ವಿಶ್ವ ಜಲ ದಿನ

ವಿಶ್ವ ಜಲ ದಿನ

 ಭೂಮಿಯ ಮೇಲೆ ಬದುಕುವ ಮಾನವ ಸೇರಿದಂತೆ ಕೋಟ್ಯಾಂತರ ಜೀವ ರಾಶಿಗಳಿಗೆ ನೀರು ಅತ್ಯಮೂಲ್ಯ ಸಂಪತ್ತು. ಮನುಷ್ಯ ತನ್ನ ದೈನಂದಿನ ಜೀವನವನ್ನು ಸಾಗಿಸಲು ಪ್ರತಿದಿನ ನೂರಾರು ಲೀಟರ್ ನೀರನ್ನು ಬಳಸುತ್ತಾನೆ. ನೀರು ಇಲ್ಲದ ಒಂದು ದಿನವನ್ನು ಊಹಿಸಿಕೊಳ್ಳುವುದೇ ಅಸಾಧ್ಯ. ಗಿಡ-ಮರಗಳು ಕೆಲವು ದಿನಗಳ ವರೆಗೆ ನೀರಿಲ್ಲದೆ ತಡೆದುಕೊಳ್ಳಬಹುದು, ಆದರೆ ಮಾನವನಿಗೆ ಜೀವ ಉಳಿಸಿಕೊಳ್ಳು ವುದೂ ಕಷ್ಟವಾಗುತ್ತದೆ. ದ್ರವ ರೂಪದ ಈ ನೀರು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೆ, ಜಲಚರ ಜೀವಿಗಳಿಗೆ, ಗಿಡ-ಮರಗಳಿಗೆ—ಎಲ್ಲಕ್ಕೂ ಅತ್ಯಗತ್ಯ.

ಭೂಮಿಯ ಸುಮಾರು 70% ಭಾಗ ನೀರಿನಿಂದ ಆವೃತವಾಗಿದೆ; ಉಳಿದ 30% ಮಾತ್ರ ಭೂಮಿ. ಆದರೂ, ನೀರಿನ ಕೊರತೆಯ ಬವಣೆ ಎದುರಾಗುತ್ತಲೇ ಇದೆ. ಭೂಮಿ ಸೂರ್ಯನಿಂದ ಸರಿಯಾದ ದೂರದಲ್ಲಿ ಇರುವುದರಿಂದಲೇ ನೀರು ಇಲ್ಲಿ ದ್ರವ ರೂಪದಲ್ಲಿ ಅಸ್ತಿತ್ವದಲ್ಲಿದೆ. ಈ ದೂರವು ತುಂಬಾ ಹತ್ತಿರವೋ ಅಥವಾ ದೂರವೋ ಆಗಿದ್ದರೆ, ನೀರು ಇರುತ್ತಿರಲಿಲ್ಲ. ಭೂಮಿಯ ಈ “ಗೋಲ್ಡಿಲಾಕ್” ವಲಯ—ತುಂಬಾ ಶೀತವಾಗದೇ ಅಥವಾ ಬಿಸಿಯಾಗದೇ ಇರುವ ಸ್ಥಿತಿ—ಜೀವರಾಶಿಗಳ ಉಗಮಕ್ಕೆ ಮತ್ತು ವಿಕಾಸಕ್ಕೆ ಕಾರಣ ವಾಗಿದೆ. ನೀರು ಭೂಗ್ರಹದ ವಿಶಿಷ್ಟ ಲಕ್ಷಣವಾಗಿ, ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಾಥಮಿಕ ಶಾಲೆಯಿಂದಲೇ ಜಲಚಕ್ರದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ: ಸಮುದ್ರ ಮತ್ತು ಸರೋವರಗಳ ನೀರು ಸೂರ್ಯನ ಶಾಖದಿಂದ ಆವಿಯಾಗಿ, ಮೋಡವಾಗಿ, ಮಳೆಯಾಗಿ ಮರಳಿ ಸಮುದ್ರ-ಸರೋವರಗಳನ್ನು ಸೇರುತ್ತದೆ. ಈ ಪ್ರಕ್ರಿಯೆಯನ್ನು ಸರಳವಾಗಿ ಅರ್ಥೈಸಿಕೊಂಡಿದ್ದೇವೆ. ಆದರೆ, ಭೂಮಿಗೆ ನೀರು ಎಲ್ಲಿಂದ ಬಂತು? ಹೇಗೆ ಬಂತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ನಾವು ಇನ್ನೂ ಹಿಂದೆ ಬಿದ್ದಿದ್ದೇವೆ ಎನಿಸುತ್ತದೆ.

