`ಮಹಾಶಿವರಾತ್ರಿ ಸ್ವಾರಸ್ಯಕರ ಹಿನ್ನೆಲೆ’

`ಮಹಾಶಿವರಾತ್ರಿ ಸ್ವಾರಸ್ಯಕರ  ಹಿನ್ನೆಲೆ’

ಮಹಾಶಿವರಾತ್ರಿ ಹಿನ್ನೆಲೆ ಕುರಿತು ಅನೇಕ ಕಥೆಗಳಿವೆ. ಶಿವನು ಪಾರ್ವತಿಯನ್ನು ವಿವಾಹವಾದ ದಿನವೆಂದು, ಅದು ರಾತ್ರಿಯ ಮುಹೂರ್ತವಾಗಿತ್ತೆಂದೂ, ಈ ಗಿರಿಜಾ ಕಲ್ಯಾಣವನ್ನು ದೇವಾನುದೇವತೆಗಳು ನಿದ್ದೆ ಮಾಡದೇ ಆನಂದದಿಂದ ವೀಕ್ಷಿಸಿದರೆಂದು ಒಂದು ಕಡೆ ಹೇಳಿದರೆ, ಭಗೀರಥನ ಪ್ರಯತ್ನದಿಂದಾಗಿ ಗಂಗೆ ಭೂಮಿಗೆ ಇಳಿಯುವ  ಪೂರ್ವದಲ್ಲಿ ಆಕೆಯನ್ನು ತನ್ನ ಜಟೆಯಲ್ಲಿ ನಿಗ್ರಹಿಸಿದ ಶಿವ ಅಲ್ಲೇ ಉಳಿಸಿಕೊಂಡಾಗ ಪುನಃ ಭಗೀರಥನು ಶಿವನನ್ನು ಒಲಿಸಿದಾಗ ಶಿವನು ಗಂಗೆಯನ್ನು ಭೂಮಿಗೆ ಕೊಟ್ಟ ದಿನವೇ ಮಹಾಶಿವರಾತ್ರಿಯೆಂದು ಮತ್ತೊಂದು ಕತೆಯಿದೆ. 

ಪರಶಿವನ ಆದಿ ಅಂತ್ಯವನ್ನು ಪತ್ತೆ ಮಾಡಲು ಹೋದ ಬ್ರಹ್ಮ ಮತ್ತು ವಿಷ್ಣುವಿಗೆ ಶಿವನು ಲಿಂಗ ರೂಪದಲ್ಲಿ ಪ್ರಕಟವಾದ ದಿನವೆಂದು ಮತ್ತೊಂದು ಕತೆ ಹೇಳಿದರೆ, ಕಾಳಹಸ್ತಿ ಮಹಾತ್ಮೆ, ಬೇಡರ ಕಣ್ಣಪ್ಪನವರೆಗೂ ಶಿವರಾತ್ರಿಯ ಹಿನ್ನೆಲೆ ಬಹುವಿಧವಾಗಿ ಹೇಳಲ್ಪಡುತ್ತಿದೆ.              

