`ದಾವಣಗೆರೆ ಹಳೆ ಊರಿನ ಕಾಮದಹನ, ಹೋಳಿ ಸ್ವಾರಸ್ಯಗಳು’
ನಮ್ಮ ಬಾಲ್ಯದಲ್ಲಿ ದಾವಣಗೆರೆ ಹಳೇ ಊರಿನಲ್ಲಿ ಕಾಮದಹನ ತುಂಬಾ ಜೋರಾಗಿ ಇರುತ್ತಿತ್ತೇ ಹೊರತು ಮರುದಿನ ಹೋಳಿ ಅಷ್ಟೇನೂ ಜೋರಾಗಿ ಇರುತ್ತಿರಲಿಲ್ಲ. ಎಲ್ಲೋ ಕೆಲವು ಚಿಕ್ಕ ಮಕ್ಕಳು ಹಾಗೂ ಹುಡುಗರು ಮನೆಯಲ್ಲಿ ಒಂದಷ್ಟು ಹಠ ಮಾಡಿ ದೊಡ್ಡವರಿಂದ ಬಣ್ಣದ ನೀರನ್ನು ಅಂದರೆ ನೀರಿಗಷ್ಟು ಅರಿಶಿಣವನ್ನೋ, ಕುಂಕುಮವನ್ನೋ ಹಾಕಿ ಅದನ್ನು ಒಂದು ಬಾಟಲಿಯಲ್ಲಿ ತುಂಬಿಸಿಕೊಂಡು ಕುಲುಕುತ್ತಾ ಜೊತೆಯ ಮಕ್ಕಳ ಮೇಲೆ ಎರಚುವುದು ಅಷ್ಟೇ ಹಿತಮಿತವಾಗಿರುತ್ತಿತ್ತು. ಮತ್ತೆ ಕೆಲವು ರಾಜಸ್ಥಾನಿ ಮೂಲದ ಬಂಧುಗಳು ಮಾತ್ರ ಒಂದೆರಡು ಬಕೆಟ್‌ಗಳಲ್ಲಿ ಗುಲಾಲು ಕಡು ಗುಲಾಬಿ ಬಣ್ಣದ ಓಕುಳಿ ಮಾಡಿಕೊಂಡು ಬೀದಿಯಲ್ಲಿ ಬಂದು ತಮ್ಮ ಬಂಧುಗಳನ್ನು ಅಂಗಡಿಯಿಂದ ಹೊರಗೆ ಕರೆದು ಅವರ ಮೇಲೆ ಒಂದಷ್ಟು ಬಣ್ಣದ ನೀರು ಸುರಿದು ತಾವೂ ಸುರಿಸಿಕೊಂಡು ಪರಸ್ಪರ ಎರಚಾಡಿಕೊಂಡು ಮುಂದೆ ಹೋಗುತ್ತಿದ್ದರು. ಇದಕ್ಕಾಗಿ ಕೆಲವರು ತುಂಡು ಪಂಚೆ ಉಟ್ಟು ಬನಿಯನ್ ಹಾಕಿಕೊಂಡೆ ಸಿದ್ಧವಾಗಿರುತ್ತಿದ್ದರು.
ದಾವಣಗೆರೆಯು ಒಂದು ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡ ನಂತರ ಹೊರರಾಜ್ಯಗಳಿಂದ ಅದರಲ್ಲೂ ಪ್ರಮುಖವಾಗಿ ಉತ್ತರದ ರಾಜ್ಯಗಳಿಂದ ಕೆಲವು ವಿದ್ಯಾರ್ಥಿಗಳು ಇಲ್ಲಿ ಬಂದು ಹಾಸ್ಟೆಲ್‌ಗಳಲ್ಲಿ ನೆಲೆಸಿದ ಮೇಲೆ ಹೋಳಿ ಬಣ್ಣದ ಎರಚಾಟಕ್ಕೆ ಹೊಸ ಚಾಲನೆ ಬಂದಂತಾಯಿತು. ಬರು ಬರುತ್ತಾ ಯುವಜನರೆಲ್ಲಾ ಇದನ್ನು ಅನುಕರಿಸಲು ಆರಂಭ ಮಾಡಿದ್ದು, ಈಗ ಪ್ರತಿ ಹೋಳಿ ಹುಣ್ಣಿಮೆಯಲ್ಲೂ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ ಅಂದರೆ ರಾಮ್ ಅಂಡ್ ಕೋ ವೃತ್ತದಲ್ಲಿ ಭಾರೀ ಪ್ರಮಾಣದಲ್ಲಿ ಹೋಳಿ ಬಣ್ಣದ ಎರಚಾಟ, ಕುಣಿದು ಕುಪ್ಪಳಿಸುವುದು ಕೇಕೆ ಹಾಕುವ ಸಂಭ್ರಮ ತುಂಬಾ ಜೋರಾಗಿದೆ. ಈಗಂತೂ ಕೆಲವರು ಬಣ್ಣಗಳ ಜೊತೆಗೆ ಕೋಳಿ ಮೊಟ್ಟೆಗಳನ್ನು ಪರಸ್ಪರ ಒಡೆದುಕೊಳ್ಳುವುದನ್ನು ಮಾಡುತ್ತಿದ್ದಾರೆ! ಇದು ಸಲ್ಲದು.
