`ಆಕಾಶಕ್ಕೆ ಏಣಿ’ – ವೈಶಿಷ್ಟ್ಯ ಪೂರ್ಣ ಕೃತಿ

`ಆಕಾಶಕ್ಕೆ ಏಣಿ’ – ವೈಶಿಷ್ಟ್ಯ ಪೂರ್ಣ ಕೃತಿ

`ಆಕಾಶಕ್ಕೆ ಏಣಿ' – ವೈಶಿಷ್ಟ್ಯ ಪೂರ್ಣ ಕೃತಿ - Janathavaniಒಬ್ಬ ಲೇಖಕ ದೀರ್ಘ ಕಾಲಾವಧಿಯಲ್ಲಿ ಬರೆದ ಸಾಂದರ್ಭಿಕ ಲೇಖನಗಳನ್ನು ಒಂದೆಡೆ ಸಂಕಲಿಸಿ, ಪ್ರಕಟಿಸುವ ಪರಿಪಾಠ ಎಲ್ಲಾ ಭಾಗಗಳಲ್ಲೂ ಕಂಡು ಬರುವ ವಿದ್ಯಮಾನ. ಕನ್ನಡದಲ್ಲಿ ಈ ಕೆಲಸ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಈ ಪ್ರಕಾರದಲ್ಲಿ ಪ್ರಕಟಗೊಂಡಿರುವ ಖ್ಯಾತ ನಾಮರ ಕೃತಿಗಳು ಅಸಂಖ್ಯಾತ. ಇವುಗಳ ಸಾಲಿಗೆ ಇದೀಗ ಸೇರ್ಪಡೆಗೊಳ್ಳುತ್ತಿರುವುದು ಹಿರಿಯ ಪತ್ರಕರ್ತ ವಿ. ಹನುಮಂತಪ್ಪನವರ ಕೃತಿ ‘ಆಕಾಶಕ್ಕೆ ಏಣಿ’. 1953ರ ಮೇ 29 ರಂದು ತೇನ್‌ಸಿಂಗ್ ಮತ್ತು ಹಿಲರಿ ವಿಶ್ವದ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ರೋಚಕ ವಿವರಗಳುಳ್ಳ ಲೇಖನದ ಶೀರ್ಷಿಕೆಯನ್ನೇ ಹನುಮಂತಪ್ಪನವರು ಕೃತಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕೃತಿಯ ಒಟ್ಟಾರೆ ಆಶಯವನ್ನೂ ಧ್ವನಿಸುವಂತಿದೆ. 

ಈ ಲೇಖನಗಳ ಕಾಲದ ಹರವು ದೊಡ್ಡದು. 1982 ರಿಂದ 2022 ರ ವರೆಗಿನ ನಲವತ್ತು ವರ್ಷಗಳಲ್ಲಿ ಲೇಖಕರು ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆ ಬರೆದ 37 ಲೇಖನಗಳು ಇದರಲ್ಲಿ ಒಟ್ಟುಗೂಡಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಈ ಪತ್ರಿಕಾ ಬರಹಗಳ ವೈವಿಧ್ಯತೆ ಬೆರಗುಗೊಳಿಸುವಂತಿದೆ. ಇಲ್ಲಿ ಹೈದರಾಬಾದ್‌ನ ಸಾಲಾರ್ ಜಂಗ್ ಮ್ಯೂಸಿಯಂ, ಸಂತೇಬೆನ್ನೂರು ಪುಷ್ಕರಣಿ, ಲಂಡನ್‌ನ ಆರ್ಬಿಟ್ ಹೌಸ್, ಭುವನಗಿರಿ ಮುಂತಾದವುಗಳ ಪರಿಚಯದ ಜೊತೆಗೆ ಎಸ್. ನಿಜಲಿಂಗಪ್ಪ, ಲೇಡಿ ಡಾನ್ ಜಿನಬಾಯಿ ಖಬ್ರಿ, ಸಿ.ಎನ್.ಕೆ. ಇತ್ಯಾದಿ ವ್ಯಕ್ತಿ ಚಿತ್ರಗಳೂ ಸ್ಕಾಟ್‌ಲ್ಯಾಂಡ್ ಯಾರ್ಡ್, ಇಂಟರ್‌ಪೋಲ್, ಡಾಬರ್ ಮುಂತಾದ ಸಂಸ್ಥೆಗಳ ವಿವರಗಳೂ ಇಲ್ಲಿ ಸಂಕಲಿತವಾಗಿವೆ. ಈಗಾಗಲೇ `ನನ್ನ ಕಣಗಲಕ್ಕೆ ಸಾಧಕರು’, `ಅಕ್ಷರ ಯೋಧ ರಾಮೋಜಿರಾವ್’, `ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ’ ಸೇರಿದಂತೆ ಹಲವು ಪ್ರಸಿದ್ಧ ಕೃತಿಗಳನ್ನು ಹೊರತಂದಿರುವ ಹನುಮಂತಪ್ಪನವರ ಕುಶಲ ಕಸುಬುದಾರಿಕೆ ಅವರ ಈ ಎಲ್ಲಾ ಲೇಖನಗಳಲ್ಲಿಯೂ ಎದ್ದು ಕಾಣುತ್ತದೆ. 

