ಶಿಕ್ಷಣ ಕ್ಷೇತ್ರದಲ್ಲೂ ಸೇವೆ – ದಾವಣಗೆರೆ ಲಯನ್ಸ್ ಕ್ಲಬ್ಬಿಗೆ ಕಿರೀಟ

ಪ್ರಸಕ್ತ ಸಾಲಿನಿಂದ ಕಾಲೇಜು ಆರಂಭ ಇಂದು ಕಾಲೇಜು ಕಟ್ಟಡದ ಉದ್ಘಾಟನೆ

ಮಾನವೀಯತೆ ಮತ್ತು ಮೌಲ್ಯಯುತ ಸೇವೆಗಳಿಂದಾಗಿ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಯನ್ಸ್ ಕ್ಲಬ್ ತನ್ನದೇ ಆದ ವಿಶಿಷ್ಟ ಹೆಸರು ಮಾಡಿದ್ದು, ಈ ಸಂಸ್ಥೆಯ ಅಂತರ ರಾಷ್ಟ್ರೀಯ ಮಟ್ಟದ ಎಲ್ಲಾ ಶಾಖಾ ಕ್ಲಬ್ ಗಳಲ್ಲಿ ದಾವಣಗೆರೆ ಲಯನ್ಸ್ ಕ್ಲಬ್ ಸಮಾಜ ಸೇವೆಯಲ್ಲಿ ಮುಂದಿರುವ ಕ್ಲಬ್ ಎನ್ನುವ ಮೆಚ್ಚುಗೆ ಗಳಿಸಿದೆ.

ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಶತಮಾನದ ಇತಿಹಾಸ ಹೊಂದಿದ್ದು, ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ 2018ರಲ್ಲಿ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಶತಮಾನೋತ್ಸವದ ಅಂಗವಾಗಿ ದಾವಣಗೆರೆಯ ವಿವಿಧ ಕ್ಷೇತ್ರಗಳ ನೂರು ಸಾಧಕರನ್ನು `ದೇವನಗರಿ ಸಿರಿ’ ಬಿರುದು ನೀಡಿ ಗೌರವಿಸಲಾಗಿತ್ತು. ಅಲ್ಲದೇ, 100ರ ಸಂಕೇತದಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ದಾವಣಗೆರೆ ಲಯನ್ಸ್ ಕ್ಲಬ್ ತನ್ನ 50ನೇ ವರ್ಷದ ಅಂಗವಾಗಿ 2019ರಲ್ಲಿ ಸುವರ್ಣ ಮಹೋತ್ಸವ ಸಂಭ್ರಮವನ್ನೂ ವಿಶಿಷ್ಟವಾಗಿ ಆಚರಿಸಲಾಗಿತ್ತು.

ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಡಾ. ಸುರೇಂದ್ರ ಬೊಂದಾಡೆ, ಕಬ್ಬೂರು ಬಸಪ್ಪ, ಜಂಬಗಿ ಶರಣಪ್ಪ ಸೇರಿದಂತೆ, ಅನೇಕ ಗಣ್ಯರು ಸೇರಿ 1969ರಲ್ಲಿ ದಾವಣಗೆರೆ ಲಯನ್ಸ್ ಕ್ಲಬ್ ಸ್ಥಾಪಿಸಿದ್ದು, ವರ್ತಕರು, ವೈದ್ಯರು, ಉದ್ಯಮಿಗಳು ಈ ಕ್ಲಬ್ಬಿನ ಸದಸ್ಯರಾಗಿ ಸಾಮಾಜಿಕ ಸೇವೆ ಸಲ್ಲಿಸುವುದರ ಮೂಲಕ ಸಮಾ ಜದಲ್ಲಿ ಜನಪ್ರಿಯ ನಾಯಕರಾಗಿ, ಗಣ್ಯರಾಗಿ ಹೊರ ಹೊಮ್ಮಿರುವ ಹಲವರು ಉದಾಹರಣೆಗಳಾಗಿದ್ದಾರೆ.

