ಬದುಕು – ಬವಣೆ – ಭರವಸೆ…

ಬದುಕು – ಬವಣೆ – ಭರವಸೆ…

ಬದುಕು ಭರವಸೆಗಳ ಬಣವೆ, ಬೇಸಿಗೆಯಲ್ಲಿ ಬಾಡಿದ ಮರವೂ ಸಹ ಮಳೆಗಾಲಕ್ಕೆ ಚಿಗುರಲೇಬೇಕು, ಬದುಕು ಸಹ ಹಾಗೆಯೇ ಯಾರಿಲ್ಲದಿದ್ದರೂ ಭರವಸೆಯ ಹೊತ್ತು ಮುಂದೆ ಸಾಗುವುದು….

ಬದುಕು ಅನ್ನೋದು ಬವಣೆ, ಅವರವರ ಭಾವಕ್ಕೆ ಕುತೂಹಲಗಳನ್ನು ಹೊತ್ತು ಸಾಗುವ ಜೀವಕ್ಕೆ ಒಮ್ಮೆ ನಗು, ಒಮ್ಮೆ ಅಳು… ಬಂದದ್ದನ್ನು ಸಂತೈಸಿಕೊಂಡು ಸಮಯ ಬಂದಾಗ ಸರಿದು ಹೋಗುವ ಸುದೀರ್ಘ ಪಯಣ…

ಒಂದು ದಿನ ಎಪ್ಪತ್ತರಿಂದ ಎಂಭತ್ತು ವರ್ಷದ ಅಜ್ಜಿ ತಲೆಯ ಮೇಲೆ ಕಟ್ಟಿಗೆಯ ಹೊರೆ ಹೊತ್ತು, ಬಿಸಿಲಿನಲ್ಲಿ ಬಳಲುತ್ತಾ ನಡೆಯುತ್ತಿದ್ದುದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಅವರ ಬಳಿ ಹೋಗಿ ಕೇಳಿದೆ, “ಅಜ್ಜಿ, ಈ ಬಿಸಿಲಲ್ಲಿ ಕಟ್ಟಿಗೆ ಹೊರೆ ಹೊತ್ತು ಎಲ್ಲಿಗೆ ಹೋಗ್ತೀರಾ ?

ಅಜ್ಜಿ: ಭಾರವಾದ ಮನಸ್ಸಿಂದ… `ಏನ್‌ ಮಾಡೋದಮ್ಮಾ? ಹೊಟ್ಟೆ ಪಾಡು…’ 

ನಾನು ಕೇಳಿದೆ :`ನಿಮಗೆ ಮಕ್ಕಳಿಲ್ವಾ, ಅವರು ನಿಮ್ಮನ್ನು ನೋಡಿಕೊಳ್ಳುತ್ತಿಲ್ವಾ? ಎಂದಾಗ. 

ಅಜ್ಜಿ : `ಒಬ್ಬ ಮಗ, ಒಬ್ಬ ಮಗಳು, ಸೊಸೆ, ಮೊಮ್ಮಕ್ಕಳು—ಎಲ್ಲರೂ ಇದ್ದಾರೆ. ಆದರೆ ಅವರ ಪಾಲಿಗೆ ನಾನಿಲ್ಲ, ನಾನೊಬ್ಬಳು  ಭಾರವೆನಿಸಿದ್ದರಿಂದ ದೂರ ಮಾಡಿದ್ದಾರೆ’ ಎಂದೇಳುವಾಗ ಕಣ್ಣಂಚಲ್ಲಿ ನೋವಿನ ಕಣ್ಣೀರು.

“ನನ್ನ ಬಳಿ ಹಣ, ಸ್ವಲ್ಪ ಆಸ್ತಿ ಇರುವಾಗ ಮಕ್ಕಳು ಎಲ್ಲವನ್ನೂ ಹಂಚಿ-ಹರಿದು ತಿಂದರು. ಈಗ ನನ್ನನ್ನು ಸಾಕುವುದು ಭಾರವೆಂದು ದೂರ ತಳ್ಳಿದ್ದಾರೆ. ಸಾಯಲು ಮನಸ್ಸಿಲ್ಲ, ಬದುಕಲು ಆಸೆಯೂ ಇಲ್ಲ. ಆದರೂ ದೂರದಿಂದ ಅವರ ಸುಖವನ್ನು ನೋಡಿ ಕಾಲ ಕಳೆಯುತ್ತಿದ್ದೇನೆ…. ಮುಂದೊಂದು ದಿನ ಮಕ್ಕಳೊಂದಿಗೆ ಸೇರಬಹುದೆಂಬ ಭರವಸೆಯಿಂದ’ ಎಂದು ಮುಂದೆ ನಡೆದರು. ಇದನ್ನು ಕೇಳಿ ಮನಸ್ಸು ತುಂಬಾ ಭಾರವಾಯಿತು.

ಹೆತ್ತ ಮಕ್ಕಳು ಸುಖವಾಗಿರಲೆಂದು ತನ್ನ ಇಳಿ ವಯಸ್ಸಿನಲ್ಲೂ ಯಾರ ಮೇಲೂ ಅವಲಂಬಿತವಾಗದೆ ಮಕ್ಕಳಿಗೆ ಹಾರೈಸುವ ಮುಗ್ಧ ಜೀವ ತಾಯಿ… ಯಾಕೆ ಹೀಗೆ? ಇಲ್ಲಿ ಯಾರ ತಪ್ಪು..? ತಮ್ಮ ಎಲ್ಲಾ ಹಣ-ಆಸ್ತಿಯನ್ನು ಮಕ್ಕಳಿಗೆ ಕೊಟ್ಟು, ಕೊನೆಗೆ ಬೀದಿಯಲ್ಲಿ ಕಟ್ಟಿಗೆ ಮಾರಿ ಜೀವನ ಸಾಗಿಸುವ ದೌರ್ಭಾಗ್ಯ ಯಾವ ತಾಯಿ-ತಂದೆಗೂ ಬೇಡ. 

`ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು’ ಎಂಬ ಗಾದೆ ಮಾತು ಎಷ್ಟು ಸತ್ಯವಾಗಿದೆ. ಆದರೆ ಮಕ್ಕಳು ತಮ್ಮ ತಂದೆ-ತಾಯಿಯನ್ನೇ ಸಾಕುವುದು ಭಾರವೆಂದು ದೂರ ತಳ್ಳಿ ಏನನ್ನು ಸಾಧಿಸುತ್ತಾರೆ..? ಆಸ್ತಿ-ಹಣಕ್ಕೆ ಇರುವ ಬೆಲೆ ಹೆತ್ತವರಿಗಿಲ್ಲವೆ? ನಮ್ಮನ್ನು ಹೆತ್ತು-ಹೊತ್ತು, ಸಾಕಿ, ದೊಡ್ಡವರನ್ನಾಗಿ ಮಾಡಿರುವುದು ತಾವು ಬೀದಿಗೆ ಬರಲೆಂದೇ…, ವೃದ್ದಾಶ್ರಮಕ್ಕೆ ಸೇರಲೆಂದೇ ಮಕ್ಕಳನ್ನು ಹೇರಬೇಕೆ…?

`ಅಮ್ಮನ ಮಡಿಲು, ಅಪ್ಪನ ಹೆಗಲು’ ಯಾವಾಗಲು ಮಕ್ಕಳಿಗಾಗಿಯೇ. ಬದುಕಿನುದ್ದಕ್ಕೂ ಮಕ್ಕಳಿಗಾಗಿ ಶ್ರಮಿಸುತ್ತಾ ಗಾಣದೆತ್ತಿನಂತೆ ದುಡಿದು ಗಳಿಸಿದ ಆಸ್ತಿ ನಮಗೇ ಬೇಕೆನ್ನುವ ಹಠ ಗಂಡು ಮಕ್ಕಳು,  ನಮಗೂ ಹಕ್ಕಿದೆ ಎಂದು ಅಧಿಕಾರ ಚಲಾಯಿಸುವ ಹೆಣ್ಣು ಮಕ್ಕಳು ಒಂದೆಡೆಯಾದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಪಾಲಿದೆ ಎನ್ನುವ ಕಾನೂನು. ಇದರಿಂದ ಸಂಬಂಧಗಳಲ್ಲಿ ಒಡಕುಮೂಡಿ, ದ್ವೇಷ, ಅಸೂಯೆ, ಕೊಲೆ-ಸುಲಿಗೆಗಳಿಗೆ ಕಾರಣವಾಗುವಂತಹ ಈ ಕಾನೂನು ನಮ್ಮೆಲ್ಲರಿಗೂ ಬೇಕಾಗಿದೆಯಾ? ಹಿಂದಿನ ಕಾಲದಂತೆ ಕೊಟ್ಟು-ಕೊಳ್ಳುವ, ಪ್ರೀತಿಯ ಉಡುಗೊರೆಗಳ ಮುಂದೆ ಸಮಪಾಲಿನ ಆಸ್ತಿ, ದ್ವೇಷ ಬೇಕಾಗಿದೆಯೇ? ಈ ಎಲ್ಲದರ ಮಧ್ಯೆ ಸಂಬಂಧಗಳಿಗೆ ಬೆಲೆ ಉಳಿದಿದೆಯೇ? ತಂದೆ-ತಾಯಿಯ ಮಮಕಾರ, ಅಣ್ಣ-ತಂಗಿಯ ಬಾಂಧವ್ಯ, ಅಕ್ಕ-ತಮ್ಮನ ಪ್ರೀತಿ, ಗಂಡ-ಹೆಂಡತಿಯ ಅನ್ಯೋನ್ಯತೆ ಇವೆಲ್ಲವೂ ಆಸ್ತಿ-ಹಣಕ್ಕಾಗಿ ಕಾನೂನಿನ ತಕ್ಕಡಿಯಲ್ಲಿ ತೂಗುವಂತಾಗಿವೆ. 

ಬದುಕೇ ಒಂದು ಆಸ್ತಿ, ಆದರೆ ಆಸ್ತಿಗಾಗಿ ಬದುಕುವುದು ಸರಿಯೆ. ?  ಮತ್ತೆ ಎಲ್ಲರು ಒಂದಾಗಿ ಪ್ರೀತಿಯಿಂದ ಸಂಬಂಧಗಳನ್ನು ಬೆಸೆಯುವ  ಆ ಕಾಲ ಯಾವಾಗ…?

`ಬಾಳ ಪಯಣದಲ್ಲಿ ಭರವಸೆಗಳು ಬೇಕು…’ ಎನ್ನುತ್ತಾ ನಾವೆಲ್ಲರೂ ಮುಂದೆ ಮುಂದೆ ಸಾಗೋಣ…


ಟಿ.ಎನ್. ಮಂಜುಳ
ಶಿರಮಗೊಂಡನಹಳ್ಳಿ.

nagarajmanjula5@gmail.com

 

error: Content is protected !!