ಹಬ್ಬ ಹರಿದಿನ ಜಾತ್ರೆ ರಥೋತ್ಸವಗಳು ಸಂಸ್ಕೃತಿಯನ್ನು ಅನಾವರಣಗೊಳಿಸಿ, ಅರಿವನ್ನು ವಿಕಾಸ ಮಾಡಿಕೊಳ್ಳಲು ಕಾರಣವಾಗಿವೆ.
ಹಾಗಾಗಿ ಯಾವುದೇ ನಗರ ಗ್ರಾಮಗಳಾಗಿರಲಿ, ಅಲ್ಲಿಯ ಧರ್ಮ ಸಮುದಾಯಕ್ಕೆ ತಕ್ಕಂತೆ ಮನೆ ಮನೆಗಳಲ್ಲಿ ಹಬ್ಬಗಳು ನಡೆಯುತ್ತಿರುತ್ತವೆ. ಮತ್ತು ಸಾರ್ವಜನಿಕವಾಗಿ ದೇವಸ್ಥಾನ ಮಠ ಮಂದಿರಗಳಲ್ಲಿ ಸಾರ್ವಜ ನಿಕವಾಗಿ ಉತ್ಸವಗಳು ನಡೆಯುತ್ತವೆ. ಈ ರೀತಿಯಾಗಿ ಭಕ್ತಿ ಸಂಪ್ರದಾಯಗಳ ಸಂಭ್ರಮದಲ್ಲಿ ಜನರು ಮಿಂದೇಳುತ್ತಾರೆ.
ಎಲ್ಲಾ ಹಬ್ಬ ಉತ್ಸವಗಳಿಗಿಂತ ; ರಥೋತ್ಸವದ ಕಾರ್ಯಕ್ರಮ ಎಂದರೆ ಸಣ್ಣವರಿಂದ ದೊಡ್ಡವರಿಗೂ ಎಲ್ಲಿಲ್ಲದ ಸಡಗರ. ಮಕ್ಕಳು ಹೊಸ ಬಟ್ಟೆ ತೊಡುವ ಸಂಭ್ರಮವಿರುತ್ತದೆ. ವಿಧ ವಿಧವಾದ ಸಿಹಿ ಊಟ, ತಿಂಡಿ ತಿನಿಸುಗಳನ್ನು ತಿನ್ನುವುದರೊಂದಿಗೆ ; ಎಲ್ಲರ ಮನೆ ಮನೆಗಳಲ್ಲಿ ಆನಂದ ಆವರಿಸಿರುತ್ತದೆ.
ಊರಿಂದ ಬೇರೆ ಊರಿಗೆ ಕೆಲಸದ ನಿಮಿತ್ಯ ಹೋದಂತಹ ಸಂಬಧಿಕರು, ಸ್ನೇಹಿತರು ಸಹ ಈ ಸಮಯಕ್ಕೆ ಬಂದು, ತಮ್ಮ ಹಳೆಯ ಆಟ ಪಾಠಗಳ, ತುಂಟಾಟಗಳ ನೆನಪು ಮಾಡಿಕೊಂಡು ಸಂಭ್ರಮದಲ್ಲಿ ಭಾಗಿಯಾಗುವುದು ನಮ್ಮ ಆನಂದಕ್ಕೆ ಪಾರವೇ ಇಲ್ಲದಂತೆ ಆಗಿರುತ್ತದೆ.
ಇಂತಹ ಒಂದು ರಥೋತ್ಸವದ ಸಂಭ್ರಮ ಸಡಗರವು 34 ವರ್ಷಗಳ ನಂತರ 07.02.2025 ರ ಶುಕ್ರವಾರದಂದು ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲೂಕು ತುಮ್ಮಿನಕಟ್ಟೆ ಗ್ರಾಮದಲ್ಲಿ ನಡೆಯುತ್ತಿರುವುದು ನಮ್ಮ ಹಳೆಯ ನೆನಪುಗಳಿಗೆ ಸಾಕ್ಷಿಯಾಗುವಂತಾಗುತ್ತಿದೆ.
ಪ್ರತಿಯೊಂದು ಊರು, ನಗರವು ಏನಾದರೂ ಒಂದು ತನ್ನದೇ ಆದ ವಿಶೇಷತೆಯನ್ನು ಒಂದಿರುತ್ತವೆ.
ತನ್ನೂರಿನ ಕಾರ್ಯ ಚಟುವಟಿಕೆಗಳಿಂದ, ಬಿರುದನ್ನು ವಿಶೇಷತೆಯನ್ನು ಗಳಿಸಿರುತ್ತವೆ.
ಹಾಗೇ ತುಮ್ಮಿನಕಟ್ಟಿ ಗ್ರಾಮವು ಸಹ ; ನೇಕಾರಿಕೆ ಮತ್ತು ಹೆಸರು ವಡೆಗೆ ಹೆಸರಾಗಿದೆ. ಹಲವು ವರ್ಷಗಳಿಂದ ಎಲ್ಲಾ ಸಮುದಾಯ ಸಮಾಜದವರು, ಧರ್ಮದವರು, ನೇಕಾರಿಕೆ ವೃತ್ತಿಯನ್ನು ಕುಲಕಸುಬು ಎನ್ನುವಂತೆ ಎಲ್ಲರೂ ಮಾಡುತ್ತಿದ್ದಾರೆ. ಹತ್ತಿ, ಜೋಳಗಳನ್ನು ಬೆಳೆಯುವುದು ಇಲ್ಲಿನ ಕೃಷಿಕರ ಪ್ರಮುಖ ಬೆಳೆಯಾಗಿದೆ.