ಎಸ್ಸೆಸ್ ಸೇರಿದಂತೆ, ದಾವಣಗೆರೆ ಲಯನ್ಸ್ ಕ್ಲಬ್ ಸ್ಥಾಪಿಸಿದ ಎಲ್ಲರೂ ಸೇರಿ ಕ್ಲಬ್ಬಿನ ಕಾರ್ಯ ಚಟುವಟಿಕೆಗಳ ಕುರಿತಂತೆ ಸಭೆ – ಸಮಾರಂಭಗ ಳನ್ನು ಮಹಾತ್ಮ ಗಾಂಧಿ ವೃತ್ತದಲ್ಲಿದ್ದ ಅಂದಿನ ಹೆಸರಾಂತ ಕಾಮತ್ ಹೋಟೆಲ್ ಸಭಾಂಗಣದಲ್ಲಿ ನಡೆಸುತ್ತಿದ್ದರು. ಯಾವುದೇ ಕಾರ್ಯಕ್ರಮಗಳು ಅತ್ಯಂತ ಸರಳವಾಗಿದ್ದರೂ ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಜರುಗುತ್ತಿದ್ದವು. ಇವು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯುತ್ತಿದ್ದವು.

ಈ ಹಿನ್ನೆಲೆಯನ್ನು ಪರಿಗಣಿಸಿದ ಅಂದಿನ ಗಣ್ಯರಾಗಿದ್ದ ದಿ. ಟಿ.ಜಿ. ಶಿವಯೋಗಪ್ಪ ಅವರು ತಾವು ದಾವಣಗೆರೆ ನಗರಾಭಿವೃದ್ದಿ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ದಾವಣಗೆರೆ ಲಯನ್ಸ್ ಕ್ಲಬ್ಬಿಗೆ 140×120 ಅಳತೆಯ ಬೃಹತ್ ನಿವೇಶನ ನೀಡುವುದರೊಂದಿಗೆ ಸಮಾಜ ಸೇವೆ ಸಲ್ಲಿಸಲು ಅಂದಿನ ಸದಸ್ಯರಿಗೆ ಉತ್ಸಾಹ ತುಂಬಿದ್ದು ಸ್ಮರಣೀಯ. ನಿವೇಶನ ಮಂಜೂರಾತಿ ಮಾಡಿಸುವಲ್ಲಿ ಲಯನ್ಸ್ ಕ್ಲಬ್ಬಿನ ಅಂದಿನ ಹಿರಿಯ ಸದಸ್ಯರಲ್ಲೊಬ್ಬರಾಗಿದ್ದ ಆರ್.ಎಸ್. ನಾಗರಾಜ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ನಾಗರಾಜ್ ಅವರು ತಮ್ಮ ಆತ್ಮೀಯ ಒಡನಾಡಿಗಳಲ್ಲೊಬ್ಬರಾಗಿದ್ದ ಶಿವಯೋಗಪ್ಪ ಅವರ ಮೇಲೆ  ಒತ್ತಡ ತಂದ ಹಿನ್ನೆಲೆಯಲ್ಲಿ ಈ ನಿವೇಶನ ಲಯನ್ಸ್ ಕ್ಲಬ್ಬಿಗೆ ದೊರೆಯುವಂತಾಯಿತು.

ಶಿವಯೋಗಪ್ಪ ಅವರು ಕೊಟ್ಟ ನಿವೇಶನದಲ್ಲಿ ಕ್ಲಬ್ಬಿನ ಸದಸ್ಯರು ಸೇರಿ ಸಂಗ್ರಹಿಸಿದ ದೇಣಿಗೆ ಮತ್ತು ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಬಂದ ಅನುದಾನದಡಿಯಲ್ಲಿ ದಾವಣಗೆರೆ ಲಯನ್ಸ್ ಭವನ ನಿರ್ಮಾಣಗೊಂಡಿತು. ಇದರಿಂದಾಗಿ ಹೆಚ್ಚು ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಲು ಅನುಕೂಲವಾ ಗಿದೆ. ಪಿಜಿಯೋಥೆರಪಿ, ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ, ಮಕ್ಕಳಿಗೆ ಉಚಿತ ಕಂಪ್ಯೂ ಟರ್ ಶಿಕ್ಷಣ ಸೇರಿದಂತೆ ಅನೇಕ ಸೇವಾ ಚಟುವ ಟಿಕೆಗಳು ಈ ಭವನದಲ್ಲಿ ನಡೆಯುತ್ತಲೇ ಇವೆ.

ಅಲ್ಲದೇ, ಜೀವನವನ್ನು ರೂಪಿಸುವಂತಹ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತಿದೆ. ದಾವಣಗೆರೆ ಲಯನ್ಸ್ ಟ್ರಸ್ಟ್ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ನರ್ಸರಿಯಿಂದ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಸುಮಾರು 800 ಕ್ಕೂ ಹೆಚ್ಚು  ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮುಗಿಸಿದ ಮಕ್ಕಳು ಪಿಯುಸಿ ಪ್ರವೇಶ ಪಡೆಯಲು ಪರದಾಡುತ್ತಿರುವುದನ್ನು ಮನಗಂಡು ಇದೀಗ ಬರುವ ಶೈಕ್ಷಣಿಕ ಸಾಲಿನಿಂದ ಕಾಲೇಜು ಪ್ರಾರಂಭಿಸಲಾಗುತ್ತಿದೆ.