ದಾವಣಗೆರೆಯ ಅಪೂರ್ವ ಕ್ಯಾಕ್ಟಸ್-ನಾಣ್ಯ-ನೋಟು-ಅಂಚೆ ಚೀಟಿಗಳ ಭಂಡಾರ, ಅನಾಥ ಹೆಣ್ಣುಮಕ್ಕಳ ಆಸರೆ `ರಶ್ಮಿ’ ಮುಂತಾದವುಗಳ ಕುರಿತ ಉಪಯುಕ್ತ ಮಾಹಿತಿಗಳಲ್ಲದೆ, ಹುಟ್ಟಿದ ಹೆಣ್ಣು ಮಕ್ಕಳನ್ನು ಕೊಲ್ಲುವ ರಾಜಸ್ತಾನದ ದುಷ್ಟ ಕುಲಾಚಾರಗಳ ಕರುಣಾಜನಕ ಕತೆಯೂ ಇಲ್ಲಿ ಉಂಟು. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಐತಿಹಾಸಿಕ ಸ್ಥಳಗಳ ಪರಿಚಯದ ಜೊತೆಗೆ ಗೀತಗೋವಿಂದ ಜಯದೇವನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಕಡಕೋಳ ಮಡಿವಾಳಪ್ಪ ಮುಂತಾದವರ ಕುರಿತು ಇರುವ ನುಡಿ ಚಿತ್ರಗಳು ಗಮನ ಸೆಳೆಯುತ್ತವೆ. 

ಶತಮಾನದ ಹಿಂದಿನ ಒಂದು ಮಾಸಿಕ `ಕನ್ನಡನುಡಿಗನ್ನಡಿ’ಯಲ್ಲಿ ಲೇಖಕರು ಕನ್ನಡ ಪತ್ರಿಕೋದ್ಯಮದ ಆರಂಭಿಕ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಇದರಲ್ಲಿನ ಹಲವು ಸಂಗತಿಗಳು ಅತ್ಯಂತ ಕುತೂಹಲಕರವೂ, ಆಸಕ್ತಿದಾಯಕವೂ ಆಗಿವೆ. (ಬ್ರಿಟಿಷ್‌ ಚಕ್ರವರ್ತಿಯನ್ನು ಹೊಗಳುವ ಶ್ಲೋಕ, ಮೈಸೂರು ಅರಮನೆಗೆ ಬೆಂಕಿ, ಪತ್ರಿಕೆಯ ವಾಗ್ದಾನ, ಗಡಿಯಾರ ಕಂಪೆನಿಯ ಜಾಹೀರಾತು). 

‘ಸಿಯಾಚಿನ್: ಯೋಧರಿಗೆ ಪ್ರತಿದಿನ ಪುನರ್ಜನ್ಮ’ ಕೃತಿಯ ಮತ್ತೊಂದು ಗಮನಾರ್ಹ ಲೇಖನ. ಇದರಲ್ಲಿ ದೇಶದ ವಾಯುವ್ಯ ಗಡಿಯಲ್ಲಿ ಮೈನಸ್ ಅರವತ್ತು ಡಿಗ್ರಿಯ ನಡುಗಿಸುವ ತೀವ್ರ ಚಳಿಯಲ್ಲಿ ನಮ್ಮ ಸೈನಿಕರು ಅನುಭವಿಸುವ ಎದೆ ನಡುಗಿಸುವಂತಹ ಕಠಿಣ ದಿನಚರಿಯ ವಿವರಗಳಿವೆ. ಹನುಮಂತಪ್ಪನವರು ಇದರಲ್ಲಿ ಟೀ ತಯಾರಿ, ಶತ್ರುವಾಗುವ ವಾತಾವರಣ, ಉಸಿರಾಟದ ತೊಂದರೆ, ಹೆಲಿಕಾಪ್ಟರ್ ಇಳಿಯಲು ಬೋರ್ನ್‌ವಿಟಾ! ಮುಂತಾದವುಗಳನ್ನು ವಿವರಿಸಿರುವ ಪರಿ ವಿಶಿಷ್ಟ.

