ಮ್ಮೆ ಸಿರಿಗೆರೆಯಲ್ಲಿ ಮೈಸೂರು ಮಲ್ಲಿಗೆಯ ಕವಿ ಡಾ. ಕೆ.ಎಸ್. ನರಸಿಂಹ ಸ್ವಾಮಿಯವರಿಗೆ ಅಭಿನಂದನಾ ಸಮಾರಂಭ. ಕವಿಯನ್ನು ಕುರಿತು ಅಭಿ ನಂದನಾ ಭಾಷಣ ಮಾಡಲು ಬೆಂಗಳೂರಿನ ಮತ್ತೋರ್ವ ಹೆಸರಾಂತರು ಆಗಮಿಸಿದ್ದರು. ಅವರ ನೀರಸ ಅಭಿನಂದನಾ ಭಾಷಣ ಬಹುಪಾಲು ವಿದ್ಯಾರ್ಥಿಗಳೇ ಇದ್ದ ಸಭೆಯಲ್ಲಿ ಬೇಸರ, ತೂಕಡಿಕೆ ತರುವಂತಿತ್ತು. ಆಗ ಕಾರ್ಯಕ್ರಮ ನಿರೂಪಕನಾಗಿದ್ದ ನಾನು, ಆ ಭಾಷಣಕಾರರಿಗೆ ಸಮಯದ ಕೊರತೆಯನ್ನು ತಿಳಿಸಿ, ಮುಂದಿನ ಭಾಷಣಕ್ಕೆ ಮುಖ್ಯ ಅತಿಥಿಗಳನ್ನು ಆಹ್ವಾನಿಸಿದೆ.
ಆಗ ಇಡೀ ಸಭೆ ಚಿತ್ತಾಕರ್ಷಕವಾಗಿ ಕುಳಿತು ಕೇಳುವಂತೆ, ಕವಿ
ಕೆ.ಎಸ್.ನ. ಅವರ ಬದುಕು, ಬರಹ ಕುರಿತ ಮನಮುಟ್ಟವಂತೆ ಮಾತನಾಡಿದವರು ಡಾ. ಎಂ.ಜಿ. ಈಶ್ವರಪ್ಪ. ಹೀಗೆ ಯಾವುದೇ ಸಭೆ, ಸಮಾರಂಭ, ಉಪನ್ಯಾಸವಿರಲಿ ಅಲ್ಲಿ ಸ್ಫುಟವಾದ, ಅಚ್ಚುಕಟ್ಟಾದ, ನಿರರ್ಗಳವಾದ ವಿಷಯ ಮಂಡನೆ; ಕೇಳುವವರ ಆಸಕ್ತಿ ಹೆಚ್ಚಿಸುವಂತಹ, ಕುತೂಹಲ ಮೂಡಿಸುವ ಮಾಹಿತಿಪೂರ್ಣ ಮಾತುಗಾರಿಕೆ. ಹೆಚ್ಚು ಲಂಬಿಸದ, ಸಂದರ್ಭೋಚಿತವೂ, ಗಂಭೀರವೂ ಆದ ಉದಾಹರಣೆಗಳೊಂದಿಗಿನ ವಿದ್ವತ್ಪೂರ್ಣ ಉಪನ್ಯಾಸ. ಎಲ್ಲಿಯೂ ಉದ್ವೇಗ, ಆವೇಶಗಳಿಗೆ ಅವಕಾಶವಿಲ್ಲದ ಹಿತಮಿತವಾದ ಮಾತು ಈಶ್ವರಪ್ಪನವರದು.
ವಿಜ್ಞಾನ ಪದವಿ ಕಾಲೇಜಿನಲ್ಲಿ ಭಾಷಾ ವಿಷಯ ತರಗತಿಗಳೆಂದರೆ ಅಷ್ಟಕಷ್ಟೆ. ವಿಜ್ಞಾನದ ವಿದ್ಯಾರ್ಥಿಗಳನ್ನು ಭಾಷೆ, ಸಾಹಿತ್ಯದ ಕಡೆಗೆ ಒಲವು ಮೂಡಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ. ಆದರೆ ಈ ಮಾತಿಗೆ ಅಪವಾದದಂತಿರುವುದು ಈಶ್ವರಪ್ಪನವರ ಕನ್ನಡ ಭಾಷಾ ತರಗತಿಗಳು ಎಂದರೆ ಉತ್ಪ್ರೇಕ್ಷೆಯಾಗಲಾರದು. ಸೂಜಿಗಲ್ಲಿನಂತೆ ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸಿ, ಪಾಠ ಮಾಡುವ ಕಲೆಗಾರಿಕೆಯಿಂದ ಇವರು ಮನೆಮಾತಾಗಿರುವವರು.
