ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ನಮ್ಮ ಮಾತೃ ಭಾಷೆ ಕನ್ನಡ, ಕನ್ನಡವೇ ಎಲ್ಲ ಎಂಬ ಮಾತುಗಳು, ಭಾಷಣಗಳನ್ನು ನಾವು ಪ್ರತಿದಿನ ಬಳಸುವ ಕನ್ನಡ ನುಡಿಯಲ್ಲಿ ಪರೀಕ್ಷಿಸಿ ಕೊಳ್ಳಬೇಕು. ನಮಗೆ ನಮ್ಮ ಭಾಷೆಯ ಕುರಿತು ಅಭಿಮಾನ, ಬಳಕೆ, ಬೆಳವಣಿಗೆಗೆ ಆದ್ಯತೆ ಇವೆಲ್ಲವನ್ನು ಕುರಿತು ಚಿಂತಿಸಿದಾಗ ನಮ್ಮ ಭಾಷೆ ಶುದ್ಧ, ಅಚ್ಚಕನ್ನಡವಾಗಿ ಉಳಿದಿರುವ ಶೇಕಡ ಪ್ರಮಾಣ ಎಷ್ಟು? ಎಂಬ ಮೌಲ್ಯಮಾಪನದ ಅರಿವು, ಭಾಷಾಭಿಮಾನ ಅತೀಮುಖ್ಯವಾದ ಸಂಗತಿಯಾಗುವುದು. ನಿರಂತರ ಪರಕೀಯರ ಆಳ್ವಿಕೆಗೆ ಒಳಗಾದ ಕನ್ನಡಿಗರು ಅವಮಾನವನ್ನು, ದಬ್ಬಾಳಿಕೆಯನ್ನು ಸಹಿಸುತ್ತಲೇ ಬಂದಿದ್ದಾರೆ. ಈಗ ನಮ್ಮ ಮಾತೃ ಭಾಷೆ ಕನ್ನಡವನ್ನು, ಉಳಿಸಿ, ಬೆಳೆಸುವ ಹೊಣೆ ನಮ್ಮೆಲ್ಲರದ್ದಾಗಿದೆ. ಪರಕೀಯರ ಆಳ್ವಿಕೆಯ ಪರಿಣಾಮ ಅಚ್ಚಕನ್ನಡ ಸೊರಗಿರುವುದಕ್ಕೆ ಕಾರಣ. ಈಗ ನಮ್ಮವರೇ ನಮ್ಮನ್ನು ಆಳುತ್ತಿದ್ದರೂ ಕನ್ನಡಭಾಷೆ, ಸಂಸ್ಕೃತಿ ಬೆಳೆಯಬೇಕಾದ ಅಗತ್ಯವಿದೆ. ಈ ದಿಶೆಯಲ್ಲಿ ಸರ್ಕಾರದ ಕಾನೂನುಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಚ್ಚರಿಕೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಲುವುಗಳು ನಮ್ಮ ಭಾಷೆಗೆ ಆದ್ಯತೆ ಕೊಡಬೇಕಾಗಿದೆ. ಕನ್ನಡ ನೆಲದಲ್ಲಿ ಕನ್ನಡ ುಳಿಸಿ, ಬೆಳೆಸಬೇಕಿದೆ.
