79 ರ ಸಂಭ್ರಮದಲ್ಲಿ ಡಾ. ಅಥಣಿ ವೀರಣ್ಣ

79 ರ ಸಂಭ್ರಮದಲ್ಲಿ ಡಾ. ಅಥಣಿ ವೀರಣ್ಣ

ಕರ್ನಾಟಕ ರಾಜ್ಯದ ದೊಡ್ಡ ನಗರಗಳಲ್ಲೊಂದು ದಾವಣಗೆರೆ, ಇದು ರಾಜ್ಯದ ಹೃದಯ ಭಾಗದಲ್ಲಿದ್ದು ಉತ್ತರ ಮತ್ತು ದಕ್ಷಿಣ ಕರ್ನಾಟಕಗಳಿಗೆ ಸೇತುವೆ ಎಂಬಂತಿದೆ, ಎರಡು ಶತಮಾನಗಳ ಹಿಂದೆ ಸಾಮಾನ್ಯ ಊರಾಗಿದ್ದ ಈ ಸ್ಥಳ 20ನೇ ಶತಮಾನದ ಆರಂಭದಿಂದ ಈಚೆಗಿನ ಕೆಲವು ದಶಕಗಳಲ್ಲಿ ಬೃಹದಾಕಾರವಾಗಿ ಬೆಳೆದು, ರಾಜ್ಯದ ಬಹುದೊಡ್ಡ ವ್ಯಾಪಾರ, ಕೈಗಾರಿಕೋದ್ಯಮ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿ ಪ್ರಸಿದ್ಧಿ ಪಡೆದಿದೆ. 

ದಾವಣಗೆರೆಯ ಪ್ರಸಿದ್ಧ ಮನೆತನಗಳಲ್ಲಿ ಒಂದಾದ ಅಥಣಿ ಮನೆತನದ ಶ್ರೀಮತಿ, ವೀರಮ್ಮ, ಶ್ರೀಯುತ ಅಥಣಿ ಶಾಂತವೀರಪ್ಪ ದಂಪತಿಯ ಪುತ್ರರಾಗಿ ಜನಿಸಿ, ನಾಡಿನೆಲ್ಲೆಡೆ ಪ್ರಖ್ಯಾತಿ ಗಳಿಸಿರುವ ಡಾ.ಅಥಣಿ ವೀರಣ್ಣನವರು ದಾನಿಗಳಾಗಿ, ಸಮಾಜ ಸೇವಕರಾಗಿ, ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ನಗರದ ಮುಂಚೂಣಿಯಲ್ಲಿರುವ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ, ಅವರ ಹುಟ್ಟುಹಬ್ಬದ ಸುಸಂದರ್ಭದಲ್ಲಿ ಅವರ ಕುರಿತು ಕೆಲವು ವಿಚಾರಗಳನ್ನು ತಿಳಿಸಲಿಚ್ಚಿಸುತ್ತೇನೆ.

ಹುಟ್ಟುವನು ನೂರ್ವರಲಿ ಒಬ್ಬನೇ ಶೂರ;

ಹುಟ್ಟುವನು ಸಾವಿರದಿ ಒಬ್ಬ ಪಂಡಿತನು;

ಹತ್ತು ಸಾವಿರದೊಳಗೆ ಒಬ್ಬನೇ ವಾಗ್ಮಿ;

ಲಕ್ಷದೊಳ್ ಹುಟ್ಟುವನೋ ಇಲ್ಲವೋ ಒಬ್ಬನೂ ದಾನಿ!

ಎಂಬ ಅರ್ಥ ಬರುವ ಸಂಸ್ಕೃತ ಶ್ಲೋಕವೊಂದಿದೆ, ದಾನಿಗಳು ಎಷ್ಟು ದುರ್ಲಭ ಎಂದು ಈ ನುಡಿ ತಿಳಿಸುತ್ತದೆ, 

ಡಾ. ಅಥಣಿ ವೀರಣ್ಣನವರಿಗೆ 78 ತುಂಬಿ 79ರ ಸಂಭ್ರಮ, ಅವರ ಸಾಧನೆ, ಸಿದ್ಧಿ, ಕನಸು ನನಸಾದ ತೃಪ್ತಿ ತುಂಬಿ ತುಳುಕುತ್ತಿದೆ, ಫಲಪ್ರದ ಬದುಕನ್ನು ನೆನೆದು ನೂರು ವರ್ಷ ಬಾಳಲಿ ಎಂದು ಮನತುಂಬಿ ಹಾರೈಸುವ ಸಮಯ ನಮ್ಮೆಲ್ಲರಿಗೆ ಈಗ ಒದಗಿ ಬಂದಿದೆ. 

