ಸಕಲ ಜೀವಿಗಳಿಗೂ ನೀರೆಂದರೆ ಕೇವಲ ಜಲವಲ್ಲ. ಅದು ಪಾವನ ತೀರ್ಥ. ಜೀವ ಸಂಕುಲದ ಅಳಿವು, ಉಳಿವಿನ ಪ್ರಶ್ನೆ ಬಂದಾಗ ನೀರಿನ ಪಾತ್ರ ಮಹತ್ತರವಾಗಿ ಗೋಚರಿಸುತ್ತದೆ. ಜೀವ ಜಲದ ಸಂರಕ್ಷಣೆಗೆ ವಿಶ್ವದಾದ್ಯಂತ ಮಳೆ ಕೊಯ್ಲು, ನೀರಿನ ಮೂಲಗಳ ಸಂರಕ್ಷಣೆ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳು ಬರದಿಂದ ಸಾಗುತ್ತಿವೆ, ನಮ್ಮಲ್ಲಿಯೂ ನೀರಿನ ಸಂರಕ್ಷಣೆಗಾಗಿ ಸ್ವ-ಸಹಾಯ ಸಂಘಗಳು, ಯುವಶಕ್ತಿ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಟೊಂಕ ಕಟ್ಟಿ ನಿಂತಿವೆ. ಇಂತಹ ಅಮೂಲ್ಯ ಸಂಪತ್ತು ನಮ್ಮಂತಹ ಹುಲು ಮಾನವರಿಗೆ ಯಾವ ಯಾವ ರೀತಿಯಲ್ಲಿ ಶ್ರೀರಕ್ಷೆಯಾಗಿದೆ? ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲುವ ಪ್ರಯತ್ನ ಈ ಬರಹದ ಮೂಲಕ.
ಬಾಲ್ಯದ ನೆನಪು ಯಾರಿಗೆ ನೆನಪಿರಲ್ಲ? ಬೇಸಿಗೆ ರಜೆ ಬಂತೆಂದರೆ ಅಜ್ಜಿ ಮನೆಯ ಕಡೆಗೆ ಮುಖ ಮಾಡಿ ಹೋಗುತ್ತಿದ್ದದ್ದು, ಆಟಕ್ಕಾಗಿ ಕೆರೆ ತೊರೆಗಳ ಆಯ್ಕೆಯನ್ನು ಮಾಡಿಕೊಳ್ಳುತ್ತಿದ್ದು. ಬೇಸಿಗೆ ರಜೆ ಕಳೆದು ಶಾಲೆ ಆರಂಭವಾಗುತ್ತಿದ್ದಂತೆ ಮಳೆರಾಯನ ಆರ್ಭಟ, ಧಾರಾಕಾರವಾಗಿ ಉಯ್ಯುವ ಮಳೆ, ತುಂಬಿ ತುಳುಕುವ ಕೆರೆ ಕಟ್ಟೆಗಳು, ಒಟಗುಟ್ಟುತ್ತಾ ಸಂಭ್ರಮಿಸುವ ಕಪ್ಪೆಗಳ ಸಂಗೀತ, ಕೈಬೀಸಿ ಕರೆಯುವ ಹಸಿರು, ಬೀಸುವ ತಂಗಾಳಿಗೆ ತೊನ್ನೆ ದಾಡುವ ಗಿಡ ಮರಗಳು, ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳು, ಒಂದೇ, ಎರಡೇ, ಮಳೆಯ ಸಂಭ್ರಮವನ್ನು ವರ್ಣಿಸಲು ಅಸಾಧ್ಯ ಛತ್ರಿ ಇದ್ದರೂ ಅದನ್ನು ಬಿಡಿಸದೆ ಮಳೆಯಲ್ಲಿ ನೆನೆಯುತ್ತಾ ಶಾಲೆ ಸೇರುವುದೇ ಒಂದು ಮಜಾ.
