ಅಕ್ಕಿ ರಾಜಕೀಯ : ಬಿಡ್ಡಿಂಗ್ ಪಕ್ಷಗಳದ್ದು, ಹೊರೆ ದೇಶದ್ದು

ಅಕ್ಕಿ ರಾಜಕೀಯ : ಬಿಡ್ಡಿಂಗ್ ಪಕ್ಷಗಳದ್ದು, ಹೊರೆ ದೇಶದ್ದು

ಛತ್ತೀಸ್‌ಘಡದಲ್ಲಿ ಭತ್ತ ಖರೀದಿಗೆ ಬಿಡ್ಡಿಂಗ್ ನಡೆಯುತ್ತಿದೆ. ಆದರೆ, ಈ ಖರೀದಿಯಲ್ಲಿ ತೊಡಗಿರುವುದು ವರ್ತಕರಲ್ಲ, ರಾಜಕೀಯ ಪಕ್ಷಗಳು. ಬಿಜೆಪಿ 3,100 ರೂ. ದರದಲ್ಲಿ ಕ್ವಿಂಟಾಲ್ ಭತ್ತ ಖರೀದಿಸುವುದಾಗಿ ಹೇಳಿದ್ದರೆ, ಕಾಂಗ್ರೆಸ್ ಪಕ್ಷ 3,200 ರೂ.ಗಳ ಭರವಸೆ ಘೋಷಿಸುತ್ತಿದೆ.

ಈ ನಡುವೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇನ್ನೂ ಐದು ವರ್ಷಗಳ ಕಾಲ ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಹೆಚ್ಚುವರಿ ಅಕ್ಕಿ ಉಚಿತವಾಗಿ ಕೊಡುವುದಾಗಿ ಘೋಷಿಸಿದ್ದಾರೆ. ಒಟ್ಟಾರೆ, ಚುನಾವಣಾ ಕಾಲದಲ್ಲಿ ಅಕ್ಕಿಯ ಮೇಲೆ ಆಸೆ, ಮತಗಳ ಮೇಲಿನ ಪ್ರೀತಿ ಎರಡೂ ಹೆಚ್ಚಾಗಿದೆ.

ಆದರೆ, ಈ ಅತಿ ಆಸೆ ಯಾವ ರೀತಿ ಗತಿ ಗೇಡು ಮಾಡಲಿದೆ ಎಂಬುದನ್ನು ಪಂಜಾಬ್ ಕಡೆ ಗಮನ ಹರಿಸಿದರೆ ಗೊತ್ತಾಗುತ್ತದೆ. ಹಸಿರು ಕ್ರಾಂತಿಯ ತಾಣ ಪಂಜಾಬ್, ಒಂದು ಕಾಲದಲ್ಲಿ ದೇಶದ ಅಭಿವೃದ್ಧಿಯ ಸಂಕೇತ ಪಂಜಾಬ್. ಈಗ ಆ ರಾಜ್ಯವನ್ನು ಶ್ರೀಲಂಕಾಗೆ ಹೋಲಿಸುವ ದುಸ್ಥಿತಿ ಬಂದಿದೆ.

ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಒಂದು ಅತಿಯಾದ ಭತ್ತ ಹಾಗೂ ಗೋಧಿ ಬೆಳೆ. ಸಾಮಾನ್ಯವಾಗಿ ಉತ್ತಮ ಇಳುವರಿ ಎಲ್ಲರಿಗೂ ಲಾಭ ತರುತ್ತದೆ. ಆದರೆ, ಹಸಿರು ಕ್ರಾಂತಿಯ ಹೆಸರಿನಲ್ಲಿ ಅತಿಯಾದ ಗೊಬ್ಬರ, ಕೀಟನಾಶಕ, ಅಂತರ್ಜಲ ಬಳಕೆಯು ಸಮಸ್ಯೆ ತಂದಿದೆ. ಬೆಳೆಗಾಗಿ ಸರ್ಕಾರಗಳು ಗೊಬ್ಬರ, ಅಂತರ್ಜಲ ಇತ್ಯಾದಿಗಳಿಗೆ ಸಬ್ಸಿಡಿ ನೀಡುವ ಜೊತೆಗೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುತ್ತಿವೆ. ಇದರಿಂದ ಸರ್ಕಾರ ಸಬ್ಸಿಡಿ ಹೊರೆಗೆ ಸಿಲುಕಿದೆ.

ಮತ್ತೊಂದೆಡೆ ಹಸಿರು ಕ್ರಾಂತಿಯ ಪರಾಕಾಷ್ಠೆಯ ಹಂತ ಈಗಾಗಲೇ ತಲುಪಿರುವ ಕಾರಣ, ರೈತರ ಆದಾಯ ಮೊದಲಿನ ರೀತಿಯಲ್ಲಿ ಹೆಚ್ಚಾಗುತ್ತಿಲ್ಲ. ಇದೆಲ್ಲದರ ಜೊತೆಗೆ ಪ್ರತಿ ಚಳಿಗಾಲದಲ್ಲಿ ರೈತರು ಕೂಳೆಯ ರಾಶಿಯನ್ನು ಸುಡುವುದರಿಂದ ದೆಹಲಿ ಜನತೆಗೆ ಹೊಗೆಯ ಬೋನಸ್ ಬೇರೆ ಸಿಗುತ್ತಿದೆ.

