`ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೆ ಶರಣ್ಯೇ ತ್ರಯಂಬಕೆ ಗೌರಿ ನಾರಾಯಣಿ ನಮೋಸ್ತುತೆ’
ಇದು ಜಗದಂಬೆಗೆ ನಾವು ಮಾಡುವಂತಹ ಸ್ತೋತ್ರ. ಸರ್ವ ಮಂಗಳ ಎಂದರೆ ಯಾವಾಗಲೂ ಮಂಗಳಕರವಾಗಿರುವವಳು, ಎಲ್ಲರಿಗೂ ಎಲ್ಲಾ ಕಾಲದಲ್ಲೂ ಮಂಗಳವನ್ನೇ ಮಾಡುವವಳು. ಅವಳಿರುವ ಜಾಗದಲ್ಲಿ ಅಮಂಗಳವು ಇರುವುದೇ ಇಲ್ಲ. ಸಚ್ಚಿದಾನಂದ ಸ್ವರೂಪಳು. ತನ್ನನ್ನು ಆರಾಧಿಸುವ ಭಕ್ತರಿಗೆ ಆನಂದವನ್ನು ನೀಡುವವಳು, ಮಂಗಳವನ್ನು ಮಾಡುವವಳು ಎಂದರೆ ಅವರಿಗೆ ಅವರ ಕರ್ಮಫಲದ ಪ್ರಕಾರ ಒಳ್ಳೆಯದನ್ನು ಮಾಡುವಳು.
ಶಿವೆ ಎಂದರೆ ಶಿವನ ಪತ್ನಿ. ಶಿವ ಎಂದರೆ ಮಂಗಳಕರ. ಆದ್ದರಿಂದ ಶಿವೆಯೂ ಮಂಗಳವನ್ನು ಮಾಡುವವಳು ಎಂಬುದೇ ಅರ್ಥ.
ಮಾಂಗಲ್ಯೇ ಎನ್ನುವ ಒಂದು ಪದವಿದೆ. ಮಾಂಗಲ್ಯ ಭಾಗ್ಯ ಕೊಡುವವಳು ಎಂದರೆ ಒಳ್ಳೆಯ ಪತಿ ಅಥವಾ ಪತ್ನಿಯನ್ನು ಮಕ್ಕಳಿಗೆ ದಯಪಾಲಿಸಿ ವಂಶಾಭಿವೃದ್ಧಿ ಮಾಡುವವಳು ಎಂಬುದು ಒಂದಾದರೆ, ಮಾಂಗಲ್ಯವನ್ನು ಸಂರಕ್ಷಿಸುವವಳು ಎಂದರೆ ದೀರ್ಘ ಸೌಮಾಂಗಲ್ಯವನ್ನು ತನ್ನನ್ನು ಪೂಜೆ ಮಾಡುವ ಭಕ್ತರಿಗೆ ನೀಡುವವಳು ಎಂದೂ ತಿಳಿಯಬಹುದು.
ಸರ್ವಾರ್ಥಸಾಧಕೆ ಎಂದರೆ ಏನೇನು ಅಪೇಕ್ಷೆ ಇದೆಯೋ ಎಲ್ಲವನ್ನೂ ಪೂರ್ಣ ಮಾಡುವವಳು. ಲಲಿತಾ ಸಹಸ್ರನಾಮದಲ್ಲಿ “ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಸ್ವರೂಪಿಣಿ” ಎಂಬ ಒಂದು ನಾಮವಿದೆ. ನಾವು ಏನನ್ನಾದರೂ ಸಾಧಿಸಬೇಕಾದರೆ ಮೊದಲು ಅದನ್ನು ಮಾಡಬೇಕೆಂಬ ಇಚ್ಛೆ ನಮ್ಮಲ್ಲಿ ಬರಬೇಕು, ಅದನ್ನು ಹೇಗೆ ಮಾಡಬೇಕು ಎಂಬ ಜ್ಞಾನದ ಬೆಳಕು ನಮಗೆ ಮಾರ್ಗದರ್ಶನ ಮಾಡಬೇಕು. ನಮಗೆ ಬಂದ ಆ ಚಿಂತನೆ, ಕಾರ್ಯವಾಗಿ ಮಾರ್ಪಾಡಾಗಬೇಕಾದರೆ ಅದಕ್ಕೆ ಕ್ರಿಯಾಶಕ್ತಿ ಬೇಕು. ಈ ಮೂರನ್ನು ದಯಪಾಲಿಸುವವಳು ಆ ಜಗನ್ಮಾತೆ ಆದ್ದರಿಂದಲೇ ಅವಳಿದ್ದಲ್ಲಿ ಎಲ್ಲಾ ಸಾಧನೆಗಳು ಆಗುತ್ತವೆ. ಭಕ್ತರಿಗೆ ಬೇಕಾದ ಪ್ರತಿಯೊಂದು ಕೂಡ ದೇವಿಯ ಅನುಗ್ರಹವಾದರೆ ಲಭಿಸಿಯೇ ಲಭಿಸುತ್ತದೆ.