ಕನ್ನಡದ ಮೇಲೆ ಉರ್ದುಭಾಷೆಯ ಪ್ರಭಾವ: ಒಂದು ಭಾಷೆಯ ಶಬ್ಧಗಳು ಮತ್ತೊಂದು ಭಾಷೆಯಲ್ಲಿ ಆಸ್ಪದವನ್ನು ಪಡೆಯ ಬೇಕಾದರೆ ಆಯಾ ಭಾಷೆಗಳನ್ನಾಡುವ ಜನರು ಪರಸ್ಪರ ಕೂಡಿರಬೇಕಾಗಿರುವುದು ಅವಶ್ಯ. ‘ಸೂಫಿ’ ಧರ್ಮಾನುಯಾಯಿಗಳು ಕರ್ನಾಟಕಕ್ಕೆ ಬಂದರು. ಉತ್ತರ ಭಾರತದಿಂದ ಅಲ್ಲಾವುದ್ದೀನ್, ಮಲ್ಲಿಕಾಫರ್ ಮುಂತಾದವರು ಕನ್ನಡ ನಾಡಿಗೆ ಬಂದು ಕನ್ನಡನಾಡಿನ ಅರಸು ಮನೆತನಗಳನ್ನು ಧ್ವಂಸ ಮಾಡಿ ನಾಡನ್ನು ತಮ್ಮ ವಶ ಮಾಡಿಕೊಂಡರು. ಅಂದಿನಿಂದ ಕನ್ನಡನಾಡು ಮಹಮ್ಮದೀಯರ ವಶವಾದುದು ಇತಿಹಾಸ. ಕ್ರಿ.ಶ. 1346 ರಿಂದ 1700ರ ವರೆಗೆ ನಾಲ್ಕುನೂರು ವರ್ಷ ‘ಕನ್ನಡನಾಡು’ ಸುಲ್ತಾನರ ಕೈ ವಶವಾಗಿ ಕನ್ನಡ ಭಾಷೆ, ಸಂಸ್ಕೃತಿ ಮೇಲೆ ಇಸ್ಲಾಂ ‘ದಖನಿ’ ಭಾಷೆ ಹುಟ್ಟಿತು. ಪ್ರಭುತ್ವದ ಭಾಷೆ ಪಾರಸಿ, ಉರ್ದು ಜನರ ಅಭಿವ್ಯಕ್ತಿಗೆ ಮಾಧ್ಯಮವಾಗಿ ಬೆಳೆಯುತ್ತಲೇ ಜನಸಂಪರ್ಕ ಭಾಷೆಯಾಗಿ ಗುಲ್ಬರ್ಗಾ, ಬಿಜಾಪೂರ, ಗೋಲ್ಕೊಂಡ, ಔರಂಗಬಾದ್‍ಗಳು ಉರ್ದು ಬೆಳೆಸುವ ತೊಟ್ಟಿಲುಗಳಾದವು. ಕರ್ನಾಟಕದ ಗಡಿ ಸೀಮೆಗಳಲ್ಲಿ ಉರ್ದು-ಕನ್ನಡ, ಮರಾಠಿ-ಕನ್ನಡ, ತೆಲಗು-ಕನ್ನಡ, ಈ ನಾಲ್ಕು ಭಾಷೆಗಳು ಇರುವ ಭಾಷಿಕ ಪರಿಸರವಿದೆ. ಕನ್ನಡ ನಾಡಿನಲ್ಲಿ ‘ಉರ್ದು’ವಿನ ಬಳಕೆ ಮತ್ತು ಅದರ ವಿಶೇಷ ಶೈಲಿ ದಖ್ನಿ ಅಥವಾ ದಕ್ಖಿನಿ ಎಂದು ಹೆಸರು ಪಡೆಯಿತು. ಕನ್ನಡದಲ್ಲಿ ‘ಉರ್ದು’ವಿನ ಬಳಕೆ ಆರಂಭವಾಯ್ತು.
