿಕೆಯಿಂದ ಅಲ್ಲ. ಅವರು ದೊಡ್ಡವರಾಗಿದ್ದು ಜಾತಿ ಕೊಳೆ ತೊಳೆದುಕೊಂಡದ್ದರಿಂದ. ಅವರಿಗೆ ಉನ್ನತ ಕುಲ ಹೊರಲಾರದ ಹೊರೆಯಾಗಿತ್ತು. ಮೇಲಾಗಲೊಲ್ಲೆ, ಕೀಳಾಗಿರುವೆ ಎಂದು ಶಪಥ ಮಾಡಿದರು. ಅಪ್ಪನು ನಮ್ಮ ಮಾದಾರ ಚೆನ್ನಯ್ಯ ಎಂದು ತಳವರ್ಗದವರನ್ನು ಅಪ್ಪಿಕೊಂಡು ಅವರೊಂದಿಗೆ ಕರುಳಿನ ಸಂಬಂಧ ಬೆಳೆಸಿದರು. ಮಾದಾರ ಚೆನ್ನಯ್ಯನ ಮನೆಯ ದಾಸನ ಮಗ, ಡೋಹರ ಕಕ್ಕಯ್ಯನವರ ಮನೆಯ ದಾಸಿಯ ಮಗಳು ಹೊಲಕ್ಕೆ ಬೆರಣಿ ಆಯಲು ಹೋದಾಗ ಅವರಿಬ್ಬರ ಅಕ್ರಮ ಸಂಬಂಧಕ್ಕೆ ಹುಟ್ಟಿದವ ಎನ್ನುವರು. ಅದಕ್ಕೆ ಕೂಡಲ ಸಂಗನ ಸಾಕ್ಷಿ ಕೊಡುವರು.
ತಮ್ಮನ್ನು ತಾವು ಅಪವರ್ಗೀಕರಣಗೊಳಿಸಿಕೊಂಡು ಸಮಾಜದಿಂದ ಬಹಿಷ್ಟಿತರಾದ, ಆರ್ಥಿಕ-ಸಾಮಾಜಿಕ ಸ್ಥಾನ-ಮಾನಗಳಿಂದ ವಂಚಿತರಾದ ತಳವರ್ಗದ ಜನರೇ ತಮ್ಮ ಬಂಧು ಬಾಂಧವರೆಂದು ತಿಳಿದು ಅವರ ಜೊತೆ ಪ್ರೀತಿಯಿಂದ ಮಾತನಾಡಿದರು. ಅಷ್ಟು ಮಾತ್ರವಲ್ಲ; ಮುಟ್ಟುವ, ಮುಟ್ಟಿಸಿಕೊಳ್ಳುವ, ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸುವ ಕಾರ್ಯವನ್ನು ಸಂತೋಷದಿಂದ ಮಾಡಿದರು. ಆಗ ಬ್ರಾಹ್ಮಣನ ಮೇಲೆ ದಲಿತನ ನೆರಳು ಬಿದ್ದರೂ ಸ್ನಾನ ಮಾಡುವ ಪರಂಪರೆ ಇತ್ತು. ಅವನೊಂದಿಗೆ ಮಾತನಾಡಿದರೆ ಮಾತನಾಡಿದವನದೇ ಬಹುದೊಡ್ಡ ಅಪರಾಧವಾಗಿತ್ತು.
ಅಧಿಕಾರ ಸೇವೆಗೆ ಒಂದು ಸಾಧನ ಎಂದು ತಿಳಿದವರು ಬಸವಣ್ಣನವರು. ಅಧಿಕಾರದಿಂದ ಅವರಲ್ಲಿ ವಿನಯ ಬೆಳೆಯಿತೇ ಹೊರತು ಅಹಂಕಾರವಲ್ಲ. `ಒಡೆಯರು ಬಂದರೆ ಗುಡಿತೋರಣವ ಕಟ್ಟಿ, ನಂಟರು ಬಂದರೆ ಸಮಯವಿಲ್ಲೆನ್ನಿ’ ಎನ್ನುವ ತತ್ವವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದರು.
