ನಿಮ್ಮ ಆರೋಗ್ಯದ ಸಮಸ್ಯೆಗೆ ನೀವೇ ಸ್ಪಂದಿಸಿ !

ನಿಮ್ಮ ಆರೋಗ್ಯದ ಸಮಸ್ಯೆಗೆ ನೀವೇ ಸ್ಪಂದಿಸಿ !

ಪ್ರತಿ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನಾಚರಣೆಯನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಸ‌ರ್ ಫ್ರೆಡಿರಿಕ್‌ ಬ್ಯಾಂಟಿಂಗ್ ಅವರ ಜನ್ಮ ದಿನ. 1922 ರಲ್ಲಿ ಸರ್ ಫ್ರೆಡಿರಿಕ್‌ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್ ರವರು ಇನ್ಸುಲಿನ್ ಕಂಡುಹಿಡಿದರು. ಇನ್ಸುಲಿನ್ ಔಷಧಿ ಬಳಕೆಗೆ ಬಂದು ನೂರು ವರ್ಷ ತುಂಬಿದೆ. ಅಂತರರಾಷ್ಟ್ರೀಯ ಡಯಾಬಿಟಿಸ್ ಫೆಡರೇಶನ್ (IDF) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಸಹಯೋಗದಲ್ಲಿ 1991ರಲ್ಲಿ ವಿಶ್ವ ಮಧುಮೇಹದ ಬಗ್ಗೆ ಅರಿವು ಮೂಡಿಸಲು ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಿತು. ಇದರ ಉದ್ದೇಶ ಮಧುಮೇಹದಿಂದ ಉಂಟಾಗುವ ತೊಂದರೆಗಳು ಹೆಚ್ಚಾದ್ದರಿಂದ ಅವುಗಳನ್ನು ನಿಯಂತ್ರಿಸುವ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವುದು. ವಿಶ್ವಸಂಸ್ಥೆಯ ನಿರ್ಣಯದಿಂದ 2009 ರಿಂದ ಈ ದಿನಾಚರಣೆಯು ಅಧಿಕೃತವಾಯಿತು.

ಪ್ರತಿ ವರ್ಷವೂ ವಿಶ್ವ ಮಧುಮೇಹ ದಿನಾಚರಣೆ ಒಂದು ಸೂಕ್ತವಾದ ಘೋಷಣೆ ಮೇಲೆ ಕೇಂದ್ರೀಕರಿಸುತ್ತದೆ. 2021 ರಿಂದ 2023ರ ವರೆಗೆ `Access to diabetes care’ ಆಗಿತ್ತು. ಈ ವರ್ಷದ ಘೋಷಣೆ `Know your risk know your response’ `ನಿಮಗೆ ಆಗಬಹುದಾದ ಆಗಿರುವ ತೊಂದರೆಗಳು, ಅದಕ್ಕೆ ನಿಮ್ಮ ಪ್ರತಿಕ್ರಿಯೆ’.

ಪ್ರಪಂಚದಾದ್ಯಂತ ಪ್ರತಿ 10 ವಯಸ್ಕರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ ಇರುವುದು ಕಂಡು ಬಂದಿದೆ. ಇದರಲ್ಲಿ ಶೇಕಡ 90% ಜನರಲ್ಲಿ ಸಕ್ಕರೆ ಕಾಯಿಲೆ ನಮೂನೆ ಎರಡು ಇರುತ್ತದೆ (type 2 diabetes). ಹಾಗೂ ಇದರಲ್ಲಿ ಸುಮಾರು ಅರ್ಧ ಭಾಗದವರಿಗೆ ಸಕ್ಕರೆ ಕಾಯಿಲೆ ಇರುವುದು ಗೊತ್ತಿರುವುದಿಲ್ಲ. ಆದ್ದರಿಂದ ಅನುಮಾನ ಬಂದಾಗ ಸಕ್ಕರೆ ಕಾಯಿಲೆ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಮತ್ತು ಇದರಿಂದ ಮುಂದೆ ಆಗುವ ಅನೇಕ ತೊಂದ ರೆಗಳನ್ನು ತಡೆಗಟ್ಟುವುದು ಅಥವಾ ಆಗಿರುವ ಪರಿಣಾಮಗಳನ್ನು ನಿವಾರಿಸಬಹುದು. ಈ ನಿಟ್ಟಿನಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸುವುದರಿಂದ ಸಾಧ್ಯವಾಗಬಹುದು.

