ಒಬ್ಬ ಮುತ್ಸದ್ಧಿ ರಾಜಕಾರಣಿಗೆ ಇರುವ ಎಲ್ಲಾ ಗುಣಗಳೂ ರಾಜಣ್ಣನವರಲ್ಲಿ ಇವೆ. ಆದರೆ ಅವರು ರಾಜಕೀಯಕ್ಕೆ ಇಳಿಯಲಿಲ್ಲ. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹಿಂದೆ ಬಿದ್ದಿಲ್ಲ. ಎಷ್ಟೋ ಸಾಮಾಜಿಕ ಸಮಸ್ಯೆಗಳಿಗೆ ಯಾರಿಗೂ ಹೊಳೆಯದ ಪರಿಹಾರ ಇವರಿಗೆ ಹೊಳೆಯುತ್ತದೆ. ಹೀಗಾಗಿ ಅವರ ವಿರೋಧಿಗಳೂ ಅಂತರಂಗದಲ್ಲಿ ರಾಜಣ್ಣನವರನ್ನು ಮೆಚ್ಚಿಕೊಳ್ಳುತ್ತಾರೆ. ನೇತಾರರಾಗಿ ದೊಡ್ಡವನೆನಿಸಿಕೊಳ್ಳುವುದಕ್ಕಿಂತ ಸಮಾಜವೇ ದೊಡ್ಡದೆಂದು ಪ್ರತಿಪಾದಿಸುವ ಇವರ ನ್ಯಾಯ-ನಿಷ್ಟೂರತೆಗೆ ವಿರೋಧಿ ಬಳಗವೂ ಇದೆ.
ಖ್ಯಾತ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು ಇಂದು ತಮ್ಮ 80ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಎಂದೂ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳ ರಾಜಣ್ಣ ಅದೇಕೋ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಹರ್ಷಚಿತ್ತರಾಗಿ ಒಪ್ಪಿಕೊಂಡಿದ್ದಾರೆ. ಅಣಬೇರು ತಮ್ಮ ಹುಟ್ಟೂರು. ಹೆಸರಿನ ಜೊತೆಗೇ ಬಂದಿರುವ ಹುಟ್ಟೂರಿನಲ್ಲಿ ಭದ್ರವಾಗಿ ಬೇರುಬಿಟ್ಟು ಬದುಕಿನ ಮರ ಬೆಳೆದು ಹೆಮ್ಮರವಾಗಿದ್ದು ಮಾತ್ರ ದಾವಣಗೆರೆಯಲ್ಲಿ, ಅಣಬೇರಿನ ದೊಡ್ಡ ಜಮೀನ್ದಾರರ ಮಗ ಪ್ರಾಥಮಿಕ ಅಭ್ಯಾಸ ಹುಟ್ಟಿದ ಊರಿನಲ್ಲೇ ಮುಗಿಸಿ, ಹೈಸ್ಕೂಲ್ ಓದಲು ದಾವಣಗೆರೆಗೆ ಬಂದದ್ದು, ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು ಬಂದರೂ ಬದುಕು ಆರಂಭಿಸಿದ್ದು ದಲ್ಲಾಲಿ ವರ್ತಕರಾಗಿ. ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಸಾಹಸ ಗುಣಗಳಿಂದಾಗಿ ದಾವಣಗೆರೆಯಲ್ಲಿ ದೊಡ್ಡ ಹೆಸರು ಮಾಡಿದರು.