ವಿದ್ವತ್ತಿನೊಂದಿಗೆ ವಿನಯ, ಅಧ್ಯಾಪನದೊಂದಿಗೆ ಅಧ್ಯಯನ, ಆಡಳಿತ ದೊಂದಿಗೆ ಸಾಂಸ್ಕೃತಿಕ ಚಿಂತನೆಗಳ ಮೊತ್ತದಂತಿರುವ ಈಶ್ವರಪ್ಪನವರು ದಾವಣಗೆರೆಯ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಪ್ರಧಾನ ಹೆಸರು. ಗುಣಮಟ್ಟದ ಕಾರ್ಯ ಯೋಜನೆಗಳನ್ನು ರೂಪಿಸುವಲ್ಲಿ ಸಿದ್ಧಹಸ್ತರು.
ವಿದ್ಯಾರ್ಥಿ ದೆಸೆಯಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ ಈಶ್ವರಪ್ಪನವರು ನಟನೆ ಮತ್ತು ನಿರ್ದೆಶನದಲ್ಲೂ ಸೈ ಎನಿಸಿಕೊಂಡವರು. ಅದಕ್ಕೆ ಇಂಬು ಕೊಟ್ಟದ್ದು ಕೇರಳದ ತ್ರಿಚೂರಿನ ಸ್ಕೂಲ್ ಆಫ್ ಡ್ರಾಮಾ ಮತ್ತು ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ ರಂಗಭೂಮಿಯ ತಲಸ್ಪರ್ಶಿ ಅಧ್ಯಯನ. ಅದರ ಪ್ರತಿಫಲವಾಗಿ ಮೆರವಣಿಗೆ, ಸೆಜುವಾನಿನ ಸಾದ್ವಿ, ಕೊಡೆಗಳು, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತಾನ ಕಬೀರ ಮುಂತಾದ ನಾಟಕಗಳಲ್ಲಿ ಅಭಿನಯ. ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳ ನಿರ್ದೇಶನ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಹೆಸರಾಂತ ರಂಗ ರಂಡ `ಪ್ರತಿಮಾ ಸಭಾ’ದ ಉಸ್ತುವಾರಿ. ಆ ಮೂಲಕ ದಾವಣಗೆರೆ ನಗರದಲ್ಲಿ ಹವ್ಯಾಸಿ ರಂಗಭೂಮಿಯ ಜೀವಂತಿಕೆ. ಜೊತೆಗೆ ಸಿದ್ಧ ಪ್ರಸಿದ್ಧರ ಸಂಗೀತ ಕಚೇರಿಗಳ ಆಯೋಜನೆ.
ಒಕ್ಕಲುತನದ ಮನೆತನದಿಂದ ಬಂದ ಈಶ್ವರಪ್ಪನವರಿಗೆ ಕೃಷಿ ಮತ್ತು ಜಾನಪದದಲ್ಲಿ ವಿಶೇಷ ಆಸಕ್ತಿ. ಸಮೃದ್ಧ ಗ್ರಾಮೀಣ ಬದುಕಿನ ಸವಿಯನ್ನು ಸವಿದವರು. ಜನಪದ ಸಂಸ್ಕೃತಿ ಕೇವಲ ಓದಿನ ಕಾರಣಕ್ಕೆ ಮಾತ್ರವಲ್ಲ; ಅನುಭವದ ಮೂಸೆಯಿಂದ ಬಂದಂತಹದ್ದು. ಒಂದು ರೀತಿಯಲ್ಲಿ ಕೃಷಿಯ ಆಚರಣೆಗಳು ಮತ್ತು ಜನಪದರ ನಂಬಿಕೆಗಳು ಸಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ `ಜಾನಪದ ವ್ಯವಸಾಯ’ ಎಂಬ ಮಹಾಪ್ರಬಂಧ ಕೇವಲ ಪದವಿಗಾಗಿ ರಚಿಸಿದ್ದಾಗದೇ, ಒಂದು ಕಾಲಘಟ್ಟದ ಕೃಷಿಕರ ಜೀವನ ವಿಧಾನ, ಕೃಷಿಯಲ್ಲಿ ನಂಬಿಕೆಗಳು, ಆಚರಣೆಗಳನ್ನು ಕುರಿತು ವಿವರವಾಗಿ ತಿಳಿ ಹೇಳುವ ಸಂಕಥನ ಎಂದರೆ ತಪ್ಪಾಗಲಾರದು.
ಹೀಗೆ ಜಾನಪದ, ರಂಗಭೂಮಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಅನುಭವ, ಪಾಂಡಿತ್ಯದಿಂದಾಗಿ ಹತ್ತಾರು ಮಹತ್ವದ ಸಾಹಿತ್ಯ ಕೃತಿಗಳ ಪ್ರಕಟಣೆ. ಜೊತೆಗೆ ಸಂಪಾದಕರಾಗಿ ಹಲವು ಮಹತ್ವದ ಕೃತಿಗಳು ಬೆಳಕು ಕಂಡಿವೆ. ಇವರ ಪ್ರತಿಭಾ ಸಂಪನ್ನತೆಗೆ ಸಂದ ಪ್ರಶಸ್ತಿ – ಪುರಸ್ಕಾರಗಳು ಸಹ ಗಣನೀಯವಾಗಿವೆ.
-ನಾಗರಾಜ ಸಿರಿಗೆರೆ, ಕನ್ನಡ ಅಧ್ಯಾಪಕ, ದಾವಣಗೆರೆ.