ಆದರೆ, ಇವೆಲ್ಲಕ್ಕಿಂತ ಮಗದೊಂದು ಕಥೆ ಶಿವರಾತ್ರಿಯ ಹಿನ್ನೆಲೆಗೆ ಹೆಚ್ಚು ಹೊಂದಿಕೆಯಾಗುತ್ತದೆ. ಅದೇನೆಂದರೆ ಅಮೃತ ಪ್ರಾಪ್ತಿಗಾಗಿ ದೇವ ದಾನವರು ಸಮುದ್ರ ಮಥನ ಮಾಡುವಾಗ ಮೊದಲು ಬಂದ ಹಾಲಾಹಲ ಎಂದರೆ ವಿಷವನ್ನು ಶಿವ ಕುಡಿದಾಗ ಅದು ಶಿವನ ಹೊಟ್ಟೆಗೆ ಹೋಗದಂತೆ ಪಾರ್ವತಿಯು  ಶಿವನ ಗಂಟಲನ್ನು ಒತ್ತಿ ತಡೆದಾಗ ಶಿವನ ಗಂಟಲು ನೀಲಿಯಾಗಿ ಶಿವ ನೀಲಕಂಠನಾದರೂ ವಿಷಪ್ರಾಶನ ಮಾಡಿದ ಶಿವನು ನಿದ್ದೆ ಹೋದಲ್ಲಿ ವಿಷವೇರಿ ಅಪಾಯವಾಗಬಹುದೆಂದು ಅಹೋರಾತ್ರಿ ಶಿವನನ್ನು ಎಚ್ಚರದಿಂದ ಇರಿಸಲಿಕ್ಕಾಗಿ ದೇವತೆಗಳು ಮತ್ತು ರಾಕ್ಷಸರು ಶಿವಧ್ಯಾನ, ಶಿವನಾಮ ಸಂಕೀರ್ತನೆ, ನೃತ್ಯಾದಿಗಳನ್ನು ಮಾಡುತ್ತಾ ಶಿವನನ್ನು ಎಚ್ಚರದಲ್ಲೇ ಇರಿಸಿದರೆಂದೂ, ಈ ನಿರಂತರ ಪ್ರಕ್ರಿಯೆಯಲ್ಲಿ ಅವರು ಆಹಾರವನ್ನು ಸಹಾ ಸ್ವೀಕರಿಸದೇ ತೊಡಗಿಕೊಂಡಿದ್ದರೆಂದೂ, ಇದನ್ನೇ ಶಿವರಾತ್ರಿ ಜಾಗರಣೆ ಮತ್ತು ಉಪವಾಸವಾಗಿ ಆಚರಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಈಗಿನ ವೈದ್ಯವಿಜ್ಞಾನವು ಸಹಾ ಹಾವಿನ ಕಡಿತಕ್ಕೆ ಒಳಗಾದವರನ್ನು ನಿದ್ದೆ ಮಾಡಲು ಬಿಡದೇ ಎಚ್ಚರದಲ್ಲಿಟ್ಟುಕೊಂಡೇ ಕರೆತನ್ನಿ ಎಂದು ಹೇಳುವುದುಂಟು. 

ದೇವತೆಗಳ ಒಂದು ದಿವಸವೆಂದರೆ ಮಾನವರಿಗೆ ಅದು ಒಂದು ವರ್ಷವಾಗುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ನಾವು ಮಹಾಶಿವರಾತ್ರಿಯನ್ನೂ, ತಿಂಗಳಿಗೊಮ್ಮೆ ಮಾಸ ಶಿವರಾತ್ರಿಯನ್ನೂ ಆಚರಿಸುವುದು ರೂಢಿಗೆ ಬಂದಿತೆಂದು ಹೇಳಲಾಗುತ್ತಿದೆ. 

ಅದೇನೇ ಇರಲಿ, ಆಗಾಗ ಉಪವಾಸ ಮಾಡುತ್ತಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಷ್ಟೇ ಅಲ್ಲ, ಹೊಟ್ಟೆ ತುಂಬಾ ತಿನ್ನುವವರು ಒಮ್ಮೆ ಉಪವಾಸ ಮಾಡಿದಾಗ ಮಾತ್ರ ಹೊಟ್ಟೆಗಿಲ್ಲದೇ ಹಸಿದವರ ಸ್ಥಿತಿ ಏನೆಂಬುದರ ಅರಿವಾಗುತ್ತದೆ. ಅಲ್ಲದೇ ಜಾಗರಣೆ ಮಾಡಿದಾಗ ನಿದ್ದೆ ಸಹ ಮಾಡದೇ ದೇಶ ರಕ್ಷಣೆ ಮಾಡುವ ಸೈನಿಕರ ಕಷ್ಟ ಏನೆಂಬುದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರ, ಕೆಲಸ ಮಾಡುವವರ ಕಷ್ಟ ಏನೆಂಬುದು ಮನದಟ್ಟಾಗುತ್ತದೆ.            

    ಹೆಚ್.ಬಿ.ಮಂಜುನಾಥ, ದಾವಣಗೆರೆ.

error: Content is protected !!