ಆದರೆ, ನನ್ನ ಮನಸ್ಸನ್ನು ತುಂಬಾ ಕಾಡಿದ ನಾಟಕ ಮಾಯಾಬಜಾರ್! ಇದಕ್ಕೆ ಕೆಲವು ಕಾರಣಗಳಿವೆ. ಚಿಕ್ಕಂದಿನಲ್ಲಿ ಮಾಯಾ ಬಜಾರ್ ಸಿನಿಮಾವನ್ನು ನೋಡಿ ಬೆರಗಾಗಿದ್ದೆ. ಮಹಾಭಾರತದಲ್ಲಿ ಬರುವ ಅಭಿಮನ್ಯು ಮತ್ತು ಶಶಿರೇಖಾ ಇವರ ವಿವಾಹವನ್ನು ತನ್ನ ಮಾಯಾ ಪ್ರದರ್ಶನದಿಂದ ಭೀಮನ ಮಗನಾದ ಘಟೋದ್ಘಜನು ನೆರವೇರುವಂತೆ ಮಾಡುವ ವಿಸ್ಮಯಕಾರಿ ಕಥೆ ಇದು. 1957ರಲ್ಲಿ ತೆಲುಗಿನಲ್ಲಿ ನಿರ್ಮಾಣಗೊಂಡ ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಲಾಗಿತ್ತು. ಆ ಕಾಲದಲ್ಲಿ ಮಾಯಾ ಮಂತ್ರಗಳ ಅದ್ಬುತ ದೃಶ್ಯಗಳನ್ನು ಒಂದರ್ಥದಲ್ಲಿ ಗ್ರಾಫಿಕ್ಸ್ ಎಫೆಕ್ಟ್‌ಗಳನ್ನು ಆ ಸಿನಿಮಾದಲ್ಲಿ ಸೃಷ್ಟಿಸಲಾಗಿತ್ತು. ಅದೇ ಕಥಾ ಹಂದರವನ್ನು ಹೊಂದಿದ್ದ ಅದೇ ಹೆಸರಿನ ನಾಟಕವನ್ನು ರಂಗದ ಮೇಲೆ ಹೇಗೆ ಸೃಷ್ಟಿಸುತ್ತಾರೆ ಎಂಬ ಕುತೂಹಲ ಒಂದೆಡೆಯಾದರೆ, ಈ ನಾಟಕವನ್ನು ಪ್ರದರ್ಶಿಸಿದ ತಂಡ ಸುಮಾರು 136 ವರ್ಷಗಳ ಇತಿಹಾಸವನ್ನು ಹೊಂದಿರುವಂಥಹದ್ದು! ಅದರಲ್ಲಿರುವ ಕಲಾವಿದರೆಲ್ಲರೂ ಒಂದೇ ಕುಟುಂಬದವರು!. ಹೌದು, ಸುಮಾರು 60 ಜನರನ್ನು (ಕಲಾವಿದರನ್ನು) ಹೊಂದಿರುವ ಈ ಕುಟುಂಬ ಪಾಡ್ಯ ನಾಟಕಗಳನ್ನು ಪ್ರದರ್ಶಿಸುವುದರಲ್ಲಿ ಫೇಮಸ್. ಅಂದರೆ ತೆಲುಗಿನಲ್ಲಿ ರಾಮಾಯಣ, ಮಹಾಭಾರತ ಮುಂತಾದ ಪೌರಾಣಿಕ ನಾಟಕಗಳನ್ನು ಮುಖ್ಯವಾಗಿ ಅಭಿನಯಿಸುತ್ತದೆ. ಶತಮಾನದ ಹಿಂದೆ ಆರಂಭಗೊಂಡ ಈ ತಂಡ ಸುರಭಿ ಥಿಯೇಟರ್ (ಶ್ರೀ ಸುರಭಿ ವೆಂಕಟೇಶ್ವರ ಥಿಯೇಟರ್) ಎಂದೇ ಪ್ರಚಲಿತ. ಅದನ್ನು ಯಶಸ್ವಿಯಾಗಿ ಸಂಘಟಿಸಿಕೊಂಡು ಹೊಸತನದ ಶಕ್ತಿಯನ್ನು ತುಂಬಿದವರಲ್ಲಿ ಪ್ರಮುಖರು ಪದ್ಮಶ್ರೀ ಆರ್. ನಾಗೇಶ್ವರ ರಾವ್ ಅವರು. ಈಗ ಅದನ್ನು ಮುನ್ನಡೆಸುತ್ತಿರುವವರು ನಾಗೇಶ್ವರ ರಾವ್ ಅವರ ಮೊಮ್ಮಗ ನಟ-ನಿರ್ದೇಶಕ ಜಯಚಂದ್ರ ವರ್ಮ. ಇವರು ಸಂಗೀತ, ನಾಟಕ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸುರಭಿ ಥಿಯೇಟರ್ ಕುರಿತು ಮೊದಲೇ ವಿವರಗಳನ್ನು ಸಂಪಾದಿಸಿ ನನ್ನ ರಂಗಾಸಕ್ತ ಗೆಳೆಯರೊಂದಿಗೆ ಹಂಚಿಕೊಂಡಿದ್ದೆ.
