ಕುಷ್ಠ ರೋಗವು ದೀರ್ಘಕಾಲದ ಖಾಯಿಲೆಯಾಗಿದ್ದು, ಮೈಕೋ ಬ್ಯಾಕ್ಟೀರಿಯಂ ಲೆಪ್ರೆಯಿ ಬ್ಯಾಕ್ಟಿರೀಯಾದಿಂದ ಬರುವಂತಹದು. ಗಾಂಧೀಜಿಯವರ ಹುತಾತ್ಮ ದಿನದಂದು ಪ್ರತಿ ವರ್ಷ ಜನವರಿ 30 ರಂದು `ವಿಶ್ವ ಕುಷ್ಠ ರೋಗ ದಿನ’ ಅಥವಾ `ಕುಷ್ಠ ರೋಗ ನಿರ್ಮೂಲನಾ’ ದಿನವೆಂದು ಆಚರಿಸಲಾಗುತ್ತದೆ. ಇದರ ಪ್ರಮುಖ ಉದ್ದೇಶವೆಂದರೆ ಜನರಲ್ಲಿ ಕುಷ್ಠ ರೋಗದ ಲಕ್ಷಣಗಳು, ಚಿಕಿತ್ಸೆ ಮತ್ತು ಅಪನಂಬಿ ಕೆಗಳ ಮಾಹಿತಿ ನೀಡುವ ಮೂಲಕ ರೋಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮೂಲಕ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಲು ಮಾಡುವ ಒಂದು ಸಣ್ಣ ಪ್ರಯತ್ನ.
ಭಾರತವು ಕುಷ್ಠ ರೋಗಿಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ರೋಗಕ್ಕೆ ಕಾರಣವಾದ ಜೀವಿ `ಮೈಕೋಬ್ಯಾಕ್ಟೀರಿಯಂ ಲೆಪ್ರೆಯಿ’ ಅನ್ನು ಮೊದಲ ಬಾರಿಗೆ ಡಾ.ಗೆರ್ಹಾರ್ಡ್ ಅರ್ಮೂಯೆರ್ ಹ್ಯಾನ್ಸೆನ್ ಕಂಡು ಹಿಡಿದರು. ಅವರು ಕಂಡು ಹಿಡಿದಿರುವುದರಿಂದ ಇದಕ್ಕೆ ಹ್ಯಾನ್ಸೆನ್ ಕಾಯಿಲೆ ಎಂದು ಕೂಡ ಕರೆಯುತ್ತಾರೆ.
ಕುಷ್ಠ ರೋಗದ ಲಕ್ಷಣಗಳು ಇಂತಿವೆ :
1. ಚರ್ಮದ ಮೇಲೆ ತಿಳಿ-ಬಿಳಿ, ತಾಮ್ರ ವರ್ಣದ ಮಚ್ಚೆಗಳಿಗೆ ಸ್ಪರ್ಶ ಜ್ಞಾನವಿರುವುದಿಲ್ಲ.
2. ಕೈ ಮತ್ತು ಕಾಲುಗಳು ಜೋಮು ಹಿಡಿಯುವುದು.
3. ಕೈ ಮತ್ತು ಕಾಲುಗಳಲ್ಲಿ ಸ್ಪರ್ಶ ಇಲ್ಲದಿರುವುದರಿಂದ ಗಾಯಗಳು ಆಗುವುದು, ಬಿಸಿ ಮತ್ತು ತಣ್ಣನೆಯ ವ್ಯತ್ಯಾಸ ಗೊತ್ತಾಗದೇ ಇರುವುದರಿಂದ ಸುಟ್ಟ ಗಾಯಗಳು ಆಗಬಹುದು.
4. ಕಾಲಿಂದ ಚಪ್ಪಲಿ ಮತ್ತೆ ಮತ್ತೆ ಜಾರುವುದು ಮತ್ತು ನರಗಳ ನೋವು ಬರುವುದು ಉಂಟು.
5. ಹೊಳಪಿನಿಂದ ಕೂಡಿದ ದಪ್ಪನಾದ ಚರ್ಮ ಮತ್ತು ಚರ್ಮದ ಮೇಲೆ ಸಣ್ಣ ಗಂಟುಗಳು, ಇವುಗಳು ವಿಶೇಷವಾಗಿ ಕಿವಿಯ ಹಾಲೆ, ಮುಖ ಮತ್ತು ಕೈ ಕಾಲುಗಳ ಮೇಲೆ ಕಾಣಬಹದು.
6. ಕೈ, ಪಾದ ಮತ್ತು ಕಣ್ಣುಗಳಲ್ಲಿ ಬಲಹೀನತೆ, ಅಂಗಾಲುಗಳಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತವೆ.
7. ಕಣ್ಣುಗಳು ಪೂರ್ಣವಾಗಿ ಮುಚ್ಚಲು ಆಗದಿರುವುದು.