ಪದವಿಯ ನಂತರ ಸರ್ಕಾರಿ ನೌಕರಿ ಬೆನ್ನುಹತ್ತಿ ಹೋಗದೆ ದಾವಣಗೆರೆಯಲ್ಲೇ ನೆಲೆ ನಿಂತು, ದಲ್ಲಾಲಿ ಅಂಗಡಿ ಆರಂಭಿಸಲು ಒಂದು ಕಾರಣವೂ ಇತ್ತು. ಅದೆಂದರೆ ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಾಮೀಣ ಭಾಗದಲ್ಲಿನ ಭಕ್ತರನ್ನು ನಗರದಲ್ಲಿ ವ್ಯಾಪಾರೋದ್ಯಮ ಪ್ರಾರಂಭಿಸಲು ಹುರಿದುಂಬಿಸುತ್ತಿದ್ದ ಕಾಲ ಅದು. ವ್ಯವಹಾರ ಚತುರತೆ ರೂಢಿಸಿಕೊಂಡಿದ್ದ ಉತ್ಸಾಹಿ ಯುವಕ ರಾಜಣ್ಣನಿಗೆ ಜಗದ್ಗುರುಗಳ ಸಾಮೀಪ್ಯ ದೊರೆತದ್ದು ಯೋಗಾಯೋಗವೆಂದೇ ಹೇಳಬೇಕು. ಸದಾ ಶಿಷ್ಯರ ಏಳ್ಗೆಯನ್ನೇ ಬಯಸುತ್ತಾ “ಭಕ್ತರ ಅಭಿವೃದ್ಧಿ ಯಾದಾಗ ಮಾತ್ರ ಸಮಾಜ ಹಾಗೂ ಮಠದ ಕಲ್ಯಾಣ ಸಾಧ್ಯ” ಎಂಬ ತತ್ವ ಸಿದ್ದಾಂತವನ್ನೇ ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಶ್ರೀ ಶಿವಕುಮಾರ ಸ್ವಾಮಿಗಳು ರಾಜಣ್ಣನವರಂತಹ ಸಾವಿರಾರು ಭಕ್ತರಿಗೆ ಉತ್ಕೃಷ್ಟ ಜೀವನಮಾರ್ಗ ತೋರಿಸಿದರು. ಶಿಷ್ಯ ಸಂಪತ್ತನ್ನೇ ಸಮಾಜದ ಸಂಪತ್ತನ್ನಾಗಿ ಮಾಡಿದ ದಿಟ್ಟಹೆಜ್ಜೆಯ ಧೀರ ಗುರುವಿನ ಶಿಷ್ಯರಾಗಿ ಜಗದ್ಗುರುಗಳ ಗರಡಿಯಲ್ಲಿ ಪಳಗಿದ ಅಣಬೇರು ರಾಜಣ್ಣ ಸದಾ ಶ್ರೀಗಳನ್ನು ಸ್ಮರಿಸುವ ಪರಮ ಭಕ್ತ.
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ಕಟ್ಟಿ ಬೆಳೆಸಿದ ಶ್ರೀ ಸಾಧು ಸದ್ಧರ್ಮ ಸಮಾಜದ ಘನತೆ ಇನ್ನಷ್ಟು ಗಟ್ಟಿಯಾಗಬೇಕೆಂಬ ತುಡಿತವನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದಿರುವ ಸಮಾಜ ಪ್ರೇಮಿ ರಾಜಣ್ಣ ಸಮಾಜದ ಎಲ್ಲಾ ಬಂಧು-ಬಳಗಕ್ಕೂ ಚಿರಪರಿಚಿತ.