ಮೊನ್ನೆ ದಾವಣಗೆರೆಯ ವಿಶ್ವವಿದ್ಯಾಲಯದ ಕಲಾ ಶಾಲೆಯ ಆವರಣದಲ್ಲಿರುವ ನೂತನ ಬಯಲು ರಂಗಮಂದಿರದಲ್ಲಿ ಈ ಮಾಯಾ ಬಜಾರ್ ನಾಟಕ ಹಲವು ಮಿತಿಗಳ ನಡುವೆ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಕೆಲವು ಸನ್ನಿವೇಶಗಳಲ್ಲಿ ಮಾಯಾ ಲೋಕವನ್ನೇ ಸೃಷ್ಟಿಸಿತು. ನಾಟಕ ಪ್ರದರ್ಶನದ ನಂತರ ಆ ತಂಡದವರೊಂದಿಗೆ ಮಾತನಾಡಬೇಕೆಂದು ಅನಿಸಿದರೂ ಅಷ್ಟೊಂದು ಕಲಾವಿದರು ಮೇಕಪ್ ಕಳಚುವುದು, ಎಲ್ಲಾ ಪರಿಕರಗಳನ್ನು ಎತ್ತಿಡುವುದು ನಂತರ ಊಟವನ್ನು ಮಾಡಬೇಕು. ಈ ನಡುವೆ ನನ್ನೊಡನೆ ಮಾತನಾಡಲು ಅವರಿಗೆ ಸಮಯವೆಲ್ಲಿ ಎಂದುಕೊಂಡು ನಾನು ಹಿಂತಿರುಗಿದೆ. ಒಂದೆರಡು ದಿನಗಳ ನಂತರ ಗೆಳೆಯ ಬಿ.ಎಂ. ನಿರಂಜನರ ಫೋನ್ ಕರೆ “ನಿಮಗೆ ಕುತೂಹಲ ಮೂಡಿಸಿರುವ ಸುರಭಿ ಥಿಯೇಟರ್ ಕಲಾವಿದರನ್ನು ನಾಳೆ ಮಧ್ಯಾಹ್ನ 12ಗಂಟೆಯ ನಂತರ ದಾವಣಗೆರೆಯ ಸರಕಾರಿ ನೌಕರರ ಭವನದ ಹಿಂಭಾಗದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ನೀವು ಭೇಟಿ ಮಾಡಬಹುದು ಅಲ್ಲಿಗೆ ಬನ್ನಿ” ಎಂದು ತಿಳಿಸಿದರು. ಮಾರನೆಯ ದಿನ ಕುತೂಹಲದಿಂದ ಅಲ್ಲಿಗೆ ತೆರಳಿದೆ. ನಮ್ಮ ದಾವಣಗೆರೆಯ ರಂಗ ಕರ್ಮಿಗಳಾದ ಸಿದ್ಧರಾಜು, ಶಂಭುಲಿಂಗ ಕೊಟ್ಟೂರು ಮುಂತಾದವರು ಸುರಭಿ ತಂಡದ ಕಲಾವಿದರಿಗೆ ಊಟ ಬಡಿಸುತ್ತಿದ್ದರು. ಗೆಳೆಯರು ಮಾಯಾ ಬಜಾರ್ ನಾಟಕದಲ್ಲಿ ಅಭಿಮನ್ಯುವಿನ ಪಾತ್ರ ಮಾಡಿದ ಜಯಚಂದ್ರ ವರ್ಮ ಅವರನ್ನು ನನಗೆ ಪರಿಚಯಿಸಿದರು. ತಕ್ಷಣ ಜಯಚಂದ್ರ ಅವರು ನಿಮ್ಮ ವಿಡಿಯೋ ನೋಡಿದ್ದೇನೆ ತುಂಬಾ ಪರಿಣಾಮಕಾರಿಯಾಗಿ ನಾಟಕೋತ್ಸವದ ಬಗ್ಗೆ ಪ್ರಚಾರ ಮಾಡಿದ್ದೀರಿ. ಅದರಲ್ಲೂ ನಮ್ಮ ಮಾಯಾಬಜಾರ್ ನಾಟಕ ಕುರಿತು ನೀವು ಘಟೋದ್ಘಜನ ಶೈಲಿಯಲ್ಲಿ ನಗುತ್ತಾ ಅಭಿನಯಿಸಿರುವುದು ತುಂಬಾ ಚೆನ್ನಾಗಿದೆ ಎಂದು ಹೇಳಿ ನನಗೆ ಅಚ್ಚರಿ ಮೂಡಿಸಿದರು!. ಅಷ್ಟೇ ಅಲ್ಲ ನನ್ನ ಪಕ್ಕದಲ್ಲಿ ಕುಳಿತು ಪ್ರದರ್ಶನದ ಕುರಿತು ಚರ್ಚಿಸತೊಡಗಿದರು. ನಮ್ಮ ನಾಟಕಕ್ಕೆ ವೇದಿಕೆ ತುಂಬಾ ಚಿಕ್ಕದಾಗಿತ್ತು. ಈ ಬಯಲು ರಂಗ ಮಂದಿರದಲ್ಲಿ ಸೈಡ್ ವಿಂಗ್ಸ್ ಹಾಕಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಹಾಕಿಕೊಂಡಾಗ ಅಗಲ ತುಂಬಾ ಕಡಿಮೆಯಾಗುತ್ತದೆ. ಅಷ್ಟರಲ್ಲೇ ಅಭಿನಯಿಸಿದೆವು. ಹೇಗೆ ಅನ್ನಿಸಿತು ಎಂದು ಕೇಳಿದರು. ಪರವಾಗಿಲ್ಲ ಆ ಮಿತಿಯಲ್ಲೂ ನಾಟಕ ಚೆನ್ನಾಗಿ ಮೂಡಿ ಬಂದಿತು. ಆದರೆ, ನಿಮ್ಮ ಕೆಲವು ಪಾತ್ರಧಾರಿಗಳು ತೀರಾ ಹೊಸಬರಂತೆ ಕಂಡುಬಂದರು. ಅವರು ಸಂಭಾಷಣೆ ಹೇಳಲು ತಡವರಿಸುತ್ತಿದ್ದರು. ಹಿಂದಿನಿಂದ ನೀವುಗಳು ಪ್ರಾಂಪ್ ಮಾಡುತ್ತಿರುವುದು ನಮಗೆ ಗೊತ್ತಾಯಿತು ಎಂದು ನಗುತ್ತಾ ಹೇಳಿದೆ. ಸರಿಯಾಗಿ ಹೇಳಿದಿರಿ ಎಂದು ಉತ್ತರಿಸಿದವರು ಅದರಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿದ್ದ ಒಬ್ಬರು ಕೇವಲ ಐದು ದಿನಗಳ ಕೆಳಗೆ ನಿಧನ ಹೊಂದಿದರು. ಅವರ ಜೊತೆಗಿದ್ದ ನಾಲ್ವರು ಊರಲ್ಲಿಯೇ ಇರಬೇಕಾಯಿತು. ಅವರು ಪ್ರದರ್ಶನಕ್ಕೆ ಬರಲಾಗಲಿಲ್ಲ. ನಾವು ಪ್ರದರ್ಶನವನ್ನು ರದ್ದು ಪಡಿಸುವುದು ಸರಿಯಲ್ಲ ಎಂದುಕೊಂಡು ನಾಲ್ವರು ಹೊಸಬರನ್ನು ಕರೆದುಕೊಂಡು ಬಂದೆವು. ಈಗ ಹಿಂತಿರುಗಿ ಅವರ ಸಮಾರಾಧನೆಯನ್ನು ಮಾಡಬೇಕಿದೆ ಎಂದು ನಿಧನ ಹೊಂದಿದ ವ್ಯಕ್ತಿಯ ಫೋಟೋವನ್ನು ತೋರಿಸಿದರು. ನಾನು ತಬ್ಬಿಬ್ಬಾದೆ.