ಬ್ಯಾಕ್ಟೀರಿಯಾಗಳ ಸಂಖ್ಯಾಭಿವೃದ್ಧಿಯು ಹೆಚ್ಚಳ ವಾಗುವ ಪ್ರಮಾಣದ ಮೇಲೆ ಈ ರೋಗವನ್ನು ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ `ಪಾಸಿಬ್ಯಾಸಿಲರಿ’ (1 ರಿಂದ 5 ಚರ್ಮದ ಮಚ್ಚೆಗಳು) ಮತ್ತು `ಮಲ್ಟಿ ಬ್ಯಾಸಿಲರಿ’ (ಜಾಸ್ತಿ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ ಮತ್ತು 5 ಕ್ಕಿಂತ ಹೆಚ್ಚು ಚರ್ಮದ ಮಚ್ಚೆಗಳು ಇರುತ್ತವೆ) ರೋಗದ ಪ್ರತಿಕ್ರಿಯೆ (lepra reaction) ಎಂದರೆ ಕೆಲವು ರೋಗಿಗಳಲ್ಲಿ ಮಚ್ಚೆಗಳು ಇದ್ದಕ್ಕಿದಂತೆ ಕೆಂಪಾಗಿ, ಬಾವು ಬರುವುದು ಮತ್ತು ನೋವು ಬರುವುದು, ಕೈ-ಕಾಲುಗಳಲ್ಲಿ ಕೆಲವು ನರಗಳು ಊತ ಮತ್ತು ನೋವು ಬರುವುದು ಮುಂತಾದವುಗಳನ್ನು ಕಾಣಬಹುದು. ಈ ರೀತಿಯಾದಲ್ಲಿ ಗಾಬರಿಯಾಗದೆ, ತಕ್ಷಣ ಚರ್ಮ ವೈದ್ಯರ ಹತ್ತಿರ ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ.
ಕುಷ್ಠ ರೋಗ ನಿವಾರಣೆ ಕಾರ್ಯಕ್ರಮ ಕೇವಲ ಪರಿಹಾರವಲ್ಲ. ಅದು ಮನುಷ್ಯನ ಬದುಕಿನ ಹತಾಶೆ ಭಾವನೆಯನ್ನು, ಸಂತಸ ತರುವ ಶ್ರದ್ದೆಯನ್ನಾಗಿ ಮತ್ತು ವೈಯಕ್ತಿಕ ನೆಲೆಯ ಮಹದಾಸೆಯನ್ನು ನಿಸ್ವಾರ್ಥ ಸೇವೆಯನ್ನಾಗಿ ರೂಪಿಸುವ ಪವಿತ್ರ ಕಾರ್ಯವಾಗಿದೆ.
– ಮಹಾತ್ಮ ಗಾಂಧೀಜಿ
ಚಿಕಿತ್ಸೆ-ಬಹುವಿಧ ಔಷಧ ಚಿಕಿತ್ಸೆ (MDT) ವೆಂದರೆ ಮೂರು ಬಗೆಯ ಔಷಧಿಗಳೆಂದರೆ, ಕ್ಲೋಫಾಜಿಮೈನ್ (clofazamine) ಮತ್ತು ರಿಫಾಂಪಿಸಿನ್ (Rifampicin), ಡ್ಯಾಪ್ಸೋನ್ (Dapsone) ಒಳಗೊಂಡ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಪಾಸಿಬ್ಯಾಸಿಲ್ಲರಿಗೆ (P.B) ಸುಮಾರು 6 ತಿಂಗಳು ಮತ್ತು `ಮಲ್ಟಿ ಬ್ಯಾಸಿಲ್ಲರಿ’ಗೆ (M.B) ಸುಮಾರು 12 ತಿಂಗಳು ನಿಯಮಿತವಾಗಿ ಎಂ.ಡಿ.ಟಿ ಪೂರ್ಣ ಚಿಕತ್ಸೆ ಪಡೆದರೆ, ಕುಷ್ಟ ರೋಗ ಗುಣಪಡಿಸಬಹುದು. ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತದೆ. ರೋಗದ ಪ್ರತಿಕ್ರಿಯೆಗೆ ಸ್ಟೆರಾಯ್ಡ್ (steroid) ಮಾತ್ರೆ ಕೊಟ್ಟು ತಗ್ಗಿಸಬಹುದು. ಕೆಲವು ಕೈ, ಕಾಲು ಮತ್ತು ಕಣ್ಣುಗಳ ನ್ಯೂನತೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಬಹುದು.
