ವಿಶ್ವ ಮಾನವರ ಆರ್ಥಿಕ ಬದುಕನ್ನು ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ಸಂಘಟಿಸಲ್ಪಟ್ಟ ಏಕಮೇವ ಪದ್ಧತಿಯೇ ಸಹಕಾರ ಚಳುವಳಿ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಒಬ್ಬನು ಎಲ್ಲರಿಗಾಗಿ,ಎಲ್ಲರೂ ಒಬ್ಬನಿಗಾಗಿ ಎಂಬ ಮೂಲ ತತ್ವದ ಮೇಲೆ ಆರ್ಥಿಕ ವಿಕೇಂದ್ರೀಕರಣದ ಮೂಲಕ ಸಂಪತ್ತಿನ ಸಮಾನ ಹಂಚಿಕೆ, ಸರ್ವರ ಆರ್ಥಿಕ ಸಬಲೀಕರಣ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಮಾಡಲು ಸಹಕಾರ ಚಳುವಳಿ ಹುಟ್ಟಿಕೊಂಡಿತು.
ರಾಬರ್ಟ್ ಓವೆನ್ ಸಹಕಾರಿ ಆಂದೋಲನದ ಪಿತಾಮಹ. ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ಮಹಾ ಪುರುಷ. ಇವರ ನೇತೃತ್ವದಲ್ಲಿ ದಿನಾಂಕ 24.10.1844 ರಂದು ಇಂಗ್ಲೆಂಡಿನ ರಾಕ್‌ಡೇಲ್ ಪಟ್ಟಣದ ಟೂಡ್‌ಲೇನ್ ಬೀದಿಯಲ್ಲಿ ರಾಕ್‌ಡೇಲ್ ಇಕ್ವಿಟೇಬಲ್ ಪಯೋನಿ ಯರ್ಸ್ ಕೋ-ಆಪರೇಟಿವ್ ಸೊಸೈಟಿ ಹೆಸರಿನ ವಿಶ್ವದ ಪ್ರಥಮ ಸಹಕಾರಿ ಸಂಘ ಸ್ಥಾಪನೆಯಾಯಿತು.
ರಾಕ್‌ಡೇಲ್ ಮುಖಂಡರು ಸಂಘದ ಆಡಳಿತ ಮತ್ತು ವ್ಯವಹಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಕೆಲವು ನೀತಿ ಸಂಹಿತೆಗಳನ್ನು ರೂಪಿಸಿಕೊಂಡರು. ನಂತರ ಈ ನೀತಿ ಸಂಹಿತೆಗಳೇ ಕಾಲಾಂತರದಲ್ಲಿ ಸಹಕಾರ ತತ್ವಗಳಾದವು. ನಂತರ ಬೇಸಾಯ ಮತ್ತು ಬೇಸಾಯೇತರ ಸಹಕಾರ ಪತ್ತಿನ ಸಂಘಗಳು ಜರ್ಮನಿಯಲ್ಲಿ 1952ರಲ್ಲಿ ಶೂಲ್ಸ್‌ಡೆಲಿಸ್ ಎಂಬುವರು ನಗರದಲ್ಲಿ ಸ್ಥಾಪಿಸಿದ ಪತ್ತಿನ ಸಂಘ, ಪಟ್ಟಣ ಸಹಕಾರ ಬ್ಯಾಂಕುಗಳೆಂದು, 1854ರಲ್ಲಿ ಫೆಡ್ರಿಕ್ಲ ವೂನ್ ರೆಫಿಜಿನ್ ಸ್ಥಾಪಿಸಿದ ಗ್ರಾಮ ಪತ್ತಿನ ಸಂಘಗಳು ಗ್ರಾಮ ಬ್ಯಾಂಕುಗಳೆಂದು ಖ್ಯಾತಿ ಪಡೆದವು. ಇವರಿಬ್ಬರನ್ನೂ ಸಹಕಾರಿ ಆಂದೋಲನದ ಮೂಲ ಪುರುಷರೆಂದು ಕರೆಯಲಾಗುತ್ತದೆ. ನಂತರ ಫ್ರಾನ್ಸ್‌ನಲ್ಲಿ ಔದ್ಯೋಗಿಕ ಸಹಕಾರ ಸಂಘಗಳು, ಡೆನ್ಮಾರ್ಕಿನಲ್ಲಿ ಹೈನುಗಾರಿಕೆ, ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿದ ಕೋಟ್ಯಾಂತರ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಸಹಕಾರ ಸಂಘಗಳು ಹುಟ್ಟಿಕೊಂಡವು.
ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ತುಂಬಾ ದೊಡ್ಡದು. ಸಹಕಾರಿ ತತ್ವಗಳ ಮೇಲೆ ರಚನೆಯಾದ ಸಂಘ-ಸಂಸ್ಥೆಗಳನ್ನು ಒಂದುಗೂಡಿಸಿ, ಸಮರ್ಪಕ ಸೇವೆ ಸಲ್ಲಿಸಲು ಹಾಗೂ ಮಾರ್ಗದರ್ಶನಕ್ಕಾಗಿ ಎಡ್ವರ್ಡ್ ವ್ಯಾನ್ಸಿ ಟಾರ್ಚ್ ಸಲಹೆ ಮೇರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ 1895ರಲ್ಲಿ ಲಂಡನ್‌ನಲ್ಲಿ ಅಂತರರಾಷ್ಟ್ರೀಯ ಸಹಕಾರ ಮೈತ್ರಿ (ICA)ನ್ನು ಸ್ಥಾಪಿಸಲಾಯಿತು. ಇದು ವಿಶ್ವದಾದ್ಯಂತ ICA ನಿಯಂತ್ರಣದಲ್ಲಿ 112 ದೇಶಗಳಲ್ಲಿ 318 ಸಹಕಾರ ಒಕ್ಕೂಟಗಳು /ಸಂಸ್ಥೆಗಳು ಪ್ರತಿನಿಧಿಸಿ ಕಾರ್ಯ ನಿರ್ವಹಿಸುತ್ತವೆ. 1921ರಲ್ಲಿ ICA ಎಲ್ಲಾ ಸಹಕಾರ ಸಂಸ್ಥೆಗಳು ರಾಕ್‌ಡೇಲ್ ತತ್ವಗಳಿಗೆ ಬದ್ಧವಾಗಿರಬೇಕೆಂದು ಆದೇಶಿಸಿತು. ನಂತರ 1995ರಲ್ಲಿ ಸಹಕಾರ ತತ್ವಗಳನ್ನು ವಿಮರ್ಶಿಸಿ, ಪರಿಶೀಲಿಸಿ ಸಾಮಾಜಿಕ ಕಳಕಳಿಯನ್ನು ಸೇರಿಸಿ ಒಟ್ಟು ಏಳು ಸಹಕಾರ ತತ್ವಗಳೆಂದು ಘೋಷಿಸಿತು. ಫ್ರಾನ್ಸಿನ ಆರ್ಥಿಕ ತಜ್ಞ ಚಾರ್ಲ್ಸ್ ಗೌಡ್ ಎರಡು ಹಸ್ತಗಳ ಲಾಘವ ಸಂಕೇತದೊಂದಿಗೆ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಸಪ್ತ ವರ್ಣಗಳನ್ನು ಒಳಗೊಂಡಿರುವ ಸಹಕಾರ ಧ್ವಜವನ್ನು ರೂಪಿಸಿದ. ಇದನ್ನು 1925ರಲ್ಲಿ ICA ಸಹಕಾರ ಧ್ವಜವೆಂದು ಅಂಗೀಕರಿಸಿತು. ಸಹಕಾರ ಚಳುವಳಿ ಹೊಂದಿರುವ ರಾಷ್ಟ್ರಗಳು, ಹಿಂದಿನ ವರ್ಷಗಳ ಸಾಧನೆ ಮತ್ತು ವೈಫಲ್ಯಗಳನ್ನು ವಿಮರ್ಶಿಸಿ ಮುಂದಿನ ವರ್ಷಕ್ಕೆ ಗುರಿ ಹಾಕಿಕೊಳ್ಳುವ ಮೂಲಕ 7 ದಿನಗಳ ಕಾಲ ಸಹಕಾರ ಸಪ್ತಾಹವನ್ನು ಆಚರಿಸಬೇಕೆಂದು ತೀರ್ಮಾನಿಸಿ, ಜುಲೈ 2ನೇ ಶನಿವಾರದಂದು ಆರಂಭಿಸಿ, 7 ದಿನಗಳವರೆಗೆ ಆಚರಿಸಲಾಗುತ್ತಿತ್ತು. ಭಾರತದಲ್ಲಿ ಮರು ಚಿಂತನೆ ನಡೆದು ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪ್ರಥಮ ಪಂಚವಾರ್ಷಿಕ ಯೋಜನೆಯಿಂದಲೇ ಸಹಕಾರ ಕ್ಷೇತ್ರಕ್ಕೆ ನೀಡಿದ ಪ್ರೋತ್ಸಾಹಕ್ಕೆ ಮತ್ತು ಬೆಂಬಲಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು. 1979ರಿಂದ ಅವರ ಜನ್ಮ ದಿನ ನವೆಂಬರ್ 14ರಿಂದ ಪ್ರಾರಂಭವಾಗಿ 20ರವರೆಗೆ ನಡೆಸಲಾಗುತ್ತದೆ.