ಸದಾ ಚೈತನ್ಯದ ಚಿಲುಮೆಯಾಗಿದ್ದ ಅಣಬೇರು ರಾಜಣ್ಣ ಮಂಡಿ ವರ್ತಕರಾಗಿ ಯಶಸ್ವಿಯಾಗಿ ಬೆಳೆದ ಕಥೆ ಒಂದೆಡೆಯಾದರೆ, ಹೋಟೆಲ್ ಉದ್ಯಮಕ್ಕೂ ಕಾಲಿರಿಸಿ, ಅಲ್ಲಿಯೂ ಅಪೂರ್ವ ಸಾಧನೆ ಮಾಡಿದ್ದು, ಮತ್ತೊಂದು ಅಧ್ಯಾಯ, ಯಶಸ್ವೀ ಹೋಟೆಲ್‌ಗಳೆಂದರೆ ಆಗ ಉಡುಪಿ ಹೋಟೆಲ್‌ಗಳು ಹಾಗೂ ಕಾಮತ್ ಗ್ರೂಪ್ ಹೋಟೆಲ್‌ಗಳ ಹೆಸರೇ ಕೇಳಿಬರುತ್ತಿದ್ದವು. ಇಂತಹ ಸಂದರ್ಭದಲ್ಲಿ ಹಳೆ ಸಿರಿಗೆರೆ ಹಾಸ್ಟೆಲ್ ಕಟ್ಟಡದಲ್ಲಿ `ಅಪೂರ್ವ’ ಹೆಸರಿನಲ್ಲಿ ಹೋಟೆಲ್ ಪ್ರಾರಂಭಿಸಿದ ಅಣಬೇರು ರಾಜಣ್ಣ ಜನನಿಬಿಡ ಹಳೆ ದಾವಣಗೆರೆ ಭಾಗದಲ್ಲಿ ಜನರಿಗೆ ಬೇಕಾಗಿದ್ದ `ಕ್ವಾಲಿಟಿ’ ಹೋಟೆಲ್ ಒಂದರ ಕೊರತೆಯನ್ನು ನಿವಾರಿಸಿದರು. ಹೊಸದಾಗಿ ಪ್ರಾರಂಭವಾಗುವ ಹೋಟೆಲ್ ನಾಮಫಲಕಗಳಲ್ಲಿ ಸಾಮಾನ್ಯವಾಗಿ “ಶುಚಿ-ರುಚಿ” ಎಂದು ಬರೆಸುತ್ತಾರೆ. ಆದರೆ ಅಪೂರ್ವ ಹೋಟೆಲ್ ನಾಮಫಲಕದ ಮೇಲೆ “ಶುಚಿ-ರುಚಿ” ಪದ ಬಳಸದೆಯೇ ಹೋಟೆಲ್ ಊಟ-ಉಪಾಹಾರದಲ್ಲಿ ಶುಚಿ-ರುಚಿ ತೋರಿಸಿ ಉಪಹಾರ ಪ್ರಿಯರ ಕುತೂಹಲ ತಣಿಸಿದರು. ಅಪೂರ್ವ ಹೋಟೆಲ್”ಬಾಸುಂದಿ” ಈಗಲೂ ಜನಪ್ರಿಯ.
ದಾವಣಗೆರೆಯಲ್ಲಿ ಹೆಸರಾಂತ ಹೋಟೆಲ್‌ಗಳ ಸೇವೆ ಮಸುಕಾಗುತ್ತಿದ್ದಂತೆ ಅಪೂರ್ವ ಹೋಟೆಲ್ ವಿಸ್ತರಣೆಯ ಯುಗ ಆರಂಭ. ಪಿ.ಬಿ. ರಸ್ತೆಯ ಹೈಸ್ಕೂಲ್ ಮೈದಾನದ ಎದುರು ಮತ್ತೊಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಅಪೂರ್ವ ರೆಸ್ಕೋರೆಂಟ್ ಪ್ರಾರಂಭವಾದವು. ನಂತರ ಬಾಡ ಕ್ರಾಸ್ ಸಮೀಪ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿದ್ದ “ಅಪೂರ್ವ ರೆಸಾರ್ಟ್” ದಾವಣಗೆರೆಯಲ್ಲಿ ಹೊಸ ಟ್ರೆಂಡನ್ನೇ ಪ್ರಾರಂಭಿಸಿತು ಎನ್ನಬೇಕು. ಒಂದೊಳ್ಳೆ ವಿಹಾರದ ಸ್ಥಳವಾದ ಅಪೂರ್ವ ರೆಸಾರ್ಟ್ ದೂರದ ಪ್ರಯಾಣಿಕರಿಗೆ ಹಾಗೂ ಕಾರ್ಪೋರೇಟ್ ಕಂಪನಿಗಳ ಪಾಲಿಗೆ ಉಪಯುಕ್ತ ಹೋಟೆಲ್ ಆಗಿ ಪರಿಣಮಿಸಿದೆ. ಇದೀಗ ಆನಗೋಡು ಬಳಿ ನಾಲ್ಕಾರು ಎಕರೆಯಲ್ಲಿ “ಹೋಂ ಸ್ಟೇ”: ಕೂಡ ಆರಂಭವಾಗುತ್ತಿರುವುದು ಹೋಟೆಲ್ ಉದ್ಯಮದ ಮತ್ತೊಂದು ಮೈಲುಗಲ್ಲು.
