ನಗುಮೊಗದ, ಸರಳ ಸಜ್ಜನಿಕೆಯ, ಬಹುಮುಖ ವ್ಯಕ್ತಿತ್ವದ ಭಾವನಜೀವಿ ಡಾ. ಎಂ.ಜಿ. ಈಶ್ವರಪ್ಪನವರು. ಶಿವಮೊಗ್ಗ ತಾಲ್ಲೂಕು ಹಾಡೋನಹಳ್ಳಿಯ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಶ್ರೀಯುತರನ್ನು ನೋಡಿದಗಲೆಲ್ಲಾ ಏನೋ ಒಂದ ಸೆಳೆತ. ಅವರದ್ದು ಅಪ್ಪಟ ಗ್ರಾಮೀಣ ಬದುಕಿನ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಕ್ರಿಯಶೀಲ ಮನಸ್ಸು. ವಿದ್ಯಾರ್ಥಿ ದೆಸೆಯಲ್ಲೆ ಜಾನಪದ ಸಂಸ್ಕೃತಿಯನ್ನು ಮೈಗೊಡಿಸಿ ಕೊಂಡು, ಗ್ರಾಮೀಣ ರಂಗಭೂಮಿ ಸೆಳೆತಕ್ಕೆ ಒಳಗಾದವರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬೇಲೂರು ರಾಮಮೂರ್ತಿಯವರ `ಕಸ್ತೂರಿ’ ನಾಟಕದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಮುಂದೆ ಪದವಿ ವಿದ್ಯಾರ್ಥಿಗಳಿಗಾಗಿ ಲಂಕೇಶ್ವರ `ಈಡಿಪಸ್’ ನಾಟಕ ನಿರ್ದೇಶನದ ಜೊತೆಗೆ ಟೈರೀಶಿಯನ್ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಪಡೆದರು. ಮೈಸೂರಿನಲ್ಲಿ `ಸಮತೆಂತೋ’ ಹವ್ಯಾಸಿ ತಂಡದ ಒಡನಾಟದಿಂದಾಗಿ ರಂಗಭೂಮಿಯ ಅವರ ಹವ್ಯಾಸ ಮತ್ತಷ್ಟು ಚಿಗುರೊಡೆಯಿತು.
ಊರೆಲ್ಲ ನೆಂಟರು ಕೇರಿಯಲ್ಲವೂ ಬಳಗ
ಧರಣಿಯೇ ಕುಲದೈವವಾಗಿರಲು ಇದರಲ್ಲಿ
ಯಾರನ್ನು ಬಿಡಲಿ – ಸರ್ವಜ್ಞ
ಎಂಬಂತೆ ಎಲ್ಲರನ್ನೂ ಪ್ರೀತಿಸುತ್ತಾ ಸ್ನೇಹ ವಲಯವನ್ನು ಕಟ್ಟಿಕೊಂಡು, ಬದುಕು ತನಗಾಗಿ ಮಾತ್ರವಲ್ಲ, ಸಮಾಜದ ಒಳಿತಿಗಾಗಿ ಎಂದು ಭಾವಿಸಿದವರು ಈಶ್ವರಪ್ಪನವರು. ದಾವಣಗೆರೆ ರಂಗಭೂಮಿ ತವರು ನೆಲೆ. ಇಲ್ಲಿನ ಪ್ರತಿಮಾ ಸಭಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಹವ್ಯಾಸಿ ರಂಗಭೂಮಿಯನ್ನು ಗಟ್ಟಿಗೊಳಿಸಿದರು. ಇಲ್ಲಿನ ಡಿಆರ್‌ಎಂ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುವಾಗ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಹವ್ಯಾಸಿ ರಂಗಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡರು.
1979ರಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಕೇರಳದ ತ್ರಿಚೂರಿನಲ್ಲಿ ರಾಷ್ಟ್ರಮಟ್ಟದ ಕಾಲೇಜು ಅಧ್ಯಾಪಕರಿಗೆ ನಡೆದ ರಂಗಭೂಮಿ ನಟನೆ, ರಂಗ ನಿರ್ದೇಶನ, ರಂಗವಿನ್ಯಾಸ ಕುರಿತ ಎರಡು ತಿಂಗಳ ಶಿಬಿರದಲ್ಲಿ ತರಬೇತಿ ಹಾಗೂ ಅಲ್ಲಿನ ಕಲಾ ಮಂದಿರದಲ್ಲಿ ಚಂಪಾ ಅವರ `ಕೊಡೆಗಳು’ ನಾಟಕದಲ್ಲಿ ಪಾತ್ರವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಶಿಷ್ಯ ವೇತನದಿಂದ 1983ರಲ್ಲಿ ರಂಗದಿಗ್ಗಜ ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದ ಭೂಪಾಲ್‌ನ ಭಾರತ ಭವನ ಮತ್ತು ದೆಹಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಎರಡು ತಿಂಗಳು ರಂಗಭೂಮಿ ಅಧ್ಯಯನ ಮಾಡಿದರು.