ಭಾರತದಲ್ಲಿ 120 ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಚಳುವಳಿ ವಿಶ್ವದಲ್ಲೇ ದೊಡ್ಡದು. 1904 ಮಾರ್ಚ್ 25ರಂದು ಸಹಕಾರ ಪತ್ತಿನ ಕಾಯ್ದೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸುವ ಮೂಲಕ ಕರ್ನಾಟಕ ರಾಜ್ಯದ ಅಂದಿನ ಧಾರವಾಡ ಜಿಲ್ಲೆ, ಗದಗ ತಾಲ್ಲೂಕಿನ ಕಣಗಿನಹಾಳದಲ್ಲಿ ಮೇ 8, 1905ರಂದು ಶ್ರೀ ಸಿದ್ಧನಗೌಡ ಸಣ್ಣ ರಾಮನಗೌಡ ಪಾಟೀಲ್‌ರ ನೇತೃತ್ವದಲ್ಲಿ ಪ್ರಥಮ ಕೃಷಿ ಸಹಕಾರಿ ಪತ್ತಿನ ಸಂಘ ಸ್ಥಾಪನೆಯಾಯಿತು. ಆದ್ದರಿಂದ ಇವರನ್ನು ಭಾರತದ ಸಹಕಾರ ಚಳುವಳಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಕರ್ನಾಟಕ ರಾಜ್ಯವನ್ನು ಸಹಕಾರಿ ಆಂದೋಲನದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಬಹುತೇಕ ಸಹಕಾರ ಸಂಘಗಳು ಪ್ರಥಮವಾಗಿ ಕರ್ನಾಟಕದಲ್ಲೇ ಜನ್ಮ ತಾಳಿವೆ.