ಅದೇ ಬಂಧು ಬಾಂಧವರನ್ನು ಆದಷ್ಟು ದೂರ ಇಡಬೇಕೆಂಬ ಸಂಕಲ್ಪ ಮಾಡಿಕೊಂಡರು. ಬಂಧು-ಬಾಂಧವರು ಬರುವುದು ಬಹುತೇಕ ಸ್ವಾರ್ಥ ಸಾಧನೆಗೆ. ಅವರು ನಿಜಕ್ಕೂ ನನ್ನ ಮೇಲಿನ ಗೌರವದಿಂದಲೇ ಬರುವವರಾಗಿದ್ದರೆ `ಇಂದು ಬರುವ ನೆಂಟರು ಅಂದೇಕೆ ಬಾರರು?’ ಎಂದು ಪ್ರಶ್ನೆ ಮಾಡುವರು.
ಅಂದಿನ ಕಾಲದಲ್ಲಿ ಬಹಿಷ್ಕಾರ ಹಾಕುವುದು ತುಂಬಾ ಅವಮಾನಕಾರಿ ಮತ್ತು ಅಪಾಯಕಾರಿ. ಬಹಿಷ್ಕೃತರ ಜೊತೆ ಯಾರೂ ಮಾತನಾಡುವಂತಿಲ್ಲ. ಅವರೊಂದಿಗೆ ವ್ಯವಹರಿಸುವಂತಿಲ್ಲ. ಬೆಂಕಿ, ಬಿಸಿನೀರನ್ನು ನಿಲ್ಲಿಸುತ್ತಿದ್ದರು. ಆದರೆ ಬಾಲಕ ಬಸವ ಇಂಥದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ನೀವು ನನಗೆ ಬಹಿಷ್ಕಾರ ಹಾಕುವ ಮೊದಲು ನಾನೇ ನಿಮಗೆ ಮತ್ತು ನಿಮ್ಮ ಗೊಡ್ಡು ಸಂಪ್ರದಾಯಗಳಿಗೆ ಬಹಿಷ್ಕಾರ ಹಾಕುವೆ ಎನ್ನುವ ದಿಟ್ಟತನ ತೋರಿ ಹುಟ್ಟಿದ ಮನೆ, ಜಾತಿ, ಊರನ್ನು ತ್ಯಜಿಸಿ ಕೂಡಲಸಂಗಮ ಸುಕ್ಷೇತ್ರಕ್ಕೆ ಬರುವರು. ಅಲ್ಲೇ ಸಕಲ ವಿದ್ಯಾಪಾರಂಗತರಾದರು. ಮನೋಬಲ, ಆತ್ಮಸ್ಥೈರ್ಯ ಇದ್ದವ ಎಲ್ಲಿ ಬೇಕಾದರೂ ಬದುಕಬಲ್ಲ ಎನ್ನುವುದನ್ನು ತೋರಿಸಿದರು. ಮುಂದೆ ಅವರ ಬದುಕಿನ ಚಿತ್ರಣವೇ ಬದಲಾಯಿತು.
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ
ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆಯಿತ್ತು.
ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು ‘ಇತ್ತ ಬಾ’ ಎಂದು ಎತ್ತಿಕೊಂಡನು.
ತಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡಿದ್ದಾರೆ ಈ ವಚನದಲ್ಲಿ ಬಸವಣ್ಣನವರು. ಶಿವಶರಣರ ಮನೆ ಎಂದರೆ ಮಹಾಮನೆ ಮತ್ತು ಅನುಭವಮಂಟಪ. ಅಲ್ಲಿ `ದಾಸಿಯ ವರ್ಗದಲ್ಲಿಪ್ಪೆ’ ಎಂದು ಹೇಳಿಕೊಳ್ಳುವುದು ಎಂಥ ವಿನಯ! ಅದೆಷ್ಟು ಅಹಂಕಾರ ನಿರಶನ! ಒಬ್ಬ ಪ್ರಧಾನಿ ಹೀಗೆ ಹೇಳಲು ಸಾಧ್ಯವೇ ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಬಸವಣ್ಣನವರು `ಸದುವಿನಯವೇ ಸದಾಶಿವನನ್ನು ಒಲಿಸುವ ದಾರಿ’ ಎಂದು ನಂಬಿ ನಡೆದಿದ್ದರಿಂದ ಯಮ ಕೂಡ ಹತ್ತಿರ ಸುಳಿಯನು ಎನ್ನುವರು. ಸೇವೆಯಲ್ಲಿಯೇ ಸಂತೃಪ್ತಿ ಕಂಡರು. ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಕಿಂಕರತ್ವದಿಂದ ಅವರ ಬದುಕಿನಲ್ಲಿ ಅದ್ಭುತ ಬದಲಾವಣೆ ಆಯ್ತು. ಅಂಥವರೇ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ, ಕಸ ಹೊಡೆಯುತ್ತಾರೆ, ಸುಖ-ದುಃಖ ವಿಚಾರಿಸುತ್ತಾರೆ ಎಂದರೆ ಅವರ ಬಗ್ಗೆ ತನ್ನಿಂದ ತಾನೇ ಗೌರವ ಮೂಡುವುದು. ಶರಣರು ಬಿಟ್ಟ ಪ್ರಸಾದವನ್ನು ಸ್ವೀಕರಿಸುವ ಎನ್ನುವ ಮಾತು ದೊಡ್ಡವರ ಬಾಯಿಂದ ಬರಲು ಸಾಧ್ಯವೇ? ಆದರೆ ಬಸವಣ್ಣನವರ ಬಾಯಿಂದ ಬಂದದ್ದು ಮಾತ್ರವಲ್ಲ; ಹಾಗೆಯೇ ಬದುಕಿದರು.
