ತತ್ವಪದಕಾರ ಮಾರ್ತಾಂಡಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

ತತ್ವಪದಕಾರ ಮಾರ್ತಾಂಡಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

ತತ್ವಪದಕಾರ ಮಾರ್ತಾಂಡಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ - Janathavaniಜಾನಪದ ಜನರ ಪದವಾಗಿ ಗ್ರಾಮೀಣ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ, ದುಡಿದು ದಣಿದ ಮನಕೆ ಒಂದಿಷ್ಟು ಮುದ ನೀಡುವುದು ಜಾನಪದ ಕಲೆಗಳು, ಆಯಾಸ-ಆತಂಕ ಕಳೆದು, ಆನಂದ-ಆದರ್ಶ ತೋರುವ, ಶಾಂತಿ-ನೆಮ್ಮದಿ ಕಲ್ಪಿಸುವ, ಜಾನಪದ ಕಲೆಯನ್ನು ಬೆಳೆಯುತ್ತಲೇ ಮೈಗೂಡಿಸಿ ಕೊಂಡ ದಾವಣಗೆರೆಯ ಮಾರ್ತಾಂಡಪ್ಪ ನವರು, ಸಂಗೀತ, ಹಾಡುಗಾರಿಕೆ, ನಾಟಕ, ಭಜನೆ, ಕಲೆಗಳಲ್ಲಿ ಉಜ್ವಲ ಪ್ರತಿಭೆ ತೋರುತ್ತಾ ಜನಮನ ಸೆಳೆದು ಪ್ರತಿಭಾವಂತರೆನಿಸಿದರು, ಅವರ ಕಲಾ ಸೇವೆಯನ್ನು ಗುರುತಿಸಿದ ಕರ್ನಾಟಕ ಜಾನಪದ ಅಕಾಡೆಮಿಯು, 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಮಾರ್ತಾಂಡಪ್ಪನವರನ್ನು ಆಯ್ಕೆ ಮಾಡಿರುವುದು ಸಂತಸದ ಸಂಗತಿ.

 ದಾವಣಗೆರೆ ಜಿಲ್ಲೆ ಮಾಯ ಕೊಂಡದ, ಕೃಷಿ ಉಪಕರಣಗಳನ್ನು ತಯಾರಿಸುತ್ತಿದ್ದ ಬಡಿಗಿರ ವೃತ್ತಿಯ ನೀಲಪ್ಪ ಹಾಗೂ ಶ್ರೀಮತಿ ತಿಪ್ಪಮ್ಮ ದಂಪತಿ ಪುತ್ರರಾಗಿ 1952 ರಲ್ಲಿ ಜನಿಸಿದ ಮಾರ್ತಾಂಡಪ್ಪ, ಬಡತನದ ಬವಣೆಯಿಂದ ಶಾಲಾ ಶಿಕ್ಷಣ ಪಡೆಯಲಾಗಲಿಲ್ಲ, ಹಾಗಾಗಿ ತಂದೆಯವರ ಕೆಲಸದಲ್ಲಿ ಸಾಧ್ಯವಾದಷ್ಟು ಕೈಗೂಡಿಸುತ್ತಾ ಸಹಾಯಕರಾಗಿ ನಿಂತರು. 1957ರಲ್ಲಿ ಇವರು ಕುಟುಂಬ ಸಮೇತರಾಗಿ ದಾವಣಗೆರೆಯ ನಿಟ್ಟುವಳ್ಳಿ ಯಲ್ಲಿ ಬಂದು ನೆಲೆಸಿದರು, ತಮ್ಮ ಒಂಬತ್ತನೇ ವಯಸ್ಸಿನಲ್ಲಿಯೇ ಜೀವನ ನಿರ್ವಹಣೆಗಾಗಿ ಕೆಲಕಾಲ ಹೋಟೆಲ್ ನಲ್ಲಿ ಕೆಲಸ ಮಾಡಿ, ನಂತರ ಕಟ್ಟಡ ಕೆಲಸ, ಕೂಲಿ ಕಾರ್ಮಿಕರಾಗಿಯೂ ಶ್ರಮದ ದುಡಿಮೆಯಿಂದ ಕುಟುಂಬಕ್ಕೆ ಸಹಾಯಕರಾದರು. 1967 ರಲ್ಲಿ ದಾವಣಗೆರೆ ಕಾಟನ್ ಮಿಲ್ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡರು. ಬಿಡುವಿನ ವೇಳೆಯಲ್ಲಿ ಜಾನಪದ ಕಲೆಗಳತ್ತ ಒಲವು ಮೂಡಿಸಿಕೊಂಡರು,