ಈ ಗ್ರಾಮದಲ್ಲಿ ಎಲ್ಲಾ ಜಾತಿ ಧರ್ಮಗಳ ಜನರು ಇದ್ದಾರೆ. ಭಾವೈಕ್ಯತೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಈ ಊರಿನಲ್ಲಿ ಬಸವ ಜಯಂತಿಯಂದು ಈಶ್ವರ ದೇವರ ರಥೋತ್ಸವ, ಯುಗಾದಿಯ ಮರುದಿನ ಆಂಜನೇಯ ರಥೋತ್ಸವ, ಹೋಳಿ ಹುಣ್ಣಿಮೆ ಹಬ್ಬ, ಇತ್ತೀಚಿಗೆ ಆರು ವರ್ಷಗಳಿಂದ ಸಿದ್ದಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೋ ತ್ಸವ ಕಾರ್ಯಕ್ರಮವು ನಡೆಯುತ್ತಿದೆ. ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಸಹ ಇದೆ ದಿನಾಂಕ 09.02.2025 ರ ಭಾನುವಾರದಂದು ಸಂತೆ ಪೇಟೆಯಲ್ಲಿ ಗದಗ ವಿರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ಮತ್ತು ಮತ್ತಿತರರ ಶ್ರೀಗಳ ಸಾನಿಧ್ಯದಲ್ಲಿ ಧರ್ಮ ಸಭೆ, ಉತ್ಸವ ನಡೆಯುತ್ತಿದೆ. ಹಾಗೂ ಗ್ರಾಮದಲ್ಲಿ ಇನ್ನು ಹಲವು ದೇವತೆಗಳ ಜಾತ್ರಾ ಮಹೋತ್ಸವಗಳು ನಡೆಯುತ್ತವೆ.
ಇಲ್ಲಿಗೆ ಮೂವತ್ತನಾಲ್ಕು ವರ್ಷಗಳ ಹಿಂದೆ ಬೆಲ್ಲದ ಪೇಟೆಯಲ್ಲಿರುವ ಬಸವಣ್ಣ ದೇವಸ್ಥಾನ (ಬಸಂದೆರ ಗುಡಿ) ದ ಬಸವಣ್ಣನ ರಥೋತ್ಸವ ನಡೆದಿತ್ತು. ಕಾರಣಾಂತರಗಳಿಂದ ಅದು ನಿಂತು ಹೋಗಿತ್ತು. ಐದಾರು ವರ್ಷಗಳ ಹಿಂದೆ ದೇವ ಸ್ಥಾನ ಜೀರ್ಣೋದ್ದಾರವಾಗಿದೆ, ಈ ವರ್ಷ 07.02.2025 ರ ಶುಕ್ರವಾರದಂದು ಮಹಾರಥೋತ್ಸವ ನಡೆಯುತ್ತಿದೆ.
ನಾವೆಲ್ಲರೂ ಇಂತಹ ಭಕ್ತಿ ಸಂಪ್ರದಾಯದ ಸಂಭ್ರಮದಲ್ಲಿ ಮಿಂದು ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿಯಾಗಬೇಕು.
ನಾವು ಭೌತಿಕ ಆಚರಣೆಯನ್ನು ಮಾಡುವುದರಿಂದ ಜ್ಞಾನ, ತತ್ವ, ಸಿದ್ಧಾಂತದ ಯಾವ ಅರಿವು ನಮ್ಮಲ್ಲಿ ಮೂಡುವುದಿಲ್ಲ. ಬರೀ ಭೌತಿಕ ಕ್ರಿಯಾಚಾರದಿಂದ ; ಕ್ಷಣಿಕ ಆನಂದವನ್ನು ಪಡೆಯದೆ, ಆಚರಣೆಯ ಹಿಂದಿನ ಸಾರವನ್ನು ತಿಳಿದು ನಡೆಯುವ ಪ್ರಯತ್ನ ಮಾಡಬೇಕು.
ತೇರು ಎಂದರೆ ; ನಮ್ಮ ಕಾಲುಗಳೇ ತೇರಿನ ಗಾಲಿ ಇದ್ದಂತೆ, ದೇಹವೇ ತೇರು ಗಡ್ಡೆ, ಮೂರ್ತಿ ಮಂಟಪದಲ್ಲಿ ಆಸೀನವಾಗುವುದೇ ; ನಮ್ಮ ಆತ್ಮ ಚೇತನವಾದ ಭಗವಂತ, ಜ್ಞಾನ ರೂಪವಾದ ಕಳಶವೇ ನಮ್ಮ ಶಿರವಾಗಿದೆ. ಈ ಅರಿವಿನೊಂದಿಗೆ ನಾವು ರಥೋತ್ಸವವನ್ನು ಆಚರಿಸಿ ದಾಗ ; ದೇಹವೇ ದೇವಾಲಯವೆನ್ನುವ ಅನುಭೂತಿಯಾಗುತ್ತದೆ, ಸತ್ಯ ದರ್ಶನವಾಗುತ್ತದೆ. ಆಗ ನಿಜವಾದ ಸದ್ಭಕ್ತರಾಗುತ್ತೇವೆ, ಜ್ಞಾನ ವಿಕಾಸವಾಗಿ ; ನಾವು ನಿತ್ಯ ನಿರಂಜನರಾಗಿ, ನಿಜಾನಂದದಲ್ಲಿ ನಿರಾಳವಾಗಿರುತ್ತೇವೆ, ಜೀವನ ಸಾರ್ಥಕವಾಗುತ್ತದೆ.
– ಶಿವಪ್ರಸಾದ ಕರ್ಜಗಿ , ದಾವಣಗೆರೆ., 9036251399