21.09.1973ರಂದು ಬೆಟಗೇರಿಯಲ್ಲಿ ಬೇಸಾಯೇತರ ಪತ್ತಿನ ಸಹಕಾರ ಸಂಘ ಸ್ಥಾಪನೆ, ಇದೇ ಮೊದಲ ಪಟ್ಟಣ ಸಹಕಾರ ಬ್ಯಾಂಕು. ಬೆಂಗಳೂರಿನ ಸಿಟಿ ಸಹಕಾರ ಬ್ಯಾಂಕ್ ಎರಡನೇಯದು. 1915ರಲ್ಲಿ ಕರ್ನಾಟಕ ಅಪೆಕ್ಸ್ ಬ್ಯಾಂಕು 21.09.1973ರಲ್ಲಿ ಬಿಡದಿಯಲ್ಲಿ ಪ್ರಥಮ ವ್ಯವಸಾಯ ಸೇವಾ ಸಹಕಾರ ಸಂಘ ಹೀಗೆ ಪ್ರಥಮಗಳು ಕರ್ನಾಟಕದಲ್ಲಿ ಸ್ಥಾಪನೆಗೊಂಡಿವೆ. 1912ರಲ್ಲಿ ಮತ್ತು 1919ರಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಅನುಕ್ರಮವಾಗಿ ಪಠ್ಯೇತರ ಸಹಕಾರ ಸಂಘಗಳ ಸ್ಥಾಪನೆ ಮತ್ತು ಸಹಕಾರ ವಿಷಯಗಳ ಪ್ರಾಂತ್ಯ ಸರ್ಕಾರದ ವ್ಯಾಪ್ತಿಗೆ ತರಲಾಯಿತು. 1954ರಲ್ಲಿ ಎ.ಡಿ. ಗೋರವಾಲ ಅಧ್ಯಕ್ಷತೆಯಲ್ಲಿ ನೇಮಿಸಲ್ಪಟ್ಟ ಅಖಿಲ ಭಾರತ ಗ್ರಾಮೀಣ ಪತ್ತು ಪರಿಶೀಲನಾ ಸಮಿತಿ ಸಹಕಾರ ಚಳುವಳಿ ವಿಫಲವಾಗಿದೆ ಅದು ಗೆಲ್ಲಬೇಕು ಎಂದು ಘೋಷಿಸಿತು. ನಂತರ ಇದರ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತಂದ ಮೇಲೆ ಸಹಕಾರ ಆಂದೋಲನ ಬೃಹದಾಕಾರವಾಗಿ ಬೆಳೆದು ಬಂದಿದೆ.
ಜಗತ್ತಿನ 30 ಲಕ್ಷ ಸಹಕಾರ ಸಂಸ್ಥೆಗಳ ಪೈಕಿ, 8.55 ಲಕ್ಷ ಸಹಕಾರ ಸಂಸ್ಥೆಗಳು ಭಾರತದಲ್ಲಿವೆ. 33 ಕೋಟಿ ಜನರು ನೇರ ಸಹಭಾಗಿತ್ವ ಹೊಂದಿದ್ದು, ಶೇ. 91ರಷ್ಟು ಹಳ್ಳಿಗಳು ಸಹಕಾರ ಸಂಘಗಳ ವ್ಯಾಪ್ತಿಗೆೆ ಒಳಪಟ್ಟಿವೆ. ಕರ್ನಾಟಕದಲ್ಲಿ ಇಂದು 54 ವಿವಿಧ ಬಗ್ಗೆಯ ಸಹಕಾರ ಸಂಘಗಳು 46917 ಇದ್ದು, ಇದರಲ್ಲಿ 2675 ನಿಷ್ಕ್ರಿಯ, 3406 ಸಮಾಸನೆಗೊಂಡಿದ್ದು, 40836 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 13869 ಸಂಘಗಳು ನಷ್ಟದಲ್ಲಿವೆ. 27756 ಸಂಘಗಳು ಲಾಭದಲ್ಲಿವೆ. ಜೊತೆಗೆ ಸೌಹಾರ್ದ ಸಹಕಾರ ಸಂಘಗಳು 5918 ಇವೆ. ಸಹಕಾರ ಸಂಘಗಳ ವ್ಯಾಪ್ತಿ ಶೇ. 100 ಗ್ರಾಮಗಳು ಒಳಪಟ್ಟಿವೆ.
ಸಹಕಾರ ಸಪ್ತಾಹ : ಕರ್ನಾಟಕದಲ್ಲಿ ಸಹಕಾರ ಶಿಕ್ಷಣ ತರಬೇತಿ ಮತ್ತು ಪ್ರಚಾರದ ಜವಾಬ್ದಾರಿ ಹೊತ್ತು ಸಹಕಾರ ಚಳುವಳಿಗೆ ಶ್ರಮಿಸುತ್ತಿರುವ 1987ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಸಹಕಾರ ಸಪ್ತಾಹವನ್ನು 1996ರವರೆಗೆ ಬೆಳಗಾವಿಯಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡರು ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ಆಚರಿಸಬೇಕೆಂದು ತೀರ್ಮಾನಿಸಿ ಅಂಕನಹಳ್ಳಿಯಲ್ಲಿ ಉದ್ಘಾಟನೆಗೊಂಡಿತು. ಅಂದಿನಿಂದ ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಸ್ಥಳಲ್ಲಿ ಮುಖ್ಯಮಂತ್ರಿಯವರಿಂದ ಚಾಲನೆಗೊಳ್ಳುತ್ತದೆ.