ದಾವಣಗೆರೆ ಲಯನ್ಸ್ ಭವನದ ಆವರಣದಲ್ಲಿ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ಕಟ್ಟಡಗಳ ನಿರ್ಮಾಣದಲ್ಲಿ ಕ್ಲಬ್ಬಿನ  ಹಿರಿಯ ಸದಸ್ಯರುಗಳಾಗಿದ್ದ ದಿ. ವಿ.ಕೆ. ರೇವಣಕರ್, ದಿ. ಜಿ.ನಾಗನೂರು, ಡಾ. ಬಿ.ಎಸ್. ನಾಗಪ್ರಕಾಶ್, ಬಿ.ವಿ. ಗಂಗಪ್ಪ ಶೆಟ್ಟಿ, ಬಿ.ವಿ. ಶ್ರೀಧರ ಮೂರ್ತಿ ಅವರುಗಳಲ್ಲದೇ, ಅನೇಕ ಸದಸ್ಯರ ಗುರಿ ಮತ್ತು ಸಾಧನೆ ಹಾಗೂ ಶ್ರಮ ಶ್ಲ್ಯಾಘನೀಯ.

ಅಂತರ ರಾಷ್ಟ್ರೀಯ ಮಟ್ಟದ ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿದ್ದ ರೋಹಿತ್ ಮೆಹ್ತಾ, ಅಶೋಕ್ ಮೆಹ್ತಾ, ನರೇಶ್ ಅಗರವಾಲ್, ಅಂತರ ರಾಷ್ಟ್ರೀಯ ಮಟ್ಟದ ಲಯನ್ಸ್ ಸಂಸ್ಥೆಯ ನಿರ್ದೇಶಕ ವಿ.ವಿ .ಕೃಷ್ಣರೆಡ್ಡಿ ಸೇರಿದಂತೆ,  ಅನೇಕ ಲಯನ್ಸ್ ದಿಗ್ಗಜರು, ಹಿರಿಯ ಸಾಹಿತಿಗಳು, ಗಣ್ಯರು, ತಾರೆಯರು ಭೇಟಿ ನೀಡಿ ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿರುವುದು ದಾವಣಗೆರೆ ಲಯನ್ಸ್ ಕ್ಲಬ್ಬಿನ ಸೇವಾ ಚಟುವಟಿಕೆಗಳಿಗೆ ಕಿರೀಟಗಳು ಸಿಕ್ಕಂತಾಗಿವೆ.

ಹಿರಿಯ ನೇತ್ರ ತಜ್ಞರಾಗಿದ್ದ ದಿ. ಡಾ. ಎಂ.ಸಿ. ಮೋದಿ ಅವರು 50 ಕ್ಕೂ ಹೆಚ್ಚು ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಡುವುದರೊಂದಿಗೆ ದಾವಣಗೆರೆ ಲಯನ್ಸ್ ಕ್ಲಬ್ ಜನಪ್ರಿಯಗೊಳ್ಳಲು ಕಾರಣೀಭೂತರಾಗಿದ್ದಾರೆ. 1990 -2000ದ ದಶಕಗಳಲ್ಲಿ ಡಾ. ಎಂ.ಸಿ. ಮೋದಿ ಎಂದಾಕ್ಷಣ ದಾವಣಗೆರೆ ಲಯನ್ಸ್ ಕ್ಲಬ್ ಎಂದು ತತ್ ಕ್ಷಣವೇ ನೆನಪಿಗೆ ಬಂದು ಗುರುತಿಸುವಂತಾಗಿತ್ತು. 

