ತ್ಯಾಗ…

ಪುಟ್ಟಾ, ಬಂಗಾರಾ, ಬಾ ಮರೀ ಈ ಕಡೆಗೆ, ಎಲ್ಲಾದ್ರೂ ಬಿದ್ದು ಬಿಡ್ತೀಯಾ?‌  ಈವತ್ತಿನ ಗಾಳಿ, ಅಬ್ಬರ ಹೆದರಿಕೆ ‌‌‌ಹುಟ್ಟಿಸುವಂತಿದೆ.. ಸದ್ಯ ಹೇಗೋ ಈ‌ ದೋಣಿ ವಿಹಾರ ಮುಗಿದ್ರೆ‌ ಸಾಕಾಗಿದೆ.. ಅಂತ ಗಟ್ಟಿಯಾಗಿ ಎಲ್ಲರಿಗೂ ಕೇಳುವಂತೆ ವಿಶಾಲಾಕ್ಷಿ ಮಗ‌ ದೀಪುಗೆ ಹೇಳುತ್ತಿದ್ದರು.. ಗಾಳಿ ಬೇರೆ ಜೋರಾಗಿಯೇ ಬೀಸುತ್ತಿತ್ತು.

ಅಮ್ಮಾ ಅಲ್ಲಿ ನೋಡು, ಮರಗಳ ಸಾಲು, ದಟ್ಟವಾದ ಕಾಡಿನ ರೀತಿ ಕಾಣುತ್ತಿದೆ ಅಲ್ವೇನಮ್ಮಾ? ಓ ಅಲ್ಲಿ ಮರದ ಮೇಲೆ ಬಣ್ಣಬಣ್ಣದ ಹಕ್ಕಿಗಳನ್ನು‌‌ ನೋಡು, ಅಂತ ದೀಪು ಪ್ರಕೃತಿಯ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಸಂತೋಷ ಪಡುತ್ತಾ, ಅಮ್ಮಾ, ನಾಳೆ ಶಾಲೆಗೆ ಹೋದಾಗ ನನ್ನ ಸ್ನೇಹಿತರೆಲ್ಲರಿಗೂ ಈ ಸ್ಥಳದ ಬಗ್ಗೆ ತಿಳಿಸ್ತೀನಿ..ಅಂತ ಹೇಳ್ತಾ ಇದ್ದದ್ದು ಕೇಳಿ…

 ಏನು ವಿಶಾಲಾ,ಇವತ್ತು ಭಾರೀ ಖುಷಿಯಾಗಿದಾನೆ ಮಗ? ಅಂತ ಕೇಳಿದ ಗೆಳತಿಗೆ ಹೌದು ರಮಾ, ನಾಳೆ ಅವನ‌‌ ಶಾಲೆಯ ಕಡೇ ದಿನ ಪ್ರೈಮರಿ ಮುಗಿದು ಐದನೇ ತರಗತಿಗೆ ನಮ್ಮ ಊರಿನ ಆಶ್ರಮದ‌ ಗುರುಕುಲದ ಶಾಲೆಗೆ ಸೇರಿಸಿದೀವಲ್ಲಾ ಅಲ್ಲಿಗೆ ಹೊರಡುತ್ತಾನೆ.. ಇವರೂ ಅದರ ಬಗ್ಗೆ‌ ಮಾತನಾಡಿ‌ ಬರಲೆಂದು‌ ಊರಿಗೆ ಹೋಗಿದ್ದಾರೆ. ಆಮೇಲೆ‌ ಸಮಯ‌ ಸಿಗುವುದು ಕಷ್ಟ ಸಾಧ್ಯ ಅಂತ, ಅದಕ್ಕೇ ಈ ಪಕ್ಷಿ ಧಾಮ, ದೋಣಿ ವಿಹಾರ ಅಂತ‌ ಬಂದೆವು. ಆದರೆ ಇರೋ ಒಬ್ಬನೇ ಕಣ್ಮಣಿ ಮಗನನ್ನು ಕಳಿಸಬೇಕಲ್ಲಾ ಅಂತ ಮನಸ್ಸಿಗೆ ಬಹಳ ಸಂಕಟ, ತಳಮಳ, ರಾತ್ರಿಯೆಲ್ಲಾ ನಿದ್ದೇನೇ ಬರೋಲ್ಲ.. ಇವರೂ ಸಮಾಧಾನ ಹೇಳ್ತಾ ಇರ್ತಾರೆ… ಮಗನ ಒಳ್ಳೆಯ ಭವಿಷ್ಯಕ್ಕೆ ನಾವೂ ನಮ್ಮ‌ ಮಮಕಾರ, ಪ್ರೀತಿಯನ್ನು ತ್ಯಾಗಮಾಡಲು ತಯಾರಾಗಲೇಬೇಕು ಅಂತ. ತಿಂಗಳಿಗೊಮ್ಮೆ ನಾವು ಹೋಗಿ‌ ನೋಡಿಬರಬಹುದು, ಬೇರೆ ಯಾವ ಸಂಪರ್ಕವೂ ಇರುವುದಿಲ್ಲ ವಂತೆ.