ದೊರೆಗಳ ಪತ್ರ ವ್ಯವಹಾರ ಭಾಷೆ ಉರ್ದು: ವಿಜಯನಗರ ದೊರೆಗಳ ಮತ್ತು ಸುಲ್ತಾನರ ಪರಸ್ಪರ ಪತ್ರ ವ್ಯವಹಾರವು ‘ಪಾರಸಿ’ ಅಥವಾ ‘ಉರ್ದು’ ಭಾಷೆಯಲ್ಲಿಯೇ ನಡೆಯುತ್ತಿತ್ತು. ರಾಜರ ಮೆಚ್ಚುಗೆಗೆ ಪಾತ್ರವಾದ ಈ ಭಾಷೆಯನ್ನು ಅಧಿಕಾರಿಗಳು, ಸಾಮಾನ್ಯ ಜನರು ಕಲಿತುಕೊಂಡು ಉಪಯೋಗಿಸುತ್ತಾ, ಬಳಕೆ ಮಾಡುತ್ತಾ ಬಂದಿರುವುದರಿಂದ ‘ಕನ್ನಡ’ದ ಮೇಲೆ ಉರ್ದು ಭಾಷೆಯ ಪರಿಣಾಮ ಉಂಟಾಗಿ ‘ಕನ್ನಡ’ ಸೊರಗಲು ಕಾರಣವಾಯ್ತು. 18ನೇ ಶತಮಾನದ ಉತ್ತರಾರ್ಧದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮೈಸೂರು ಸಿಂಹಾಸನವನ್ನು ಆಕ್ರಮಿಸಿಕೊಂಡು ಅಲ್ಪಾವಧಿಯ ಕಾಲ ಆಳ್ವಿಕೆ ನಡೆಸಿದರು. ಅನೇಕ ‘ಪಾರಸಿ’, ‘ಉರ್ದು’ ಶಬ್ದಗಳು ಮೈಸೂರು ಸೀಮೆಯ ಕನ್ನಡದಲ್ಲಿ ಬೆರೆತವು. ನಂತರ ಅಧಿಕಾರಕ್ಕೆ ಬಂದ ಮೈಸೂರು ಒಡೆಯರ ಕಾಲದಲ್ಲಿ ಕನ್ನಡ-ಉರ್ದು ಬಾಂಧವ್ಯ ಚೆನ್ನಾಗಿಯೇ ಇತ್ತು. ಬೆಂಗಳೂರು, ಮೈಸೂರುಗಳಲ್ಲಿ ‘ಉರ್ದು’ ಸಾಹಿತ್ಯ ಕೇಂದ್ರಗಳಾಗಿದ್ದವು. ಮೈಸೂರು ದಿವಾನರಾಗಿದ್ದ ಸರ್. ಎಂ.ವಿ. 1915 ರಲ್ಲಿ ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದರು.
ದಾಸರ ಪದಗಳಲ್ಲಿ ‘ಉರ್ದು’ ಬಳಕೆ: ಹದಿನಾರನೆಯ ಶತಮಾನದ ಆದಿಭಾಗವಾಗಿದ್ದ ಪುರಂದರ ದಾಸರ ಹಾಡಿನ ಸಾಲುಗಳಲ್ಲಿ ‘ಉರ್ದು’ ಶಬ್ದಗಳು ಬಳಕೆಯಾಗಿವೆ `ಗುರುವಿನ ಗುಲಾಮ ನಾಗುವ ತನಕಾ| ದೊರೆಯದಣ್ಣ ಮುಕುತಿ’ ಎಂಬುದು, ಇಲ್ಲಿ ‘ಗುಲಾಮ’ ಎಂಬುದು ಉರ್ದು, ತನಕಾ ಎಂಬ ಶಬ್ದ ಕನ್ನಡದ್ದಲ್ಲ. ದಕ್ಖನಿಯಿಂದ ಕನ್ನಡಕ್ಕೆ ಬಂದ ಶಬ್ದವಾಗಿದೆ. ‘ತಕ್’ ಎಂಬ ‘ಉರ್ದು’ ಶಬ್ದದ ಮೂಲರೂಪವಾದ ‘ತನಕ್’ ಎಂಬ ಶಬ್ದದಿಂದ ಕನ್ನಡದ ‘ತನಕ’ ಎಂಬ ಶಬ್ದವು ಹುಟ್ಟಿಕೊಂಡಿದೆ. ಹೀಗೆ ಹರಿದಾಸರ ಹಾಡುಗಳನ್ನು ಗಮನಿಸಿದಾಗ ಕನ್ನಡದಲ್ಲಿ ‘ಉರ್ದು’ ಶಬ್ದಗಳು ಸಾಕಷ್ಟು ಬಳಕೆ ಆಗಿರುವುದನ್ನು ಕಾಣಬಹುದು.