ಆರಂಭಿಕ ಹಂತದಲ್ಲಿ ಸಕ್ಕರೆ ಕಾಯಿಲೆ ಇರುವುದನ್ನು ದೃಢಪಡಿಸಿದರೆ ಮುಂದೆ ಬರುಬಹುದಾದ ಅನಗತ್ಯ ತೊಡಕುಗಳನ್ನು ನಿವಾರಿಸಬಹುದು ಅಥವಾ ಅವುಗಳ ಹೆಚ್ಚದಂತೆ ಎಚ್ಚರವಹಿಸಬಹುದು. ವೈದ್ಯರ ಚಿಕಿತ್ಸೆ ಮತ್ತು ಸಲಹೆಗಳನ್ನು ಅನುಸರಿಸುವುದರಿಂದ ಸಂಭವಿಸಬಹುದಾದ ತೊಡಕುಗಳನ್ನು ನಿವಾರಿಸಲೂ ಬಹುದು.

ಸಾಮಾನ್ಯವಾಗಿ ಕಂಡುಬರುವ ತಡೆಯಬಹುದಾದ ತೊಡಕುಗಳು ಯಾವುವು ಅಂದರೆ ದೃಷ್ಟಿ ತೊಂದರೆ, ಹೃದಯದ ರಕ್ತನಾಳಗಳ ತೊಂದರೆ, ಮೂತ್ರಪಿಂಡ ಕಾಯಿಲೆ, ನರಗಳ ಹಾನಿ ಅಲ್ಲದೆ ಗರ್ಭಾವಸ್ಥೆಯಲ್ಲಿ ಉಂಟಾಗುವ ತೊಂದರೆಗಳು ಕೆಲವು ಉದಾಹರಣೆಗಳು. ಇವುಗಳಿಂದ ಕಾಯಿಲೆಯುಳ್ಳ ವ್ಯಕ್ತಿಗಳ ಜೀವನ ಶೈಲಿಯ ಗುಣಮಟ್ಟವನ್ನು (Quality of life) ಹೆಚ್ಚಿಸಬಹುದು. ಈ ದಿಕ್ಕಿನಲ್ಲಿ ವೈದ್ಯರು ಶುಶ್ರೂಷಕರು, ವೈದ್ಯಕೀಯ ಸಮಾಲೋಚನೆಗಾರರು, ಮಾನಸಿಕ ಸಲಹೆಗಾರರು ಅಲ್ಲದೆ ಕುಟುಂಬದವರ ಭಾಗಿತ್ವ, ಇತ್ಯಾದಿ ಬಹಳ ಅನುಕೂಲಕರ.

ಸಕ್ಕರೆ ಕಾಯಿಲೆ ಬರುವ ಅಪಾಯದಲ್ಲಿರುವ ಜನರಿಗೆ ಪ್ರಮುಖ ಸಂದೇಶಗಳೇನೆಂದರೆ :

* ಮಧುಮೇಹ ಯಾರಲ್ಲಾದರೂ ಕಂಡು ಬರಬಹುದು. ಅವಕಾಶ ಸಿಕ್ಕಲ್ಲಿ ಪರೀಕ್ಷೆ ಮಾಡಿಸುವುದು ಸೂಕ್ತ

* ಸಕ್ಕರೆ ಕಾಯಿಲೆಗೆ ಯಾವುದೇ ತರಹ ರೋಗಗಳ ಲಕ್ಷಣಗಳು ಕಾಣದೇ ಇರಬಹುದು. ಸಕ್ಕರೆ ಕಾಯಿಲೆ ಬಂದು ಹಲವಾರು

