ಭೃಂಗದ ಬೆನ್ನೇರಿ ಬಂದ ಶ್ರಾವಣ ಮಾಸ

ಭೃಂಗದ ಬೆನ್ನೇರಿ ಬಂದ ಶ್ರಾವಣ ಮಾಸ

ಆಷಾಢ ಮಾಸದ ಜಿಟಿಜಿಟಿ ಮಳೆಯಲ್ಲಿ ಮಿಂದೆದ್ದು, ಇದೀಗ ಎಲ್ಲೆಡೆ ಹಚ್ಚ ಹಸುರಿನ ಪರಿಸರದಲ್ಲಿ ಶ್ರಾವಣ ಮಾಸದ ಪರ್ವಕ್ಕೆ ಹೆಜ್ಜೆ ಇಟ್ಟಿದ್ದೇವೆ. ಮನುಷ್ಯ ಉತ್ಸವ ಪ್ರಿಯ, ಹಬ್ಬ ಹರಿದಿನ, ತೇರು ಜಾತ್ರೆಗಳನ್ನು ಇಷ್ಟಪಡುವ ಸಂಘಜೀವಿ. 

ತನ್ನ ಒಳಿತು, ಸುಖ, ಸಂತೋಷ, ಬದುಕಿನ ಬದಲಾವಣೆಗಾಗಿ ಆತ್ಮೀಯರು ಮತ್ತು ಸ್ನೇಹಿತರೊಂದಿಗೆ ಬೆರೆಯಲು ಹತ್ತಾರು ಹಬ್ಬಗಳನ್ನು ಆಚರಿಸಿಕೊಳ್ಳುತ್ತಾ ಬಂದಿದ್ದಾನೆ. ಅಂತಹ ಹಬ್ಬಗಳ ಪಂಕ್ತಿಯಲ್ಲಿ ನಾಗರಪಂಚಮಿಯೂ ಒಂದು.

ಕಣ್ಣಿಗೆ ಪಟ್ಟಿಕಟ್ಟಿ, ಕೈಹಿಡಿದು ನಾಲ್ಕು ಹೆಜ್ಜೆ ಮುನ್ನಡೆಸಿ ಕಾಲದ ಎದುರು ನಿಲ್ಲಿಸಿ ನೋಡು ಎಂದಾಗ ಶ್ರಾವಣ ಮಾಸದ ಸಿರಿ ಸೊಬಗು ನಮ್ಮೆದುರಿಗೆ ಬರುತ್ತದೆ. ಹಬ್ಬಗಳ ಸಾಮಾಜಿಕ ಹಿನ್ನೆಲೆಯನ್ನು ಚಿಂತಿಸಿದರೆ ಪ್ರಾರಂಭದ ಸ್ಥಿತಿಯಲ್ಲಿ ಇವು ಭಯ ನಿವಾರಣೆ ಮತ್ತು ಕೃತಜ್ಞತಾ ಸ್ಮರಣ ದ್ಯೋತಕವಾಗಿ ಆಚರಣೆಗೆ ಬಂದಿವೆ. ಭಾರತೀಯ ಸಂಸ್ಕೃತಿಯಲ್ಲಿ ಒಂದೊಂದು ಹಬ್ಬಕ್ಕೂ ಒಂದೊಂದು ಚಾರಿತ್ರಿಕ ಹಿನ್ನೆಲೆಯಿದೆ. ಅದರಂತೆಯೇ ಭಯಹುಟ್ಟಿಸುವ ಪ್ರಾಣಿಗಳಿಂದ ರಕ್ಷಣೆಯ ಸಂಕೇತವಾಗಿ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ ಎಂಬುದು ಚಾರಿತ್ರಿಕ ನಂಬಿಕೆ.

ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬವು ಆದಿಶೇಷನನ್ನು ಪೂಜಿಸುವ ಸಂಸ್ಕೃತಿಯ ಸಂಕೇತವಾಗಿಯೂ ಹಾಗೂ ಹೆಣ್ಣು ಮಕ್ಕಳಿಗೆ ತವರಿನ ಸವಿ ನೆನಪನ್ನು ಮೆಳೈಸುವ ಹಬ್ಬವೂ ಆಗಿದೆ. ಈ ಹಬ್ಬ ಬಂತೆಂದರೆ ಹೆಣ್ಣು ತಾನು ಹುಟ್ಟಿ, ಆಡಿ, ಬೆಳೆದ ತವರಿನ ಸಿರಿಯ ಕಡೆಗೆ ನೋಡುತ್ತಾ ಇರುತ್ತಾಳೆ. 

