ಸುತ್ತೂರು ಸುಕ್ಷೇತ್ರದಲ್ಲಿ ಇಂದಿನಿಂದ ಜಾತ್ರೆ – ಜನಜಾಗೃತಿ ಯಾತ್ರೆ

ಸುತ್ತೂರು ಸುಕ್ಷೇತ್ರದಲ್ಲಿ ಇಂದಿನಿಂದ ಜಾತ್ರೆ – ಜನಜಾಗೃತಿ ಯಾತ್ರೆ

ಸುತ್ತೂರು ಸುಕ್ಷೇತ್ರದಲ್ಲಿ ಇಂದಿನಿಂದ ಜಾತ್ರೆ - ಜನಜಾಗೃತಿ ಯಾತ್ರೆ - Janathavani

ಕಪಿಲಾ ನದಿ ತೀರದಲ್ಲಿರುವ ಶ್ರೀ ಸುತ್ತೂರು ಕ್ಷೇತ್ರವನ್ನು ತಮ್ಮ ತಪಸ್ಸಿದ್ಧಿಯಿಂದ ಜಾಗೃತ ಧರ್ಮಕ್ಷೇತ್ರವನ್ನಾಗಿ ನೆಲೆಗೊಳಿಸಿದ ಮಹಾಮಹಿಮರು, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು. ಪೂಜ್ಯರು ಸಂಸ್ಥಾಪಿಸಿದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ಸಹಸ್ರಾರು ವರ್ಷಗಳಿಂದ ಜನತೆಯ ಸಮಗ್ರ ಉನ್ನತಿಗಾಗಿ ಜ್ಞಾನಾನ್ನದಾಸೋಹಗಳ ಕೈಂಕರ್ಯವನ್ನು ನಡೆಸುತ್ತಾ ಬಂದಿದೆ. 

ಶ್ರೀಮಠದ ಬಹುಮುಖ ಚಟುವಟಿಕೆಗಳ ನಿರ್ವಹಣೆಗಾಗಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಸ್ಥಾಪಿತವಾದ ಜೆಎಸ್‌ಎಸ್‌ ಮಹಾವಿದ್ಯಾಪೀಠ ಹಾಗೂ ಇದರ ಅಂಗಸಂಸ್ಥೆಗಳ ಮೂಲಕ ದೇಶ-ವಿದೇಶಗಳಲ್ಲಿ ಧರ್ಮ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳು ನಡೆಯುತ್ತಿವೆ.

ಆದಿ ಜಗದ್ಗುರುಗಳವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭವಾಗುತ್ತದೆ. ಮಾಸ ಶಿವರಾತ್ರಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ಪಾಡ್ಯಮಿಯಂದು ತೆಪ್ಪೋತ್ಸವ ಜರುಗುತ್ತವೆ. ಆರು ದಿನಗಳ ಕಾಲ ನಡೆಯುವ ಈ ಸಂಭ್ರಮದ ಜಾತ್ರೆಯಲ್ಲಿ ಜನತೆಯ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ.

2023, ಜನವರಿ 18ರಿಂದ ಜನವರಿ 23ರವರೆಗೆ ಆರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಜನವರಿ 19ರಂದು ಸಾಮೂಹಿಕ ವಿವಾಹ, ಹಾಲರವಿ ಉತ್ಸವ, 20ರಂದು ರಥೋತ್ಸವ, 21ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ, 22ರಂದು ತೆಪ್ಪೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳ ಜೊತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.

ಭಜನಾ ಮೇಳ : ಈ ವರ್ಷ 29ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿದೆ. ಒಟ್ಟು ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ. 18ರಂದು ಭಜನಾ ಗೀತೆಗಳನ್ನು ಒಳಗೊಂಡಿರುವ `ಭಜನಾಂಜಲಿ’ ಕೃತಿಯು ಬಿಡುಗಡೆಗೊಳ್ಳಲಿದೆ.