ಮಾಯಾ ಬಜಾರ್ ಅಂದ್ರೆ ಇದುವೇ ಮಾಯಾಬಜಾರ್! ಕಳೆದ ವಾರ ಮೂರು ದಿನಗಳ ಕಾಲ ವೃತ್ತಿರಂಗಭೂಮಿ ರಂಗಾಯಣದ ವತಿಯಿಂದ ರಾಷ್ಟ್ರೀಯ ವೃತ್ತಿರಂಗೋತ್ಸವ ನಡೆಯಿತು. ಇದು ರಂಗಾಸಕ್ತರು ಮತ್ತು ಕಲಾರಸಿಕರಿಗೆ ರಸದೌತಣ ನೀಡಿತು. ಪ್ರತಿದಿನ ಬೆಳಿಗ್ಗೆ ವಿಚಾರ ಸಂಕಿರಣ, ಸಂಜೆ ಬಯಲು ರಂಗಮಂದಿರದಲ್ಲಿ ಹಿರಿಯ ಕಲಾವಿದರೊಂದಿಗೆ ಸಂವಾದ ಹಾಗೂ ಕನ್ನಡ, ತಮಿಳು, ತೆಲುಗು ಭಾಷೆಗಳ ವೃತ್ತಿ ರಂಗಭೂಮಿ ನಾಟಕಗಳ ಪ್ರದರ್ಶನ ಕಾರ್ಯಕ್ರಮಗಳು ಕಲಾ ಪ್ರೇಮಿಗಳಿಗೆ ನಿಜವಾದ ಹಬ್ಬವಾಯಿತು. ಸಂಭ್ರಮದಿಂದ ಕಂಪನಿ ನಾಟಕಗಳನ್ನು ನೋಡುತ್ತಿದ್ದ ಹಳೆಯ ದಿನಗಳ ನೆನಪಾಯಿತು.