ಕಳೆದ 25 ವರ್ಷಗಳಿಂದ ಶ್ರೀಯುತರನ್ನು ಚೆನ್ನಾಗಿ ಬಲ್ಲೆ, ಲೆಕ್ಕ ಪರಿಶೋಧಕರು, ಕೈಗಾರಿಕೋದ್ಯಮಿಗಳು, ಶೈಕ್ಷಣಿಕ ತಜ್ಞರು, ಸಾಮಾಜಿಕ-ಧಾರ್ಮಿಕ ಮುಖಂಡರು, ಅವರದು ಬಹುಮುಖ ವ್ಯಕ್ತಿತ್ವ, ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿವಿಧ ಸಂಘಗಳ ಪದಾಧಿಕಾರಿಗಳು, ಎಲ್ಲಕ್ಕಿಂತ ಮುಖ್ಯವಾಗಿ ಸರಳ-ಸಜ್ಜನರು, ಆದರ್ಶ ವ್ಯಕ್ತಿಗಳು, ದಾವಣಗೆರೆಯ ಶ್ರೇಷ್ಠ ವ್ಯಕ್ತಿಗಳಲ್ಲಿ ಡಾ.ಅಥಣಿ ವೀರಣ್ಣನವರು ಒಬ್ಬರು. 

ದಾವಣಗೆರೆಯ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಯುತರದು ಆರು ದಶಕಗಳ ಸಾಧನೆ, ಒಬ್ಬ ವ್ಯಕ್ತಿಯಿಂದ ಒಂದು ನಗರಕ್ಕೆ, ಸಮಾಜಕ್ಕೆ ಬೆಲೆ ಬರುತ್ತದೆ ಎನ್ನುವುದಕ್ಕೆ ಡಾ. ಅಥಣಿ ವೀರಣ್ಣನವರು ಸಾಕ್ಷಿಯಾಗಿದ್ದಾರೆ. 

ಶ್ರೀಯುತರು ಇಂದು ನಗರದ ಎಲ್ಲಾ ಕ್ಷೇತ್ರಗಳಲ್ಲೂ ಬಹುದೊಡ್ಡ ರೀತಿಯಿಂದ ಬೆಳೆದಿರುತ್ತಾರೆ, ಅವರು ಏನು ಎನ್ನುವುದನ್ನು ಒಂದೇ ಮಾತಿನಿಂದ ವರ್ಣಿಸಿ ಹೇಳುವುದಕ್ಕೆ ಆಗುವುದಿಲ್ಲ, ಅವರು ಅನೇಕ ಶಕ್ತಿಗಳು ಸಂಯೋಜಿತವಾಗಿರುವ ಒಬ್ಬ ಸಮೀಕೃತ ವ್ಯಕ್ತಿ, ಇಂಥ ವ್ಯಕ್ತಿಗಳು ನಗರದ ಅಭಿವೃದ್ಧಿಗೆ, ಶ್ರೇಷ್ಠತೆಗೆ ದಾರಿದೀಪವಾಗುತ್ತಾರೆ, ತಮ್ಮ ವೃತ್ತಿ ಹಾಗೂ ಪ್ರವೃತ್ತಿಯ ತಮ್ಮ ಕಾರ್ಯ ಜೀವನದ ಉದ್ದಕ್ಕೂ ಸಾರ್ವಜನಿಕ ಜೀವನದಲ್ಲಿ ಎಲ್ಲಾ ವರ್ಗಗಳ ಜನರೊಂದಿಗೂ ಬೆಲ್ಲವಾಗಿ ಬದುಕಿಕೊಂಡು ಬಂದಿರುವ ಅವರು ದಾವಣಗೆರೆಯ ಅಮೂಲ್ಯ ಆಸ್ತಿ ಎನಿಸಿದ್ದಾರೆ, 