ಮಹಾಮನೆಯಲ್ಲಿ ಎಲ್ಲ ಶರಣ ಶರಣೆಯರ ಸಾಲಿನಲ್ಲಿ ಬಸವಣ್ಣನವರೂ ಪ್ರಸಾದಕ್ಕೆ ಕೂತಿದ್ದಾರೆ. ಪ್ರಸಾದ ಎಡೆ ಮಾಡುತ್ತಿದ್ದ ಅವರ ಸಹಧರ್ಮಿಣಿ ಪತಿ ಎನ್ನುವ ಪ್ರೀತಿಯಿಂದ ಬಸವಣ್ಣನವರ ತಟ್ಟೆಯಲ್ಲಿ ಹೆಚ್ಚು ದೇವಾನ್ನವನ್ನು ಎಡೆ ಮಾಡಿದ್ದಾಳೆ. ತಾನು ಒಡೆಯರೆಂದು ನಂಬಿದ್ದವರನ್ನು ಉಪೇಕ್ಷಿಸಿ ನನಗೆ ಹೆಚ್ಚಿಗೆ ನೀಡಿದಳಲ್ಲ ಎಂದು ನೊಂದುಕೊಳ್ಳುವರು. ಎಂಥ ಅಪರಾಧವಾಯ್ತಲ್ಲ ಎಂದು ಪರಿತಪಿಸುವರು. ಅಷ್ಟಕ್ಕೇ ಸುಮ್ಮನಾಗದೇ ಅದನ್ನು ಪ್ರತ್ಯೇಕ ತೆಗೆದಿಡುವರು. ಇಲ್ಲದಿದ್ದರೆ ಅದು ದೇವಾನ್ನವಲ್ಲ; ವಿಷ ಎನ್ನುವ ಭಾವ ಅವರ ಮನದಲ್ಲಿ ಮೂಡುವುದು. ಹಾಗೆ ತೆಗೆದಿಡದೆ ನಾನು ಮರವಿನಿಂದ ಸ್ವೀಕರಿಸಿದರೆ ಕೂಡಲಸಂಗಯ್ಯ ಕೆಡವಿ ನರಕದಲ್ಲಿಕ್ಕುವ ಎನ್ನುವ ಮಾತು ಮತ್ತೆ ಮತ್ತೆ ಮನನ ಮಾಡುವಂತಹುದು. ಇದು ಸಮಾನತೆ. ಇದು ಇಂದು ಬೇಕಾಗಿರುವ ತತ್ವ. ಇಂಥ ವಿವೇಕದಿಂದ ಬಸವಣ್ಣ ಇಂದಿಗೂ ಎಲ್ಲರ ಮನದಲ್ಲಿ ನೆಲೆನಿಂತಿರುವುದು.