ವಸ್ತು ಪ್ರದರ್ಶನ : ಜಾತ್ರೆಯ ಪ್ರಮುಖ ಆಕರ್ಷಣೆ ಯಾದ ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ.  

ಸಾಮೂಹಿಕ ವಿವಾಹ : 19 ಗುರುವಾರದಂದು ನಡೆ ಯುವ ಉಚಿತ ಸಾಮೂಹಿಕ ವಿವಾಹ ಮಾಡಿಸ ಲಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಕಾಲುಂಗುರ ಗಳನ್ನು, ವರನಿಗೆ ಪಂಚೆ, ವಲ್ಲಿ, ಷರ್ಟ್‌ಗಳನ್ನು ನೀಡಲಾಗುತ್ತದೆ. ವಧು-ವರರು ದೃಢೀಕರಣ ಪತ್ರ ಹಾಗೂ ನೋಂದಣಿಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬ ಹುದಾಗಿದೆ.

ವಿವಾಹ ಕಟ್ಟಡಗಳ ಉದ್ಘಾಟನೆ : 19 ಮತ್ತು 20ರಂದು ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ರಥದ ಮನೆ, ಶ್ರೀ ಚಿಪ್ಪನ ಶಿವಾಚಾರ್ಯ ಕಾಂಪ್ಲೆಕ್ಸ್, ಶ್ರೀ ಪರ್ವತೇಂದ್ರ ಶಿವಾಚಾರ್ಯ ಕಾಂಪ್ಲೆಕ್ಸ್, ಶ್ರೀ ಭಂಡಾರಿ ಬಸಪ್ಪ ಒಡೆಯರ್ ಕಾಂಪ್ಲೆಕ್ಸ್‌ಗಳು ಉದ್ಘಾಟನೆಗೊಳ್ಳಲಿವೆ.

ಕೃತಿಗಳ ಬಿಡುಗಡೆ : 18 ರ ಬುಧವಾರದಂದು ಭಜನಾ ಗೀತೆಗಳನ್ನು ಒಳಗೊಂಡಿರುವ ‘ಭಜನಾಂಜಲಿ’ ಕೃತಿ ಹಾಗೂ 21 ಶನಿವಾರದಂದು ‘ಸಿರಿಧಾನ್ಯ ಐಸಿರಿ’ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು.

ಕೃಷಿ ಮೇಳ : ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಪ್ರತಿ ವರ್ಷದಂತೆ ಈ ಬಾರಿಯೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿಮೇಳವನ್ನು ಆಯೋಜಿಸಲಾಗಿದೆ. 1 ಎಕರೆ ‘ಕೃಷಿ ಬ್ರಹ್ಮಾಂಡ, ನೆರಳುಮನೆಯಲ್ಲಿ ಬೆಳೆದ ಹಲ ವಾರು ದೇಸಿ ಹಾಗೂ ವಿದೇಶಿ ತರಕಾರಿಗಳು, ಈ ವರ್ಷ ವಿಶೇಷವಾಗಿ ಸಿರಿಧಾನ್ಯ ಬೆಳೆಗಳ ಪ್ರಾತ್ಯಕ್ಷಿಕೆ, ಮಣ್ಣಿನ ಸವ ಕಳಿ ತಪ್ಪಿಸಲು ಹಾಗೂ ಔಷಧಿ ಬೆಳೆಯಾಗಿ ಲಾವಂಚ, ದ್ವಿದಳ ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 

ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನವಾದ ಡ್ರೋನ್ ಬಳಕೆ ಕುರಿತಾದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸ ಲಾಗುತ್ತದೆ. ಕೃಷಿ ಅಭಿವೃದ್ಧಿ ಇಲಾಖೆ ಗಳು, 