ವಿಶ್ವ ಜಲ ದಿನದ ಮಹತ್ವ :

ಮಾರ್ಚ್ 22 ರಂದು ಆಚರಿಸಲಾಗುವ “ವಿಶ್ವ ಜಲ ದಿನ”ವನ್ನು ಯಾಕೆ ಆಚರಿಸುತ್ತೇವೆ ಎಂದರೆ, ಇದು ಶುದ್ಧ ನೀರಿನ ಮೌಲ್ಯವನ್ನು ಎತ್ತಿ ತೋರಿಸುತ್ತದೆ. 1992ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಈ ದಿನವನ್ನು ಸೂಚಿಸಲಾಯಿತು. ಡಿಸೆಂಬರ್ 1992ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನಿರ್ಣಯ ಎ/ ಆರ್ ಇ ಎಸ್ /47/193.ರ ನಿರ್ಣಯವನ್ನು ಅಂಗೀಕರಿಸಿ, ಪ್ರತಿ ವರ್ಷ ಮಾರ್ಚ್ 22ನ್ನು `ವಿಶ್ವ ಜಲ ದಿನ’ ವೆಂದು ಘೋಷಿಸಿತು. ಮೊದಲ ಆಚರಣೆ 1993ರಲ್ಲಿ ಆರಂಭವಾಯಿತು.

ಈ ದಿನವು ಸಿಹಿನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮತ್ತು ಶುದ್ಧ ನೀರು-ನೈರ್ಮಲ್ಯದ ಮಹತ್ವವನ್ನು ಒತ್ತಿ ಹೇಳುತ್ತದೆ. ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. `ನೀರು ಮತ್ತು ಉದ್ಯೋಗಗಳು’, `ನೀರನ್ನು ಏಕೆ ವ್ಯರ್ಥ ಮಾಡಬೇಕು?’, `ನೀರಿಗಾಗಿ ಪ್ರಕೃತಿ’ ಇತ್ಯಾದಿ ಸಂದೇಶಗಳ ಮೂಲಕ ನೀರಿನ ಪ್ರಾಮುಖ್ಯತೆಯನ್ನು ಮನಗಾಣಿಸಲಾಗುತ್ತದೆ.

ನೀರಿನ ಬಳಕೆ ಮತ್ತು ಸಂರಕ್ಷಣೆ:

ಮಾನವ ತನ್ನ ದೈನಂದಿನ ಜೀವನದಲ್ಲಿ ನೀರನ್ನು ಹಲವು ರೀತಿಯಲ್ಲಿ ಬಳಸುತ್ತಾನೆ—ಹೊಲಗಳಲ್ಲಿ ಆಹಾರ ಬೆಳೆಯಲು, ಪ್ರಾಣಿ-ಪಕ್ಷಿಗಳಿಗೆ, ಕೈಗಾರಿಕೆಗಳಲ್ಲಿ ಉತ್ಪಾದನೆಗೆ, ಕಟ್ಟಡ ನಿರ್ಮಾಣಕ್ಕೆ, ವಾಹನ ಸ್ವಚ್ಛತೆಗೆ—ಎಲ್ಲದಕ್ಕೂ ನೀರು ಅವಶ್ಯಕ. ಆದರೆ, ಇಂದು ಮನುಷ್ಯ ಈ ಅಮೂಲ್ಯ ಸಂಪತ್ತನ್ನು ಮನಬಂದಂತೆ ವ್ಯರ್ಥ ಮಾಡುತ್ತಿದ್ದಾನೆ. ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕ ತ್ಯಾಜ್ಯವು ನದಿ-ಕೆರೆಗಳನ್ನು ಮಾಲಿನ್ಯಗೊಳಿಸುತ್ತಿದೆ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಜಲಚರ ಜೀವಿಗಳ ಬದುಕನ್ನೂ ಕಷ್ಟಕರಗೊಳಿಸುತ್ತದೆ.

ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕೆಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿ, ಕಲುಷಿತ ನೀರು ಜಲಮೂಲಗಳಿಗೆ ಸೇರದಂತೆ ತಡೆಯಬೇಕು. ನಾವು ಪ್ರತಿದಿನ ನೀರನ್ನು ಬಳಸುವಾಗ ಅದರ ಮೌಲ್ಯವನ್ನು ಅರಿತು, ಎಚ್ಚರಿಕೆಯಿಂದ ಮತ್ತು ಇತಿಮಿತಿಯಲ್ಲಿ ಬಳ ಸೋಣ. ನೀರಿನ ಕೊರತೆ ಎದುರಾಗದಂತೆ ಸಂರಕ್ಷಿಸಿ, ನೈರ್ಮಲ್ಯ ಕಾಪಾಡೋಣ.

ವಿಶ್ವ ಜಲ ದಿನ - Janathavani– ಎನ್. ಕೆ. ಕೊಟ್ರೇಶ್, ದಾವಣಗೆರೆ. 9844206869

error: Content is protected !!