ಸುಮಾರು 55 ವರ್ಷಗಳ ಕೆಳಗೆ ಒಂದು ಹೋಳಿ ಹುಣ್ಣಿಮೆಯ ದಿನ ಬೀದಿಯ ಮಕ್ಕಳೆಲ್ಲಾ ಪರಸ್ಪರ ಬಣ್ಣದ ನೀರನ್ನು ಎರಚಿಕೊಳ್ಳುತ್ತಿರುವಾಗ ಸೂರಜ್ ಮಲ್ ಎಂಬುವ ಹುಡುಗ ಸಿಲ್ವರ್ ಪೇಂಟ್ ಡಬ್ಬಿಯೊಂದನ್ನು ಹಿಡಿದುಕೊಂಡು ಬಂದು ಅದನ್ನು ಇತರೆ ಹುಡುಗರಿಗೆ ಹಚ್ಚಲೆಂದು ಮುಚ್ಚಳ ತೆಗೆಯಲು ಪ್ರಯತ್ನಿಸುತ್ತಿದ್ದ. ಸೂರಜ್ ಮಲ್ ಮುಂಬೈಯಲ್ಲಿ ಅವನ ಚಿಕ್ಕಮ್ಮನ ಮನೆಯಲ್ಲಿ ಕೆಲಕಾಲ ಇದ್ದ. ಅಲ್ಲಿ ಸಿಲ್ವರ್ ಪೇಂಟನ್ನು ಪರಸ್ಪರ ಹಚ್ಚಿಕೊಳ್ಳುವುದನ್ನು ಆತ ನೋಡಿರಬಹುದು, ಅದಕ್ಕಾಗಿ ಆತ ಅಂಬರ್ಕರ್ ಯಲ್ಲಪ್ಪ ಸ್ವಾಮಿ ರಾವ್ ಬಣ್ಣದ ಅಂಗಡಿಯಲ್ಲಿ ಕೆಲಸಕ್ಕಿದ್ದ ಬಹುಷಃ ಅಣ್ಣಿಗೇರಿ ಮುರುಗೆಪ್ಪರಿಗೆ ಹೇಳಿ ಒಂದು ಪುಟ್ಟ ಸಿಲ್ವರ್ ಪೇಂಟ್ ಡಬ್ಬಿ ತರಿಸಿ ಇಟ್ಟುಕೊಂಡಿದ್ದ. ಸೂರಜ್ ಮಲ್ ಸಿಲ್ವರ್ ಪೇಂಟ್ ಡಬ್ಬಿಯ ಮುಚ್ಚಳ ತೆಗೆಯುವುದನ್ನು ಗಮನಿಸಿದ ಪಟ್ಟೇದ ಜಯಣ್ಣನವರು `ಲೇ ಸೂರಿ ಅಂತವೆಲ್ಲಾ ಬಣ್ಣ ಹಚ್ಚಂಗಿಲ್ಲ ತಾ ಇಲ್ಲಿ’ ಎಂದು ಡಬ್ಬಿ ತನ್ನ ಕೈಗೆ ತೆಗೆದುಕೊಂಡರು. ನಿರಾಶನಾದ ಸೂರಜ್ ಮುಖ ಸಪ್ಪೆ ಮಾಡಿಕೊಂಡು `ಸಿಲ್ವರ್ ಪೇಂಟ್ ತಂದಿದ್ದೂ ವೇಸ್ಟ್ ಆತು, ಡಬ್ಬಿ ಮುಚ್ಚಳ ತೆಗೆದಿದ್ದರಿಂದ ಅಂಗಡಿಯವರು ವಾಪಸ್ ತಗೋಳಲ್ಲ’ ಎಂದ. ಅದೇ ವೇಳೆಗೆ ಅಲ್ಲಿಗೆ ಬಂದ ಎದುರು ಅಂಗಡಿಯ ಸುಬ್ರಾಯ ಶೆಟ್ಟರು `ವೇಸ್ಟ್ ಆಗಲ್ಲ ಇಲ್ ಕೊಡ್ರಿ ಇಲ್ಲಿ’ ಎಂದು ಆ ಡಬ್ಬಿಯನ್ನು ಕೈಗೆ ತೆಗೆದುಕೊಂಡರು. ಅಂದು ಶನಿವಾರವೂ ಆಗಿತ್ತು, ಪ್ರತಿ ಶನಿವಾರ ದಾಸಯ್ಯ ಗರುಡಗಂಬ ಹಿಡಿದುಕೊಂಡು ಜಾಗಟೆ ಭಾರಿಸುತ್ತಾ ಶೆಟ್ಟರ ಮನೆಯಲ್ಲಿ ಗೋಪಾಳಕ್ಕೆ ಅಕ್ಕಿ ಹಾಕಿಸಿಕೊಂಡು ಹೋಗುವುದು ಸಂಪ್ರದಾಯ. ಅದರಂತೆ ದಾಸಯ್ಯ ಬಂದ. ದಾಸಯ್ಯನ ಗರುಡಗಂಬ ಕರ್ರಗಿತ್ತು. ಶೆಟ್ಟರು ಅದನ್ನೆಲ್ಲ ಒರೆಸಿದರು, ಮನೆಯಲ್ಲಿದ್ದ ಬ್ರಷ್ ನಿಂದ ಗರುಡಗಂಬಕ್ಕೆ ಸಿಲ್ವರ್ ಪೇಂಟ್ ಹಚ್ಚಿದರು. ದಾಸಯ್ಯನ ಕರಿ ಕಬ್ಬಿಣದ ಗರುಡ ಕಂಬ ಬೆಳ್ಳಿಯಂತೆ ಲಕಲಕ ಹೊಳೆಯಿತು!!!. ಹುಡುಗರೆಲ್ಲ `ಹೋ..’ ಎಂದರು. ಸೂರಜ್ ಮುಖದಲ್ಲೂ ನಗು ಬಂದಿತು.
ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