ಮಕ್ಕಳ ಬದುಕಿಗೆ ಜೀವ ನೀಡಲು ಸಾಧ್ಯವಾಗದ ಈ ಉನ್ನತ ಶಿಕ್ಷಣ ಬೇಕಾ?

ಮಕ್ಕಳ ಬದುಕಿಗೆ ಜೀವ ನೀಡಲು ಸಾಧ್ಯವಾಗದ ಈ ಉನ್ನತ ಶಿಕ್ಷಣ ಬೇಕಾ?

ಇಂದಿನ ಶಿಕ್ಷಣ ನಾವೇ ಸೃಷ್ಟಿಸಿಕೊಂಡ ಬದುಕಿನ ಕೃತಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮಾತ್ರ ನಮ್ಮ ಮಕ್ಕಳನ್ನು ಸಿದ್ಧಗೊಳಿಸುತ್ತಿ ರುವಂತೆ ಕಾಣುತ್ತದೆ. ಬದುಕಿನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾರದೆ ನಲುಗಿ, ನೊಂದರೂ ನಮ್ಮ ಬಹುಸಂಖ್ಯಾತ ಪೋಷಕರು ತಮ್ಮ ಮಕ್ಕಳನ್ನು ಈ ವಾಸ್ತವ ಲೋಕದ ಭಾಗವಾಗಿ ನೋಡುವುದೇ ಇಲ್ಲ. ಅದಮ್ಯ ಸಾಧ್ಯತೆಯ ಈ ಮಕ್ಕಳು ನಮ್ಮ ಕನಸಿನ ಲೋಕದ ಕೂಸುಗಳು. ಈ ಮಕ್ಕಳ ಅಪರಿಮಿತ ಸಾಧ್ಯತೆಗಳನ್ನು ನಾವು ಆರೋಗ್ಯಕರವಾದ ಆಯಾಮದಲ್ಲಿ ನೋಡಿದ್ದರೆ ಚೆನ್ನಾಗಿತ್ತು. ಆದರೆ ವಾಸ್ತವದಲ್ಲಿ ಈ ಮಕ್ಕಳ ಸಾಧ್ಯತೆ ಆಯಾ ಮಕ್ಕಳ ಸುಪ್ತ ಸಾಮರ್ಥ್ಯದ ಸುತ್ತ ಹೆಣೆದ ಕನಸಾಗಿಲ್ಲ. ಬದಲಿಗೆ ಈ ತಂದೆ-ತಾಯಿಗಳ ಅತೃಪ್ತಿ, ವಿಫಲತೆಗಳು ಸೃಷ್ಟಿಸಿದ ಕನಸುಗಳಾಗಿವೆ. ತಾವು ಪಡೆಯಲಾರದ್ದನ್ನು, ಸಾಧಿಸಲಾರದ್ದನ್ನು ಮಕ್ಕಳು ಸಾಧಿಸಬೇಕೆಂಬುದು ಇವರ ಕನಸು. ಈ ಕನಸಿನ ಚೌಕಟ್ಟನ್ನು ಮಕ್ಕಳು ಮೀರದಂತೆ ನೋಡಿಕೊಳ್ಳುವುದೇ ತಂದೆ – ತಾಯಿಗಳು ಬಯಸುವ ಶಿಕ್ಷಣ, ಬೇಡಿಕೆಗೆ  ತಕ್ಕಂತೆ ಪೂರೈಕೆ ಮಾಡುವುದೇ ನಮ್ಮ ಶಿಕ್ಷಣ ಮಾರುಕಟ್ಟೆಯ ಕೆಲಸ. ಹಾಗಾದರೆ ಈ ತಂದೆ-ತಾಯಿಗಳಿಗೆ ಬದುಕಿನ ವಾಸ್ತವತೆಗಳ ಪರಿಮಿತಿಗಳ ಅರಿವು ಇಲ್ಲವೇ…?

ಪೋಷಕರೇ ದಯಮಾಡಿ ಕ್ಷಮೆಯಿರಲಿ…

ತಾಯಂದಿರೇ ನೀವುಗಳು ಸ್ವಲ್ಫ ನಿಧಾನವಾಗಿ ಯೋಚಿಸಿ, ಇಂದಿನ ಶಿಕ್ಷಣ ನಮ್ಮ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ತಂದಿಟ್ಟಿದೆ, ಒಪ್ಪಿಕೊಳ್ಳೋಣ , ಇದರ ಅವಶ್ಯಕತೆ ನಮಗಿದೆಯಾ? ಉನ್ನತ ಶಿಕ್ಷಣ ಪಡೆದವರೆಲ್ಲರಿಗೂ ಬದುಕು ರೂಪಿಸಿಕೊಳ್ಳಲು ದಾರಿ ಕಲ್ಪಿಸುವಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಭಂಡ ಸರ್ಕಾರಗಳು ವಿಫಲವಾಗಿವೆ. ಹೌದಲ್ಲವೇ ? ಇದನ್ನು ಒಪ್ಪಿಕೊಳ್ಳಲು ನಿಮಗೆ ಮುಜುಗರವೆನಿಸುತ್ತಿಲ್ಲವೇ..? ಯಾಕೆ ಮುಜುಗರವಾಬೇಕು ಎನ್ನುವ ಮನಸ್ಸು ನಿಮ್ಮದಾದರೆ ಅರ್ಥ ಮಾಡಿಕೊಳ್ಳಿ.

ನಮ್ಮ ಮಕ್ಕಳು ವಿದ್ಯಾವಂತರಾಗಲಿ, ಬುದ್ಧಿವಂತರಾಗಲೀ ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಮರ್ಥರಾಗಲಿ ಎನ್ನುವ ಆಶಾಭಾವನೆಗಳು ನಮ್ಮದಾಗಿದ್ದರೂ…ಇಂದು ಇದು ತುಂಬಾ ಕಷ್ಟಸಾಧ್ಯವೆನಿಸುತ್ತಿದೆ ಅಲ್ಲವೇ.?

ಪೋಷಕ ಬಂಧುಗಳೇ, ಒಮ್ಮೆ ಅಂತರಾಳದಿಂದ ಸೂಕ್ಷ್ಮವಾಗಿ ಅಂತರ್ ಚಕ್ಷುವಿನಿಂದ ಆಲೋಚಿಸಿ.? ನೀವು ಕಷ್ಟಪಟ್ಟು ಬದುಕಿನುದ್ದಕ್ಕೂ ದುಡಿದಿರುವ ಹಣ ಅಥವಾ ಸಾಲ ಮಾಡಿರುವ ಹಣವನ್ನು ಸ್ವಲ್ಪನೂ ಯೋಚಿಸದೆ ಮಕ್ಕಳ ಉನ್ನತ ಶಿಕ್ಷಣಕ್ಕೆ ವ್ಯಯ ಮಾಡಿದರೆ ನಮ್ಮ ಮಕ್ಕಳ ಬದುಕು ಹಸನಾಗುತ್ತದೆ ಎಂಬುದು ನಮ್ಮ ಭ್ರಮೆಯಲ್ಲವೇ ? ಇಂತಹ ಶಿಕ್ಷಣದಿಂದ ನಮ್ಮ ಮಕ್ಕಳು ಅಕ್ಷರಗಳನ್ನು ಹೆಕ್ಕಿ ತೆಗೆಯುವ ವಿದ್ಯಾವಂತ ನಿರುದ್ಯೋಗಿಗಳಾಗುವುದರಲ್ಲಿ ಅಕ್ಷರಶಃ ಸಂದೇಹವಿಲ್ಲ, ಹತ್ತಾರು ಲಕ್ಷ ಹಣ ಕಳೆದುಕೊಂಡರೂ ನಾವು ವಿವೇಕಿಗಳಾಗದಿದ್ದರೆ ನಾವುಗಳೂ ಸಹ ಅರೆ ಪ್ರಜ್ಞಾವಂತರಾಗುತ್ತಿದ್ದೇವೆ ಅನ್ನಿಸುವುದಿಲ್ಲವೇ? ನೀವೇ ಯೋಚಿಸಿ. ಪೋಷಕರೇ ಯೋಚಿಸಿ ನಮ್ಮ ಮಕ್ಕಳ ಅಭಿರುಚಿಗೆ ಅನುಗುಣವಾಗಿ ಮೂಲ ಹಾಗೂ ಕೌಶಲ್ಯಯುತ  ಶಿಕ್ಷಣವನ್ನು ಕೊಡಿಸಿ, ಅದು ಕೇವಲ ವ್ಯವಹಾರಿಕ ಭಾಷೆ ಅರ್ಥವಾಗುವಂತಹ ಶಿಕ್ಷಣ ಸಾಕು.

ಇಂದು ನಮ್ಮ ದೇಶದಲ್ಲಿ ಉನ್ನತ ಶಿಕ್ಷಣವನ್ನು ನೀಡುತ್ತಿರುವ ಖಾಸಗಿ ಸಂಸ್ಥೆಗಳು ವ್ಯಾಪಾರೋದ್ಯ ಮದ ಕೇಂದ್ರಗಳೂ ಎನ್ನಿಸುವುದಿಲ್ಲವೇ. ಇವುಗಳಿಗೆ ಸರ್ಕಾರದ ಯಾವುದೇ ಲಂಗು-ಲಗಾಮುಗಳಿಲ್ಲ, ಕಾರಣ ನಮ್ಮ ಸರ್ಕಾರಗಳ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಒಟ್ಟಾರೆ ಹೇಳುವುದಾದರೆ ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ, ಎಲ್ಲರೂ ಕೆಟ್ಟ ಪ್ರಜೆಗಳಲ್ಲ,  ಪೋಷಕರೂ ಕೆಟ್ಟವರೆನ್ನಲಾಗುವುದಿಲ್ಲ.