ಶ್ರೀಯುತರಲ್ಲಿ  ಒಳ್ಳೆಯದನ್ನು ಮಾಡಬೇಕೆನ್ನುವ ಸತ್ ಸಂಕಲ್ಪ ಇದೆ, ಕಳೆದ 55 ವರ್ಷಗಳಿಂದ ನಗರದ ಉನ್ನತಿಗೆ, ಮುನ್ನಡೆಯ ಹಾದಿಗೆ ಮಾರ್ಗದರ್ಶಕರಾಗಿದ್ದಾರೆ, ದೈವ ಭಕ್ತಿಯಿಂದ ಪೂಜ್ಯರ, ಗುರುಗಳ, ಹಿತೈಷಿಗಳ ಆಶೀರ್ವಾದವನ್ನು ಪಡೆದು ಬೆಳೆದಿರುವ ಅವರು, ಒಳ್ಳೆಯವರಾಗಿದ್ದುಕೊಂಡು, ಒಳ್ಳೆಯದನ್ನು ಮಾಡುತ್ತಾ ಸೋಲರಿಯದ ಸಾಹಸಿಗರಾಗಿ ದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿದ್ದಾರೆ. 

ಸಜ್ಜನರು ನಿಸ್ವಾರ್ಥವಾಗಿ ಎಲ್ಲರನ್ನೂ ಪ್ರೀತಿಸುತ್ತಾರೆ, ಕಷ್ಟ-ಕಾರ್ಪಣ್ಯಗಳಲ್ಲಿ ಸ್ಪಂದಿಸುತ್ತಾರೆ, ಮುಖ್ಯವಾಗಿ ದಯೆ, ಕರುಣೆ, ಪ್ರೀತಿ-ವಿಶ್ವಾಸ, ಕ್ಷಮಾಗುಣ, ಗುರುನಿಷ್ಠೆ, ಆಶಾರಹಿತ ನಿಸ್ವಾರ್ಥ ಜೀವನ ನಡೆಸುತ್ತಾರೆ, ಇಂತಹ ಎಲ್ಲಾ ಸದ್ಗುಣಗಳನ್ನು ಶ್ರೀಯುತ, ಡಾ. ಅಥಣಿ ವೀರಣ್ಣನವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಶ್ರೀಯುತರು ಇತರರ ಏಳಿಗೆಯನ್ನು ಸಹನೆಯಿಂದ ಕೇಳಿಕೊಳ್ಳುವ ತಾಳ್ಮೆಯನ್ನು ಬೆಳೆಸಿಕೊಂಡಿದ್ದಾರೆ, ಸಾಧಿಸುವವರ ಸಾಧನೆಯನ್ನು ಮುಕ್ತ ಮನಸ್ಸಿನಿಂದ ಹಾಡಿ ಹೊಗಳುತ್ತಾರೆ, ಉನ್ನತವಾದುದನ್ನು ಸಾಧಿಸಬೇಕು, ದಿಟ್ಟ ಹೆಜ್ಜೆಗಳನ್ನು ಇಟ್ಟು ಮುಂದೆ ಸಾಗಬೇಕು, ಜೀವನದಲ್ಲಿ ನಯ-ವಿನಯ ರೂಢಿಸಿಕೊಂಡು ನಾವು ಕೂಡ ಮುಂದುವರಿಯಬೇಕು, ದೊಡ್ಡವರಂತೆ ಬೆಳೆಯಬೇಕು ಎನ್ನುವ ಮನೋಧರ್ಮ ವನ್ನು ಹೊಂದಿದ್ದಾರೆ, ಪ್ರೀತಿ-ಕರುಣೆ-ನಂಬಿಕೆಯನ್ನು ಉಳಿಸಿಕೊಂಡು ಮುಂದೆ ಸಾಗಿದಾಗ ನಾವು ಏನನ್ನಾದರೂ ಸಾಧಿಸಲು ಸಾಧ್ಯ, ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯೂ ಬದುಕಿನ ಮೂಲ ಬುನಾದಿ ಎಂದು ಮರೆಯಬಾರದು ಎಂದು ಶ್ರೀಯುತರು ತಮ್ಮ ಜೀವನದ ಅನುಭವದ ಸಾರವನ್ನು ತಿಳಿಸುತ್ತಾರೆ. 