ಇದೇ ಮಾರ್ಚ್ 12ರಂದು ಆ ಕಲಾವಿದ ವಿಧಿವಶರಾಗಿದ್ದಾರೆ. ಈ ನಾಟಕದ ಪ್ರದರ್ಶನ ದಾವಣಗೆರೆಯಲ್ಲಿ 17ರಂದು. ಕೇವಲ ಐದು ದಿನಗಳ ವ್ಯತ್ಯಾಸ. ನಾಟಕವನ್ನು ರದ್ದು ಪಡಿಸದೇ ಏನೋ ಒಂದು ವ್ಯವಸ್ಥೆಯನ್ನು ಮಾಡಿಕೊಂಡು ಬಂದ ಇವರ ಬದ್ಧತೆಗೆ ಒಂದು ದೊಡ್ಡ ನಮಸ್ಕಾರ. ಅಷ್ಟರಲ್ಲಿ ಎರಡು ಪುಟ್ಟ ಮಗು ಜಯಚಂದ್ರ ಬಳಿ ಓಡೋಡಿ ಬಂದಿತು. ಈ ಮಗುವೇ ಮಾಯಾಬಜಾರ್ ಅಂದ್ರೇ… ಇದೇ ಮಾಯಾಬಜಾರ್ ಎಂದು ಒಂದೊಂದು ಮಾಯಾ ಸನ್ನಿವೇಶದ ನಂತರ ಕೂಗುತ್ತಾ ನೆರೆದಿದ್ದ ಪ್ರೇಕ್ಷಕರೆಲ್ಲಾ ಹರ್ಷದಿಂದ ಅವಳಿಗೆ ದನಿಗೂಡಿಸುವಂತೆ ಮಾಡುತ್ತಿದ್ದಳು. ಇವಳು ಕೇವಲ ಐದು ವರ್ಷದ ಅಂಶಿಕಾ ವರ್ಮ. ನಾನು ಆ ಪುಟಾಣಿಯೊಂದಿಗೆ ಆ ಸಂಭಾಷಣೆಗಳನ್ನು ಕೂಗುತ್ತಾ ಅವಳೂ ಪ್ರತಿಕ್ರಿಯಿಸುವಂತೆ ಮಾಡಿ ಒಂದಿಷ್ಟು ವಿಡಿಯೋ ತೆಗೆದು ಸಂಭ್ರಮಿಸಿದೆ. ಈ ಪುಟಾಣಿ ನಿಮ್ಮ ನಾಟಕದ ಹೈಲೈಟ್.
ಜೊತೆಗೆ ನಾಟಕದಲ್ಲಿ ಬರುವ ಮಾಯಾ ದೃಶ್ಯಗಳನ್ನು ನೀವು ಸಂಯೋಜಿಸಿದ ರೀತಿ ನಿಜಕ್ಕೂ ಅದ್ಭುತ ಎಂದು ಜಯಚಂದ್ರ ವರ್ಮರಿಗೆ ಹೇಳಿದೆ. ಆಗ ಅವರು ನಮ್ಮ ನಾಟಕಗಳಲ್ಲಿನ ಹೊಸತನಕ್ಕೆ ಮತ್ತು ನಾವು ಪ್ರಪಂಚಾದ್ಯಂತ ಪ್ರದರ್ಶನಗಳನ್ನು ಮಾಡುವುದಕ್ಕೆ ಹಾಗೂ ಆರ್ಥಿಕವಾಗಿ ನಾವು ಸದೃಢರಾಗಲು ಸಾಧ್ಯವಾಗಿದ್ದು ನಿಮ್ಮ ಕರ್ನಾಟಕದ ಬಿ. ವಿ. ಕಾರಂತ್ ಅವರ ಮಾರ್ಗದರ್ಶನ ಮತ್ತು ಸಹಾಯದೊಂದಿಗೆ ಎಂದು ವಿವರಿಸಿದರು. ದಶಕಗಳಿಂದ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳನ್ನು ಪ್ರವೇಶಿಸುತ್ತಾ ಸಾಗುತ್ತಿದ್ದ ನಮ್ಮ ಕೌಟುಂಬಿಕ ರಂಗ ತಂಡಕ್ಕೆ ಬಿ.ವಿ. ಕಾರಂತರು 1996ರಲ್ಲಿ ಒಂದು ರಂಗ ಕಾರ್ಯಾಗಾರವನ್ನು ಏರ್ಪಡಿಸಿ ರಂಗ ಸಂಯೋಜನೆಯಲ್ಲಿ ಬದಲಾವಣೆ ಮಾಡಲು ಸೂಚಿಸಿದರು. ರಾಷ್ಟ್ರೀಯ ನಾಟಕ ಶಾಲೆ ದೆಹಲಿ, ಬೆಂಗಳೂರಿನಲ್ಲಿರುವ ಪ್ರಾಂತೀಯ ರಾಷ್ಟ್ರೀಯ ನಾಟಕ ಶಾಲೆ, ಸ್ಪಂದನ, ದೆಹಲಿಯ ಅಲರಿಪು ತಂಡಗಳ ಸಹಕಾರದಿಂದ ಸತತವಾಗಿ 1996, 97, 98ರಲ್ಲಿ ರಂಗ ತರಬೇತಿ ಶಿಬಿರಗಳನ್ನು ನಮಗೆ ಏರ್ಪಡಿಸಿ ಸಿದ್ಧಗೊಳಿಸಿದರು. ಆಗ ನನಗೆ 12 ವರ್ಷ. ಆ ಸಮಯದಲ್ಲಿ ಬಿ.