ನಾವೆಲ್ಲರೂ ಆಲೋಚಿಸುತ್ತಿರುವುದು ನಮ್ಮ ರಾಷ್ಟ್ರ ಸಂಪದ್ಬರಿತವಾಗಿದೆ, ಸಂಪನ್ಮೂಲವೂ ಸಂಪದ್ಭರಿತವಾಗಿದೆ, ಆದರೆ ನಾವುಗಳು ಮಾತ್ರ ಬಡ ಮನಸ್ಥಿತಿವುಳ್ಳವರಾಗಿದ್ದೇವೆ. ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ರಾಜ್ಯ ಮತ್ತು ರಾಷ್ಟ್ರವನ್ನಾಳುವ ಯಾವ ಯೋಗ್ಯತೆ ಇದೆ ನೀವೇ ಆಲೋಚಿಸಿ.? ಸರ್ಕಾರಿ ನೌಕರಿ ಬೇಕೆನ್ನುವ (ಡಿ. ದಜೆ೯ ನೌಕರನಿಗೆ) ಕೆಲಸಕ್ಕೆ ಕನಿಷ್ಟ ವಿದ್ಯಾಹ೯ತೆ ಎಸ್.ಎಸ್.ಎಲ್.ಸಿ ಎನ್ನುತ್ತದೆ. ನಮ್ಮ ಸಂವಿಧಾನ/ಕಾನೂನು, ದೇಶವನ್ನು ಮುನ್ನಡೆಸುವ ಒಬ್ಬ ರಾಜಕಾರಣಿಗೆ ಎಂತಹ ಶಿಕ್ಷಣದ ಅವಶ್ಯಕತೆ ಇದೆ, ನಾವು ನೀವೆಲ್ಲರೂ ಆಲೋಚಿಸಬೇಕಲ್ಲವೇ. ? ನಮ್ಮ ಸಂವಿಧಾನ ಈಗಾಗಲೇ ನೂರಾರು ಭಾರಿ ತಿದ್ದುಪಡಿಯಾಗಿದೆ, ನಮ್ಮ ಮಕ್ಕಳ ಕೌಶಲ್ಯಯುಕ್ತ ಭವಿಷ್ಯಕ್ಕೋಸ್ಕರ ತಿದ್ದುಪಡಿಯಾದರೆ ಸೂಕ್ತವಲ್ಲವೇ. ನಮ್ಮಯ ಆಶಯವೇನಂದರೆ ನಮ್ಮ ಪ್ರತಿಭಾವಂತ ಮಕ್ಕಳು ಪ್ರಾಥಮಿಕ ಶಿಕ್ಷಣವಿರಲಿ, ಕೌಶಲ್ಯಯುಕ್ತ ಶಿಕ್ಷಣವಿರಲಿ, ಉನ್ನತ ಶಿಕ್ಷಣವಿರಲಿ ಮುಗಿದ ಮೇಲೆ ಅವರ ವಿದ್ಯಾರ್ಹತೆ ಹಾಗೂ ಕೌಶಲ್ಯಕ್ಕನುಗುಣವಾಗಿ ಬದುಕನ್ನು ಸಾಗಿಸಲು ಜೀವನವನ್ನು ಭದ್ರಪಡಿಸಿಕೊಳ್ಳಲು, ಕುಟುಂಬ ನಿರ್ವಹಣೆಗಾಗಿ ಖಾಸಗಿ / ಸರ್ಕಾರಿ ಉದ್ಯೋಗದ ಭರವಸೆ ಸಿಕ್ಕರೆ ಒಳಿತಾಗುತ್ತದೆ ಹಾಗೂ ಈ ದೇಶದ ಕಾನೂನನ್ನು ನಾವೂಗಳೂ ಸಹ ಆರಾಧಿಸಿ ಗೌರವಿಸುತ್ತೇವೆ. ಪ್ರಜ್ಞಾವಂತ ನಮ್ಮ ದೇಶದ ನಾಗರಿಕರಲ್ಲಿ ನಮ್ಮದೊಂದು ವಿನಂತಿ. ನಿಮ್ಮ ಮಕ್ಕಳನ್ನೂ ಸಹ ಸಮಾಜದ ಬಗ್ಗೆ, ನಮ್ಮ ಕಾನೂನಿನ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ವಿಭಿನ್ನವಾಗಿ ಆಲೋಚಿಸಲು ಅವಕಾಶ ನೀಡಿ, ನಾವು-ನೀವೆಲ್ಲರೂ ಮನಸ್ಸು ಮಾಡಿದರೆ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಬಹುದಲ್ಲವೇ.


ಮಹದೇವಪ್ಪ ದಿದ್ದಿಗೆ
ಮೈಕ್ರೋಬಿ ಫೌಂಡೇಶನ್ ಜಿಲ್ಲಾ ಸಂಚಾಲಕ, ದಾವಣಗೆರೆ ಜಿಲ್ಲೆ. 9972699813
E-mail- kbm.dvg @gmail .com

error: Content is protected !!