ಪ್ರತಿಮಾ ಸಭಾದೊಂದಿಗೆ ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ, ಬೆಂಗಳೂರಿನ ಕಲಾಕ್ಷೇತ್ರ, ಸಾಣೇಹಳ್ಳಿಯ ಶಿವಸಂಚಾರಗಳ ಸಹಯೋಗದೊಂದಿಗೆ ವಿವಿಧ ನಾಟಕಗಳನ್ನು ಪ್ರದರ್ಶಿಸಿ ಸಮಾಜವನ್ನು ಎಚ್ಚರಿಸುವ, ವೈಚಾರಿಕ ಪ್ರಜ್ಞೆ ಮೂಡಿಸುವ, ಸಾಂಸ್ಕೃತಿಕ ಸಮಾಜವನ್ನು ಕಟ್ಟುವ ಮೂಲಕ ದಾವಣಗೆರೆಯಲ್ಲಿ ಪ್ರಬುದ್ಧ ಪ್ರೇಕ್ಷಕರನ್ನು ನಿರ್ಮಾಣ ಮಾಡಿದ ಕೀರ್ತಿ ಇವರದು. ಬೇಂದ್ರೆಯವರ ಜಾತ್ರೆ, ಸಾಯೋ ಆಟ, ಚಂಪಾ ಅವರ ಅಪ್ಪ, ಟಿಂಗರ ಬುಡ್ಡಣ್ಣ, ಕುಂಟ ಕುಂಟ ಕುರುವತ್ತಿ, ಲಂಕೇಶರ ಸಂಕ್ರಾಂತಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ದೊರೆಸ್ವಾಮಿಯವರ ನಾಗನಕತೆ, ಚದುರಂಗರ ಇಲಿಬೋನು. ಅರುಣ್ ಮಹೋಪಾಧ್ಯಾಯರ ಮಾರೀಚನ ಬಂಧುಗಳು, ಮಾಸೂರ್ ಅವರ ಏನು ಬೇಡಲಿ ನಿನ್ನ ಬಳಿಗೆ ಬಂದು ಮುಂತಾದ ನಾಟಕಗಳಲ್ಲಿ ನಟನೆ, ನಿರ್ದೇಶನ, ಸಂಘಟನೆಗಳ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಿಗಾಗಿ `ಮಧ್ಯಮ ವ್ಯಾಯೋಗ’ ನಾಟಕವನ್ನು ಮೂಡಲಪಾಯ ಶೈಲಿಯಲ್ಲಿ ನಿರ್ದೇಶನ ಮಾಡಿದ್ದು, ಅವರಿಗೆ ಜಾನಪದ ಬಗೆಗಿನ ಉತ್ಕಟತೆಯನ್ನು ತೋರಿಸುತ್ತದೆ.
ನೀನಾಸಂ ಹೆಗ್ಗೋಡು ಮತ್ತು ಪ್ರತಿಮಾ ಸಭಾದ ಸಂಯುಕ್ತಾಶ್ರಯದಲ್ಲಿ `ರಂಗಪಂಚಮಿ ಶಿಬಿರ’ವನ್ನು ದಾವಣಗೆರೆಯಲ್ಲಿ ಆಯೋಜಿಸಿ, ಆ ಮೂಲಕ ಪ್ರತಿಮಾ ಸಭಾಕ್ಕೆ ಬರ್ಟೋಲ್ಟ್ ಬ್ರೆಕ್ಟ್‌ರ ಸೆಜುವಾನಿನ ಸಾಧ್ವಿ, ನಗರಸಭಾ ಸದಸ್ಯರಿಗೆ, ಮ್ಯಾಕ್ಸಿಂಗಾರ್ಕಿಯ ತಾಯಿ, ಗ್ರಾಮಸ್ಥರಿಗೆ ಚೋರ ಚರಣದಾಸ, ಮಕ್ಕಳಿಗಾಗಿ ಆಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು ಹಾಗೂ ಹೆಡ್ಡಾಯಣ ನಾಟಕಗಳನ್ನು ಆಯೋಜಿಸಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ರಾಜ್ಯದ ವಿವಿದೆಡೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರಂಗ ತರಬೇತಿ ಶಿಬಿರಗಳನ್ನು ಆಯೋಜಿಸಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ರಂಗಭೂಮಿಯ ಪರಿಚಯ ಮಾಡಿಸಿದ್ದಾರೆ.