ಕನ್ನಡ ಬಳಕೆಯಲ್ಲಿ ‘ಉರ್ದು’ ಪದಗಳು: ಕನ್ನಡದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ‘ಹಕ್ಕು’, ಹಕ್ದಾರ್, ‘ಹಕ್ಕುದಾರ’, ಭರವಸೆ, ‘ಪೌಜು’, ‘ಖುಷಿ’, ಬಂಧಿಖಾನಾ, ಬದನಾಮಿ, ದಿವಾಣ, ಚಾವಡಿ, ಝಗಳ, ರೋಖ, ಹುಕ್ಕುಂ, ಬಂದೋಬಸ್ತು, ಸಿಪಾಯಿ, ಹರಕತ್ತು, ದರಬಾರ್, ಫಿರ್ಯಾದು, ಬಾಕಿ, ಕಛೇರಿ, ನಮಾಜು, ಹಾಜರು, ಕಾಯಿದೆ, ದವಲತ್ತು, ಜಮೀನು, ತರಕಾರಿ, ಜವಾನ್, ಪುರಸತ್ತು, ಚಾಲಾಕು, ಸವಾರ, ಸರ್ದಾರ ಹೀಗೆ ‘ಉರ್ದು’ ಪದಗಳು ಇಂದಿಗೂ ಕನ್ನಡ ಭಾಷೆಯ ಬಳಕೆಯಲ್ಲಿ ಶಾಶ್ವತ ನೆಲೆಯೂರಿ ಬಳಕೆಯಾಗುತ್ತ ಲಿವೆ. ಹೀಗೆ ಕನ್ನಡ ಭಾಷೆಯಲ್ಲಿ ಉರ್ದು ಪದಗಳ ಪಟ್ಟಿ ಮಾಡುತ್ತಾ ಹೋದರೆ ಕನ್ನಡದ ಸವಕಳಿಗೆ ಉರ್ದುಭಾಷೆಯ ಪ್ರಭಾವ ಹೆಚ್ಚಿನದ್ದಾಗಿದೆ.
ಕನ್ನಡ ಬಳಕೆಯಲ್ಲಿ ಇಂಗ್ಲಿಷ್ ಪದಗಳು: ಕನ್ನಡ ಭಾಷೆಯ ಬಳಕೆಯಲ್ಲಿ ಕೇವಲ ಉರ್ದು, ಮರಾಠಿ, ತೆಲಗು ಭಾಷೆಗಳ ಜೊತೆಗೆ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ‘ಕನ್ನಡ’ ಕಂಗ್ಲೀಷ್ ಆಗಿರುವುದು. ಕನ್ನಡ ಭಾಷೆಯ ಸೊರಗುವಿಕೆಗೆ ಮತ್ತೊಂದು ಮುಖ್ಯ ಕಾರಣ. ಆಂಗ್ಲರು ನಮ್ಮನ್ನು 250 ವರ್ಷಗಳ ಕಾಲ ಆಳ್ವಿಕೆ ಮಾಡಿದ ಪ್ರಯುಕ್ತ ಕನ್ನಡದಲ್ಲಿ-ಇಂಗ್ಲೀಷ್ ಬೆರೆತು ಇಂದು ಪ್ರತಿಷ್ಠೆಯ ಭಾಷೆಯಾಗಿ ರೂಢಿಯಲ್ಲಿದೆ.