ವಿಶ್ವವಿದ್ಯಾ ನಿಲಯಗಳು  

ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ಈ ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯ ಬೆಳೆಗಳ ಪ್ರಾತ್ಯಕ್ಷಿಕೆ ಇರುತ್ತದೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಹಸು, ಕುರಿ, ಮೇಕೆ, ಕೋಳಿಗಳ ದೇಸಿ ತಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಿರಿಧಾನ್ಯ ಮೇಳ : ಈ ವರ್ಷ ‘ವಿಶ್ವ ಸಿರಿಧಾನ್ಯ ವರ್ಷ’ ವಾದ ಪ್ರಯುಕ್ತ ವಿಶೇಷವಾಗಿ ಸಿರಿಧಾನ್ಯ ಮೇಳವನ್ನು ಏರ್ಪಡಿಸಿದೆ. ಇದರಲ್ಲಿ ಸಿರಿಧಾನ್ಯ ಬೆಳೆಗಳ ಪ್ರದರ್ಶನ, ಸಿರಿಧಾನ್ಯ ತಿನಿಸುಗಳ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮನೆಯಲ್ಲಿ ತಯಾರಿಸಿಕೊಂಡು ಬರುವ ಉತ್ತಮ ಖಾದ್ಯಗಳಿಗೆ ಬಹುಮಾನ ನೀಡಲಾಗುವುದು. 

ಕೃಷಿ ವಿಚಾರ ಸಂಕಿರಣ : 21 ಶನಿವಾರದಂದು ಸಿರಿಧಾನ್ಯಗಳ ಮಹತ್ವ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ `ಸಿರಿಧಾನ್ಯ ಐಸಿರಿ’ ಕೃತಿಯನ್ನು ಬಿಡುಗಡೆಗೊಳಿಸಲಾಗುವುದು.

ಚಿತ್ರ ರಚಿಸುವ ಸ್ಪರ್ಧೆ : 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೇರೆ ಬೇರೆ ಗುಂಪುಗಳಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವ ರಾಜ್ಯ ಮಟ್ಟದ ಸ್ಪರ್ಧೆ 21 ಶನಿವಾರ ದಂದು ಬೆಳಗ್ಗೆ 10.00 ಗಂಟೆಗೆ ಪ್ರಾರಂಭ ವಾಗುತ್ತದೆ. ರಾಜ್ಯ ಹಾಗೂ ಹೊರರಾಜ್ಯ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ರಚನೆ ಮಾಡಿ, ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ.

ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆಗಳು: ಗ್ರಾಮೀಣ ಕಲೆಗಳಾದ ಸೋಬಾನೆ ಪದ ಹಾಗೂ ರಂಗೋಲಿ ಸ್ಪರ್ಧೆಗಳನ್ನು 18 ಬುಧವಾರದಂದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆಯನ್ನು 21 ಶನಿವಾರದಂದು ಏರ್ಪಡಿಸಲಾಗಿದೆ.

ಕುಸ್ತಿ ಪಂದ್ಯಾವಳಿ : 22 ಭಾನುವಾರದಂದು ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆಯಲಿವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ‘ಸುತ್ತೂರು ಕೇಸರಿ’ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ‘ಸುತ್ತೂರು ಕುಮಾರ’ ಪ್ರಶಸ್ತಿಗಳನ್ನು ನೀಡಲಾಗುವುದು.

ಕ್ಯಾನ್ಸರ್ ತಪಾಸಣಾ ಶಿಬಿರ : 18 ರಿಂದ 20ರವರೆಗೆ 3 ದಿನಗಳ ಕಾಲ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಕ್ಯಾನ್ಸರ್‌ಗಳ ಬಗ್ಗೆ ಪರೀಕ್ಷೆಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ. ಜೆಎಸ್.ಎಸ್‌ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ.