ಏಳು ತತ್ವಗಳು, ಏಳು ಮೌಲ್ಯಗಳು, ಏಳು ಬಣ್ಣಗಳನ್ನು ಹೊಂದಿರುವ ಮತ್ತು ಏಳು ದಿನಗಳಲ್ಲಿ ನಡೆಯಲಿರುವ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನವೆಂಬರ್ 14 ರಿಂದ 20ರವರೆಗೆ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ ಮುಖ್ಯ ಧ್ಯೇಯದೊಂದಿಗೆ 7 ದಿನಗಳ ಕಾಲ ವಿವಿಧ ವಿಷಯಗಳ ಮೇಲೆ ಚಿಂತನ-ಮಂಥನ ನಡೆಯುತ್ತದೆ.
ಸಹಕಾರ ಸಪ್ತಾಹದಲ್ಲಿ ಸೋಲು-ಗೆಲುವು, ಕೊರತೆ, ಅವಕಾಶಗಳು, ಸವಾಲುಗಳು, ಸಮಸ್ಯೆಗಳು ಮತ್ತು ಕಾಲಕ್ಕೆ ತಕ್ಕಂತೆ ತುರ್ತು ಅಗತ್ಯತೆಗಳ ಬಗ್ಗೆ ವಿವೇಕಯುತ ವಿಮರ್ಶೆ, ವಿಶ್ಲೇಷಣೆ ನಡೆಯಬೇಕು. ಸಹಕಾರ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದೇ ವಿಫಲವಾಗುವುದು ಏಕೆ? ಒಳ್ಳೆಯ ಸಹಕಾರಿಗಳು, ಸಿಬ್ಬಂದಿಗಳು ಇದ್ದರೂ ಸಹಕಾರ ಕಾಳಜಿಗಿಂತ ಸ್ವಲಾಭ ಕೇಂದ್ರೀಕೃತ ಹೆಚ್ಚುತ್ತಿರುವುದು ಮತ್ತು ಸಹಕಾರ ತತ್ವಗಳನ್ನು ತೂರಿ ಮೌಲ್ಯಗಳನ್ನು ಮಾರಿ, ಬದ್ಧತೆಯನ್ನು ಮೀರಿ ಸಾಲ ನೀಡಿಕೆ, ನಕಲಿ ಖಾತೆಗಳ ಸೃಷ್ಟಿ, ದುರಾಡಳಿತದಿಂದಾಗಿ ಹತ್ತಾರು ದೊಡ್ಡ ಸಂಘ/ಬ್ಯಾಂಕುಗಳು ದಿವಾಳಿಯಾಗಿವೆ. ಆದ್ದರಿಂದ ವೃತ್ತಿಪರತೆ, ಶಿಕ್ಷಣ-ತರಬೇತಿ, ಆಧುನಿಕ ತಂತ್ರಜ್ಞಾನ, ಗಣಕೀಕರಣ, ಡಿಜಿಟಲೀಕರಣ, ದಕ್ಷ ನಾಯಕತ್ವ, ದೂರದರ್ಶಿತ್ವ, ಆಧುನಿಕ ಸ್ಪರ್ಷ ಇವೆಲ್ಲವೂ ಸಹಕಾರ ಚಳುವಳಿಗೆ ತುಂಬಾ ಅಗತ್ಯ. ಈಗ ಭಾರತ ಐದನೇ ಅತಿ ದೊಡ್ಡ ಆರ್ಥಿಕತೆಯಿಂದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿಕ್ಕೆ ಸಹಕಾರ ಕ್ಷೇತ್ರದ ಪಾತ್ರ ದೊಡ್ಡದು. co-operatvies in india have failed to raise to toe expectations of many of us. but they shall succeed. 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸರ್ವರನ್ನೂ ಹೊಸ ದಿಕ್ಕಿನತ್ತ ಕರೆಯೊಯ್ಯಲಿ.
– ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ದಾವಣಗೆರೆ.