“ಎಲ್ಲಿ ನಾರಿಯರು ಪೂಜಿಸಲ್ಪಡುವರೋ (ಗೌರವಿಸಲ್ಪಡುವರೋ) ಅಲ್ಲಿ ದೇವತೆಗಳು ನೆಲೆಸುತ್ತಾರೆ” ಎಂಬ ಮಾತಿನಂತೆ ಪ್ರತಿಯೊಂದು ಮನೆಯಲ್ಲೂ ಹೆಣ್ಣು ಮಕ್ಕಳಿಗೆ ಪ್ರೀತ್ಯಾದರಗಳು ದೊರಕಿದರೆ ಆ ಮನೆಗಳು ನಂದನವನವಾಗಿರುತ್ತವೆ. ಸುಖ, ಸಂತೋಷ, ಸಮೃದ್ಧಿ ತುಂಬಿರುತ್ತವೆ.
“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಯಂತೆ ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ತಮ್ಮ ಮನೆಯಲ್ಲದೇ ಅಕ್ಕಪಕ್ಕದ ಮನೆ, ಸಮಾಜ, ಇಡೀ ಊರಿನ ಜನರೇ ಶಿಕ್ಷಿತರಾಗುವರು. ಹೆಣ್ಣು ಮಕ್ಕಳ ಮನಸ್ಸು ತುಂಬಾ ಮೃದು, ನಯ ವಿನಯದ ಸ್ವಭಾವ, ಮಾನವೀಯತೆಯ ಸಾಕಾರ ಮೂರ್ತಿಗಳು. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ, ಸ್ನೇಹ, ವಿಶ್ವಾಸ ತೋರುವ ಕಣಜವಾಗಿರುವರು.
ಹೆಣ್ಣು ಮಕ್ಕಳು ಹುಟ್ಟಿದ ಮನೆಗೆ ಕೊಟ್ಟ ಮನೆಗೆ ಹೆಸರಾಗಿರುವರು. ಅವರ ಒಳ್ಳೆಯ ನಡೆ, ನುಡಿಗಳು ಬೇರೆಯವರಿಗೆ ಮಾದರಿಯಾಗುವುದು. ಚಿಕ್ಕ ಮಕ್ಕಳು ದೊಡ್ಡವರನ್ನು ನೋಡಿ ಅನುಕರಿಸುವರು. ದೊಡ್ಡವರು ಚಿಕ್ಕವರಿಗೆ ಮಾದರಿಯಗುವರು. ಹೆಣ್ಣು ಮಕ್ಕಳ ತಾಯಿ ತಂದೆಯರು ನಮ್ಮ ಮಕ್ಕಳು ನಮ್ಮ ಮುಂದೆ ಬೆಳೆದು ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಕ್ಕೆ ತಮ್ಮ ಜೀವನ ಸಾರ್ಥಕ ಎಂಬ ಭಾವನೆಯಿಂದ ನೆಮ್ಮದಿಯಾಗಿರುವರು.
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ
ಹಸಿರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಹೆಣ್ಣು ಮಕ್ಕಳು “ಅಂಗಳದ ರಂಗವಲ್ಲಿಯಿಂದ ಮಂಗಳ ಅಂಗಳದವರೆಗೂ ಕಾಲಿಟ್ಟಿರುವರು”. ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿರುವರು. ಗೃಹಿಣಿಯಾಗಿ, ಮಮತೆಯ ಅಮ್ಮಂದಿರಾಗಿ, ಮನೆಯ ಕಣ್ಮಣಿಯರಾಗಿ, ಉದ್ಯೋಗಸ್ಥೆಯಾಗಿ, ಶಿಕ್ಷಕಳಾಗಿ, ವೈದ್ಯಳಾಗಿ, ವಕೀಲಳಾಗಿ,ಇಂಜಿನಿಯರ್ ಗಳಾಗಿ, ಉನ್ನತ ಶ್ರೇಣಿಯ ಅಧಿಕಾರಿಗಳಾಗಿ, ಪೊಲೀಸ್ ಅಧಿಕಾರಿಗಳಾಗಿ, ವಿಜ್ಞಾನಿಯಾಗಿ, ವಾಹನಗಳ ಚಾಲಕರಾಗಿ, ಗಗನಸಖಿಯರಾಗಿ, ವಿಮಾನ ಚಾಲಕರಾಗಿ, ಉದ್ಯಮಿಗಳಾಗಿ, ಚಿತ್ರ ಕಲಾವಿದರಾಗಿ, ಗಾಯಕಿಯರಾಗಿ, ನಟಿಯರಾಗಿ, ಸೈನ್ಯದಲ್ಲಿ, ಹಲವಾರು ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸುತ್ತಿರುವರು. ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವರು.
“ಸೌಟು ಹಿಡಿಯುವ ಕೈ ರಾಜ್ಯವನ್ನಾಳಿತು’ ಎಂಬಂತೆ ಪ್ರಧಾನಿಯಾಗಿ, ರಾಷ್ಟ್ರಪತಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ಶಾಸಕರಾಗಿ, ಸಂಸದ ರಾಗಿ, ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯಿತಿಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ, ನಗರ ಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿ ಮಹಾನಗರ ಪಾಲಿಕೆಯ ಆಯುಕ್ತರಾಗಿ, ಮೇಯರ್ ಆಗಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವರು. ಉತ್ತಮ ರಾಜಕಾರಣಿಗಳಾಗಿರುವರು.
“ಆಡು ಮುಟ್ಟದ ಗಿಡವಿಲ್ಲ ಹೆಣ್ಣು ಮಾಡದ ಕೆಲಸವಿಲ್ಲ” ಕಣ್ಣಿಗೆ ಕಾಣುವ ದೇವರು (ಅಮ್ಮ) ಹೆಣ್ಣಲ್ಲವೇ” ಸ್ತ್ರೀ ಎಂದರೆ ಅಷ್ಟೇ ಸಾಕೇ” ಜಿ. ಎಸ್. ಶಿವರುದ್ರಪ್ಪನವರ ಕವನ ಅನ್ವಯಿಸುತ್ತದೆ.
– ಹೆಚ್.ಕೆ. ಸತ್ಯಭಾಮ ಮಂಜುನಾಥ, ದಾವಣಗೆರೆ.