ವಾಹನಗಳು ರಸ್ತೆಗಿಳಿಯುವ ಮುನ್ನ ಪೂರ್ವಸಿದ್ಧತೆ ಬಹುಮುಖ್ಯ

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಾವು-ನೋವು ವಿಪರೀತವಾಗಿವೆ. ಈ ಸಂಬಂಧ ನಾನು ನನ್ನದೇ ಆದ ಕೆಲ ಅನುಭವಗಳನ್ನು ಹೇಳಿಕೊಳ್ಳಬೇಕೆನಿಸಿದೆ.

ನಾನು 1959 ರಲ್ಲಿ ಇಂಗ್ಲೆಂಡಿಗೆ ಹೋಗುವ ತಯಾರಿ ನಡೆಸಿದ ಭಾಗವಾಗಿ ಬಾಂಬೆಯಲ್ಲಿ ವಾಹನ ಚಾಲನೆಯ ತರಬೇತಿ ಪಡೆದು, ಚಾಲನಾ ಪರವಾನಿಗೆ ಪಡೆದೆನು. ಇಂಗ್ಲೆಂಡಿಗೆ ಹೋದ ಬಳಿಕ ಕಾರ್ ಖರೀದಿಸಿ, ಈ ಪರವಾನಿಗೆಯಿಂದಲೇ ಸುಮಾರು ಎರಡು ವರ್ಷ ವಾಹನ ಚಾಲನೆ ಮಾಡಿದೆ. ಬಳಿಕ ಪರವಾನಿಗೆ ಅವಧಿ ಮುಗಿದಿದ್ದರಿಂದ ಅಲ್ಲಿನ ವಾಹನ ಚಾಲನಾ ಪರವಾನಿಗೆ ಪಡೆಯುವುದು ಅವಶ್ಯವಾಗಿತ್ತು.

ಅದಕ್ಕಾಗಿ ಪುನಃ ಲಂಡನ್ನಿನಲ್ಲಿ ತರಬೇತಿ ಪಡೆದು. ಪರೀಕ್ಷೆ ತೆಗೆದುಕೊಂಡೆ. ಆದರೆ ಇದು ನನಗೆ ಸುಲಭವಾಗಿ ಸಿಗಲಿಲ್ಲ. ನನ್ನನ್ನು ಮೂರು ಬಾರಿ ಫೇಲ್ ಮಾಡಿ, ಕೊನೆಗೆ ನಾಲ್ಕನೇ ಬಾರಿಗೆ ಪಾಸು ಮಾಡಿ ಪರವಾನಿಗೆ ನೀಡಿದರು.

ಇದರರ್ಥ ಇಷ್ಟೇ….ವಾಹನ ಚಾಲನೆಯನ್ನು ಲಘುವಾಗಿ ತೆಗೆದುಕೊಳ್ಳದೇ ಅದನ್ನು ಒಂದು ಗಂಭೀರ ವಿಷಯವನ್ನಾಗಿ ಪರಿಗಣಿಸಬೇಕು ಅನ್ನುವುದಾಗಿದೆ. ನನ್ನ ಪ್ರಕಾರ ನಾವು ಪ್ರತಿ ಸಾರಿ ನಮ್ಮ ವಾಹನದೊಂದಿಗೆ ರಸ್ತೆಗಿಳಿದಾಗ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ರಸ್ತೆಗಳ ಅನುಭವ, ಅವುಗಳ ತಿರುವುಗಳು, ರಸ್ತೆ ಚಾಲ ನೆಯ ನಿಯಮಗಳು ಇತ್ಯಾದಿ ಅರಿತಿರಬೇಕು. 