* ವರ್ಷ ಆದ ನಂತರ ಸಕ್ಕರೆ ಕಾಯಿಲೆಯ ಬಗ್ಗೆ ಪತ್ತೆ ಹಚ್ಚುವುದು ಸಾಮಾನ್ಯ

* ಸಕ್ಕರೆ ಕಾಯಿಲೆ ಮೊದಲ ಬಾರಿಗೆ ಕಂಡು ಹಿಡಿದಾಗಲೇ ಕೆಲವು ತೊಡಕುಗಳು ಇರಬಹುದು

* ಪ್ರತಿಯೊಬ್ಬರ ಅಪಾಯವನ್ನು ಕಂಡುಹಿಡಿಯಲು ಅಂತರರಾಷ್ಟ್ರೀಯ ಡಯಾಬಿಟೀಸ್ ಫೆಡರೇಶನ್ ಅವರು ಡಯಾಬಿಟೀಸ್ ರಿಸ್ಕ್ ಅಸೆಸ್ಟೆಂಟ್ ಟೂಲ್ ಸಹಾಯದಿಂದ ಸಕ್ಕರೆ ಕಾಯಿಲೆಯಿಂದ ಬರುವ ಅಪಾಯ ತಿಳಿದುಕೊಳ್ಳಬಹುದು.

ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪ್ರಮುಖ ಸಂದೇಶಗಳು:

* ಸೂಕ್ತವಾದ ಚಿಕಿತ್ಸೆ ಮತ್ತು ಸ್ವಯಂ ನಿರ್ವಹಣೆಯಿಂದ ಮಾತ್ರ ಸಕ್ಕರೆ ಕಾಯಿಲೆಯಿಂದಾಗುವ ಗಂಭೀರ ಮತ್ತು ಮಾರಣಾಂತಿಕ ತೊಡಕುಗಳನ್ನು ತಡೆಗಟ್ಟಬಹುದು

* ಸಕ್ಕರೆ ಕಾಯಿಲೆಯಿಂದ ಆಗುವ ತೊಡಕುಗಳನ್ನು ಸೂಕ್ತವಾದ ಚಿಕಿತ್ಸೆ ಸಕ್ಕರೆ ಅಂಶದ ಉಸ್ತುವಾರಿ ಹಾಗೂ ಮಾನಸಿಕ ಬೆಂಬಲದಿಂದ ಕಾಯಿಲೆಯನ್ನು ಗೆಲ್ಲಬಹುದು

ಆರೋಗ್ಯ ವೃತ್ತಿಪರರು ಮತ್ತು ನೀತಿ ನಿರೂಪಕರಿಗೆ ಪ್ರಮುಖ ಸಂದೇಶಗಳು :

* ಸಕ್ಕರೆ ಕಾಯಿಲೆ ಮಾರಣಾಂತಿಕ ರೋಗ ಅದು ಎಲ್ಲಾ ವಯಸ್ಸಿನವರಿಗೂ ತೊಡಕು ಉಂಟುಮಾಡುತ್ತದೆ

* ಸಕ್ಕರೆ ಕಾಯಿಲೆಯ ಚಿಕಿತ್ಸೆ ಮತ್ತು ನಿರ್ವಹಣೆಯೂ ವೈಯಕ್ತಿಕ ಹಾಗೂ ರಾಷ್ಟ್ರೀಯ ಆರ್ಥಿಕ ಹೊರೆ

* ಸಕ್ಕರೆ ಕಾಯಿಲೆ ಸಂಬಂಧಿತ ತೊಡಕುಗಳ ತಪಾಸಣೆಗೆ ವೆಚ್ಚ ಹೆಚ್ಚೇನಿಲ್ಲ

ಯುನಿವರ್ಸಲ್ ಹೆಲ್ತ್ ಕವರೇಜ್ ಅನ್ನು ಸಾಧಿಸುವುದು ಮಧುಮೇಹ ಸಂಬಂಧಿತ ತೊಡಕು ಗಳನ್ನು ವಿಳಂಬಗೊಳಿಸಲು, ತಡೆಗ ಟ್ಟಲು ಮತ್ತು ಆರೋಗ್ಯ ವ್ಯವಸ್ಥೆಗಳ ಸುಸ್ಥಿರತೆಯನ್ನು ಖಚಿತಪಡಿಸಿ ಕೊಳ್ಳುವುದು ಪ್ರಾಮುಖ್ಯವಾಗಿದೆ.


ನಿಮ್ಮ ಆರೋಗ್ಯದ ಸಮಸ್ಯೆಗೆ ನೀವೇ ಸ್ಪಂದಿಸಿ ! - Janathavaniಡಾ. ವರುಣ್‌ಚಂದ್ರ ಆಲೂರು
ಎಂಡಿ., ಡಿಎಂ ಎಂಡೋಕ್ರೈನಾಲಜಿಸ್ಟ್, ದಾವಣಗೆರೆ.

error: Content is protected !!