`ನಾಗರಪಂಚಮಿ ಹಬ್ಬ ಬಂದಿತು ಸನಿಹಕ್ಕೆ, ಅಣ್ಣ ಬರಲಿಲ್ಲ ಯಾಕ ಕರೆಯಾಕ’ ಎಂದು ಮನದಲ್ಲಿ ನೆನೆಯುತ್ತ ಇರುತ್ತಾಳೆ.

`ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ ಬಂತು ಶ್ರಾವಣ’ ಎಂದು ವರಕವಿ ಬೇಂದ್ರೆ ಶ್ರಾವಣ ಮಾಸದ ಸೊಗಸನ್ನು ಕುರಿತು ಹಾಡಿ ಸಾಹಿತ್ಯ ರಸಿಕರ ಮನಸ್ಸನ್ನು ಪುಳಕಗೊಳಿಸಿದ್ದಾರೆ. ವನ ವನಕ್ಕೂ ಹಸಿರಿನ ಬಾಸಿಂಗ ಕಟ್ಟಿಕೊಂಡು ಕಣ್ಮನ ತಣಿಸುವ ಶ್ರಾವಣ ಮಾಸವು ಕಾಲಗರ್ಭಕ್ಕೆ ಸಿಲುಕಿ ಪುನಃ ಪಂಚಮಿ ಸುಖವನ್ನು ನೀಡುತ್ತಲೇ ಸಾಗಿ ಈ ಮಧು ಮಾಸದ ಮಹತ್ವವನ್ನು ಸಾರುತ್ತಿದೆ.

ಈ ಹಬ್ಬಗಳು ಜನರಲ್ಲಿ ಉತ್ಸಾಹ ತುಂಬಿ ಹಳೆ ನೋವನ್ನು ಮರೆಸಿ ಸ್ನೇಹ, ಸಹೋದರತೆಯ ಬಾಂಧವ್ಯದ ಕೊಂಡಿ ಕಳಚದಂತೆ ಮಾಡಿ, ಸಾಮುದಾಯಿಕ ಮನರಂಜನೆ ಜತೆ ದೈವಭಕ್ತಿ, ಭಾವೈಕ್ಯತೆಯನ್ನು ಮೂಡಿಸಿ, ಜೀವನಕ್ಕೆ ನವಚೇತನ ತಂದು ಕೊಡುತ್ತದೆ. 

ಕಾಲ ಎಂಬ ಮಹಾಯಾತ್ರಿಕನಿಗೆ ಋತುಗಳ ಹೆಸರನ್ನಿಟ್ಟು, ಅದನ್ನು ತೊಟ್ಟಿಲೊಳಗಿಟ್ಟು ತೂಗಿ, ಜೋಗುಳ ಹಾಡಿ, ಮುದ್ದು ಕೈಗಳನ್ನು ಹಿಡಿದು ನಡಿಗೆ ಕಲಿಸಿ, ತಿದ್ದಿ, ಮೊದಲ ತೊದಲ ನುಡಿ ಕಲಿಸಿ ಮಾತು ನೀಡುವವರು ನಾವಾಗಬೇಕು. ಆದ್ದರಿಂದಲೇ `ಶ್ರಾವಣ ಮಾಸದಲ್ಲಿ ಉತ್ತಮ ಅಂಶಗಳನ್ನು ಶ್ರವಣ ಮಾಡೋಣ’ ಅವುಗಳ ಆಚರಣೆ ಹಿಂದಿರುವ ಆದರ್ಶಗಳಿಂದ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ.

– ಎಲ್.ಜಿ.ಮಧುಕುಮಾರ್, ಬಸವಾಪಟ್ಟಣ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಚನ್ನಗಿರಿ, 9448786664

error: Content is protected !!