ಮನೆ ದೇವರು ಚಿಗಟೇರಿ ಶ್ರೀ ನಾರದಮುನಿ ಸ್ವಾಮಿ ದೇವಸ್ಥಾನದ ಪುನರ್‌ನಿರ್ಮಾಣದಲ್ಲಿ ವಿಶೇಷ ಆಸಕ್ತಿ ವಹಿಸಿದ ಅಣಬೇರು ರಾಜಣ್ಣ, ನಾರದ ಮುನಿಸ್ವಾಮಿ ಭಕ್ತರ ಸಹಕಾರದೊಂದಿಗೆ ಧಾರ್ಮಿಕ ಹಾಗೂ ಸಮಾಜ ಮುಖಿಯಾಗಿ ಸಲ್ಲಿಸಿರುವ ಸೇವೆ ಅನನ್ಯ. ಚಿಗಟೇರಿ ಶ್ರೀ ನಾರದಮುನಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ಮಾಡಿದ ಕೆಲಸ ಚಿಗಟೇರಿ ಗ್ರಾಮದ ಚಿತ್ರಣವನ್ನೇ ಬದಲಾಯಿಸಿತು. ಇದೇನು ಉತ್ಪ್ರೇಕ್ಷೆಯಲ್ಲ. ಹಳೆ ದೇವಸ್ಥಾನದ ಸುತ್ತ ಇರುವ ಪೂಜಾರಿಗಳ ವಾಸದ ಗೂಡುಗಳನ್ನು ತೆರವುಗೊಳಿಸಿ, ಅವರಿಗೆ ಸುಸಜ್ಜಿತವಾದ ಪುನರ್ವಸತಿ ಕಲ್ಪಿಸಿದ್ದು, ಗುಡಿಯ ಸುತ್ತ ಅನಾಥವಾಗಿ ಬಿದ್ದಿದ್ದ ಬೇರೆ ಬೇರೆ ದೇವರ ಮೂರ್ತಿ ಶಿಲ್ಪಗಳು ಶಾಸನಗಳನ್ನು ತಜ್ಞರಿಂದ ಶೋಧಿಸಿ ಜತನಗೊಳಿಸಿಲಾಯಿತು. ದೇವಸ್ಥಾನದ ಆವರಣ ಎಷ್ಟು ನಿರ್ಲಕ್ಷಕ್ಕೆ ಒಳಗಾಗಿತ್ತೆಂದರೆ ಅಲ್ಲಿ ಶಿಲ್ಪ-ಶಾಸನಗಳನ್ನೇ ದನಗಳನ್ನು ಕಟ್ಟುವ ಗೂಟವನ್ನಾಗಿ ಮಾಡಿಕೊಂಡಿದ್ದರು. ಇದೀಗ ನಾರದ ಮುನಿಗೆ ಭವ್ಯ ದೇವಸ್ಥಾನ ಕಟ್ಟಿದ್ದಾರೆ. ದೇವಸ್ಥಾನ ನಿರ್ಮಾಣದಲ್ಲಿ ಹಾಗೂ ಹೊಸ ತೇರು ನಿರ್ಮಿಸುವಲ್ಲಿ ನಾರದ ಮುನಿ ಭಕ್ತರ ಸಹಕಾರ ಹಾಗೂ ಗ್ರಾಮದ ಜನರ ಸಹಕಾರವನ್ನು ಮರೆಯುವಂತಿಲ್ಲ. ಇದೇ ಊರಿನ ಜಾನಪದ ತಜ್ಞ, ಕವಿ ಮುದೇನೂರು ಸಂಗಣ್ಣ, ಚಿಗಟೇರಿ ಗ್ರಾಮ ಇಷ್ಟೊಂದು ಬದಲಾಗಿದ್ದನ್ನು ಕಂಡು ಸೋಜಿಗ ವ್ಯಕ್ತಪಡಿಸಿದ್ದರು.