ನಾವು ಮಾಡುವ ಸಾಧನೆಯಿಂದ ನಮ್ಮ ಬದುಕಿಗೊಂದು ಅರ್ಥ ಬರುತ್ತದೆ, ಇದಕ್ಕೆ ಮನಸ್ಸಿನ ಶುದ್ಧತೆ ಮತ್ತು ನಿಶ್ಚಲತೆಯೇ ಮೂಲ ಕಾರಣ, ಮನಸ್ಸಿನ ಶುದ್ದಿ ಇರದಿದ್ದರೆ ಮಾತಿನ ಶುದ್ಧಿ, ನಡೆಯ ಶುದ್ಧಿ ಎರಡು ಸಾಧ್ಯವಾಗದು, ಮನುಷ್ಯನ ಸಾಧನೆಯಲ್ಲಿ ಪ್ರಾಮಾಣಿಕತೆ, ವೈಚಾರಿಕತೆ ಜೊತೆಗೆ ಧೈರ್ಯ ಮತ್ತು ಛಲಗಳು ಸಹ ಬೇಕು, ಯಾವ ವಿಕಾಸವು ಹಠಾತ್ತನೇ ಒಂದೇ ದಿನದಲ್ಲಿ ಘಟಿಸುವುದಿಲ್ಲ, ಅದಕ್ಕೆ ಕಾಲವೂ ಬೇಕು, ತಾಳ್ಮೆಯೂ ಬೇಕು ಎಂಬ ವಿಚಾರ ರಶ್ಮಿಯನ್ನು ನಮ್ಮೆಲ್ಲರಿಗೂ ತಿಳಿಸುತ್ತಾರೆ, 

ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು

ಪರಿಣಾಮವಕ್ಕು ಪದವಕ್ಕು ಕೈಲಾಸ

ನೆರೆಮನೆಯಕ್ಕು ಸರ್ವಜ್ಞ|

ಹರಪೂಜೆ ಗುರುಸೇವೆ; ವರ ಪುಣ್ಯವಿಲ್ಲದೇ|

ಬರಿದೆ ಸುಖಭೋಗವು; ದೊರಕುವುದೇ ಆತ್ಮ||

ಹಣವಿದ್ದಾಗಲೇ ಭಕ್ತಿ; ನೆಣವಿದ್ದಾಗಲೇ ಸೇವಾ|

ಗುಣವಿದ್ದಾಗಲೇ ಮಾಡಿ; ಮುಕ್ತಿಪಡೆ ಆತ್ಮ||

ಎಂಬ ತತ್ವದಂತೆ ವೀರಣ್ಣನವರು ದಾನಿಗಳಾಗಿ ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ, ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದರೂ ಸರಳ-ಸಜ್ಜನರಾಗಿ ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇಂದಿಗೂ ತಮ್ಮ ಕೆಲಸದಲ್ಲಿ ಕಾರ್ಯ ಮಗ್ನರಾಗಿದ್ದಾರೆ

ಡಾ.ಅಥಣಿ ವೀರಣ್ಣನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕೋರುತ್ತಾ, ದೇವರು ಅವರಿಗೆ ಇನ್ನೂ ಹೆಚ್ಚಿನ ಸಕಲ ಸಿರಿ ಸಂಪತ್ತನ್ನು, ಆಯುರಾ ರೋಗ್ಯವನ್ನು ಕರುಣಿಸಲಿ, ಶುಭವಾಗಲಿ ಎಂದು ಮನತುಂಬಿ ಶುಭ ಕೋರುತ್ತೇನೆ. 

79 ರ ಸಂಭ್ರಮದಲ್ಲಿ ಡಾ. ಅಥಣಿ ವೀರಣ್ಣ - Janathavani– ಜೆಂಬಿಗಿ ಮೃತ್ಯುಂಜಯ, ಕನ್ನಡ ಉಪನ್ಯಾಸಕರು, ದಾವಣಗೆರೆ

error: Content is protected !!