ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆ ಆಗಬಾರದು

ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆ ಆಗಬಾರದು

ಮಹಾಶರಣ ಮಾಗನೂರು ಬಸಪ್ಪನವರ 28ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಇಂದು

ಕಾಲ ಮೇಲೆ ಕೈಯ್ಯನೂರಿ ಕೋಲು ಹಿಡಿಯುವ ಮುನ್ನ ಮುಪ್ಪಿನಿಂದ ಒಪ್ಪ ಅಳಿಯುವ ಮುನ್ನ ಎಂಬ ಜಗಜ್ಯೋತಿ ಬಸವೇಶ್ವರರ ನುಡಿಯಂತೆ ಗುರು ಲಿಂಗ ಜಂಗಮ ಪ್ರೇಮಿಯಾಗಿ ತನು ಮನ ಧನವನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ ತಮ್ಮ ಜೀವಿತಾವಧಿಯಲ್ಲಿ ಸಾಧಿಸಿಕೊಂಡ ಮಹಾಶರಣ ಮಾಗನೂರು ಬಸಪ್ಪನವರು ಸರಳರೆಂದು, ಸಜ್ಜನರೆಂದು, ಕಾಯಕ ದಾಸೋಹಿ ಗಳಾಗಿ ಸಾರ್ವಜನಿಕ ಜೀವನವನ್ನು ಹಸನಾಗಿ ಬಾಳಿ ಜೀವಿಸಿ ಹೆಸರಾದವರು. 

ಗಾಂಧಿ ತತ್ವದಂತೆ `ಸರಳ ಜೀವನ, ಉದಾತ್ತ ಚಿಂತನೆ’ ಎಂಬ ಮಾತಿನಂತೆ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಾಳಿದವರು. ಬಡತನದಲ್ಲಿ ಹುಟ್ಟಿ ಕಷ್ಟ, ಸಮಸ್ಯೆಗಳಲ್ಲಿ ಬೆಳೆದು ಬಾಲ್ಯದಲ್ಲಿಯೇ ತಂದೆ-ತಾಯಿಯವರನ್ನು ಕಳೆದುಕೊಂಡು ಅನಾಥರಾಗಿ ಒಪ್ಪತ್ತಿನ ಕೂಳಿಗೆ ಬರಿಗಾಲು, ಬರಿಗೈಯಲ್ಲಿ ದಾವಣಗೆರೆಗೆ ಬಂದು ಕೆಲವೇ ವರ್ಷಗಳಲ್ಲಿ ಅಂಜದೆ ,ಅಳುಕದೆ ಕಷ್ಟ ನಿಷ್ಠೂರಗಳಿಗೆ ಎದೆಗುಂದದೆ, ಕಾಯಕದಲ್ಲಿಯೇ ಕೈಲಾಸ ಕಂಡ ಈ ಸಂಸ್ಕಾರವಂತರಿಗೆ ಅವರ ಪ್ರಾಮಾಣಿಕತೆ, ನಿಷ್ಠೆ , ಶಿಸ್ತು, ಆತ್ಮವಿಶ್ವಾಸ, ದೇವರಲ್ಲಿ ಅಚಲವಾದ ನಂಬಿಕೆ, ದೃಢ ಸಂಕಲ್ಪ, ದಾನ ಗುಣ ಎಂಬ ಸಪ್ತ ಮೌಲ್ಯಗಳು ಅವರ ಬದುಕಿನ ಸಾಧನೆಯ ಕಾಮನಬಿಲ್ಲುಗಳಾದವು. 

ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ ಪ್ರತಿ ಹಂತದಲ್ಲೂ ತಮ್ಮ ಬುದ್ಧಿಶಕ್ತಿಯನ್ನು ಉಪ ಯೋಗಿಸಿ ಎಲ್ಲ ವರ್ಗದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಮಾಗಿದ ಹಣ್ಣಾಗಿ ಸ್ವಾದ ಉಣ ಬಡಿಸಿದ ಶರಣ ಮಾಗನೂರು ಬಸಪ್ಪನವರ ನೆನಪು ಪ್ರಾಥಃಸ್ಮರಣೀಯ ವಾದದ್ದು. ಲಿಂಗ ಪೂಜೆ ಜಂಗಮ ದಾಸೋಹ ಇವೆರಡು ಪರಿಕಲ್ಪನೆಗಳು ವ್ಯಕ್ತಿ ಕಲ್ಯಾಣ ಮತ್ತು ಲೋಕ ಕಲ್ಯಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಲಿಂಗ ಪೂಜೆಯಿಂದ ಆತ್ಮೋದ್ಧಾರ ಮಾಡಿಕೊಳ್ಳಬೇಕು. 