ಅಂತರ ರಾಷ್ಟ್ರೀಯ ಮಟ್ಟದ ಲಯನ್ಸ್ ಸಂಸ್ಥೆ (ಎಲ್.ಸಿ.ಐ.ಎಫ್.) ಯಿಂದ ಅತೀ ಹೆಚ್ಚು ಅನುದಾನ ಪಡೆದ ಕ್ಲಬ್ಬುಗಳಲ್ಲೊಂದು ಎಂಬ ಹೆಗ್ಗಳಿಕೆಗೂ ದಾವಣಗೆರೆ ಲಯನ್ಸ್ ಕ್ಲಬ್ ಪಾತ್ರವಾಗಿದೆ. ಈ ಅನುದಾನದಡಿಯಲ್ಲಿ ದಾವಣಗೆರೆ ಲಯನ್ಸ್ ಭವನ, ಶಾಲೆಯ ಕಟ್ಟಡಗಳು, ದೊಡ್ಡ ದೊಡ್ಡ ಸೇವಾ ಕಾರ್ಯಕ್ರಮಗಳನ್ನು ನಡೆಸಲು ಸಹಕಾರಿಯಾಗಿದೆ. ಒಟ್ಟಿನಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ಮತ್ತೊಂದು ಹೆಸರೇ ದಾವಣಗೆರೆ ಲಯನ್ಸ್ ಕ್ಲಬ್ ಎಂದರೆ ಅತಿಶಯೋಕ್ತಿಯಾಗಲಾರದು. 

ಲಯನ್ಸ್ ಕ್ಲಬ್ ತನ್ನ ವ್ಯಾಪ್ತಿಯಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಮಾಡುತ್ತಿರುವ ಗಣ್ಯ ರೊಬ್ಬರನ್ನು ಗೌರವಾನ್ವಿತ ಸದಸ್ಯರನ್ನಾಗಿ ಮಾಡಿಕೊ ಳ್ಳುವುದರೊಂದಿಗೆ ಅಂತಹ ಗಣ್ಯರು ತನ್ನ ಕ್ಲಬ್ಬಿನ ಸದಸ್ಯರು ಎಂದು ಗುರುತಿಸಿಕೊಳ್ಳುವ ಪ್ರತೀತಿ ಹೊಂ ದಿದ್ದು, ದಾವಣಗೆರೆ ಲಯನ್ಸ್ ಕ್ಲಬ್ಬಿನಲ್ಲಿ ಅಂತಹ ಸದಸ್ಯತ್ವವನ್ನು ಡಾ. ಎಂ.ಸಿ. ಮೋದಿ ಹೊಂದಿದ್ದರು. ಅವರು ಕಾಲವಾದ ನಂತರ ಆ ಸ್ಥಾನವನ್ನು ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಲಾಗಿದೆ.

ಕಾಲೇಜು ಸ್ಥಾಪಿಸುವ ವಿಷಯ ಕ್ಲಬ್ಬಿನಲ್ಲಿ ಪ್ರಸ್ತಾಪಗೊಳ್ಳುತ್ತಿದ್ದಂತೆ, ಇದರ ಕಟ್ಟಡ ನಿರ್ಮಾಣಕ್ಕೆ ಪ್ರಮುಖ ದಾನಿಗಳಾದವರು ಶ್ರೀಮತಿ ಪದ್ಮಾವತಿ ಮತ್ತು ಡಾ. ಬಿ.ಎಸ್. ನಾಗಪ್ರಕಾಶ್ ದಂಪತಿ. ಅವರಿಗೆ ಸಹಯೋಗ ನೀಡುವ ನಿಟ್ಟಿನಲ್ಲಿ ಹಿರಿಯ ವರ್ತಕರಾಗಿರುವ ಬಿ.ವಿ. ಗಂಗಪ್ಪ ಶೆಟ್ಟಿ, ವೈ.ಬಿ. ಸತೀಶ್ ಸಾಥ್ ನೀಡಿದ್ದಾರೆ. ಅವರುಗಳಿಗೆ ಸಹಕಾರಿಯಾಗಿ ನಿಂತವರು ಎಲ್ಲಾ ಸದಸ್ಯರು. ಹೀಗೆ ಎಲ್ಲರ ಚಪ್ಪಾಳೆಗಳು ಸೇರಿ ಕಾಲೇಜು ಕಟ್ಟಡವು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರಳಾಗಿ ನಿಂತಿದೆ.

ದಾವಣಗೆರೆ ಲಯನ್ಸ್ ಕಾಲೇಜಿನ ಕಟ್ಟಡವು ದಿನಾಂಕ 31.1.2021ರಂದು ಉದ್ಘಾಟನೆಗೊಳ್ಳುತ್ತಿದ್ದು, ಈ ಶುಭ ಸಂದರ್ಭದಲ್ಲಿ ಇಲ್ಲಿ ವಿದ್ಯಾಭ್ಯಾಸ ಮಾಡಲಿರುವ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಿರಲಿ ; ಉನ್ನತ ಸ್ಥಾನ – ಮಾನಗಳನ್ನು ಪಡೆಯುವಂತಾಗಲಿ.


– ಇ.ಎಂ. ಮಂಜುನಾಥ,
[email protected]

 

error: Content is protected !!