ಕ್ಷೇತ್ರ ಪುನರ್‌ವಿಂಗಡಣೆ, ಶಿಕ್ಷಣದ ಬಗ್ಗೆ ಕ್ಷುದ್ರ ರಾಜಕೀಯ-ಜನನ ದರ ಹೆಚ್ಚಾಗಿರುವ ಧರ್ಮ, ಜಾತಿಗಳ ಬಗ್ಗೆ ಮಾತನಾಡಲು ಡಿಎಂಕೆಗೆ ಧೈರ್ಯವಿದೆಯೇ ?

ಕ್ಷೇತ್ರ ಪುನರ್‌ವಿಂಗಡಣೆ, ಶಿಕ್ಷಣದ ಬಗ್ಗೆ ಕ್ಷುದ್ರ ರಾಜಕೀಯ-ಜನನ ದರ ಹೆಚ್ಚಾಗಿರುವ ಧರ್ಮ, ಜಾತಿಗಳ ಬಗ್ಗೆ ಮಾತನಾಡಲು ಡಿಎಂಕೆಗೆ ಧೈರ್ಯವಿದೆಯೇ ?

ಇತ್ತೀಚಿನ ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ರಾಜಕೀಯ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಅದರಲ್ಲೂ ಡಿಎಂಕೆ ಪಕ್ಷ ತಾನು ದಕ್ಷಿಣ ಭಾರತದ ನೇತಾರ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಪುನರ್‌ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿ ಉತ್ತರದ ರಾಜ್ಯಗಳಿಗೆ ಲಾಭ ಸಿಗಲಿದೆ, ಇದರ ವಿರುದ್ಧ ಹೋರಾಡಲು ಮುಂಚೂಣಿಯಲ್ಲಿ ಇರುತ್ತೇನೆ ಎಂದು ಡಿಎಂಕೆ ಹೇಳುತ್ತಿದೆ.

ವಾಸ್ತವಿಕವಾಗಿ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಪುನರ್ ವಿಂಗಡಣೆ ಮಾಡಿದರೆ ದಕ್ಷಿಣಕ್ಕಷ್ಟೇ ಅಲ್ಲದೆ ಉತ್ತರ, ಪೂರ್ವ ಹಾಗೂ ಪಶ್ಚಿಮದ ರಾಜ್ಯಗಳಿಗೆ ಹಿನ್ನಡೆಯಾಗಲಿದೆ. ಮಧ್ಯ ಭಾರತದ ಕೆಲವೇ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಸಿಗಲಿವೆ. ಆದರೆ ಕೇವಲ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿ, ಉತ್ತರದ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂಬ ರೀತಿಯಲ್ಲಿ ಡಿಎಂಕೆ ವರ್ತಿಸುತ್ತಿದೆ.

ಆಸಕ್ತಿಕರ ಅಂಶ ಎಂದರೆ ಜನಗಣತಿ ನಡೆದ ನಂತರವೇ ಕ್ಷೇತ್ರ ಪುನರ್‌ವಿಂಗಡಣೆ ಸಾಧ್ಯ. ಈ ವರ್ಷವಂತೂ ಜನಗಣತಿ ನಡೆಯುವ ಸಾಧ್ಯತೆ ಇಲ್ಲ. ಜನಗಣತಿ ನಡೆದು ಕ್ಷೇತ್ರ ಪುನರ್ವಿಂಗಡಣೆಯ ಸೂತ್ರಗಳು ನಿಗದಿಯಾದ ನಂತರವೇ ಅಂತಿಮ ಸ್ವರೂಪ ಸ್ಪಷ್ಟವಾ ಗಲಿದೆ. ದಕ್ಷಿಣದ ರಾಜ್ಯಗಳಿಗೆ ಪ್ರಮಾಣಾತ್ಮಕವಾಗಿ ಸೀಟುಗಳನ್ನು ಕಲ್ಪಿಸಲಾಗುವುದು, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಈಗಾಗಲೇ ಹೇಳಿದ್ದಾರೆ. 

ಅಲ್ಲದೆ ದಕ್ಷಿಣ ಭಾರತದ 5 ರಾಜ್ಯಗಳ ಬಗ್ಗೆ ಬಿಜೆಪಿ ಗಂಭೀರವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ 131 ಕ್ಷೇತ್ರಗಳ ಪೈಕಿ ಬಿಜೆಪಿ 29ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 42 ಸ್ಥಾನಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸಮನಾಗಿ ಸ್ಥಾನಗಳನ್ನು ಗಳಿಸಿತ್ತು. ತಮಿಳುನಾಡಿನಲ್ಲಿ ಶೇಕಡ 11ರಷ್ಟು ಮತ ಗಳಿಸಿತ್ತು ಹಾಗೂ 11 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಹೀಗಿರುವಾಗ ಬಿಜೆಪಿ ತನ್ನ ರಾಜಕೀಯ ಭವಿಷ್ಯಕ್ಕೆ ತಾನೇ ಕಲ್ಲು ಹಾಕಿಕೊಳ್ಳಲಿದೆ ಎಂಬುದಕ್ಕೆ ಅದ್ಯಾವ ಆಧಾರವಿದೆಯೋ ಗೊತ್ತಿಲ್ಲ. 