ಕುತೂಹಲ ತುಂಬಿದ ಈ ಲೇಖನಗಳ ವೈಶಿಷ್ಟ್ಯತೆ ಇರುವುದು ಅವುಗಳ ನಿಖರತೆ, ವಸ್ತು ನಿಷ್ಟತೆ, ವಿಷಯ ಸ್ಪಷ್ಟತೆ, ಸಂಕ್ಷಿಪ್ತತೆ ಮತ್ತು ಲವಲವಿಕೆಯ ಬರೆವಣಿಗೆಯಲ್ಲಿ. ಇವು ಪತ್ರಿಕಾ ಲೇಖನಗಳ ವಿಶಿಷ್ಟ ಗುಣಲಕ್ಷಣಗಳಲ್ಲವೇ? 

ಹನುಮಂತಪ್ಪನವರ ಪತ್ರಿಕಾರಂಗದ ಅನುಭವ, ಅಧ್ಯಯನ ಶೀಲತೆಗಳು ಅವರ ಈ ಲೇಖನಗಳಲ್ಲಿ ಢಾಳಾಗಿ ಎದ್ದು ಕಾಣುತ್ತವೆ. ಅವರು ಕೇವಲ ಪ್ರತ್ರಕರ್ತರಷ್ಟೇ ಆಗಿರದೆ, ಸಾಹಿತಿಯೂ ಆಗಿರುವುದರಿಂದ ಶುಷ್ಕ ವರದಿಗಳಾಗಬಹುದಾಗಿದ್ದ ಅವರ ಈ ಬರಹಗಳು ಸಾಹಿತ್ಯದ ಸ್ಪರ್ಶದಿಂದಾಗಿ ಸುಂದರವಾಗಿ ಕಂಗೊಳಿಸುತ್ತವೆ. 

ಉಪಯೋಗಿಸಿರುವ ಗುಣಮಟ್ಟದ ಚಿತ್ರಗಳು ಪುಸ್ತಕದ ಅಂದಚಂದವನ್ನು ಹೆಚ್ಚಿಸಿವೆ. ಇನ್ನೂ ಹೆಚ್ಚು ಗಮನ ಹರಿಸಿದ್ದರೆ, ಸುಂದರ ಮುಖದ ದೃಷ್ಟಿ ಬೊಟ್ಟಿನಂತೆ ಅಲ್ಲಲ್ಲಿ ಇಣುಕಿರುವ ಕೆಲವು ಮುದ್ರಣ ದೋಷಗಳನ್ನು ನಿವಾರಿಸಬಹುದಿತ್ತು. 

ಆಸಕ್ತ ಓದುಗರಿಗೆ ಮಾಹಿತಿ ಕಣಜವಾಗಿರುವ ಈ ಲೇಖನಗಳ ಮಾಹಿತಿ ಸಂಗ್ರಹಣೆ ಹಿಂದಿರುವ ಹನುಮಂತಪ್ಪನವರ ಶ್ರಮ ಪ್ರಶಂಸನೀಯ. ಈ ಲೇಖನಗಳನ್ನು ಅವರು ನಾಲ್ಕು ದಶಕಗಳ ನಂತರ ಬಯಲಾದ `ಅಕ್ಷರ ನಿಧಿ’ ಎಂದು ಕರೆದಿರುವುದೂ, ಬೆನ್ನುಡಿಯಲ್ಲಿ ಡಾ|| ಬಾಬು ಕೃಷ್ಣಮೂರ್ತಿ ಅವರು `ಇಲ್ಲಿನ ಲೇಖನಗಳು ಜ್ಞಾನದಾಹಿಗಳ ಹಸಿವನ್ನು ತಣಿಸುವ ಟಾನಿಕ್‍ನಂತಿವೆ’ ಎಂದು ಹೇಳಿರುವುದೂ ಉತ್ಪ್ರೇಕ್ಷೆಯ ಮಾತಲ್ಲ. 


– ಪ್ರೊ. ಎಸ್.ಬಿ. ರಂಗನಾಥ್, ನಿವೃತ್ತ ಪ್ರಾಂಶುಪಾಲರು, ದಾವಣಗೆರೆ.

error: Content is protected !!