 ವೃತ್ತಿಯಲ್ಲಿ ಕಾರ್ಮಿಕರಾದರೂ ಪ್ರವೃತ್ತಿಯಲ್ಲಿ ಬಾಲ್ಯದಿಂದಲೂ ಕಲಾಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಅಂತೆಯೇ ಅಲ್ಲಲ್ಲಿ ನಾಟಕ ಪ್ರದರ್ಶನ ಗಳನ್ನು ನೋಡುತ್ತಾ ರಂಗಕಲೆಯ ಗೀಳನ್ನು ಅಂಟಿಸಿಕೊಂಡಿದ್ದರು, ನಂತರ ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕಾ ನಾಟ್ಯ ಸಂಘದವರು ಪ್ರದರ್ಶಿಸಿದ `ಗಂಡನ ಮಾನ’ ನಾಟಕದಲ್ಲಿ ಪ್ರಥಮ ಬಾರಿಗೆ `ಸುಬ್ಬಿ’ ಹಾಸ್ಯ ಪಾತ್ರಕ್ಕೆ ಬಣ್ಣಹಚ್ಚಿ, ಅಚ್ಚುಕಟ್ಟಾಗಿ ಅಭಿನಯಿಸಿ ಎಲ್ಲರಿಂದಲೂ `ಭೇಷ್’ ಎನಿಸಿ ಕೊಂಡರು, ಇದರಿಂದ ಉತ್ತೇಜನಗೊಂಡ ಮಾರ್ತಾಂಡಪ್ಪ ಅವರು `ಬಾಣಸಿಗ ಭೀಮ’ದಲ್ಲಿ ಹಾಸ್ಯ ಪಾತ್ರ, `ಕಾರಸ್ಥಾನ’ದಲ್ಲಿ `ಸ್ತ್ರೀ’ ಪಾತ್ರ, ಹೀಗೆ ಅನೇಕ ನಾಟಕಗಳಲ್ಲಿ ವಿಭಿನ್ನ ಪಾತ್ರ ಗಳಿಂದ ಅವಕಾಶ ಪಡೆದು ಜನಮನ ಸೆಳೆದು ಉತ್ತಮ ನಟರೆನಿಸಿಕೊಂಡರು, ಇವರ ಅಣ್ಣ ಗಂಗಾಧರ ಸಂಗೀತ ಮಾಸ್ಟರ್ ಆಗಿ ಹಾರ್ಮೋನಿಯಂ ನುಡಿಸುತ್ತಿದ್ದುದನ್ನು ಆಸಕ್ತಿಯಿಂದ ನೋಡುತ್ತಿದ್ದ ಅವರ ಚಿತ್ತ ಹಾರ್ಮೋನಿಯಂ ನುಡಿಸುವಿಕೆಯ ಕಲಿಕೆಯತ್ತ ಹರಿಯಿತು.