ಇನ್ನು ಪ್ರವಾಸದ ಪೂರ್ವ ಸಿದ್ಧತೆಯಲ್ಲಿ ಬಾಡಿಗೆ ವಾಹನದಲ್ಲಿ ಪ್ರಯಾಣ ಮಾಡುವಾಗ ಚಾಲಕನ ಪರಿಚಯ, ಅವರ ವಾಹನ ಪರವಾನಿಗೆ, ಚಾಲನಾ ಅನುಭವದ ಕುರಿತು ತಿಳಿದುಕೊಂಡಿರಬೇಕು. 

ಪ್ರಯಾಣದ ವೇಳೆ ನಿರ್ಧರಿಸುವುದು ಬಹು ಮುಖ್ಯ. ರಾತ್ರಿ ಪ್ರಯಾಣವಾದರೆ ಚಾಲಕನ ನಿದ್ರೆಯ ಕುರಿತು ನಾವು ವಿಚಾರಿಸಬೇಕು. ಆತನ ನಿದ್ದೆಗೆ ಅವಕಾಶ ನೀಡಬೇಕು. ನಂತರ ಪ್ರಯಾಣ ಮಾಡಬೇಕು.

ಚಾಲಕ ಪ್ರಯಾಣ ಮಾಡುತ್ತಿದ್ದರೆ ಆತನ ಪಕ್ಕ ಅನುಭವಸ್ಥರೊಬ್ಬರು ಕುಳಿತು ಆತನ ಚಾಲನೆ ಬಗ್ಗೆ ಗಮನಿಸುತ್ತಿರಬೇಕು. ಅಂದರೆ ಪ್ರಯಾಣಿಕರಲ್ಲಿ ಒಬ್ಬರು ಪೂರ್ಣ ಎಚ್ಚರದಿಂದ ಇರಬೇಕು. ರಸ್ತೆ ಸುರಕ್ಷತೆ ಬಗ್ಗೆ ಸದಾ ಗಮನವಿಟ್ಟಿರಬೇಕು.  ಇತರೆ ವಾಹನಗಳ ಬಗ್ಗೆಯೂ ಗಮನವಿರಬೇಕು. ವಾಹನದ ವೇಗದ ಬಗ್ಗೆ ನಿಗಾ ವಹಿಸಬೇಕು. §ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್¬, §ಇಟ್ ಈಸ್ ಬೆಟರ್ ಟು ಬಿ ಲೇಟ್ ದ್ಯಾನ್ ನೆವರ್¬ ಎಂಬುದನ್ನು ಅರಿಯಬೇಕು.

ನಮ್ಮಲ್ಲಿ ಒಂದು ತಪ್ಪು ತಿಳುವಳಿಕೆ ಮೊದಲಿನಿಂದ ಬಂದಿದೆ. ವಾಹನ ಚಾಲಕನನ್ನು, ರಸ್ತೆ ಸ್ವಚ್ಛ ಮಾಡುವವರನ್ನು, ಚರಂಡಿ ಸ್ವಚ್ಛ ಮಾಡುವವರನ್ನು ಕೀಳಾಗಿ ನೋಡುವುದಾಗಿದೆ. ಇದು ತಪ್ಪು ಎಂಬುದು ನನ್ನ ಸ್ವಂತ ಅಭಿಪ್ರಾಯ.  ಜನರ ಭಾವನೆ ಬದಲಾಗಬೇಕಿದೆ. ಸಮಾಜಕ್ಕೆ, ಜೀವನಕ್ಕೆ ಎಲ್ಲರ ಅವಶ್ಯಕತೆ ಇದೆ ಎಂಬುದನ್ನು ಎಲ್ಲರೂ ಅರಿಯಬೇಕು. ಪ್ರಯಾಣದ ಸಂದರ್ಭದಲ್ಲಿ ಅವರೊಂದಿಗಿನ ಉತ್ತಮ ಬಾಂಧವ್ಯ ಬಹು ಮುಖ್ಯವಾಗಲಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.


 ಡಾ. ಸಿ.ಹ. ಸೊರಟೂರ
ನಿವೃತ್ತ ದಂತ ವೈದ್ಯರು

error: Content is protected !!