ಬಸವಣ್ಣನವರು ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ, ಎಲ್ಲರೂ ಅವರಿಗೆ ಅಪಾರ ಗೌರವ ಕೊಡುತ್ತಿದ್ದರೂ ಅವರು ಅದರಿಂದ ಸ್ವಲ್ಪವೂ ಬೀಗದೆ ಬಾಗಿ ನಡೆದರು. ಅದೇ ನಿಜವಾದ ಮನುಷ್ಯತ್ವ. ಹುಟ್ಟಿನ ಜಾತಿಗೆ ಮನ್ನಣೆಯೇ ಇಲ್ಲ. ಈಗ ‘ಕೊರೊನಾ’ ಎಲ್ಲರನ್ನೂ ಕಾಡುತ್ತಲಿದೆ. ಬಡವ-ಶ್ರೀಮಂತ, ಮೇಲ್ಜಾತಿ-ಕೆಳಜಾತಿ, ಮಂತ್ರಿ-ಕೂಲಿಕಾರ, ಸ್ವಾಮಿ-ಭಕ್ತ ಎನ್ನುವ ಅಂತರವೇ ಅದಕ್ಕಿಲ್ಲ. ಬದುಕಿದರೆ ಸಾಕು; ಜಾತಿ, ಅಂತಸ್ತು ಕಟ್ಟಿಕೊಂಡೇನು ಎಂದು ಎಲ್ಲರೂ ವೈದ್ಯರ ಜಾತಿಯನ್ನು ನೋಡದೇ, ಅವರೇ ನಿಜವಾದ ದೇವರು ಎಂದು ಚಿಕಿತ್ಸೆ ಪಡೆಯುವರು. ಇಲ್ಲಿ ಜಾತಿ, ಅಧಿಕಾರ, ಸಂಪತ್ತು, ಅಹಂಕಾರ ಯಾವುದೂ ಮುಖ್ಯವಾಗುವುದಿಲ್ಲ. ಇಂಥವುಗಳಿಂದಾದರೂ ಮನುಷ್ಯ ವಿವೇಕಿಯಾಗಿ ಬಾಳುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ದೊಡ್ಡವ, ಸಣ್ಣವ ಎನ್ನುವ ಭಾವನೆಯೇ ಬದುಕಿನ ನೆಮ್ಮದಿಗೆ ಬೆಂಕಿ ಇಡುವುದು. ಆದರ್ಶಗಳನ್ನು ಗಾಳಿಗೆ ತೂರುವಂತೆ ಮಾಡುವುದು. ಬದ್ಧತೆಯ ಬದಲು ಹೊತ್ತು ಬಂದಂತೆ ಕೊಡೆ ಹಿಡಿಯುವ ಗೋಸುಂಬೆತನ ಬೆಳೆಸುವುದು. ಇಂಥ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ ಬಸವಣ್ಣನವರ ವಚನಗಳನ್ನು.
ಕರಿ ಘನ: ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ.
ಗಿರಿ ಘನ: ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ.
ತಮಂಧ ಘನ: ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ.
ಮರಹು ಘನ: ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾ
ಕೂಡಲಸಂಗಮದೇವಾ.
ಮನುಷ್ಯನ ಬಂಧನ ಮತ್ತು ಬಿಡುಗಡೆಗೆ ಕಾರಣ ಅವನ ಮನಸ್ಸೇ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ. ಈ ತತ್ವವನ್ನು ಬಸವಣ್ಣನವರು ಎಷ್ಟು ಪರಿಣಾಮಕಾರಿಯಾಗಿ ಮನಗಾಣಿಸಿದ್ದಾರೆ ನೋಡಿ. ಕರಿ ಎಂದರೆ ಆನೆ. ಆನೆಯ ಮುಂದೆ ಮಾನವ ತೀರಾ ಸಣ್ಣವ. ಅದೇನಾದರೂ ಬಾಲ ಬೀಸಿದರೆ, ಸೊಂಡಿಲನ್ನು ತಾಗಿಸಿದರೆ ಮಾನವ ಅಷ್ಟು ದೂರ ಬೀಳುವನು. ಅದಕ್ಕೆ ಸಿಟ್ಟು ಬಂದರೆ ಕಾಲಲ್ಲಿ ಹೊಸಕಿ ಹಾಕಬಹುದು. ಆದರೆ ಅದು ಎಷ್ಟೇ ಬಲಿಷ್ಟ ಪ್ರಾಣಿಯಾಗಿದ್ದರೂ ಒಂದು ಚಿಕ್ಕ ಅಂಕುಶದಿಂದ ಅದನ್ನು ಪಳಗಿಸಬಹುದು. ಆನೆಯ ಮೇಲೆ ಕೂತ ಮಾವುತ ಆ ಅಂಕುಶದಿಂದ ತಿವಿಯುವ ಮೂಲಕ ತಾನು ಹೇಳಿದಂತೆ ಆನೆ ಕೇಳುವಂತೆ ಮಾಡುವನು. ಅಲ್ಲಿಗೆ ಆನೆಗಿಂತ ಅಂಕುಶವೇ ಕರಿದೆನ್ನಲು ಸಾಧ್ಯವೇ?