ಶರಣ್ಯೇ ಎಂದರೆ ಶರಣಾದವರನ್ನು ಸಂರಕ್ಷಿಸುವವಳು, ಶರಣಾಗತ ರಕ್ಷಕಿ. ಯಾರು `ನೀನಲ್ಲದೆ ನನಗೆ ಬೇರೆ ಗತಿ ಇಲ್ಲ’ ಎಂದು ಆ ದೇವಿಯ ಪಾದವನ್ನು ಹೃದಯದಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೋ ಅವರನ್ನು ಕೈ ಬಿಡದೆ ಕಾಪಾಡುತ್ತಾಳೆ. ಆದ್ದರಿಂದಲೇ ಅವಳು ಶರಣಾಗತ ವತ್ಸಲೇ, ಕೃಪಾ ಸಾಗರಿ, ತಾಯಿ. `ತಾಯಿ’, `ಅಮ್ಮ’ ಎನ್ನುವ ಶಬ್ದವೇ ಅವಳಲ್ಲಿರು ವಂತಹ ವಾತ್ಸಲ್ಯ ಮತ್ತು ಕಾರುಣ್ಯವನ್ನು ತೋರಿಸುತ್ತದೆ.
ತ್ರಯಂಬಕೇ ಎಂದರೆ ಮೂರು ಕಣ್ಣುಳ್ಳವನಾದ ಶಿವನಿಗೆ ತ್ರಯಂಬಕ ಎಂದು ಹೆಸರು. ಆ ತ್ರಯಂಬಕನ ಪತ್ನಿ ಎಂದು ಅರ್ಥೈಸಿಕೊಳ್ಳಬಹುದು, ಅಥವಾ ತಾನೇ 3 ಕಣ್ಣುಗಳನ್ನು ಹೊಂದಿರುವ ದುರ್ಗಾದೇವಿ ಎಂದು ಧ್ಯಾನ ಮಾಡಬಹುದು. ಮೂರು ಕಣ್ಣುಗಳು ಸೂರ್ಯ ಚಂದ್ರ ಮತ್ತು ಅಗ್ನಿಗಳಿಗೆ ಸಂಕೇತ. ಮೂರನೇ ಕಣ್ಣು ಹುಬ್ಬುಗಳ ಮಧ್ಯೆ ಇದ್ದು ಅದನ್ನು ತೆಗೆದರೆ ಅಗ್ನಿಯು ಹೊರಬಂದು ಭಸ್ಮ ಮಾಡುತ್ತಾನೆ. ಮನ್ಮಥನನ್ನು ಪರಶಿವನ ಮೂರನೇ ಕಣ್ಣಿನಿಂದಲೇ ಭಸ್ಮ ಮಾಡಿದ್ದು. ಈ ಶಕ್ತಿ ದೇವಿಗೂ ಇದೆ.