ಮಳೆಯ ನೀರು ಇಳೆಗೆ ಬಿದ್ದಾಗ ಏಳುವ ಮಣ್ಣಿನ ಸುವಾಸನೆಯನ್ನು ಆಸ್ವಾದಿಸದ ಜನ ಬಹಳ ವಿರಳ. ಘಮಘಮಿಸುವ ಮಣ್ಣಿನ ವಾಸನೆ ಕವಿ, ಹೃದಯಗಳಲ್ಲಿ ಕವಿತೆ ಹಾಡುಗಳ ಆಲಾಪನೆ. ಆದರೆ ರೈತಾ ಪಿ ವರ್ಗದಲ್ಲಿ ಉತ್ತಿ ಫಸಲು ತೆಗೆಯುವ ಆನಂದ. ಮಳೆ ಅಂದರೆ, ಜೀವನೋತ್ಸಾಹದ ಆರಂಭದ ಸಂಕೇತ. ಈ ಎಲ್ಲಾ ಚಟುವಟಿಕೆಗಳಿಗೆ ನಾವು ಅವಲಂಬಿಸಿರುವುದು ನೀರನ್ನೆ.
ಪುರಾಣದಲ್ಲಿಯೂ ಸಹ ನೀರಿನ ಪ್ರಾಮುಖ್ಯತೆ ತನ್ನದೇ ಆದ ಸ್ವರೂಪವನ್ನು ಪಡೆದಿದೆ. ಗಂಗಾ ಮಾತೆಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿ ಭೂಮಿಗೆ ಕರೆತರುವಲ್ಲಿ ಯಶಸ್ವಿಯಾಗಿರುವುದು ಭಗೀರಥ. ಇನ್ನೂ ಕವಿ ಮಹಾಶಯರಿಗೆ ಕಾವ್ಯಕ್ಕೆ ಪ್ರಧಾನ ವಿಷಯವೇ ನೀರು ಅಥವಾ ಮಹಿಳೆ. ವರ ಕವಿ ಬೇಂದ್ರೆಯವರ ಕಾವ್ಯದಲ್ಲಿ ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ ಎಂದು ನೀರಿನ ಬಗ್ಗೆ ವರ್ಣನೆ ಇದೆ. ನಾವುಗಳು ಅಮೂಲ್ಯ ರತ್ನ ನೀರಿನ ಮಹತ್ವವನ್ನೇ ಸರಿಯಾಗಿ ಅರಿತುಕೊಂಡಿಲ್ಲ. ನೀರಿಲ್ಲದ ಒಂದು ಕ್ಷಣವನ್ನು ಊಹಿಸಿಕೊಳ್ಳಲು ಬಲು ಕಷ್ಟ.
ಜೀವಿ ಹುಟ್ಟುವಲ್ಲಿಂದ ಸಾಯುವವರೆಗೂ ನೀರು ನಿತ್ಯ ನಿರಂತರ. ಆಧುನಿಕತೆಯ ಸೋಗಿನಲ್ಲಿ ನಾವು ಜಲ ಮೂಲಗಳನ್ನೇ ವಿನಾಶದ ಅಂಚಿಗೆ ತಳ್ಳಿದ್ದೇವೆ. ಜಲಮೂಲಗಳಾದ ಕೆರೆ, ಕಟ್ಟೆ, ಬಾವಿ, ನದಿ, ಸರೋವರ, ಅಂತರ್ಜಲಗಳು ಬರಿದಾಗುತ್ತಿರುವುದರಿಂದ ಫ್ಲೋರೈಡ್ ಸಮಸ್ಯೆ. ಪಾತಾಳಕ್ಕಿಳಿದರು ಕೊಳವೆ ಬಾವಿಗಳಲ್ಲಿ ನೀರು ದೊರೆಯದಿರುವುದು, ಕುಡಿಯುವ ನೀರಿಗಾಗಿ ಹಾಹಾಕಾರ, ನೀರಿಲ್ಲದೆ ಸಾಯುತ್ತಿರುವ ಪಶು, ಪ್ರಾಣಿಗಳು, ಒಣಗಿ ಬತ್ತಿ ಬೆಂಡಾಗಿ ಕಮರಿ ಹೋಗುತ್ತಿರುವ ಮರ ಗಿಡಗಳು, ಆಕಾಶದ ಕಡೆ ಮುಖ ಮಾಡಿ ಮಳೆಗಾಗಿ ಪರಿತಪಿಸುತ್ತಾ, ಕಣ್ಣೀರಿಡುತ್ತಿರುವ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತಾಪಿ ಬಂಧುಗಳ ಸ್ಥಿತಿ ಶೋಚನೀಯ. ಕೆರೆ, ಬಾವಿಗಳು ಮಾಯವಾಗಿ ಆ ಸ್ಥಳದಲ್ಲಿ ಕಟ್ಟಡಗಳು ತಲೆ ಎತ್ತುತ್ತಿವೆ, ಇರುವ ಸ್ವಲ್ಪ ಪ್ರಮಾಣದ ನೀರು ಕೈಗಾರಿಕೆಗಳಿಂದಾಗಿ ಮಲಿನಗೊಳ್ಳುತ್ತಿದೆ. ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿರುವ ಬಗ್ಗೆ ಜಲ ಕ್ಷೇತ್ರದ ಕನ್ಸಲ್ಟಿಂಗ್ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಸ್ವಚ್ಛ ಭಾರತ ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಗಂಗಾನದಿ ಶುದ್ಧೀಕರಣ ಯೋಜನೆ. ನೀರಿನ ಸಂರಕ್ಷಣೆಯಲ್ಲಿ ಹೊಸ ಆಶಾಕಿರಣವಾಗಿ ಗೋಚರಿಸುತ್ತಿವೆ. 2,030ರ ಹೊತ್ತಿಗೆ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದು. ಸ್ವಚ್ಛ ಭಾರತ ಯೋಜನೆಯ ಮುಖೇನ ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೇ ಇರುವುದರಿಂದ ನೀರು ಕಲುಷಿತಗೊಳ್ಳುವುದನ್ನು ಕಡಿಮೆ ಮಾಡುವುದು ಈ ಯೋಜನೆಯಾ ಹೈಲೈಟ್.
ಬರೀ ಸರ್ಕಾರ ಸಂಘ-ಸಂಸ್ಥೆಗಳಿಂದ ಮಾತ್ರ ಇದು ಸಾಧ್ಯವಾಗುವ ಮಾತಲ್ಲ. ನೀರಿನ ಬಗ್ಗೆ ಬರೆಯುವುದು, ಮಾತನಾಡುವುದು ನೀರು ಕುಡಿದಷ್ಟು ಸುಲಭ. ಆದರೆ ಸಾರ್ವಜನಿಕ ಸಹಭಾಗಿತ್ವವಿಲ್ಲದವರಿಗೆ ಮುಂದೊಂದು ದಿನ ಪ್ರಕೃತಿಯೇ ನಮಗೆ ನೀರು ಕುಡಿಸುವುದರಲ್ಲಿ ಅನುಮಾನವಿಲ್ಲ. ಸುಜಲಾಂ ಸುಫಲಾಂ ಎಂದು ಭಕ್ತಿಯಿಂದ ಹಾಡುವ ನಮಗೆ ಜಲವಿದ್ದರೆ ಫಲವಿದೆ, ಅದಿಲ್ಲದಿದ್ದರೆ ಏನೇನು ಇಲ್ಲ ಎಂಬುದು ಅರ್ಥವಾಗಲಿ. ಭಗೀರಥನಂತೆ ತಪಸ್ಸು ಮಾಡಿ ಗಂಗೆಯನ್ನು ಉಕ್ಕಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಇರುವ ಗಂಗೆಯನ್ನು ಉಳಿಸಿಕೊಳ್ಳಲಂತೂ ಖಂಡಿತಾ ಸಾಧ್ಯವಿದೆ ಅಲ್ಲವೇ? ಜಲ ಸಂರಕ್ಷಣೆ ನಮ್ಮ ಬದುಕಿನ ಉಸಿರಾಗಲಿ.
– ಡಾ. ಅನಿತಾ ಹೆಚ್. ದೊಡ್ಡ ಗೌಡರ್, ಪ್ರಾಧ್ಯಾಪಕರು, ದಾವಣಗೆರೆ. 9902198655