ಪರ್ವತ ಅಗಾಧವಾದುದು. ಅದರ ಮುಂದೆ ನಿಂತವರೆಲ್ಲ ಕುಬ್ಜರೆ. ಹಿಂದೆ ಪರ್ವತಗಳಿಗೆ ರೆಕ್ಕೆಗಳಿದ್ದವು ಎನ್ನುವ ಪೌರಾಣಿಕ ಕಲ್ಪನೆ ಇದೆ. ಆ ರೆಕ್ಕೆಗಳನ್ನು ಕತ್ತರಿಸಿದ್ದು ಒಂದು ಕ್ಷುಲ್ಲಕವಾದ ವಜ್ರದ ತುಂಡು. ವಜ್ರದ ತುಂಡಿನ ಮುಂದೆ ಬೃಹತ್ತಾದ ಪರ್ವತದ ಆಟವೂ ನಡೆಯದು ಎನ್ನುವ ಸತ್ಯವನ್ನು ಮನಗಾಣಿಸಿದ್ದಾರೆ. ಮುಂದೆ ಕೊಡುವ ನಿದರ್ಶನ ಇನ್ನೂ ಪರಿಣಾಮಕಾರಿ. ಗಾಢ ಕತ್ತಲೆ ಆವರಿಸಿದಾಗ ಕಣ್ಣಿದ್ದವರೂ ಮುಂದೆ ಸಾಗಲು ಆಗದು. ಅಂಥ ಸಂದರ್ಭದಲ್ಲಿ ಒಂದು ದೀಪ ಹಿಡಿದುಕೊಂಡರೆ ಗಾಡಾಂಧಕಾರ ತನ್ನಷ್ಟಕ್ಕೆ ತಾನೇ ಮರೆಯಾಗುವುದು. ಆನೆ, ಪರ್ವತ, ಕತ್ತಲೆಯ ನಿದರ್ಶನಗಳ ಮೂಲಕ ಮಾನವನ ಬಳಿ ಬರುತ್ತಾರೆ ಬಸವಣ್ಣನವರು. ಮನುಷ್ಯನಿಗೆ ಎಲ್ಲಿಲ್ಲದ ಮರೆವು. ಈಗ ಆಡಿದ ಮಾತು ಮರುಕ್ಷಣದಲ್ಲೇ ಮರೆತುಹೋಗಿರುತ್ತದೆ. ಕೆಲವರಿಗಂತೂ ಮರೆಗುಳಿ ರೋಗ. ಅವರು ಮರೆಯುವ ಸ್ವಭಾವದಿಂದಾಗಿ ಎಷ್ಟೋ ಅವಘಡಗಳೂ ನಡೆದಿರುವುದುಂಟು. ಎಲ್ಲಿಗೋ ಹೋಗಬೇಕಾದವರು ಮತ್ತೆಲ್ಲಿಗೋ ಹೋಗುವರು. ಏನನ್ನೋ ಮಾಡಬೇಕಾದವರು ಮತ್ತೇನನ್ನೋ ಮಾಡುವರು.
ಕೆಲವರು ಮರೆವಿನ ರೋಗಕ್ಕೆ ತುತ್ತಾಗಿ ತಮ್ಮ ಮನೆಗೆ ಹೋಗುವ ಬದಲು ಮತ್ತೊಂದು ಮನೆಗೆ ಹೋಗಿ ಕದ ತಟ್ಟುವರು ಎಂದು ತಮಾಷೆಗೆ ಹೇಳುವುದುಂಟು. ಹೀಗೆ ಮರೆವು ಎಷ್ಟೇ ದೊಡ್ಡದಾದರೂ `ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾ’ ಎನ್ನುವರು ಬಸವಣ್ಣನವರು. ಮನುಷ್ಯ ತನ್ನೊಳಗೆ ತಾನು ಮಾಗುತ್ತ, ಮನದೊಡೆಯನ ಸ್ಮರಣೆ ಮಾಡಿಕೊಳ್ಳುತ್ತಿದ್ದರೆ ಅವನ ಅಂತರಂಗದ ಅರಿವು ಜಾಗೃತವಾಗುವುದು. ಬಾಹ್ಯ ಜ್ಞಾನಕ್ಕಿಂತ ಅಂತರಂಗದ ಅರಿವು ವ್ಯಕ್ತಿತ್ವಕ್ಕೆ ನಿಜವಾದ ಘನತೆ ತಂದು ಕೊಡುವುದು.