ಕುಷ್ಠ ರೋಗದ ಬಗ್ಗೆ ಜನರಲ್ಲಿ ಹಲವಾರು ಅಪನಂಬಿಕೆಗಳು ಇವೆ. ಅವುಗಳೆಂದರೆ ಈ ರೋಗವು ಹಿಂದಿನ ಜನ್ಮದ ಪಾಪದಿಂದ ಮತ್ತು ಬೇರೆಯವರ ಶಾಪದಿಂದ ಬರುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ದಟ್ಟವಾಗಿದೆ. ಈ ರೋಗಕ್ಕೆ ಮದ್ದು ಇಲ್ಲ ಎಂಬ ಕಲ್ಪನೆ ಹಲವರಲ್ಲಿ ಇದೆ. ಯಾವುದೇ ಕಾರಣಕ್ಕೂ ವಂಶಪಾರಂಪರ್ಯದಿಂದಲೂ ಬರುವುದಿಲ್ಲ. ಕುಷ್ಠ ರೋಗ ಚಿಕಿತ್ಸೆ ಇಲ್ಲ ಮತ್ತು ಗುಣಮುಖವಾಗುವುದಿಲ್ಲ ಎಂಬ ಅಪನಂಬಿಕೆ ಇದೆ.
ರೋಗಿಯು ಪಾಲಿಸಬೇಕಾದ ಕೆಲವು ಕ್ರಮಗಳು ಇಂತಿವೆ :
1. ನಿಯಮಿತವಾಗಿ ಎಂ.ಡಿ.ಟಿ (MDT) ಔಷಧಿ ಪಡೆಯುವುದು.
`ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…
2. ದಿನ ನಿತ್ಯ ಪಾದ ಮತ್ತು ಕೈಗಳಲ್ಲಿ ಗಾಯಗಳು ಆಗಿದೇವು ಇಲ್ಲವೇ ಎಂಬುದನ್ನು ಪರೀಕ್ಷಸಿಕೊಳ್ಳಿ.
3. ಸ್ನಾನ ಮಾಡಿದ ಬಳಿಕ ಒಣ ತ್ವಚೆಯ ಮೇಲೆ ಲಿಕ್ವಿಡ್ ಪ್ಯಾರಾಫಿನ್ (liquid paraffin) ಅಥವಾ ಮೋಸ್ಟ್‌ರೈಸಿಂಗ್ ಕ್ರೀಂ ಅಥವಾ ಲೋಷನ್ (moisturizering cream or lotion) ಹಚ್ಚಬೇಕು.
4. ಸ್ಪರ್ಶವಿಲ್ಲದ ಪಾದಗಳನ್ನು ಗಾಯಾವಾಗದಂತೆ ತಡೆಯಲು ಎಂ.ಸಿ. ಆರ್ (MCR) ಚಪ್ಪಲಿ ಬಳಸಬೇಕು.
5. ಕೈಗಳಲ್ಲಿ ಸ್ಪರ್ಶವಿಲ್ಲದಿದ್ದರೆ ಬರಿಗೈಯಲ್ಲಿ ಬಿಸಿ ವಸ್ತು ಮುಟ್ಟಬಾರದು.
6. ನಿಯಮಿತವಾಗಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಮಾಡಬೇಕು.
7. ವೈದ್ಯರ ಸಲಹೆ ಮೇರೆಗೆ ಮಾತ್ರ ಮಾತ್ರೆ ನಿಲ್ಲಿಸಬೇಕು.
8. ಎಂಡಿಟಿ ಮಾತ್ರೆಯಿಂದ ಏನಾದರೂ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
9. ಕಣ್ಣುಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು .
ಈ ರೋಗ ಶಾಪಗ್ರಸ್ತವೂ ಅಲ್ಲ. ಪಾಪದ ಫಲವೂ ಅಲ್ಲ. ಕುಷ್ಟ ರೋಗಿಗಳನ್ನು ಕೀಳಾಗಿ ಕಾಣದೇ ಮತ್ತು ತಾರತಮ್ಯ ಮಾಡದೇ ಅವರು ನಮ್ಮಂತೆ ಮನುಜರು ಎಂದು ಜನರು ಅರಿತುಕೂಳ್ಳಬೇಕು. ಅವರನ್ನು ಮಾನವೀಯ ಕಳಕಳಿಯಿಂದ ಕಾಣಬೇಕು ಮತ್ತು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಆಗ ಮಾತ್ರ `ಕುಷ್ಟ ರೋಗ ನಿರ್ಮೂಲನಾ ದಿನಾಚರಣೆ’ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗುವುದು.
– ಡಾ. ಸೂಗಾರೆಡ್ಡಿ, ಚರ್ಮ ರೋಗ ವಿಭಾಗದ ಮುಖ್ಯಸ್ಥರು, ಜ.ಜ.ಮು ವೈದ್ಯಕೀಯ ಕಾಲೇಜು
– ಡಾ. ಪರಮೇಶ್ವರ, ಸ್ನಾತಕೋತ್ತರ ವಿದ್ಯಾರ್ಥಿ, ಚರ್ಮ ರೋಗ ವಿಭಾಗ , ಜ.ಜ.ಮು ವೈದ್ಯಕೀಯ ಕಾಲೇಜು, ದಾವಣಗೆರೆ. ಮೊ: 6363576220