ಡಾ. ಪಿ.ಎಂ. ಅನುರಾಧ ಅವರ ಕವನ ಸಂಕಲನ ‘ಒಲೆಯೊಳಗಣ ಕಿಚ್ಚು’ ಇಂದು ಲೋಕಾರ್ಪಣೆ

ಡಾ. ಪಿ.ಎಂ. ಅನುರಾಧ ಅವರ ಕವನ ಸಂಕಲನ  ‘ಒಲೆಯೊಳಗಣ ಕಿಚ್ಚು’ ಇಂದು ಲೋಕಾರ್ಪಣೆ

ಡಾ. ಪಿ.ಎಂ. ಅನುರಾಧ ಅವರ ಕವನ ಸಂಕಲನ 'ಒಲೆಯೊಳಗಣ ಕಿಚ್ಚು' ಇಂದು ಲೋಕಾರ್ಪಣೆ - Janathavaniಭಾರತೀಯ ಪರಂಪರೆಯಲ್ಲಿ ಅಕ್ಷರ ಕಲಿಸಿ, ಬದುಕಿನ ಬೆಳಕಿಗೆ ಜ್ಞಾನಧಾರೆ ಎರೆಯುವ ಗುರುವಿಗೆ ಅತ್ಯುತ್ಕೃಷ್ಟವಾದ ಸ್ಥಾನವಿದೆ. ಆ ಸ್ಥಾನ-ಗೌರವವನ್ನು ಶಿಷ್ಯರು ಪ್ರದಾನ ಮಾಡುತ್ತಾರೆ. ಹೀಗೆ ಗೌರವದ ಸ್ಥಾನವನ್ನು ದಾವಣಗೆರೆ ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ರಾದ ಡಾ. ಪಿ.ಎಂ. ಅನುರಾಧ ಅವರು ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎನ್ನುವುದು ಪ್ರಶಂಸನೀಯ. ಸತತ 35 ವರ್ಷಗಳಿಂದ  ವಿದ್ಯಾರ್ಥಿನಿಯರಲ್ಲಿ ಆಂಗ್ಲ ಭಾಷೆ ಮತ್ತು  ಸಾಹಿತ್ಯದ ಒಲವು-ಒಳ ನೋಟಗಳನ್ನು, ಗಟ್ಟಿಗೊಳಿಸುತ್ತಾ ಶಿಷ್ಯ ಕೋಟಿಗೆ  `ಅಚ್ಚುಮೆಚ್ಚಿನ ಅನು ಮ್ಯಾಮ್’ ಎನಿಸಿಕೊಂಡಿದ್ದಾರೆ. ಅವರ ತರಗತಿಗಳೆಂದರೆ ನವರಸ ಬೆರೆತ ಜ್ಞಾನ ಖನಿಜ, ಆಂಗ್ಲಭಾಷೆ ಅಧ್ಯಾಪಕಿಯಾಗಿದ್ದರೂ ಅವರಿಗಿದ್ದ ಕನ್ನಡ ಸಾಹಿತ್ಯದ ತಲಸ್ಪರ್ಶಿ ಓದು ಮತ್ತು ವಿಮರ್ಶಾ ನೆಲೆ ಎಂತಹವರನ್ನೂ ಬೆರಗುಗೊಳಿಸುವಂತಹದ್ದು. ಮಾತು ತುಸು ಕಡಿಮೆ ಎನಿಸಿದರೂ ಅವರ ಕೆಲವೇ ಕೆಲವು ನುಡಿಗಳು ಗಂಭೀರವೂ, ವಿಚಾರ ಯೋಗ್ಯವೂ, ಅರ್ಥಪೂರ್ಣವೂ ಆಗಿದ್ದು, ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. 