‘ಮಹಾಮನೆಯಲ್ಲಿ ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ’ ಎನ್ನುವ ಮಾತನ್ನು ಗಮನಿಸಬೇಕು. ಹಾಗೆ ಸುಖದಲ್ಲಿ ಇರಲು ಮುಖ್ಯ ಕಾರಣ ಅಂತರಂಗದಲ್ಲಿ ಮಹಾಜ್ಞಾನ, ಬಹಿರಂಗದಲ್ಲಿ ಸದಾಚಾರ ನೆಲೆಗೊಳಿಸಿದ್ದು.
ಶುದ್ಧ ಕಾಯಕ ಜೀವಿಗಳು. ತನು, ಮನ, ಧನದಲ್ಲಿ ಶುಚಿತ್ವ ಕಾಯ್ದುಕೊಂಡವರು. ಇವತ್ತು ಕಾಯಕ ಜೀವಿಗಳು ಎಂದಾಕ್ಷಣ ಅವರನ್ನು ಗೌರವದಿಂದ ಕಾಣುವವರೇ ವಿರಳ. ನಾನು ಯಜಮಾನ, ಅವರು ಸೇವಕರು. ನಾನು ಹೇಳಿದಂತೆ ಅವರು ಮಾಡಬೇಕು. ಅವರು ಜೀವಿಸಿರುವುದೇ ನನ್ನ ಕರುಣೆಯಿಂದ ಎನ್ನುವ ಅಹಂಭಾವ ಹಲವರದು. ಆದರೆ ಬಸವಣ್ಣನವರಲ್ಲಿ ಅಂತಹ ಅಹಂಭಾವ ಇರಲಿಲ್ಲ. `ಕೂಡಲಸಂಗನ ಶರಣರ ಮನ ನೊಂದರೆ ಆನು ಬೆಂದೆನಯ್ಯಾ’ ಎನ್ನುವ ಸಂಕಲ್ಪ ಅವರದಾಗಿತ್ತು.
ಬಸವಣ್ಣನವರ ಬದುಕು ಪಾರದರ್ಶಕ. ಹಾಗಾಗಿ ತಾವು ತಪ್ಪೆಸಗಿದರೂ ಅದನ್ನು ಒಪ್ಪಿಕೊಳ್ಳುವ ಧೀಮಂತಿಕೆ ಅವರಲ್ಲಿತ್ತು. ಅವರು ಸಾಮಾಜಿಕ ಪರಿವರ್ತನೆಗೆ ಕೈ ಹಾಕುವ ಮುನ್ನ ವ್ಯಕ್ತಿಗತ ದೋಷಗಳ ನಿವಾರಣೆಗೆ ಒತ್ತು ಕೊಟ್ಟರು. ಲೋಕದ ಡೊಂಕನ್ನು ತಿದ್ದುವ ಮುನ್ನ ತಮ್ಮ ತನು, ಮನವನ್ನು ತಿದ್ದಿಕೊಂಡರು. ಅಹಂಕಾರ ಆವರಿಸಿ ನನ್ನನ್ನು ಗಾಯಗೊಳಿಸದಿರಲಿ ಎಂದು ದೇವರಲ್ಲಿ ಮತ್ತೆ ಮತ್ತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ಇಂಥಹ ಗುಣಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಬಸವ ಜಯಂತಿಯ ಆಚರಣೆ ಅರ್ಥಪೂರ್ಣವಾಗುವುದು.