ಕನ್ನಡ ಬಂದರೂ ಇಂಗ್ಲಿಷ್ ಬಳಸುವ ಅಧಿಕಾರಿಗಳು, ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿಯೇ ಶಿಕ್ಷಣ, ನಾಯಿಕೊಡೆಗಳಂತೆ ಹುಟ್ಟುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚು ಜನರನ್ನು ಆಕರ್ಷಿಸಿದರೆ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ಯಾರದು ? ಹೀಗಾಗಿ ನಾವು ಬಳಸುವ ಭಾಷೆಯಲ್ಲಿ ಇಂಗ್ಲಿಷ್ ಪದಗಳು ತಾಂಡವವಾಡುತ್ತಾ ತಾಯಿ ಭಾಷೆ ನಮ್ಮಿಂದ ಮರೆಯಾಗುತ್ತಿರುವುದು ನೋವಿನ ಸಂಗತಿ, ನಾವು ದಿನನಿತ್ಯ ಬಳಸುವ ಮೊಬೈಲ್, ಪೋಸ್ಟ್ ಆಫೀಸ್, ರೈಲ್ವೆ ಸ್ಟೇಷನ್, ಪೊಲೀಸ್ ಸ್ಟೇಷನ್, ಇಂಜಿನೀಯರ್, ಡಾಕ್ಟರ್, ಬ್ಯಾಂಕ್, ಮೆಡಿಷನ್, ಇಂಜಕ್ಷನ್, ಟೆಲಿವಿಷನ್, ಮೆಡಿಕಲ್ ಸ್ಟೋರ್, ಬಸ್‍ಸ್ಟ್ಯಾಂಡ್, ರಿಜರ್ವೇಷನ್ ಹೀಗೆ ಇಂಗ್ಲೀಷ್ ಶಬ್ದಗಳು ಹೇಳುತ್ತಾ ಹೋದರೆ ‘ಕನ್ನಡ ಶಬ್ದವನ್ನು’ ಹುಡುಕಬೇಕಾದ ಪರಿಸ್ಥಿತಿ ಕನ್ನಡ ನೆಲದಲ್ಲಿ ನಿರ್ಮಾಣವಾಗಿದೆ. ನಮಗೆ ಕನ್ನಡ ಪದ ಗೊತ್ತಿದ್ದರೂ ಭಾಷಾಭಿಮಾನದ ಕೊರತೆಯೇ ಈ ಅವಸ್ಥೆಗೆ ಕಾರಣವಾಗಿದೆ.
ಕನ್ನಡ ವ್ಯಾಕರಣ, ಗಾದೆಗಳಲ್ಲಿ ಉರ್ದು ಬಳಕೆ: ಕನ್ನಡ ವ್ಯಾಕರಣ, ಗಾದೆ ಹಾಗೂ ಗ್ರಂಥಗಳಲ್ಲಿ ಕನ್ನಡ ಸಂಸ್ಕೃತಕ್ಕೆ ಹೇಗೆ ಋಣಿಯಾಗಿದೆಯೋ ಹಾಗೆಯೇ ‘ಉರ್ದು’ವಿಗೂ ಋಣಿಯಾಗಿದೆ. ಸರಕಾರಿ ದಫ್ತರಗಳಿಗೆ, ಜಮೀನಿಗೆ ಸಂಬಂಧಿಸಿದ ವಿಷಯಗಳಲ್ಲಿ ‘ಉರ್ದು’ ಶಬ್ದಗಳನ್ನೇ ಬಳಸಲಾಗುತ್ತಿದೆ, ಗ್ರಂಥಕರ್ತರು ‘ಉರ್ದು’ ಪದಗಳನ್ನು ಬಳಸಿದ್ದಾರೆ. ನಾಟಕಗಳು, ಸಣ್ಣ ಕಥೆಗಳು, ಕಾದಂಬರಿಗಳು, ವಿಮರ್ಶೆಗಳು, ಹಾಗೂ ಕವಿತೆಗಳಲ್ಲಿಯೂ ‘ಉರ್ದು’ ಶಬ್ದಗಳ ಬಳಕೆಯಾಗಿದೆ. ಗಾದೆಯಲ್ಲಿ ಪ್ರಾಸಕ್ಕಾಗಿ ‘ಉರ್ದು’ ಶಬ್ದ ಉಪಯೋಗಿಸಿದೆ. `ಫಾಯಿದೆ ನೋಡಿ ವಾಯಿದೆ ಕಳಕೊಂಡ’, ‘ಸಾವಿರ ಕುದುರೆ ಸರದಾರ ಮನೆ ಹೆಂಡತಿಗೆ ಪಿಂಜಾರ’, ‘ಬಡಾಯಿ ಬಲ್ಲವನು ಲುಡಾಯಿಬಲ್ಲನೆ’, ‘ಅಂಬಾರಿಯಲ್ಲಿ ಕುಳಿತಿದ್ದರೂ ಮುಂಗಾರು ಬಿಡಲಿಲ್ಲ’, ‘ತುಂಟ ಕುದುರೆ ಗಂಟುಲ ಗಾಮು’, ‘ಬಜಾರಕ್ಕೆ ಹೋಗಿ ಸಾಮಾನನ್ನು ಚೌಕಾಶಿ ಮಾಡಿ ತರುತ್ತಾಳೆ’, ‘ಈ ಹುಡುಗ ಬಿಲ್ಕುಲ್ ಲಾಯಕ್ಕಿಲ್ಲ’, ‘ಈ ಹಣಕ್ಕೆ ಹಕ್ಕುದಾರರು ಯಾರು ಇಲ್ಲ’, ‘ಇವನು ತಿಂದು ಕೊಬ್ಬಿ ಜೋರಾಗಿದ್ದಾನೆ’, ಎಲ್ಲಾ ಏರ್ಪಾಡು ಒಳ್ಳೆ ಜಬರ್‍ದಸ್ತಿನಿಂದ ನಡೆಯಿತು’ ಎಂಬ ವಾಕ್ಯಗಳಲ್ಲಿ ವಿಪುಲವಾಗಿ ಉರ್ದು ಪದಗಳಿವೆ.
ಕನ್ನಡ ಭಾಷೆಗೆ ಗೌರವ ಎಷ್ಟು? ತಾಯ್ನುಡಿ ಕುರಿತು ನಮಗೆ ಅರಿವಿದ್ದರೂ ನಮ್ಮ ನಡೆ, ನುಡಿಗಳು, ಜೀವನವಿಧಾನ, ಕನ್ನಡ ಗಾದೆಗಳಲ್ಲಿ, ಆಡುವ ಮಾತಿನಲ್ಲಿ, ವ್ಯವಹಾರ ಭಾಷೆಯಲ್ಲಿ, ಸರ್ಕಾರಿ ದಾಖಲೆಗಳಲ್ಲಿ, ಪೊಲೀಸ್ ಇಲಾಖೆಯಲ್ಲಿ, ಭೂ-ವ್ಯವಹಾರಗಳಲ್ಲಿ ಕನ್ನಡ ಭಾಷೆಯಲ್ಲಿ ‘ಉರ್ದು’ ಮತ್ತು ಇಂಗ್ಲಿಷ್ ಶಬ್ದಗಳು ಹೆಚ್ಚು ಬಳಕೆಯಾಗಿ ಅಚ್ಚ ಕನ್ನಡ ನಮ್ಮಿಂದ ಕಣ್ಮರೆಯಾಗುತ್ತಿದೆ. ಈ ದಿಶೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಿಗರನ್ನು ಎಚ್ಚರಿಸಬೇಕಾದ ಅಗತ್ಯವಿದೆ. ಈ ಕುರಿತು ಚಿಂತನ, ಮಂಥನ ಮಾಡಿ ಕನ್ನಡದ ಶುದ್ಧ ಭಾಷೆಯ ಬೆಳವಣಿಗೆಗೆ ಕನ್ನಡಿಗರಾದ ನಾವು ಕಾರ್ಯೋನ್ಮುಖರಾಗೋಣ, ಕನ್ನಡದ ಉಳಿವಿಗಾಗಿ ನಮ್ಮ ಬದ್ಧತೆ, ಆದ್ಯತೆ, ಗೌರವ ನೀಡೋಣ ಎಂಬುದು ನನ್ನ ಆಶಯವಾಗಿದೆ.
– ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.