ವಿ. ಕಾರಂತರು ಸುಮಾರು ಏಳು ವಿವಿಧ ಪಾತ್ರಗಳಲ್ಲಿ ನಾನು ಮನೋಜ್ಞವಾಗಿ ಅಭಿನಯಿಸುವಂತೆ ತಾಲೀಮು ಕೊಡಿಸಿದರು. ಅದೂ ಅಲ್ಲದೆ ಸರ್ಕಾರದಿಂದ ರಂಗ ಭೂಮಿ ವಲಯದಿಂದ ನಮಗೆ ಅನುದಾನ ಕೊಡಿಸಿದ್ದಲ್ಲದೆ ಗೌರವ ವೇತನವನ್ನು ಪಡೆಯುವಂತೆ ಮಾಡಿದರು. ಅವರಿಗೆ ನಾವು ಜೀವ ನಪರ್ಯಂತ ಕೃತಜ್ಞತಾರಾಗಿರುತ್ತೇವೆ ಎಂದು ಧನ್ಯತೆಯಿಂದ ಹೇಳಿದರು.
ಸ್ವಲ್ಪ ಹೊತ್ತಿನ ನಂತರ ಗೆಳೆಯ ಬಿ.ಎಮ್. ನಿರಂಜನ್ ಅಲ್ಲಿಗೆ ಬಂದರು. ಜಯಚಂದ್ರ ವರ್ಮ ಎದ್ದು ನಿಂತು ಅವರಿಗೆ ನಮಸ್ಕರಿಸುತ್ತ ಬರಮಾಡಿಕೊಂಡರು. ಇವರ ಸಹಾಯವನ್ನೂ ನಾವು ಮರೆಯುವಂತಿಲ್ಲ ಎಂದು ನಿರಂಜನ್ ಅವರನ್ನು ತೋರಿಸುತ್ತಾ ನನಗೆ ಹೇಳಿದರು. ಮಾರ್ಚ್ 17 ರಂದು ನಾಟಕ ಮುಗಿದಾಗ ರಾತ್ರಿ ತಡವಾಗಿತ್ತು. ನಮ್ಮ ನಾಟಕದ ಪರಿಕರಗಳನ್ನು ಲಾರಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಬೇಕಾಗಿತ್ತು. ಅಷ್ಟರೊಳಗೆ ನಮ್ಮ ಕಲಾವಿದರನ್ನು ಅದರಲ್ಲೂ ಮಕ್ಕಳು, ವೃದ್ಧರು, ಮಹಿಳೆಯರನ್ನು ನಾವು ಉಳಿದುಕೊಂಡ ಜಾಗಕ್ಕೆ ಸ್ಥಳಾಂತರಿಸಬೇಕಿತ್ತು. ಯಾವುದಾದರೂ ವಾಹನದ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಆಯೋಜಕರಿಗೆ ಕೇಳಿಕೊಂಡಾಗ ಅವರು ಅಸಹಾಯಕತೆ ತೋರಿದರು. ಅಷ್ಟರಲ್ಲಿ ಅಲ್ಲಿಯೇ ಇದ್ದ ನಿರಂಜನ್ ಅವರು ಯೋಚಿಸಬೇಡಿ ನಾವಿದ್ದೇವೆ ಎಂದು ತಮ್ಮ ವಾಹನದಲ್ಲಿ ನಮ್ಮ ಎಲ್ಲಾ ಕಲಾವಿದರನ್ನು ಬೆಳಗಿನ ಜಾವ ಸುಮಾರು ಮೂರು ಗಂಟೆಯ ತನಕ ತಂಡೋಪ ತಂಡವಾಗಿ ನಾವು ಉಳಿದುಕೊಂಡಿದ್ದ ಸ್ಥಳಕ್ಕೆ ಕರೆದೊಯ್ದು ಸಹಾಯ ಮಾಡಿದರು. ಮಾರನೇ ದಿನ ನಾವು ಲಾರಿಯಲ್ಲಿ ಎಲ್ಲರೂ ಮುರುಡೇಶ್ವರಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದೆವು. ಹಿಂತಿರುಗಿ ಬಂದ ನಮಗೆ ಇಲ್ಲಿ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮೇಕಾ ಸತ್ಯನಾರಾಯಣ್ ಮೂಲಕ ಮಾಡಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ನಮ್ಮ ಕಲಾವಿದನೊಬ್ಬ ಶಿವಮೊಗ್ಗದಿಂದ ವಿಮಾನದ ಮೂಲಕ ಹೈದರಾಬಾದ್ ತಲುಪಲೇ ಬೇಕಿತ್ತು. ಶಿವಮೊಗ್ಗದ ವಿಮಾನ ನಿಲ್ದಾಣ ತಲುಪಲು ಸಮಯ ಕಡಿಮೆ ಇದ್ದುದರಿಂದ ನಿರಂಜನ್ ಸ್ವತಃ ತಮ್ಮ ಸ್ಕೂಟರಿನಲ್ಲಿ ಹೊನ್ನಾಳಿಯ ತನಕ ಕರೆದುಕೊಂಡು ಹೋಗಿ ಅಲ್ಲಿ ಗೆಳೆಯರೊಬ್ಬರ ಕಾರಿನ ಮೂಲಕ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದಾರೆ. ಅಷ್ಟೇ ಅಲ್ಲ ಈ ಸರ್ಕಾರಿ ನೌಕರರ ಭವನದ ಸಿಬ್ಬಂದಿಗಳು, ನಿಮ್ಮ ಸಿದ್ದರಾಜು, ಕೊಟ್ಟೂರು ಶಂಭುಲಿಂಗ ಅವರೊಂದಿಗೆ ನಮಗೆ ಊಟೋಚಾರ ಮಾಡಿ ಸಹಕರಿಸಿದ್ದಾರೆ.
ಒಟ್ಟಿನಲ್ಲಿ ನಿಮ್ಮ ಕನ್ನಡದವರ ಸಹಕಾರವನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು. ನೀವು ಸದಾ ನಮ್ಮ ಸಂಪರ್ಕದಲ್ಲಿ ಇರಬೇಕೆಂದು ಫೋನ್ ನಂಬರ್‌ಗಳನ್ನು ಪಡೆದುಕೊಂಡರು. ನಮ್ಮ ಕನ್ನಡಿಗರ ಕಲಾ ಪ್ರೋತ್ಸಾಹದ ಬಗ್ಗೆ ಹೆಮ್ಮೆ ಅನಿಸಿತು. ನಾನು ಜಯಚಂದ್ರ ವರ್ಮ ಅವರಿಗೆ ಹೇಳಿದೆ, ನೋಡಿ ಸರ್, ಕಳೆದ ಶತಮಾನದಿಂದ ನೀವು ಕಲಾಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಬಂದಿದ್ದೀರಿ. ಎಲ್ಲಿ ಕಲಾ ಸರಸ್ವತಿ ಇರುತ್ತಾಳೋ, ಎಲ್ಲಿ ಒಳ್ಳೆಯ ಮನಸ್ಸುಗಳು ಇರುತ್ತವೋ ಅಲ್ಲಿ ಸ್ಪಂದಿಸುವ ಹೃದಯಗಳು ಇದ್ದೇ ಇರುತ್ತವೆ. ಇದೂ ಒಂದು ಮಾಯಾಬಜಾರ್..!
ಆರ್.ಟಿ. ಅರುಣ್‌ಕುಮಾರ್
arunartist@gmail.com
Click here to change this text