ಕನ್ನಡ ಮತ್ತು ಆಂಗ್ಲ ಭಾಷೆಗಳ ಮೇಲೆ ಸಶಕ್ತ ಹಿಡಿತವಿಟ್ಟುಕೊಂಡಿರುವ ಇವರು 2014ರಲ್ಲಿ `The Mythical world of Dr. Chandrashekhar Kambar: A study of his major plays’ ಎಂಬ ವಿಷಯದ ಅಡಿಯಲ್ಲಿ ಮಹಾಪ್ರಬಂಧ ಸಲ್ಲಿಸಿ ಪಿ.ಹೆಚ್‌ಡಿ. ಪದವಿಯನ್ನು ಪಡೆದರು. ಈ ಮಹಾಪ್ರಬಂಧದ ರಚನೆ ಇವರ ರಂಗ ಚಟುವಟಿಕೆಗಳಿಗೆ ಮತ್ತಷ್ಟು ಅರ್ಥ, ಶಕ್ತಿ ಮತ್ತು ವ್ಯಾಪ್ತಿಯನ್ನು ನೀಡುವಲ್ಲಿ ಸಹಕಾರಿಯಾಯಿತು. 

ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಕಬ್ಬಿಣದ ಕಡಲೆಯಾದ ಇಂಗ್ಲಿಷ್ ಭಾಷೆಯನ್ನು ಕಲಿಸಲು ವಿಶೇಷ ಸಂವಹನ ಕೌಶಲ್ಯ ತರಬೇತಿ ಶಿಬಿರಗಳನ್ನು, ಕಾರ್ಯಾಗಾರಗಳನ್ನು, ವಿಚಾರ ಸಂಕಿರಣಗಳನ್ನು, ವಿಶೇಷ ಉಪನ್ಯಾಸಗಳನ್ನು ಮತ್ತು ಸಮ್ಮೇಳನಗಳನ್ನು ಆಯೋಜಿಸುತ್ತಾ ವಿದ್ಯಾರ್ಥಿನಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿನೂತನ ಕ್ರಿಯಾಶೀಲ ಯೋಜನೆಗಳಿಂದ ಅನೇಕ ವಿದ್ಯಾರ್ಥಿನಿಯರು ತಮ್ಮ ಬದುಕು ಮತ್ತು ವೃತ್ತಿ ಜೀವನವನ್ನು ಸುಂದರವಾಗಿ ರೂಪಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸು ವುದಷ್ಟೇ ಅಲ್ಲದೆ, ಹಲವಾರು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ ಮಂಡಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕ ಪರೀಕ್ಷಾ ಮಂಡಳಿ ಮತ್ತು ಸ್ನಾತಕ ಅಧ್ಯಯನ ಮಂಡಳಿಯ ಸದಸ್ಯರಾಗಿ, ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥರಾಗಿ ಐದು(5) ವರ್ಷಗಳ ಎರಡು(2) ಅವಧಿಗೆ `NAAC Coordinator’  ಆಗಿ ಅಪೂರ್ವ ಸೇವೆ ಸಲ್ಲಿಸಿದ್ದಾರೆ.