ಒಬ್ಬ ಮುತ್ಸದ್ಧಿ ರಾಜಕಾರಣಿಗೆ ಇರುವ ಎಲ್ಲಾ ಗುಣಗಳೂ ರಾಜಣ್ಣನವರಲ್ಲಿ ಇವೆ. ಆದರೆ ಅವರು ರಾಜಕೀಯಕ್ಕೆ ಇಳಿಯಲಿಲ್ಲ. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹಿಂದೆ ಬಿದ್ದಿಲ್ಲ. ಎಷ್ಟೋ ಸಾಮಾಜಿಕ ಸಮಸ್ಯೆಗಳಿಗೆ ಯಾರಿಗೂ ಹೊಳೆಯದ ಪರಿಹಾರ ಇವರಿಗೆ ಹೊಳೆಯುತ್ತದೆ. ಹೀಗಾಗಿ ಅವರ ವಿರೋಧಿಗಳೂ ಅಂತರಂಗದಲ್ಲಿ ರಾಜಣ್ಣನವರನ್ನು ಮೆಚ್ಚಿಕೊಳ್ಳುತ್ತಾರೆ. ನೇತರರಾಗಿ ದೊಡ್ಡವನೆನಿಸಿಕೊಳ್ಳುವುದ ಕ್ಕಿಂತ ಸಮಾಜವೇ ದೊಡ್ಡದೆಂದು ಪ್ರತಿಪಾದಿಸುವ ಇವರ ನ್ಯಾಯ-ನಿಷ್ಟೂರತೆಗೆ ವಿರೋಧಿ ಬಳಗವೂ ಇದೆ. ಸಮಾಜದ ಬಗ್ಗೆ ಇರುವ ಕಳಕಳಿಯಿಂದಾಗಿ ಕೆಲವೊಮ್ಮೆ ಸಂಘರ್ಷವನ್ನು ಎದುರಿಸಿದ್ದಾರೆ.
ನೇರ ನುಡಿ, ಸ್ನೇಹಪರತೆ ಜೊತೆಗೆ ನಿಷ್ಟೂರ ಗುಣಗಳನ್ನೂ ಹೊಂದಿರುವ ರಾಜಣ್ಣನವರಲ್ಲಿ ಒಬ್ಬ ಜವಾರಿ ಮನುಷ್ಯ ಇದ್ದಾನೆ. ಈ ಜವಾರಿತನವೇ ತಮ್ಮ ಬದುಕಿನಲ್ಲಿ ಹಾಗೂ ಉದ್ಯಮದಲ್ಲೂ ಛಾಪು ಮುಡಿಸಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಜೊತೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದು, ಸಭಾದ ಉಪಾಧ್ಯಕ್ಷರೂ ಆಗಿದ್ದಾರೆ. ಸದಾ ಕ್ರಿಯಾಶೀಲತೆ, ಲೋಕಾನುಭವದ ಸೂಕ್ಷ್ಮ ಗ್ರಹಿಕೆ ಹಾಗೂ ಜೀವನಾನುಭಾವದಿಂದ ಮನಸ್ಸು ಮಾಗಿದೆ. ಹಾಗೆಯೇ ಅಂದುಕೊಂಡದ್ದನ್ನು ಸಾಧಿಸುವ ಛಲ, ಗುರಿ ತಲುಪಲು ಮುನ್ನುಗ್ಗುವ ಸಾಹಸದ ಗುಣದಿಂದಾಗಿ ವಯಸ್ಸು ಮಾಸದೇ ಉಳಿದಿದೆ. ಎಂಭತ್ತರ ವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಕ್ರಿಯಾಶೀಲರಾಗಿ ಮುನ್ನಡೆದಿದ್ದಾರೆ ರಾಜಣ್ಣ…. ಅವರ ಜೀವನೋತ್ಸಾಹ-ಜೀವನ ವಿಕಾಸ ಹೀಗೆಯೇ ಮುಂದುವರೆಯಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಎಂ.ಎಸ್. ಶರಣ್
ದಾವಣಗೆರೆ.
Click here to change this text