ನಾಡಿನ ಖ್ಯಾತ ರಂಗ ಕರ್ಮಿಗಳಾದ ಆರ್. ನಾಗೇಶ್, ಕಪ್ಪಣ್ಣ, ಸಿಜಿಕೆ ಚಂದ್ರಕುಮಾರ್ ಸಿಂಗ್, ಗುಡ್ಡಣ್ಣ, ಕೆ.ವಿ. ನಾಗರಾಜಮೂರ್ತಿ, ಜೆ. ಲೋಕೇಶ್, ಮೋಹನರಾಂ, ಬಸವಲಿಂಗಯ್ಯ ಮುಂತಾದವರ ಒಡನಾಟದಿಂದಾಗಿ ತಾಮ್ರ ಪತ್ರ, ಟಿಪಿಕಲ್ ಕೈಲಾಸಂ, ರಸಋಷಿ ಕುವೆಂಪು, ಎಲ್ಲಿಂದಲೋ ಬಂದವರು, ಸತ್ತವರ ನೆೇರಳು, ಅಸ್ಪೋಟ, ಸಂದರ್ಭ, ಒಡಲಾಳ, ಲಕ್ಷಾಪತಿ ರಾಜನ ಕತೆ, ಮುಂತಾದ ನಾಟಕಗಳ ಪ್ರದರ್ಶನವನ್ನು ದಾವಣಗೆರೆಯಲ್ಲಿ ಆಯೋಜಿಸಿ ಇಲ್ಲಿನ ಪ್ರೇಕ್ಷಕರನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಶ್ರೀಯುತರಿಗೆ ಸಲ್ಲುತ್ತದೆ.
ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಮೈಸೂರು ಮತ್ತು ಹಂಪಿ ವಿಶ್ವವಿದ್ಯಾಲಯಗಳ ಸೆನೆಟ್ ಸಿಂಡಿಕೇಟ್ ಸದಸ್ಯರಾಗಿ, ಪ್ರತಿಮಾ ಸಭಾದ ಸಕ್ರಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ದಶಕಗಳ ಕಾಲ ತಮ್ಮನ್ನು ತಾವು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಭೂಮಿ ಕುರಿತಂತೆ ವಿಶ್ವವಿದ್ಯಾಲಯಗಳು, ಆಕಾಡೆಮಿಗಳು, ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ವಿಚಾರ ಸಂಕಿರಣಗಳಲ್ಲಿ ಪ್ರಬುದ್ಧವಾಗಿ ವಿಚಾರಗಳನ್ನು ಮಂಡಿಸಿದ್ದಾರೆ.
ಮ್ಯಾಸಬೇಡರು, ಬೇಸಾಯ ಪದ್ಧತಿ, ಕೃಷಿ ಜಾನಪದ, ಹುನಗುಂದ ಬಾಬಣ್ಣ ಮೊದಲಾದ ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಶ್ರೀಯುತರು, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶ್ರೀಯುತರ ರಂಗಭೂಮಿ, ನಾಡು-ನುಡಿ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಸಲ್ಲಿಸಿದ ಕಾರ್ಯಗಳನ್ನು ಮನ್ನಿಸಿ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಮಹಲಿಂಗ ರಂಗ ಪ್ರಶಸ್ತಿ, ರಂಗಸಂಸ್ಥಾನ ಜಾನಪದ ಪ್ರಶಸ್ತಿ, ಕರ್ನಾಟಕ ನಾಟಕ ಆಕಾಡೆಮಿಯ ಫೆಲೋಷಿಪ್, ರಾಜ್ಯೋತ್ಸವ ಪ್ರಶಸ್ತಿ ಮುಖ್ಯವಾದವು.
ಪ್ರಸ್ತುತ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ, ಬಹುಮುಖ ವ್ಯಕ್ತಿತ್ವದ ಮತ್ತು ಜನಪದ ಸಂಸ್ಕೃತಿಯ ನೆಲೆಯಲ್ಲಿರುವ ಶ್ರೀಯುತರ ನಟನೆ, ನಿರ್ದೇಶನ, ಸಂಘಟನೆ, ಸಾಹಿತ್ಯ ಮೊದಲಾದ ರಂಗಚಟುವಟಿಕೆಗಳನ್ನು ಗಮನಿಸಿ ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿ ನೀಡಿ ಗೌರವಿಸಿದೆ.
ಸಾಂಸ್ಕೃತಿಕ ಕ್ಷೇತ್ರದ ಮೇರು ವ್ಯಕ್ಷಿತ್ವದ ಶ್ರೀಯುತರು ಯಾರಿಲ್ಲದ ಊರಿನಲ್ಲಿ ಏಕಾಂತ ನನಗಿರಲಿ ಯಾರಷ್ಟೇ ಹುಡುಕಿದರೂ ಆ ಊರು ಸಿಗದಿರಲಿ ಎಂದು ಭಾರದ ಲೋಕಕ್ಕೆ ತೆರಳಿರುವುದು ಸಾಂಸ್ಕೃತಿಕ ಕ್ಷೇತ್ರಕ್ಕೆ ಬರಸಿಡಿಲು ಬಡಿದಂತಾಗಿದೆ.
– ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ನಿಕಟಪೂರ್ವ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ದಾವಣಗೆರೆ.