ಒಬ್ಬ ಶಿಕ್ಷಕನ ಜವಾಬ್ದಾರಿ ತರಗತಿಯ ಪಾಠಕ್ಕಷ್ಟೇ ಸೀಮಿತವಾಗಿರಬಾರದು; ಅದು ಸಮಾಜದ ಮುಖ್ಯವಾಹಿನಿಗೂ ಅನ್ವಯಗೊಂಡಿರಬೇಕು ಎಂಬುದನ್ನು ಡಾ. ಅನುರಾಧ. ಪಿ.ಎಂ. ರವರಿಂದ ನಾವೆಲ್ಲಾ ಕಲಿಯಬೇಕಾಗಿದೆ. ದಾವಣಗೆರೆಯ ಸಾಂಸ್ಕೃತಿಕ ವಲಯದಲ್ಲಿ, ಅದರಲ್ಲೂ ಬಹುಮುಖ್ಯವಾಗಿ ಸ್ತ್ರೀವಾದಿ ಚಳವಳಿಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಮಹಿಳಾ ಸಬಲೀಕರಣವನ್ನು ಸಾಕ್ಷಾತ್ಕರಿಸುವಲ್ಲಿ ಮುಖ್ಯಧ್ವನಿಯಾಗಿ ನಿಂತವರಾಗಿದ್ದಾರೆ. ಸಾಹಿತ್ಯ-ಸಂಸ್ಕೃತಿ-ರಂಗಭೂಮಿ-ಸಮಾಜ ಹೀಗೆ ವಿವಿಧ ರಂಗಗಳಲ್ಲಿ ವಿಶೇಷವಾದ, ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ನಗರದ ವನಿತಾ ಸಮಾಜದ ಭೂಮಿಕಾ ವನಿತಾ ರಂಗವೇದಿಕೆಯ ಅಧ್ಯಕ್ಷರಾಗಿ ಅನೇಕ ರಂಗ ಚಟುವಟಿಕೆಗಳನ್ನು ಜನಮುಖಿಯಾಗಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಹಲವಾರು ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಾ ಹತ್ತಾರು ರಂಗ ಶಿಬಿರಗಳನ್ನು ಏರ್ಪಡಿಸುತ್ತಾ ಹಲವು ನಾಟಕಗಳಲ್ಲಿ ತಾವೇ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಾ ನಗರದ ರಂಗ ಸಹೃದಯರ ಮನ ಗೆದ್ದಿದಾರೆ. ಇವರ ಮುಖ್ಯ ಭೂಮಿಕೆಯ `ರೆಕ್ಕೆ ಕಟ್ಟುವಿರಾ?’ ನಾಟಕ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನಗಳನ್ನು ಪಡೆದಿರುವುದು ಒಂದು ನಿದರ್ಶನ.

ಪ್ರಸ್ತುತ ಇವರ ತುಂಬು ಬದುಕಿನ ಅನೇಕ ದಿವ್ಯಾನುಭವಗಳ ಕಾವ್ಯಾಭಿವ್ಯಕ್ತಿಯಾಗಿ `ಒಲೆಯೊಳಗಣ ಕಿಚ್ಚು’ ಕವನ ಸಂಕಲನ ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಅರ್ಪಣೆಗೊಳ್ಳಲು ಸಜ್ಜಾಗಿದೆ. 50 ಕವನಗಳನ್ನೊ ಳಗೊಂಡ ಈ ಕೃತಿಯ ಕೇಂದ್ರ ಬಿಂದು ಹೆಣ್ಣಾದರೂ, ಬದುಕಿನ ಅನೇಕ ಮನೋವ್ಯಾಪಾರಗಳನ್ನು ಬಿಂಬಿಸುವ ಕವಿತೆಗಳು ಹಲವಿವೆ. ದೇಹ-ಮನಸ್ಸಿನ ಸಂವಾದಕ್ಕೆ ಧ್ವನಿಯಾದ ಪದ್ಯಗಳು ಒಂದೆಡೆಯಾದರೆ, ಸಾಮಾಜಿಕ ಧಾರ್ಮಿಕ ಮೌಢ್ಯಗಳನ್ನು, ಕಟ್ಟುಪಾಡು ಗಳನ್ನು ಟೀಕಿಸುವ ಕವಿತೆಗಳು ಇನ್ನೊಂದೆಡೆ ಓದುಗರಿಗೆ

ಪ್ರಾಪ್ತವಾಗುತ್ತವೆ. ಇದರೊಟ್ಟಿಗೆ ಪರಿಸರ ಪ್ರಜ್ಞೆ, ನಿಸರ್ಗದ ಅನನ್ಯತೆಯನ್ನು ಬಿಂಬಿಸುವ ಕವನಗಳು ಓದುಗರ ಕಣ್ತೆರೆಸುತ್ತವೆ. ರಾಜಕೀಯ ಮತ್ತು ಸಾಮಾಜಿಕ ತಲ್ಲಣಗಳಿಗೆ ಕನ್ನಡಿಯಾಗುವ ಹಲವು ಕವನಗಳು ಓದುಗರ ವಿಚಾರ ಲಹರಿಗೆ ರಹದಾರಿಯಾಗುತ್ತವೆ.