ದೋಣಿ ವಿಹಾರ, ಗ್ರಾಮೀಣ ಜನರು ಹಾಗೂ ಪ್ರಾಥಮಿಕ ಮತ್ತು ಜೆಎಸ್‌ಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಆಟಗಳು ಪುರುಷರಿಗೆ 20 ಶುಕ್ರವಾರದಂದು ಮತ್ತು ಮಹಿಳೆಯರಿಗೆ 21 ಶನಿವಾರದಂದು ಹಾಗೂ ವಿದ್ಯಾರ್ಥಿಗಳಿಗೆ 20 ಶುಕ್ರವಾರದಿಂದ 22 ಭಾನುವಾರದವರೆಗೆ ದೇಸಿ ಆಟಗಳು ಇವೆ. ವಿಜೇತರಾದವರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ದನಗಳ ಪರಿಷೆ ರದ್ದುಪಡಿಸಲಾಗಿದೆ. 

ಸಾಂಸ್ಕೃತಿಕ ಮೇಳ : ಜೆಎಸ್‌ಎಸ್ ಅಂತರ ಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಭರತನಾಟ್ಯ, ಸಾಮೂಹಿಕ ನೃತ್ಯ, ಶಾಸ್ತ್ರೀಯ ಸಂಗೀತ, ಸುಮಾರು 400ಕ್ಕೂ ಹೆಚ್ಚು ಕಾರ್ಯಕ್ರಮಗಳಿರುತ್ತವೆ.

ಸಾಂಸ್ಕೃತಿಕ ಕಾರ್ಯಕ್ರಮಗಳು : ಗದ್ದುಗೆಯ ಆವರಣದಲ್ಲಿ ನಗರ ಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕಗಳಿರುತ್ತದೆ.

ಕಲಾತಂಡಗಳಿಂದ ಪ್ರದರ್ಶನ, ಛಾಯಾಚಿತ್ರ ಸ್ಪರ್ಧೆ : ಜಾತ್ರಾ ಮಹೋತ್ಸವಕ್ಕೆ ಸಂಬಂಧಪಟ್ಟ ಛಾಯಾಚಿತ್ರ ಸ್ಪರ್ಧೆ ಯನ್ನು ಏರ್ಪಡಿಸಲಾಗಿದೆ. ಡಿಎಸ್‌ಎಲ್‌ಆರ್ ಕ್ಯಾಮೆರಾ ಹಾಗೂ ಮೊಬೈಲ್ ಛಾಯಾಚಿತ್ರಗಳ ಎರಡು ವಿಭಾಗಗಳ ಸ್ಪರ್ಧೆ ಇರುತ್ತದೆ. ಸ್ಪರ್ಧೆಗೆ ಯಾವುದೇ ಶುಲ್ಕವಿರುವುದಿಲ್ಲ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಯಸುವವರು 9686677284, 9448609062 ದೂರವಾಣಿಗಳಲ್ಲಿ ಸಂಪರ್ಕಿಸಿ.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಸಮಸ್ತ ಭಕ್ತಾದಿಗಳಿಗೆ ಪ್ರತಿನಿತ್ಯವೂ ಪ್ರಸಾದದ ವ್ಯವಸ್ಥೆ ಇರುತ್ತದೆ. ದೂರದಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ಶ್ರೀ ಸುತ್ತೂರು ಕ್ಷೇತ್ರಕ್ಕೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿವೆ.

ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯನ್ನು 22 ಭಾನುವಾರದಂದು ಏರ್ಪಡಿಸಲಾಗಿದೆ. 

ಸುತ್ತೂರು ಶ್ರೀ ಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಲಿದ್ದಾರೆ. 

ನಾಡಿನ ಮಠಾಧೀಶರು, ಧರ್ಮಗುರುಗಳು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು, ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು, ಕಲಾವಿದರು ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ದಾವಣಗೆರೆ ಭಾಗದ ಅನನ್ಯ ಭಕ್ತರಲ್ಲೊಬ್ಬ ರಾದ ಅಜ್ಜಂಪುರ ಶೆಟ್ರು ರಾಜಣ್ಣ ವಿವರಿಸಿದ್ದಾರೆ.

ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ನೇರವಾಗಿ https://www.youtube.com/@JSS Mahavidyapeethaonline. ನಲ್ಲಿ ವೀಕ್ಷಿಸಬಹುದು.

error: Content is protected !!