ಬಹಿರಂಗಕ್ಕಿಂತ ಅಂತರಂಗವನ್ನು ಅರಳಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಆದುದರಿಂದ ಬಸವ ಜಯಂತಿಯನ್ನೇ ಒಂದು ನೆಪವಾಗಿಸಿಕೊಂಡು ಶರಣರ ವಚನಗಳನ್ನು ಓದುವ, ಅರಿಯುವ, ಅನುಷ್ಠಾನದಲ್ಲಿ ತರುವ ಸತ್ಸಂಕಲ್ಪ ಸ್ವೀಕರಿಸಬೇಕು. ಬಸವಣ್ಣನವರ ತತ್ವಗಳನ್ನು ಪರಿಪಾಲಿಸುವುದು ಎಂದರೆ ಕೇವಲ ಕಾಯಕ ಮತ್ತು ದಾಸೋಹ ಪ್ರಜ್ಞೆ ಬೆಳೆಸಿಕೊಳ್ಳುವುದಷ್ಟೇ ಅಲ್ಲ. ಬಹಳಷ್ಟು ಜನರು ಕಾಯಕ, ದಾಸೋಹದ ಬಗ್ಗೆ ಮೆಚ್ಚುಗೆ ಸೂಚಿಸಿ ಪುಂಖಾನುಪುಂಖವಾಗಿ ಮಾತನಾಡಿದರೂ ಅವುಗಳ ಜೊತೆಯಲ್ಲೇ ಬರುವ ಪೂಜೆಯನ್ನು ಪರಿಗಣಿಸುವುದಿಲ್ಲ. ಕಾಯಕ, ದಾಸೋಹ ತತ್ವಗಳಿಗೆ ಮೆರುಗು ಬರುವುದೇ ಪೂಜೆಯಿಂದ. ಬಾಹ್ಯ ಗುಡಿಗೆ ಬದಲು ದೇಹವನ್ನೇ ಗುಡಿಯಾಗಿಸಿಕೊಳ್ಳಲು ಸೂಚಿಸಿ ಜೀವನೇ ಶಿವನಾಗಬೇಕೆಂದರು. ಇದನ್ನು ಅರ್ಥ ಮಾಡಿಕೊಂಡು ಕಾಯಕ, ದಾಸೋಹ ಮತ್ತು ಪೂಜೆಗೆ ಸಮಾನ ಸ್ಥಾನ ನೀಡಿದರೆ ಯಾವುದಕ್ಕೂ ಹೆದರಬೇಕಿಲ್ಲ. ಅದನ್ನೇ ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ ವೈದ್ಯ ಸಂಗಣ್ಣ.
ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ.
ಸಕಲ ಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ,
ಪಂಚಾಕ್ಷರಿ ಪ್ರಣಾಮವ ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ, ಇದರಿಂದ ರುಜೆದರ್ಪಂಗಡಗು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ…
ಈ ವಚನದ ಆಶಯ ಅರಿತು ಬಸವ ಜಯಂತಿಯನ್ನು ಮನ, ಮನೆಯೊಳಗೆ ಮಾಡಿಕೊಂಡರೆ ಮನುಷ್ಯತ್ವಕ್ಕೆ ಮೆರಗು ಬರುವುದು.
ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣವೂ ಆಗುವುದು. ಡಾ. ಜಿ. ಎಸ್. ಶಿವರುದ್ರಪ್ಪನವರ ಬಸವಣ್ಣನವರನ್ನು ಕುರಿತ ಪದ್ಯದ ಕೆಲವು ಸಾಲುಗಳೇ ಹೇಳುತ್ತವೆ
`ಬಸವಣ್ಣನವರ ಸ್ಮರಣೆ ಇಂದಿಗೂ ಏಕೆ? ಎನ್ನುವುದಕ್ಕೆ…
ಇರಬಹುದು ನಿನಗಿಂತ ದೊಡ್ಡವರು, ಅನುಭಾವ ದಲ್ಲಿ ಮೇಲೇರಿ ಬಯಲಾದವರು; ಇರಬಹುದು
ನಿನಗಿಂತಲೂ ದೊಡ್ಡ ತ್ಯಾಗಿಗಳು, ವಿರಾಗಿಗಳು.
ಇರಲಾರರೆಂದೇ ತೋರುತಿದೆ ನಿನ್ನಂತೆ ನಿನ್ನೊಳಗಿನಂಕು ಡೊಂಕುಗಳನ್ನು ಕಂಡುಕೊಂಡವರು;
ಇರಲಾರರೆಂದೇ ತೋರುತಿದೆ ನಿನ್ನಂತೆ ಒಳಗು ಹೊರಗುಗಳನ್ನು
ಮುಚ್ಚುಮರೆಯಿಲ್ಲದೆಯೆ ದಿನವೂ ಬಿಚ್ಚಿಟ್ಟು ಒಗೆದು ಮಡಿಮಾಡಿ,
ಇಷ್ಟದೈವದ ಗುಡಿಗೆ ನಡೆ ಮಡಿಯಾಗಿ ಹಾಸಿದವರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ.
9448395594
[email protected]