ಉತ್ತರ ಭಾರತೀಯರನ್ನು ಹೀಯ್ಯಾಳಿಸಿ ದಕ್ಷಿಣ ಭಾರತದವರು ಅದರಲ್ಲೂ, ತಮಿಳನಾಡಿನವರು ಸರ್ವ ಶ್ರೇಷ್ಠರು ಎಂದು ಹೇಳಿಕೊಳ್ಳುವಲ್ಲಿ ಡಿಎಂಕೆಗೆ ಭರ್ಜರಿ ರಾಜಕೀಯ ಲಾಭವಿದೆ. ಹೀಗಾಗಿ ಉತ್ತರ ಭಾರತದ ಮಹಿಳೆಯರ ಬಗ್ಗೆಯೂ ಕೀಳಾಗಿ ಮಾತನಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂಬುದನ್ನು ಡಿಎಂಕೆ ಸಚಿವ ದೊರೈ ಮುರುಗನ್ ಸಾಬೀತುಪಡಿಸಿದ್ದಾರೆ. 

ಅಂದ ಹಾಗೆ ಜನಸಂಖ್ಯೆ ದರದಲ್ಲಿ ಕೇವಲ ರಾಜ್ಯಗಳ ನಡುವೆ ಅಷ್ಟೇ ವ್ಯತ್ಯಾಸ ಇಲ್ಲ. ಧರ್ಮಗಳ ನಡುವೆ ಹಾಗೂ ಜಾತಿಗಳ ನಡುವೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಜನನ ದರದಲ್ಲಿ ವ್ಯತ್ಯಾಸ ಇದೆ. 

ಜನನ ದರ ಹೆಚ್ಚಾಗಿರುವ ಬಗ್ಗೆ ಉತ್ತರ ಭಾರತೀಯರ ಬಗ್ಗೆ ಕೀಳಾಗಿ ಮಾತನಾಡುತ್ತಿರುವ ಡಿಎಂಕೆ ನಾಯಕರು, ಜನನ ದರ ಹೆಚ್ಚಾಗಿರುವ ಜಾತಿ ಹಾಗೂ ಧರ್ಮಗಳ ಬಗ್ಗೆ ಇದೇ ರೀತಿ ಮಾತನಾಡುವ ಧೈರ್ಯ ತೋರುತ್ತಾರೆಯೇ? ಅಂತಹ ಸಾಧ್ಯತೆ ಇಲ್ಲ. ಇದರ ಬದಲು ‘ಜಿತನೀ ಆಬಾದಿ ಉತನಾ ಹಕ್’ ಎಂಬ ಹೆಸರಿನಲ್ಲಿ ಯಾವ ಯಾವ ಧರ್ಮ ಹಾಗೂ ಜಾತಿಗಳ ಜನಸಂಖ್ಯೆ ಹೆಚ್ಚಾಗಿದೆಯೋ ಅವರಿಗೆ ಹೆಚ್ಚಿನ ಪಾಲು ಕೊಡಲು ಡಿಎಂಕೆ ಆಸಕ್ತಿ ತೋರಬಹುದು.

ಇನ್ನು ಶಿಕ್ಷಣ ನೀತಿಗೆ ಬರುವುದಾದರೆ ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ತರುವುದಾಗಿ ಹೇಳುತ್ತಿದೆ. ಆದರೆ ಈ ನೀತಿ ಜಾರಿಗೆ ತರಲು ಅಗತ್ಯವಾದ ಹಣಕಾಸು ಒದಗಿಸುವ ಬಗ್ಗೆ ಇದುವರೆಗೂ ಸ್ಪಷ್ಟತೆ ಇಲ್ಲ. ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅವಸರದಿಂದ ನೂತನ ಶಿಕ್ಷಣ ನೀತಿ ಜಾರಿಗೆ ತಂದ ಕಾರಣದಿಂದ ಅನುಕೂಲಕ್ಕಿಂತ ಅನಾನುಕೂಲವೇ ಆಯಿತು ಎಂಬ ಭಾವನೆ ಇದೆ.

ಶಿಕ್ಷಣ ವಲಯದಲ್ಲಿ ಸರ್ಕಾರಿ ಶಾಲೆಗಳು ತೀವ್ರ ಹಿನ್ನಡೆ ಕಾಣುತ್ತಿವೆ. ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ದಿನೇ ದಿನೇ ಕುಂಠಿತವಾಗುತ್ತಿದೆ. ಇದು ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಗ್ಗೆ ಜನರು ವ್ಯಕ್ತಪಡಿಸುತ್ತಿರುವ ಅವಿಶ್ವಾಸ ನಿಲುವಳಿ ಅಲ್ಲದೆ ಬೇರೇನೂ ಅಲ್ಲ. ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರಗಳಾಗಲೀ ಗಂಭೀರ ಕ್ರಮ ತೆಗೆದುಕೊಂಡಿಲ್ಲ. ಬಡವರು ಹಾಗೂ ಮಾಧ್ಯಮ ವರ್ಗದವರು ಮಕ್ಕಳ ಶಿಕ್ಷಣದ ಹೊರೆಯಿಂದ ಬಳಲಿಕೆ ಉಂಟಾಗಿದೆ.

ಕಲಿಸುವ ಭಾಷೆ ಎರಡೇ ಇರಲಿ ಅಥವಾ ಮೂರೇ ಇರಲಿ, ಶಿಕ್ಷಣ ಉತ್ತಮ ಗುಣಮಟ್ಟದ್ದಾಗಿರಬೇಕು. ಆದರೆ ಅಂತಹ ಆಸಕ್ತಿ ತೋರುವ ಬದಲು ಶಿಕ್ಷಣ ನೀತಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾತ್ರ ಪಕ್ಷಗಳು ಗಮನ ಹರಿಸಿವೆ.


ಬಿ.ಜಿ. ಪ್ರವೀಣ್ ಕುಮಾರ್
ದಾವಣಗೆರೆ.

error: Content is protected !!