ಸ್ವಾತಂತ್ರ್ಯ ಹೋರಾಟಗಾರರಾದ ಹರ್ಡೇಕರ ಮಂಜಪ್ಪನವರು 18.02.1886 ರಂದು ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಜನಿಸುತ್ತಾರೆ.
ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೇ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಾರೆ. ಸ್ವಾತಂತ್ರ್ಯ ಹೋರಾಟದ ವಾತಾವರಣದಿಂದ ಪ್ರಭಾವಿತರಾಗಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು, ದಾವಣಗೆರೆಗೆ ಬಂದು 1906 ರಲ್ಲಿ ಧನುರ್ಧಾರಿ ಎನ್ನುವ ಪತ್ರಿಕೆಯನ್ನು ಆರಂಭಿಸುತ್ತಾರೆ. ತಿಲಕರು ಮಹಾರಾಷ್ಟ್ರದಲ್ಲಿ ಪ್ರಕಟಿಸುತ್ತಿದ್ದ ಮರಾಠಿ ಪತ್ರಿಕೆಯ ಲೇಖನಗಳನ್ನು ; ಕನ್ನಡ ಅನುವಾದ ಮಾಡಿ ಸ್ವಂತ ಮುದ್ರಣ ಯಂತ್ರದಿಂದ ಪ್ರಕಟಿಸುತ್ತಿದ್ದರು. ಆರ್ಥಿಕ ಅವ್ಯವಸ್ಥೆಯಿಂದ ಪತ್ರಿಕೆ ನಿಲ್ಲುತ್ತದೆ. ನಂತರ ಖಾದಿವ್ರತ ಕೈಗೊಂಡು ಹರಿಹರದ ಗೆಳೆಯ ಬಾಳಪ್ಪನ ಭೂಮಿಯಲ್ಲಿ ಸತ್ಯಾಗ್ರಹ ಎಂಬ ಆಶ್ರಮ ನಿರ್ಮಿಸಿಕೊಂಡಿರುತ್ತಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, `ಬಸವೇಶ್ವರ ಸೇವಾದಳ’ ಎನ್ನುವ ಸ್ವಯಂಸೇವಕರ ಸಂಘಟನೆವನ್ನು ರಚಿಸಿ; ಅಧಿವೇಶನದ ಯಶಸ್ಸಿಗೆ ಕಾರಣರಾಗುತ್ತಾರೆ.
ತಾಯಿಯ ಮರಣದ ನಂತರ ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿ, ಸ್ವಾತಂತ್ರ್ಯ ಹೋರಾಟದ ಜಾಗೃತಿಯ ಭಾಷಣಗಳನ್ನು ಮಾಡುತ್ತಾರೆ. ಅನೇಕ ಜನರು ಇವರಿಂದ ಪ್ರಭಾವಿತರಾಗಿ; ಸ್ವಾತಂತ್ರ್ಯ ಹೋರಾಟಕ್ಕೆ ಹೆಜ್ಜೆ ಹಾಕುತ್ತಾರೆ, ಆದ್ದರಿಂದ ಇವರನ್ನು ಕರ್ನಾಟಕದ ಗಾಂಧಿ ಎಂದು ಕರೆಯುತ್ತಾರೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಲ್ಲಲ್ಲಿ ರಾಟಿ ಸಂಘಗಳನ್ನು, ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿ, ಅಲ್ಲಿ ತಾವೂ ಸ್ವತಃ ಚರಕದಿಂದ ನೂಲು ತೆಗೆಯುವ ಕೆಲಸ ಮಾಡುತ್ತಾರೆ. ಇಷ್ಟಲ್ಲದೇ ಮಂಜಪ್ಪನವರು ಬಸವಣ್ಣನವರ ಅಪ್ಪಟ ಅನುಯಾಯಿಗಳು ಆಗಿದ್ದರು.
1913ರಲ್ಲಿ ದಾವಣಗೆರೆಯಲ್ಲಿ ಇದ್ದಾಗ ಅಲ್ಲಿನ ಬಸವಾಭಿಮಾನಿಗಳ ತರುಣ ಸಂಘದೊಂದಿಗೆ ಮೃತ್ಯುಂಜಯ ಸ್ವಾಮಿಗಳು ಕೂಡಿಕೊಂಡು ವಿರಕ್ತ ಮಠದಲ್ಲಿ ಪ್ರಪ್ರಥಮವಾಗಿ ಬಸವ ಜಯಂತಿಯನ್ನು ಶುರು ಮಾಡುತ್ತಾರೆ. ಬಸವಾದಿ ಶರಣರ ಸಂದೇಶಗಳನ್ನು ತಿಳಿಸುವ ವಚನಗಳನ್ನು, ಚರಿತ್ರೆಗಳನ್ನು ಮುದ್ರಿಸಿ, ಹಂಚುತ್ತಾರೆ. ಮುಂದೆ ಶರಣ ಸಂದೇಶ, ಉದ್ಯೋಗ ಎಂಬ ಮಾಸಪತ್ರಿಕೆಗಳನ್ನು ಆರಂಭಿಸುತ್ತಾರೆ. ಅನೇಕ ಕೃತಿಗಳನ್ನು ರಚಿಸುತ್ತಾರೆ. ಗಾಂಧೀಜಿಯವರು ಕರ್ನಾಟಕಕ್ಕೆ ಬಂದಾಗ; ಅವರೊಂದಿಗೆ ಸುತ್ತಾಡುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರು, ಬಸವ ತತ್ವ ಪ್ರಚಾರಕಾರ ಹರ್ಡೇಕರ ಮಂಜಪ್ಪಣ್ಣವರು 03.01.1947ರಂದು ಲಿಂಗೈಕ್ಯರಾಗುತ್ತಾರೆ.
-ಶಿವಪ್ರಸಾದ ಕರ್ಜಗಿ, ದಾವಣಗೆರೆ.