ಗೌರಿ ಎಂದರೆ ಅತ್ಯಂತ ಬೆಳ್ಳಗಿರುವಂತಹ ಸುಂದರವಾದ ಸ್ವರೂಪ. ಪಾರ್ವತಿಯ ಕಥೆಯಲ್ಲಿ, ಅವಳು ಪರಶಿವನನ್ನು ಮದುವೆ ಆದಾಗ ಕಪ್ಪಾಗಿದ್ದಳೆಂದು, ಅವಳನ್ನು ಕಾಲಿ ಎಂದು ಶಿವನು ಕರೆದಿದ್ದನೆಂದು, ತಾನು ಗೌರ ವರ್ಣವನ್ನು ಪಡೆದುಕೊಳ್ಳುವುದಕ್ಕಾಗಿ ಅವಳು ತಪಸ್ಸನ್ನು ಆಚರಿಸಿ ಅತ್ಯಂತ ಸುಂದರ ಹೊಳೆಯುವ ಗೌರ ವರ್ಣದ ಗೌರಿಯಾದಳೆಂದು ನಂಬಿಕೆ ಇದೆ. ಪರಶಿವನನ್ನೇ ಪತಿಯಾಗಿ ಪಡೆಯಬೇಕೆಂದು ತಪಸ್ಸು ಮಾಡಿದಂತಹ ದೇವಿ ಕೇವಲ ಪತ್ರೆಗಳನ್ನು(ಎಲೆಗಳು) ಸ್ವೀಕರಿಸಿದಾಗ “ಸುಪರ್ಣೆ” ಎನಿಸಿಕೊಂಡಳು, ಅದನ್ನೂ ನಿಲ್ಲಿಸಿದಾಗ “ಅಪರ್ಣೆ” ಎನಿಸಿಕೊಂಡಳು.
ನಾರಾಯಣಿ ನಮೋಸ್ತುತೆ ಎಂದರೆ ನಾರಾಯಣನ ತಂಗಿಯಾದ ಓ ತಾಯಿಯೆ ನಿನಗೆ ನಮಸ್ಕಾರ.ಎಂದು ಅರ್ಥ.ನಮಸ್ಕಾರ ಎಂದರೆ, ನಿನಗೆ ನನ್ನ ಎಲ್ಲವೂ ಅರ್ಪಿತ ಎಂಬ ಶರಣಾಗತಿ.
ಹೀಗೆ ಆ ತಾಯಿಯ ಜೀವನ ಛಲದಿಂದ ಜ್ಞಾನದಿಂದ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ಆತ್ಮ ಶಕ್ತಿಯಿಂದ ತುಂಬಿದೆ. ಇದು ನಮಗೂ ಏನೇ ಕಷ್ಟ ಬಂದರೂ ಧೃತಿಗೆಡದೆ ಅದರಿಂದ ಹೊರಬರುವ ಮಾರ್ಗವನ್ನು ಒಂದೇ ಮನಸ್ಸಿನಿಂದ ಯೋಚನೆ ಮಾಡಿ ಹೊರ ಬರಬಹುದು ಎಂಬ ಸಕಾರಾತ್ಮಕ ಚಿಂತನೆಯನ್ನು ನೀಡುತ್ತದೆ, ಸ್ಫೂರ್ತಿಯನ್ನು ನೀಡುತ್ತದೆ.
ಇಂತಹ ಸ್ವರ್ಣ ಗೌರಿ ವ್ರತ, ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆ ದಿನ ಬರುತ್ತದೆ. ಇದು ತಾಯಿ ಗೌರಮ್ಮ ತನ್ನ ತವರು ಮನೆಗೆ ಬರುವ ಪ್ರತೀಕವಾಗಿದೆ. ಮಗಳು ಮನೆಗೆ ಬಂದರೆ ಮನೆಯವರಿಗೆ ಎಷ್ಟು ಸಂಭ್ರಮ ಎಷ್ಟು ಸಡಗರ, ತಾಯಿ ಇದ್ದರಂತೂ, ಯಾವ ಕೆಲಸವನ್ನು ಮಾಡಲು ಬಿಡದೆ, ಮುದ್ದು ಮಾಡಿ ತಲೆ ಸ್ನಾನ ಮಾಡಿಸಿ ರುಚಿಯಾದ ಅಡುಗೆಯನ್ನು ಬಡಿಸಿ ಆನಂದಿಸುತ್ತಾಳೆ.