ಜಂಗಮ ದಾಸೋಹದ ಮೂಲಕ ಆತ್ಮೋದ್ಧಾರದ ಶಕ್ತಿಯನ್ನು ಲೋಕಕಲ್ಯಾಣಕ್ಕೆ ಬಳಸಬೇಕು. ಅದಕ್ಕಾಗಿಯೇ ಬಸವಣ್ಣನವರು ಎನ್ನ ಲಿಂಗವೆಸನಿ ಜಂಗಮ ಪ್ರೇಮಿ ಎಂದೆನಿಸಯ್ಯ  ಎಂದು ಪ್ರಾರ್ಥಿಸುತ್ತಾರೆ. ಹೀಗೆ ಲಿಂಗವೇ ಜಂಗಮ ಪ್ರೇಮಿಯಾದ ಶರಣ ಮಾಗನೂರು ಬಸಪ್ಪನವರು ಆರೂಢ ದಾಸೋಹಿ, ಧರ್ಮ ಚಿಂತಾಮಣಿ, ಅನುಪಮ ದಾನಿ ಎಂದೇ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ಬಸವಾದಿ ಶಿವಶರಣರ ತತ್ವಗಳಂತೆ ಬದುಕಿ ತೋರಿಸಿದವರು. ಸಿರಿಗೆರೆ ತರಳುಬಾಳು ಜಗದ್ಗುರು ಬೃಹನ್ಮಠದ ಹಿರಿಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆದು ಜಾತ್ಯತೀತವಾಗಿ ದಾವಣಗೆರೆಯ ಎಲ್ಲಾ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಅಭ್ಯುದಯಕ್ಕೆ ನೆರವಾದವರು. 

ಈಗ ದಾವಣಗೆರೆಯಲ್ಲಿ ಇರುವ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳ ಸ್ಥಾಪನೆಯಲ್ಲಿ ಮಾಗನೂರು ಬಸಪ್ಪನವರ ಶ್ರಮ ಅವಿಸ್ಮರಣೀಯ. ಒಳ ಹೊರಗೊಂದಾದ, ಶರಣರಂತೆ ಬಾಳಿದ ಬಸಪ್ಪನವರು ತಮ್ಮ ಆತ್ಮಕಥೆಯಲ್ಲಿ ಯಾವ ಮುಚ್ಚು ಮರೆ ಇಲ್ಲದೆ ತಮ್ಮ ಬದುಕಿನ ಸಂಗತಿಗಳನ್ನು ದಾಖಲಿಸಿದ್ದಾರೆ. ಹೀಗೆ ತನ್ನನ್ನು ಸಮಾಜದ ಎದುರಿಗೆ ತೆರೆದುಕೊಳ್ಳಲು ಅಪಾರ ಎದೆಗಾರಿಕೆ ಮತ್ತು ನೈತಿಕತೆಬೇಕು. ನೈತಿಕ ಮಾರ್ಗದಲ್ಲಿ ನಡೆದು ಶ್ರೀಮಂತರಾಗ ಬಹುದು ಎಂದು ತೋರಿಸಿಕೊಟ್ಟದ್ದಲ್ಲದೆ ಮಾನವೀಯ ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ಸರ್ವತಾ ಅನುಕರಣೀಯ.

ಈ ಭೂಮಿಯಲ್ಲಿ ಸರಿಸುಮಾರು 95 ವರ್ಷಗಳು ಬೆಳಗಿದಂತಹ ಪುಣ್ಯಾತ್ಮ. ಇಂತಹ `ಬಹುಜನ ಹಿತಾಯ ಬಹುಜನ ಸುಖಾಯ’ಕ್ಕೆ ತನ್ನ ಬೆಳಕನ್ನು ಹರಿಸಿದ ಒಂದು ದಿವ್ಯ ಆತ್ಮ ಜ್ಯೋತಿ ಎಂದರೆ ತಪ್ಪಾಗಲಾರದು. ಜಗದ ಬದುಕಿನ ಆರಂಭದಿಂದ ಹಲವಾರು ಲೌಕಿಕ ಅಡೆ-ತಡೆಗಳ ಮಧ್ಯ ಸಂಕಲ್ಪ ವಿಕಲ್ಪಗಳಿಂದ ಕೂಡಿದ ವಿವಿಧ ಮನೋಭಾವದ ಜನರೊಡನೆ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಮಹಾನ್ ಚೇತನ. ಒಬ್ಬ ವ್ಯಕ್ತಿ ಸಾಧಾರಣ ಪರಿಸ್ಥಿತಿಯಿಂದ ಒಂದು ಅಸಾಧಾರಣ ಶಕ್ತಿಯಾಗಿ ಬೆಳೆದು ಹೆಮ್ಮರವಾದ ಉದಾಹರಣೆಗೆ ಇವರ ಜೀವನ ಕಳಸ ಪ್ರಾಯ ವಾಗಿದೆ. ತಮ್ಮ ಇಡೀ ಜೀವಿತಾವಧಿಯಲ್ಲಿ ಪಾದರಸದಂತೆ ಲವಲವಿಕೆಯಿಂದ ಸಮಾಜಮುಖಿ ಯಾಗಿ ಜನಸಾಮಾನ್ಯರ ಏಳಿಗೆಗೆ ದುಡಿದು ಎಲ್ಲಾ ಜಾತಿ ಮತದವರಿಗೂ ಸಮಾನ ಮಾನ್ಯತೆ ಯನ್ನು ಕಲ್ಪಿಸಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಅವರವರ ಸಂಪ್ರದಾಯಗಳನ್ನು ಗೌರವಿಸುತ್ತಾ ಕೇವಲ ಸಮಾಜಕ್ಕೆ ದುಡಿದ ವ್ಯಕ್ತಿತ್ವ ಇವರದು. ಇವರ ಸೇವೆಯ ಪ್ರಕಾಶಮಾನವಾದ ಕೆಲಸಗಳು ಈಗಲೂ ದಾವಣಗೆರೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಚ್ಚ ಹಸಿರಾಗಿ ಬೆಳಗುತ್ತಿವೆ. ಈ ರೀತಿಯ ದಿವ್ಯಾತ್ಮ ಬಾಳಿ ಬೆಳಗಿದ ಭೂಮಿ ಇದಾಗಿದೆ. ಅವರ ಪುಣ್ಯಸ್ಮರಣೆಯ ಈ ದಿನದಂದು ಅವರ ಸ್ಮರಣೆಯಲ್ಲಿ ಹತ್ತಾರು ಇನ್ನೂ ಒಳ್ಳೊಳ್ಳೆಯ  ಕೆಲಸಗಳು ಈ ನಾಡಿನಲ್ಲಿ ನಡೆಯುವಂತಾಗಲಿ. ಇಂತಹ ಶರಣರು ಮತ್ತೆ ಮತ್ತೆ ನಮ್ಮ ನಾಡಿನಲ್ಲಿ ಹುಟ್ಟುವಂತಾಗಲಿ .

ದೇವನಗರಿ ಎಂಬ ಪ್ರಣತೆಯಲ್ಲಿ 

ಕಾಯಕನಿಷ್ಠೆ ಎಂಬ ತೈಲವ ನೆರೆದು ಶಿಸ್ತು ಎಂಬ ಬತ್ತಿಗೆ

ಮಾಗನೂರು ಬಸಪ್ಪನವರೆಂಬ ಜ್ಯೋತಿಯ ಹೊತ್ತಿಸಲು

ತೊಳಗಿ ಬೆಳಗಿ ನಂದಾದೀಪವಾಗಿ ಈಗಲೂ ಉರಿಯುತ್ತಿರುವ ಬಸಪ್ಪನವರ ಬದುಕು ಸರ್ವರಿಗೂ ಆದರ್ಶಪ್ರಾಯ, ಅನುಕರಣೀಯ, ಅಭಿನಂದನಾರ್ಹ.

(ಶರಣ ಸಂಸ್ಕೃತಿಯಲ್ಲಿ ಬದುಕಿ, ಶರಣ ಸಂಸ್ಕೃತಿಯನ್ನು ಉಳಿಸೋಣ, ಬೆಳೆಸೋಣ,  ರಕ್ಷಿಸೋಣ.)


ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆ ಆಗಬಾರದು - Janathavani – ಡಾ. ಅನಿತಾ ಹೆಚ್. ದೊಡ್ಡಗೌಡರ್, ಸಹಾಯಕ ಪ್ರಾಧ್ಯಾಪಕರು, ಶ್ರೀಮತಿ ‌ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯ, ದಾವಣಗೆರೆ. 99021 98655.

error: Content is protected !!