ಈ ಸಂಕಲನದ ಕವನಗಳು ಲೋಕಾನುಭವದ ಮೂಸೆಯಲ್ಲಿ ಹಸನಾಗಿ ಪಕ್ವವಾಗಿ ಹೊರಬಂದಿರುವುದು ಓದುಗರ ಅನುಭವಕ್ಕೆ ದಕ್ಕುತ್ತವೆ. ವಿಘಟನೆಗಳ ಮಧ್ಯದಲ್ಲಿ ಛಿದ್ರವಾಗಿರುವ ಮನಸ್ಸುಗಳ ನಡುವೆ ಸೇತುವೆ ಕಟ್ಟುವ ಕೆಲಸವನ್ನು ಇಲ್ಲಿನ ಕೆಲವು ಕವನಗಳು ಮಾಡುತ್ತವೆ. ಎಂದೆನಿಸುತ್ತದೆ. ಕಾವ್ಯದ ಗುರಿ ಪರಿವರ್ತನೆಯಡೆಗೆ ಇರಬೇಕು ಎಂಬ ನಮ್ಮ ಹಿರಿಯ ಕವಿಗಳ ಆಶಯ ಇಲ್ಲಿ ಸಾಕಾರಗೊಂಡಂತೆ ಭಾಸವಾಗುತ್ತದೆ. ಹಾಡಿಸಿಕೊಳ್ಳುವ ಗುಣದಿಂದ ತುಸು ದೂರವೇ ಉಳಿದ ಇವರ ವಿಭಿನ್ನವಾದ ಕಾವ್ಯ ಶೈಲಿ, ವಿಚಾರವಂತಿಕೆಯ ಮತ್ತು ವಿಡಂಬನೆಯ ಸೂತ್ರ ಅಳವಡಿಸಿಕೊಂಡಂತಿವೆ. ಅಷ್ಟೊಂದು ಕ್ಲಿಷ್ಟಕರವಲ್ಲದ ಭಾಷಾ ಬಳಕೆ, ಪದಕಟ್ಟು, ಓದುಗರನ್ನು ಸೆಳೆಯುವ ಸರಳ-ಸಹಜ ಸುಂದರ ಭಾಷಾ ಲಾಲಿತ್ಯ ಇಲ್ಲಿದೆ. ಹಾಗಾಗಿ ಇಲ್ಲಿನ ಕವನಗಳು ಸಹೃದಯರ ಮನಸ್ಸಿಗೆ ಬೇಗನೆ ನಾಟುತ್ತವೆ. ಕವನ ಸಂಕಲನದ ಶೀರ್ಷಿಕೆಯು ಹೆಣ್ಣಿನ ಹಾಗೂ ಹಲವು ವಿಷಯಗಳ ಅನಂತ ಒಳನೋಟಗಳನ್ನು ನೀಡುತ್ತದೆ. ಕವಿ ಮನಸ್ಸಿನ ಓದುಗರಲ್ಲಿ ಕಿಂಚಿತ್ತಾದರೂ ಕಿಚ್ಚನ್ನು ಹೊತ್ತಿಸುವಲ್ಲಿ ಈ ಕವನಗಳು ಗೆಲ್ಲುತ್ತವೆ ಎಂದು ಹೇಳುತ್ತಾ ಡಾ.ಅನುರಾಧ ಪಿ.ಎಂ. ರವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.


– ಡಾ. ರಣಧೀರ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎ.ವಿ.ಕೆ.  ಕಾಲೇಜು, ದಾವಣಗೆರೆ.

error: Content is protected !!