ಹಾಗೆಯೇ ವರ್ಷಕ್ಕೊಮ್ಮೆ ಬರುವ ಗೌರಮ್ಮನನ್ನು ಸಡಗರ ಸಂಭ್ರಮದಿಂದ ಎಲ್ಲರೂ ಬರ ಮಾಡಿಕೊಳ್ಳುತ್ತಾರೆ, ಮನೆಯ ಮುಂದೆ ತೋರಣ ರಂಗೋಲಿ ಚಪ್ಪರ, ಗೌರಿ ದೇವಿಯನ್ನು ಕೂರಿಸಲು ಸುಂದರವಾದಂತಹ ಮಂಟಪ, ಅದರ ಮುಂದೆ ಚಿತ್ರ ವಿಚಿತ್ರವಾದ ರಂಗೋಲಿ ಧೂಪಗಳು ದೀಪಗಳು ವಿಧ ವಿಧವಾದ ಆರತಿಗಳು ಹಣ್ಣುಗಳು ಎಲ್ಲವನ್ನು ಸಜ್ಜು ಮಾಡುತ್ತಾರೆ.
ಮನೆಗೆ ಬಂದಿರುವಂತಹ ಮಗಳಾದ್ದರಿಂದ ಬಾಗಿನ ಕೊಡುವ ಸಂಪ್ರದಾಯವಿದೆ ಸೋಬಲಕ್ಕಿ ಅಥವಾ ಮಡಿಲಕ್ಕಿ ಎಂದು ಉಡಿ ತುಂಬುವ ಸಂಪ್ರದಾಯವಿದೆ. ಕೇವಲ ಗೌರಿ ದೇವಿಗೆ ಅಲ್ಲದೆ ಮನೆಯ ಹೆಣ್ಣು ಮಕ್ಕಳು, ಸೊಸೆಯಂದಿರು ,ಮನೆಯ ಒಡತಿ, ಮನೆಗೆ ಕೆಲಸಕ್ಕೆ ಬರುವವರು, ಅಕ್ಕತಂಗಿಯರು ,ಅತ್ತಿಗೆ ನಾದಿನಿಯರು ಎಲ್ಲರಿಗೂ ಕೂಡ ಗೌರಿ ಹಬ್ಬದ ಅರಿಶಿನ ಕುಂಕುಮ ಕೊಡುವ ಸಂಪ್ರದಾಯವಿದೆ. ಇದಲ್ಲದೆ ಗೌರಿ ಪೂಜೆ ಮಾಡಿದವರು ಮರದ ಬಾಗಿನದಲ್ಲಿ ಒಂದು ದಿನದ ಅಡಿಗೆಗೆ ಆಗುವ ಎಲ್ಲಾ ಪದಾರ್ಥಗಳನ್ನು, ಸೀರೆ ಅಥವಾ ರವಿಕೆ ಕಣವನ್ನು, ಶೃಂಗಾರದ ಪದಾರ್ಥಗಳಾದ ಅರಿಶಿಣ ಕುಂಕುಮ ಕಾಡಿಗೆ ಬಳೆ ಬಿಚ್ಚೋಲೆ ಬಾಚಣಿಗೆ ಕನ್ನಡಿ, ಎಲ್ಲವನ್ನು ಇಟ್ಟು ಮುಚ್ಚಿ ಮುತ್ತೈದೆಯರಿಗೆ ಬಾಗಿನ ಕೊಡುವ ಸಂಪ್ರದಾಯವಿದೆ.