ಅಂತೆಯೇ ಸಂಗೀತ ಗುರುಗಳಾದ ನಾರಾಯಣ ಮೂರ್ತಿ ಅವರಿಂದ ಸಂಗೀತ ಕಲಿತು, ಶ್ರೀ ದುರ್ಗಾಂಬಿಕಾ ಭಜನಾ ಸಂಘದಲ್ಲಿ ನರಸಿಂಹ ಮೂರ್ತಿಯವರ ಹಾಡಿಗೆ, ಆತ್ಮಸ್ಥೈರ್ಯದಿಂದ ಹಾರ್ಮೋನಿಯಂ ಮೇಲೆ ಬೆರಳಾಡಿಸುತ್ತಲೇ ಕೆಲವೇ ದಿನಗಳಲ್ಲಿ ಹಾರ್ಮೋನಿಯಂ ನುಡಿಸುವುದನ್ನು ಕಲಿತ ಚತುರರು, ಹೀಗಾಗಿ 1976 ರಿಂದ ಹಾರ್ಮೋನಿಯಂ ನುಡಿಸುವುದರೊಂದಿಗೆ ಸ್ವತಃ ತಾವೇ ಭಕ್ತಿಗೀತೆ, ತತ್ವಪದಗಳು, ಜಾನಪದ ಹಾಡುಗಳನ್ನು ಹಾಡುತ್ತ, ಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ನೈಪುಣ್ಯತೆ ಪಡೆದು, ಜಾನಪದ ಕಲಾ ರಂಗದಲ್ಲಿ ಹೆಸರಾದರು. ಆರಂಭದಲ್ಲಿ ದಾವಣಗೆರೆಯ ಶ್ರೀ ದುರ್ಗಾಂಬಿಕಾ ಭಜನಾ ಸಂಘದೊಂದಿಗೆ ಕಾರ್ಯಕ್ರಮಗಳನ್ನು ನೀಡುತ್ತಾ, ನಂತರ ಶ್ರೀ ಬನ್ನಿ ಮಹಾಂಕಾಳಿ ಭಜನಾ ಸಂಘದಲ್ಲೂ ಕೆಲಕಾಲ ಭಜನೆ ಸೇವೆ ಸಲ್ಲಿಸಿದರು. ದಾವಣಗೆರೆಯ ವಿದ್ಯಾನಗರದ ಶ್ರೀ ಮಟ್ಟಿ ಆಂಜನೇಯ ಭಜನಾ ಸಂಘದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಾ, ಅನೇಕ ಭಾಗಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. `ಮುದುಕನ ಮದುವೆ’, `ಬದುಕು ಬಂಗಾರವಾಯಿತು’, `ಪ್ರೇಮಪಂಜರ’, `ಕಲಿತ ಕಳ್ಳ’, `ಕಳ್ಳ ಕಟ್ಟಿದ ತಾಳಿ’, `ಚಿನ್ನದ ಗೊಂಬೆ’, `ಹಳ್ಳಿ ಸುಟ್ಟ ಕೊಳ್ಳಿ’, `ಶಿವಭಕ್ತ ಹರಳಯ್ಯ’ ಸೇರಿದಂತೆ ಅನೇಕ ನಾಟಕಗಳಿಗೆ ಹಾರ್ಮೋನಿಯಂ ಮಾಸ್ಟರ್ ಆಗಿಯೂ ಸಂಗೀತ ನಿರ್ದೇಶನ ಮಾಡಿದ್ದಾರೆ.

 ಭಜನಾ ತಂಡಗಳೊಂದಿಗೆ ಮೈಸೂರು ದಸರಾ, ಖಾದಿ ಉತ್ಸವ, ಶಿರಡಿ, ಪಂಡರಾಪುರ, ಕೂಡಲಸಂಗಮ, ಮೂಡಬಿದರೆ, ಸೊಲ್ಲಾಪುರ, ಯಡೆಯೂರು, ಧರ್ಮಸ್ಥಳ, ಶೃಂಗೇರಿ, ಇನ್ನೂ ಅನೇಕ ಕಡೆಗಳಲ್ಲಿ ಸಂಚರಿಸಿ, ಜಾನಪದ, ಭಕ್ತಿಗೀತೆ, ತತ್ವಪದಗಳ ಭಜನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ, ಜನರ ಮನ ಸೆಳೆದದ್ದು ಅಲ್ಲದೇ  ಸಮಿತಿಯವರ ಮೆಚ್ಚುಗೆಗೂ ಪಾತ್ರರಾಗಿ ದ್ದಾರೆ. ಸುತ್ತೂರು, ಹುಬ್ಬಳ್ಳಿ, ಸಿದ್ಧಾರೂಡ ಮಠ, ಸಿರಿಗೆರೆ, ಉಕ್ಕಡಗಾತ್ರಿ, ಲಿಂಗದಹಳ್ಳಿ, ತುಮಕೂರು, ದೇವರಗುಡ್ಡ, ದಾವಣಗೆರೆ ನಗರಗಳಲ್ಲಿ ಏರ್ಪಡಿಸಿದ್ದ ಭಜನಾ ಸ್ಪರ್ಧೆಗಳಲ್ಲೂ, ತಮ್ಮ ತಂಡದೊಂದಿಗೆ ಭಾಗವಹಿಸಿ ವಿಶೇಷ ಬಹುಮಾನ ಗಳಿಸಿರುವರಲ್ಲದೇ, ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಮಾರ್ತಾಂಡಪ್ಪನವರು ಶರೀಫರ ತತ್ವಪದಗಳು, ಜಾನಪದ ಹಾಗೂ ಭಕ್ತಿ ಗೀತೆಗಳು, ಕನಕದಾಸರು, ಪುರಂದರದಾಸರ ಹಾಡುಗಳು, ಶರಣರ ವಚನಗಳನ್ನು ಭಾವ ಪರವಶರಾಗಿ ಹಾಡುತ್ತಿದ್ದರೆ ಕೇಳುಗರು ತನ್ಮಯರಾಗಿ ತಲೆ ದೂಗುತ್ತಾ ಸಮಯ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲವಂತೆ.