1966ರಿಂದ 2002-03ರವರೆಗೂ ಪಂಜಾಬ್ ದೇಶದ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯಗಳ ಸಾಲಿನಲ್ಲಿತ್ತು. ಆದರೆ, ನಂತರ ಹಿನ್ನಡೆ ಕಂಡಿದೆ. ರಾಜ್ಯದ ಸಾಲದ ಪ್ರಮಾಣ 3.27 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಪ್ರತಿ ವರ್ಷ ಹಳೆ ಸಾಲ ತೀರಿಸಲಿಕ್ಕೆ ಹೊಸ ಸಾಲ ತರುವ ಪರಿಸ್ಥಿತಿ ಇದೆ.

ಇಷ್ಟು ಸಾಲದು ಎಂಬಂತೆ, ಭತ್ತದ ಬೆಳೆಗಾಗಿ ಅಪಾರ ಪರಿಸರ ನಾಶವಾಗುತ್ತಿದೆ. ಮತ್ತೊಂದೆಡೆ, ಸಕ್ಕರೆ ಕಾಯಿಲೆ – ರಕ್ತದೊತ್ತಡ ಇರುವವರು ಅಕ್ಕಿ ಸೇವನೆ ಕಡಿಮೆ ಮಾಡುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಅರ್ಥಾತ್, ಪರಿಸರದಿಂದ ಹಿಡಿದು ಕೃಷಿ ಆರ್ಥಿಕತೆವರೆಗೆ ರಂಪಾಟ ಮಾಡಿ ಪಡೆದ ಅಕ್ಕಿ ಮನುಷ್ಯರ ಆರೋಗ್ಯಕ್ಕೂ ಹಿತವಲ್ಲ.

ಇಷ್ಟಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತ ಅಕ್ಕಿ ಜನರಿಗೆ ಕೊಡಲು ತರಾತುರಿಯಲ್ಲಿವೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಜಾರಿಗೆ ತರಲಿರುವ ಉಚಿತ ಅಕ್ಕಿ ಯೋಜನೆಯಿಂದ 5 ವರ್ಷಗಳಲ್ಲಿ ಲಕ್ಷ ಕೋಟಿ ರೂ.ಗಳ ಹೊರೆ ಯಾಗುವ ಅಂದಾಜಿದೆ. ಭಾರತ 19.44 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಅಂದಾಜಿದೆ. ಅಕ್ಕಿ ಈ ಅಪೌಷ್ಟಿಕತೆಗೆ ಯಾವುದೇ ಕಾರಣಕ್ಕೂ ಉತ್ತರ ಅಲ್ಲ.

ಆದರೆ, ಸರ್ಕಾರ ಭತ್ತದ ಬೆಳೆಗೆ ಪ್ರೋತ್ಸಾಹ ಕೊಡುತ್ತಾ ಹೋದಂತೆ ಉಳಿದ ಕಾಳು, ಬೇಳೆಗಳ ಇಳುವರಿ ಕಡಿಮೆಯಾಗಲಿದೆ. ಈಗಾಗಲೇ ಹೆಚ್ಚಾಗಿರುವ ಬೇಳೆಯ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಅಂತಿಮವಾಗಿ ಜನ ಆರೋಗ್ಯಕರ ಆಹಾರ ಪಡೆಯುವುದು ಇನ್ನಷ್ಟು ದುಬಾರಿಯಾಗಲಿದೆ.

ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾದರೆ, ಅದು ಮುಂದಿನ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತದೆ. ಒಂದೆಡೆ ಸಬ್ಸಿಡಿ ಹೊರೆ, ಇನ್ನೊಂದೆಡೆ ಅಪೌಷ್ಟಿಕತೆಯ ಹೊರೆ. ಮತ್ತೊಂದೆಡೆ ದುಬಾರಿಯಾಗುವ ಪೌಷ್ಟಿಕ ಆಹಾರ. ಈ ಎಲ್ಲಾ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಅಪಾಯವಿದೆ.

ಇಷ್ಟಾದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಸಮಸ್ಯೆಗಳತ್ತ ಗಮನ ಹರಿಸುವ ಸಾಧ್ಯತೆ ಕಡಿಮೆಯೇ. ತೀವ್ರ ಸಮಸ್ಯೆಯ ಸುಳಿಯಲ್ಲಿರುವ ಪಂಜಾಬ್ ಸರ್ಕಾರವೇ ಸುಧಾರಣೆಯ ಕಡೆ ತೆರಳುವ ಧೈರ್ಯ ತೋರುತ್ತಿಲ್ಲ. ಹೀಗಿರುವಾಗ ಉಳಿದ ರಾಜ್ಯಗಳೇಕೆ ತಲೆ ಕೆಡಿಸಿಕೊಳ್ಳಬೇಕು?

ಒಟ್ಟಾರೆ, ಭತ್ತಕ್ಕೆ ಈಗ ಕೇಂದ್ರದ ಅಚ್ಛೇ ದಿನ್ ಹಾಗೂ ರಾಜ್ಯಗಳ ಗ್ಯಾರಂಟಿಗಳು ಸೇರಿಕೊಳ್ಳುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ. ಹೊಟ್ಟೆ ತುಂಬ ಜನರಿಗೆ ಅನ್ನ ಸಿಗುವ ಸಾಧ್ಯತೆ ಇದೆಯಾದರೂ, ಆರೋಗ್ಯ ಭಾಗ್ಯ ಮಾತ್ರ ದುಬಾರಿಯಾಗಲಿದೆ.


– ಎಸ್.ಎ. ಶ್ರೀನಿವಾಸ್‌  ದಾವಣಗೆರೆ.

error: Content is protected !!