ಜಗತ್ತು ನಾಗಲೋಟದಿಂದ ಓಡುತ್ತಿದೆ. ಹೊಸ ಹೊಸ ಪರಿಕರಗಳು ಜನರ ಜೀವನ ಶೈಲಿಯನ್ನು ಮಾರ್ಪಡಿಸಿವೆ. ಆಧುನಿಕತೆಯ ಹೆಸರಿನಲ್ಲಿ ಪರಿಸರ ನಾಶವಾಗುವ ದಿನಗಳು ದೂರವಿಲ್ಲ. ಪ್ರಸ್ತುತ ಜಗತ್ತು ಅಂತರ್ಜಾಲದಿಂದ ನಿಯಂತ್ರಿತ. ಅಪ್ಪ-ಅಮ್ಮನ್ನನ್ನು ಬಿಟ್ಟು ಎಲ್ಲವೂ ಆನ್‍ಲೈನ್‍ನಲ್ಲಿ ಲಭ್ಯ. ತಿಂಡಿಯಿಂದ ಹಿಡಿದು ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ವಸ್ತುಗಳನ್ನು ಬೆರಳ ತುದಿಯನ್ನು ಮೊಬೈಲ್‍ನಲ್ಲಿ ಆಡಿಸುವ ಮೂಲಕ ತರಿಸಿಕೊಳ್ಳಬಹುದು. ಅಸಂಖ್ಯ ವಸ್ತುಗಳು ದಿನವೂ ವಿಲೇವಾರಿ ಆಗುತ್ತವೆ. ಆನ್‍ಲೈನ್‍ನಲ್ಲಿ ಆರ್ಡರ್ ಮಾಡುವ ವಸ್ತುಗಳನ್ನು ಸರಿಯಾದ ವಿಳಾಸಕ್ಕೆ ತಲುಪಿಸಲು ಡೆಲಿವರಿ ಬಾಯ್ಸ್ ಇರುತ್ತಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ಕುಳಿತು ಬೆನ್ನಮೇಲೆ ದೊಡ್ಡದಾದ ವಸ್ತುಗಳಿಂದ ತುಂಬಿರುವ ಚೀಲ ಕಾಣುತ್ತದೆ. ಜೀವನೋಪಾಯಕ್ಕಾಗಿ ದೊಡ್ಡ ದೊಡ್ಡ ಚೀಲ ಹೊರುತ್ತಾ ರಸ್ತೆ ರಸ್ತೆಯಲ್ಲಿ ತಿರುಗುವ ಡೆಲಿವರಿ ಬಾಯ್ಸ್ ಕಾಣಸಿಗುತ್ತಾರೆ.
ಆನ್‍ಲೈನ್‍ನಲ್ಲಿ ಖರೀದಿಸಿದ ವಸ್ತುಗಳನ್ನು ಸುರಕ್ಷಿತವಾಗಿಡಲು ದೊಡ್ಡ, ದೊಡ್ಡ ಡಬ್ಬಗಳು ಮತ್ತು ಥರ್ಮಕೋಲ್ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ಇವೆಲ್ಲಾ ನಂತರ ಕಸದ ಬುಟ್ಟಿಗೆ ಸೇರುತ್ತವೆ ಅಥವಾ ಬೀದಿಗೆ ಬೀಳುತ್ತವೆ. ಇಂತಹ ಕಸವನ್ನು ಹೆಕ್ಕಿ ತಮ್ಮ ಬೆನ್ನ ಮೇಲಿನ ದೊಡ್ಡ ಚೀಲದಲ್ಲಿ ತುಂಬಿ, ಮಾರಿ ಜೀವಿಸುವ ಹೆಂಗೆಳೆಯರ ಗುಂಪೇ ಇದೇ. ಬೆಳ್ಳಂಬೆಳಿಗ್ಗೆ ಈ ಹೆಣ್ಣುಮಕ್ಕಳು ರಸ್ತೆಗಿಳಿದು ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರೆ ಮರು ಉಪಯೋಗವಾಗುವ ವಸ್ತುಗಳನ್ನು ಆಯುತ್ತಾ ಬೀದಿ ಬೀದಿ ತಿರುಗುತ್ತಾ ತಮ್ಮ ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಒಂದೆಡೆ ಹೊಸ ವಸ್ತುಗಳನ್ನು ಹಂಚುತ್ತಾ ತಿರುಗುವ ಜೀವನವಾದರೆ, ಇನ್ನೊಂದೆಡೆ ಕಸದಿಂದ ಜೀವನ ನಡೆಸುವ ಜನರು ಒಂದೇ ಕ್ಯಾಮರಾ ಚೌಕಟ್ಟಿನಲ್ಲಿ ಸಿಕ್ಕಿದ್ದು ಬದುಕಿನ ವೈರುಧ್ಯವಲ್ಲವೇ? ಒಂದರಿಂದ ಪರಿಸರ ಮಾಲಿನ್ಯ ಮತ್ತೊಂದರಿಂದ ಪರಿಸರ ಶುಚಿತ್ವ.
ಡಾ. ಎಸ್. ಶಿಶುಪಾಲ
ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