ಬಾಗಿನ ಕೊಡುವ ಮುತ್ತೈದೆಯಲ್ಲಿ ಭಗವತಿಯನ್ನು ನೋಡುವ ಒಂದು ದಿವ್ಯವಾದಂತಹ ಸಂಪ್ರದಾಯ ನಮ್ಮದಾ ಗಿದೆ. ಹೊರಗಿರುವ ದೇಹಕ್ಕೆ ಪ್ರಾಮುಖ್ಯತೆ ಇಲ್ಲ ಒಳಗಿರುವ ಆತ್ಮಕ್ಕೆ ಮಾತ್ರ ಪ್ರಾಮುಖ್ಯತೆ. ಆದ್ದರಿಂದಲೇ ಬಾಗಿನ ಕೊಟ್ಟ ನಂತರ ನಮಸ್ಕರಿಸುತ್ತೇವೆ. “ಓ ತಾಯಿ ಎಲ್ಲವೂ ನಿನ್ನದೇ ನಿನ್ನದನ್ನು ನಿನಗೆ ಅರ್ಪಿಸಿದ್ದೇನೆ. ನಿನ್ನಲ್ಲಿ ಶರಣಾಗಿದ್ದೇನೆ ನನ್ನನ್ನು ಕಾಪಾಡು” ಎಂಬ ಪ್ರಾರ್ಥನೆ ಎಲ್ಲರ ಮನಸ್ಸಿನಲ್ಲಿ ಇರುತ್ತದೆ
ಗೌರಮ್ಮನ ಪೂಜೆ ಮಾಡುವಾಗ 16 ಗಂಟಿನ 16 ಎಳೆ ದಾರಕ್ಕೆ ದೇವಿಯ 16 ನಾಮಗಳನ್ನು ಹೇಳುತ್ತಾ ಪೂಜೆ ಮಾಡಿಸುತ್ತಾರೆ. ಈ ದಾರವನ್ನು ಪತಿಯು ಪತ್ನಿಗೆ ಕಟ್ಟಿ, ವ್ರತವನ್ನು ಸಂಪನ್ನಪಡಿಸುತ್ತಾನೆ. ಪತ್ಯಂತರಗತನಾದ ಪರಮಾತ್ಮನು ದೇವಿಯ ಆಶೀರ್ವಾದವನ್ನು ನಮಗೆ ನೀಡುವ ಸಂಕೇತವೇ ಈ ದೋರ ಬಂಧನ. ಕಣ್ಣಿಗೆ ಕಾಣದ ದೇವಿಯ ಆಶೀರ್ವಾದವು ಕಾಣಿಸುವ ದಾರದ ರೂಪದಲ್ಲಿ ನಮ್ಮ ಕೈಯಲ್ಲಿ ಒಂದು ಹೂವಿನ ಜೊತೆ ಬಂಧಿಯಾಗಿ ಹೊಳೆಯುತ್ತದೆ.
16 ವರ್ಷ ಗೌರಿದೇವಿ ಶಿವನಿಗಾಗಿ ತಪಸ್ಸನ್ನು ಆಚರಿಸಿದಳು. ಅದರ ಪ್ರತೀಕವಾಗಿ ಹದಿನಾರರ ಸಂಖ್ಯೆಗೆ ಬಹಳ ಮಹತ್ವವಿದೆ. 16 ಎಲೆ 16 ಅಡಿಕೆಯ ಮೇಲೆ 16 ಎಳೆದಾರವನ್ನು ಇಟ್ಟು ಪೂಜಿಸಲಾಗುತ್ತದೆ. 16 ಎಳೆ ಗೆಜ್ಜೆ ವಸ್ತ್ರ, ಹದಿನಾರು ದೀಪದ ಆರತಿ,16 ಅರ್ಘ್ಯಗಳನ್ನು ಬಿಟ್ಟು ವ್ರತ ಸಂಪನ್ನ ಮಾಡಲಾಗುತ್ತದೆ 16 ನೈವೇದ್ಯ ,16ನಮಸ್ಕಾರಗಳು ದೇವಿಗೆ ಬಹಳ ಶ್ರೇಷ್ಠ .”ಶ್ರೀಷೋಡಷಾಕ್ಷರೀ ಮಂತ್ರ” ಎಂದು 16 ಅಕ್ಷರದ ಮಂತ್ರದಿಂದಲೂ ಅವಳು ಪ್ರತಿಪಾದ್ಯಳಾಗಿದ್ದಾಳೆ. 16 ವರ್ಷದ ಪೂಜೆ ಮಾಡಿದ ಮೇಲೆ ಉದ್ಯಾಪನೆ ಮಾಡುವ ಸಂಪ್ರದಾಯವು ಇದೆ.ಆದರೆ ಈ ವ್ರತವು ಆಜನ್ಮ ವ್ರತವೆಂದು, ಪ್ರತಿಯೊಬ್ಬರೂ ಜಾತಿ ಮತ ಭೇದವಿಲ್ಲದ ಹಾಗೆ ಆಚರಿಸುತ್ತಾರೆ. ತಮ್ಮ ಮನೆಯಲ್ಲಿ ಗೌರಿಯನ್ನು ಕೂಡಿಸುವ ಸಂಪ್ರದಾಯವಿಲ್ಲದಿದ್ದರೂ, ಗೌರಿ ವ್ರತವನ್ನು ಮಾಡುವವರ ಮನೆಗೆ ಹೋಗಿ ಪೂಜೆ ಮಾಡಿ ಬಾಗಿನ ಕೊಡುವ ಸಂಪ್ರದಾಯವಿದೆ.
