ಜೈಲಿಗೆ ಹೋಗದ ಪ್ರಭಾವಿಗಳು, ಹೊರ ಬರದ ಬುಡಕಟ್ಟು ಜನರು…

ಜೈಲಿಗೆ ಹೋಗದ ಪ್ರಭಾವಿಗಳು, ಹೊರ ಬರದ ಬುಡಕಟ್ಟು ಜನರು…

ಕಳೆದ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ್ದೇವೆ. ಆದರೆ, ಯಾರಾದರೂ, ಈ ತಿಂಗಳಲ್ಲಿ `ಸಾಮಾಜಿಕ ನ್ಯಾಯ ಸಪ್ತಾಹ’ ಹಾಗೂ `ಸಾಮಾಜಿಕ ನ್ಯಾಯ ಪಾಕ್ಷಿಕ’ ಆಚರಿಸಿದ್ದೀರಾ? ಆಚರಿಸಿಲ್ಲವೇ? ಪರವಾಗಿಲ್ಲ ಬಿಡಿ. ಈ ಸಪ್ತಾಹ ಹಾಗೂ ಪಾಕ್ಷಿಕ ಆಚರಿಸಬೇಕೆಂದು ಕರೆ ನೀಡಿದವರಿಗೇ ಈ ಬಗ್ಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. 

2018ರಲ್ಲಿ ಪರಿಶಿಷ್ಟ ಜಾತಿ – ಪಂಗಡಗಳವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಕೆಲ ಅಂಶಗಳನ್ನು ನ್ಯಾಯಾಲಯದ ಆದೇಶದ ಮೂಲಕ ಸಡಿಲಿಸಲಾಗಿತ್ತು. ಇದು ದೇಶಾದ್ಯಂತ ಪರಿಶಿಷ್ಟರ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ನಂತರ ಮೋದಿ ಸರ್ಕಾರ ಕಾಯ್ದೆಯನ್ನು ಮತ್ತೆ ಕಠಿಣಗೊಳಿಸುವ ಕ್ರಮ ತೆಗೆದುಕೊಂಡಿತ್ತು. ಇದೇ ತಿಂಗಳಲ್ಲಿ ಒ.ಬಿ.ಸಿ. ಆಯೋಗದ ಮಸೂದೆಯನ್ನೂ ಜಾರಿಗೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ  `ಸಾಮಾಜಿಕ ನ್ಯಾಯ ಸಪ್ತಾಹ’ ಹಾಗೂ `ಸಾಮಾಜಿಕ ನ್ಯಾಯ ಪಾಕ್ಷಿಕ’ ಆಚರಿಸಲು ಮೋದಿ ಕರೆ ನೀಡಿದ್ದರು.

ಆದರೆ, ಅದೇ ವರ್ಷದಲ್ಲಿ ನಡೆದ ಕೆಲ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಮುಖಭಂಗ ಕಂಡಿತ್ತು. ಅದಾದ ನಂತರ `ಸಾಮಾಜಿಕ ನ್ಯಾಯ’ದ ಸಂಭ್ರಮಾಚರಣೆಯ ಮಾತನ್ನು ನಾನಂತೂ ಮತ್ತೆ ಕೇಳಿಲ್ಲ.

ಇದೆಲ್ಲಾ ಈಗ ಪ್ರಸ್ತಾಪಿಸಲು ಕಾರಣ ಏನೆಂದರೆ, ಇಬ್ಬರು ಸಚಿವರು, ಒಬ್ಬ ಶಾಸಕರು ಹಾಗೂ ಚಿತ್ರನಟರೊಬ್ಬರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು ಇತ್ತೀಚಿಗೆ ಸುದ್ದಿಯಾಗಿತ್ತು. ಇವರಾರನ್ನೂ ಬಂಧಿಸಿಲ್ಲ. ಬಂಧಿಸಬೇಕಿತ್ತು ಎಂದು ನಾನೇನೂ ಹೇಳು ತ್ತಲೂ ಇಲ್ಲ. ಆದರೆ, ಇದೇ ಮಾನದಂಡ ಇತರೆ ಸಾಮಾನ್ಯರಿಗೂ ಅನ್ವಯವಾಗುತ್ತದೆಯೇ?

ಗಾದೆ ಮಾತೊಂದನ್ನು ಆಡಿದ ನಟನೊಬ್ಬನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾದಾಗ ಸಾಮಾಜಿಕ ನ್ಯಾಯದ ಪರ ಕೆಲ ಸಚಿವರು ಸಾಲಾಗಿ ಹೇಳಿಕೆ ನೀಡಿದ್ದರು. ಅದೇ ಮೊನ್ನೆ ಸಚಿವರೊಬ್ಬರ ವಿರುದ್ಧ ಪ್ರಕರಣ ದಾಖಲಾದಾಗ ಉಪ ಮುಖ್ಯಮಂತ್ರಿಗಳೇ ಆರೋಪಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!

ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ, ಎಸ್ ಸಿ /ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ 60 ದಿನಗಳಲ್ಲಿ ಆರೋಪ ಪಟ್ಟಿ ಹಾಗೂ 90 ದಿನಗಳಲ್ಲಿ ಚಾರ್ಜ್‌ಶೀಟ್‌ ಹಾಕದಿದ್ದರೆ, ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತದೆ. ಹೀಗೆ ಜಾಮೀನು ಪಡೆದವರಿಗೆ ಕಾನೂನಿನ ಭಯ ಇರುತ್ತದೆಯೇ? ಎಂದು ಪ್ರಶ್ನಿಸಿದ್ದರು. 

ಆದರೆ, ಪ್ರಭಾವಿಗಳು, ಉನ್ನತ ನ್ಯಾಯಾಲಯ ತಲುಪುವ ಸಾಮರ್ಥ್ಯ ಉಳ್ಳವರು, ಜಾತಿ ನಿಂದನಾ ಕಾಯ್ದೆಯ ಬಂಧನದಿಂದ ರಕ್ಷಣೆ ಪಡೆಯಬಹುದು ಎನ್ನುವುದಾದರೆ, ಈ ಕಾಯ್ದೆಯ ನೈಜ ಅರ್ಥವಾದರೂ ಏನು?

ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಬಡವರು ಸಣ್ಣ ಪುಟ್ಟ ತಪ್ಪುಗಳಿಗಾಗಿ ಜೈಲಿನಲ್ಲಿ ಕೊಳೆಯುತ್ತಿರುವ ವಿಷಯ ಪ್ರಸ್ತಾಪಿಸಿದ್ದರು. ಕಪಾಳಕ್ಕೆ ಭಾರಿಸಿದ ಬಡವ ಜಾಮೀನು ಪಡೆಯುವ ಸಾಮರ್ಥ್ಯ ಇಲ್ಲದೇ ಜೈಲಿನಲ್ಲಿದ್ದಾನೆ, ಕೊಲೆ ಮಾಡಿದ ಪ್ರಭಾವಿ ಹೊರಗಡೆ ಅಲೆದಾಡಿಕೊಂಡಿದ್ದಾನೆ ಎಂದು ವಿಷಾದಿಸಿದ್ದರು.

ಕಾನೂನು, ಹಕ್ಕುಗಳ ತಿಳುವಳಿಕೆ ಇಲ್ಲದ ಬುಡಕಟ್ಟು ಜನರು, ತಮಗೆ ಜಾಮೀನು ದೊರೆತರೂ ಜೈಲಿನಿಂದ ಹೊರ ಬರಲು ಸಾಧ್ಯವಾಗದ ಎಷ್ಟೋ ಪ್ರಕರಣಗಳಿವೆ. 30 ಸಾವಿರ ರೂ.ಗಳ ಶ್ಯೂರಿಟಿ ಬಾಂಡ್ ನೀಡಲು ಸಾಧ್ಯವಾಗದೇ ವ್ಯಕ್ತಿಯೋರ್ವ 22 ವರ್ಷಗಳ ಕಾಲ ವಿಚಾರಣೆ ಇಲ್ಲದೇ ನ್ಯಾಯಾಂಗ ಕಸ್ಟಡಿಯಲ್ಲಿದ್ದ ಪ್ರಕರಣವೂ ವರದಿಯಾಗಿತ್ತು.

ಈ ರೀತಿಯ ಸಮಸ್ಯೆ ಎದುರಿಸುವ ಸಾಕಷ್ಟು ಜನರು ಬುಡಕಟ್ಟು ಹಾಗೂ ಪರಿಶಿಷ್ಟರು ಎಂದು ಹಲವಾರು ವರದಿಗಳು ತಿಳಿಸಿವೆ. ಈಗ, ಇವರಿಗೆ ನೆರವಾಗಲು ವ್ಯವಸ್ಥೆ ರೂಪಿಸಬೇಕೇ ಅಥವಾ ಇವರನ್ನು ಬಂಧಿಸಿಟ್ಟುಕೊಳ್ಳಲು ಹೊಸ ಹೊಸ ಜೈಲುಗಳನ್ನು ಕಟ್ಟಬೇಕೇ?

ಗಾದೆ ಮಾತೊಂದು ಆಡಿದ ಕಾರಣಕ್ಕಾಗಿ ಕೇಸ್ ಹಾಕಲು ಅವಕಾಶ ನೀಡುವುದು 21ನೇ ಶತಮಾನದ ಮಾದರಿ ವ್ಯವಸ್ಥೆ ಎಂದು ಹೇಳಲಿಕ್ಕಾಗದು. ಅದೇ ರೀತಿ, ಸಣ್ಣ ಪುಟ್ಟ ತಪ್ಪು ಮಾಡಿದವರಿಗೆ ಜಾಮೀನು ಪಡೆಯುವ ಸಾಮರ್ಥ್ಯ ಇಲ್ಲ ಎಂದು ಜೈಲಿನಲ್ಲೇ ಮುಂದುವರೆಸಲಾಗದು. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದವು ಎಂದು ಸಂಭ್ರಮಿಸುವ ಸಂದರ್ಭದಲ್ಲಿ, ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಈ ಎಲ್ಲ ಅಂಶಗಳ ಬಗ್ಗೆ ಯೋಚಿಸಬೇಕಿದೆ. 


– ಎಸ್.ಎ. ಶ್ರೀನಿವಾಸ್

error: Content is protected !!