 ಬರಗಾಲದ ಸಂದರ್ಭದಲ್ಲಿ ದಾವಣಗೆರೆಯ ಡಾಂಗೆ ಉದ್ಯಾನ ವನದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ, ಭಕ್ತಿಯಿಂದ 24 ತಾಸುಗಳು ಕಾರ್ಯಕ್ರಮ ನೀಡಿದ್ದನ್ನು ಇಂದಿಗೂ ಸ್ಮರಿಸಿಕೊಳ್ಳುವ ಮಾರ್ತಾಂಡಪ್ಪ, ತಮ್ಮ ಕಲಾ ಸೇವೆ ದುಡಿಮೆಗಾಗಿ ಅಲ್ಲ, ಆತ್ಮ ಸಂತೋಷ ಹಾಗೂ ಭಕ್ತಿಗಾಗಿ ಎನ್ನುತ್ತಾರೆ, ಯಾರೇ ಭಜನೆಗೆ ಕರೆದರೂ ಅವರು ಕೊಟ್ಟಷ್ಟರಲ್ಲಿಯೇ ತೃಪ್ತಿ ಪಡುವ ಸರಳ ಜೀವಿಯಾಗಿದ್ದಾರೆ, ತಮ್ಮ ಕಲಾ ಜೀವನದ ಯಶಸ್ಸಿನಲ್ಲಿ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷರಾದ ಎನ್. ಎಸ್. ರಾಜುರವರ ಸಹಕಾರ, ಬೆಂಬಲ ಸಾಕಷ್ಟಿದೆ, ಅಲ್ಲದೇ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಲು ಅವರ ಪ್ರಯತ್ನವೂ ಇದೆ ಎಂದು ಧನ್ಯತಾಭಾವ ವ್ಯಕ್ತಪಡಿಸುವ ಮಾರ್ತಾಂಡಪ್ಪ ನವರು, ಪತ್ನಿ ಗೌರಮ್ಮ , ಪುತ್ರರಾದ ಚಿದಾನಂದ, ಗಣೇಶ, ಪುತ್ರಿ ಮಧು ಇವರೊಂದಿಗೆ, ದಾವಣಗೆರೆಯ ನಿಟ್ಟುವಳ್ಳಿ ಹೊಸ ಚಿಕ್ಕನಹಳ್ಳಿ ಬಡಾವಣೆಯಲ್ಲಿ ನೆಲೆಸಿದ್ದು, ತಮ್ಮ 73 ನೇ ಇಳಿ ವಯಸ್ಸಿನಲ್ಲಿಯೂ ಇಂದಿಗೂ ಜಾನಪದ ಕಲಾವಿದ, ತತ್ವಪದಕಾರ, ಸಂಗೀತಗಾರರಾಗಿ ಕಲಾ ಸೇವೆಯಲ್ಲಿ ನಿರತರಾಗಿದ್ದಾರೆ.


ಬಸವರಾಜ ಐರಣಿ
ಹಿರಿಯ ಪತ್ರಕರ್ತ ದಾವಣಗೆರೆ.
ಮಾರ್ತಾಂಡಪ್ಪ, ಜಾನಪದ ಕಲಾವಿದರು

error: Content is protected !!