ದಕ್ಷಿಣ ಕರ್ನಾಟಕದಲ್ಲಿ, ಸ್ವರ್ಣ ಗೌರಿ ವ್ರತ ಹಬ್ಬವಾಗಿ ಆಚರಿಸಲ್ಪಡುತ್ತದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಭಾರತದ ಅನೇಕ ಭಾಗಗಳಲ್ಲಿ, `ಹರ್ತಾಳ ಗೌರಿ’ ಅಥವಾ `ಹಠ್ ವ್ರತ್’ ಎಂದು ಆಚರಿಸುತ್ತಾರೆ
ಅವರು ಇಡೀ ದಿನ ಉಪವಾಸವಿದ್ದು ಗೌರಿ ದೇವಿಯನ್ನು ಸೌಮಾಂಗಲ್ಯಕ್ಕಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಅಂದು ನಿರ್ಜಲ ಉಪವಾಸ (ಎಂದರೆ ನೀರು ಕುಡಿಯದೆ) ಮಾಡುವವರನ್ನು ಕೂಡ ನಾವು ಲಕ್ನೋದಲ್ಲಿ ಇರುವಾಗ ನೋಡಿದ್ದೆವು. ಇಂತಹ ಶಕ್ತಿ ಸ್ವರೂಪಿಣಿಯಾದ ತಾಯಿಯು ನಮಗೆ ಒಳ್ಳೆಯ ಕೆಲಸಗಳನ್ನು ಮಾಡಲು ಶಕ್ತಿಯನ್ನು ತುಂಬಲಿ, ನಮ್ಮಲ್ಲಿ ಪ್ರೀತಿ ವಿಶ್ವಾಸ ಸಾಮರಸ್ಯ ಸಂತೋಷ ತುಂಬಿ ಸತ್ಪ್ರಜೆಗಳನ್ನು ಕರುಣಿಸಲಿ. ನಮ್ಮ ಸಂಸ್ಕೃತಿ ನಮ್ಮ ಧರ್ಮದ ವಿಶೇಷತೆಗಳನ್ನು ಅರಿಯುವ ಅರಿತು ಆಚರಿಸುವ, ಕ್ಷಯಿಸದಂತೆ ಕಾಪಾಡುವ ಗಟ್ಟಿ ಮನಸ್ಸು ಮತ್ತು ಹೆಮ್ಮೆ ಯ ಅಭಿಮಾನ ನಮ್ಮ ಮುಂದಿನ ಪೀಳಿಗೆಗಳಲ್ಲಿ ಉಳಿಸಿ ಬೆಳೆಸಲಿ. ಅಕ್ಕ ತಮ್ಮ ಅಣ್ಣ ತಂಗಿಯರ ಪ್ರೀತಿ ಹೆಚ್ಚಾಗಲಿ. ಎಲ್ಲ ಹೆಣ್ಣು ಮಕ್ಕಳಿಗೂ ಪ್ರೀತಿ ಪಡುವ ಸುಂದರ ತವರು ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.