ಲಾಲಲಾ, ಲಾಲಾಲಾ, ಅಂತ ಗುನುಗುನಿಸುತ್ತಾ ದೀಪು ದೋಣಿಯಲ್ಲಿ ಖುಷಿಯಿಂದ ಜಂಪ್ ಮಾಡೋದು ನೋಡಿ ಚಿಕ್ಕಪ್ಪ  ರಾಜಯ್ಯ ಕೂಗಿದರು.. ದೀಪೂ, ದೋಣಿಯಲ್ಲಿ ಜಂಪ್ ಮಾಡಬಾರದು ಕಣಪ್ಪಾ,. ಈಗ ದೋಣಿ ನದೀ ಮಧ್ಯಕ್ಕೆ ಬಂದಿದೆ, ಒಂದು ಕಡೇ ಕೂತ್ಕೋ..ಸರಿ ಚಿಕ್ಕಪ್ಪಾ, ಆ‌ ಕಡೆ ಹೋಗ್ತೀನಿ..ಅಂತ ಅಂದ ದೀಪುಗೆ  ಹುಂ, ಹುಷಾರು ಅಂದ್ರು ‌‌‌‌‌‌‌ರಾಜಯ್ಯ… ದೀಪು ಹೋಗಿ ದೋಣಿಯ ಅಂಚಿನಲ್ಲಿ ಕಟ್ಟೆಯಂತಿದ್ದ ಜಾಗದಲ್ಲಿ ಕುಳಿತ.. ನೀರಿನಲ್ಲಿ ಕೈಯಾಡಿಸುತ್ತಾ..

ಸ್ವಲ್ಪ ಹೊತ್ತು ಕಳೆದಿರಬಹುದು.. ಇದ್ದಕ್ಕಿದ್ದಂತೆ ಅಮ್ಮಾ ಅಮ್ಮಾ.. ನನ್ನ ಕೈ ಮೇಲೆ ತೊಗೊಳೋಕೇ ಆಗ್ತಿಲ್ಲ ಯಾಕೋ ಏನೋ ಭಯವಾಗುತ್ತಿದೆ. ಇಲ್ಲಿ ಒಂದು ಬಂಡೆಯಂತೆ ಕಾಣ್ತಿದೆ  ಅಂದ.. ಅಮ್ಮ ಯಾಕೋ ಬಂಗಾರಾ, ಏನಾಯ್ತು? ಅಂತ‌ ಮೆಲ್ಲಗೆ ಅವನ ಬಳಿ ಬಂದು‌ ನೋಡಿದರು.. ಅವರ‌ ಹೃದಯ ಬಾಯಿಗೆ ಬಂದಂತೆ ಆಯಿತು. ತಲೆ ತಿರುಗಿ ಬೀಳುವಂತಾಗಿ ಸಾವರಿಸಿಕೊಂಡು ಅಯ್ಯೋ ಅಯ್ಯೋ ಅಮ್ಮಾ.. ಅಂತ‌ ಹೃದಯ ವಿದ್ರಾವಕವಾಗಿ ಕರುಳು‌‌ ಕಿತ್ತು‌ ಬರುವಂತೆ ಅಳಲಾರಂಭಿಸಿದರು.. ಮಗನ ಭುಜ ಹಿಡಿದು  ಎಳೆಯಲಾರಂಭಿಸಿದರು. ಏನಾಯ್ತು ಅಂತ ದೋಣಿಯಲ್ಲಿ ಇರುವವರು ಕೇಳಿದಾಗ ಮಗ‌ ಹೇಳಿದ್ದ “ಬಂಡೆ”ಯ‌ ಕಡೆ‌ ತೋರಿಸಿದರು.. ಎಲ್ಲರೂ ಹೌಹಾರಿ‌ದರು.. ಕೆಲವರಿಗೆ ಬಾಯೇ ಹೊರಡಲಿಲ್ಲ.. ಭಯಂಕರವಾದ ಮೊಸಳೆಯೊಂದು ದೀಪುವಿನ ಕೈ ಹಿಡಿದು ಎಳೆಯುತ್ತಿತ್ತು.. ಅಯ್ಯೋ ಏನು‌ ಮಾಡೋದು‌ ಭಗವಂತಾ..

ವಿಶಾಲಾಕ್ಷಿ ಅಸಹಾಯಕರಾಗಿ ದು:ಖಿಸಲಾರಂಭಿಸಿದರು. ಹುಟ್ಟು ಹಾಕುತ್ತಿದ್ದ  ನಾವಿಕ ಕೂಡಾ ಹೆದರಿ ಹೌಹಾರಿದ.. ಅಲ್ಲಿಂದಲೇ ಸಾಕಷ್ಟು ಹೆದರಿಸುವ ಪ್ರಯತ್ನ ಮಾಡಿದ..ಯಮ ಹಸಿವೋ ಎಂಬಂತೆ ಆಕ್ರಮಣ ನಡೆಸಿದ್ದ ಮೊಸಳೆ ಭದ್ರವಾಗಿ ದೀಪುವಿನ‌ ಕೈ ಹಿಡಿದು ಅವನನ್ನು ಎಳೆಯಲು ಶುರು ಮಾಡಿತ್ತು.. ಯಾವುದೇ ರೀತಿಯಲ್ಲೂ ಬಿಡುವ ಸೂಚನೆಯೇ‌ ಕಾಣಲಿಲ್ಲ.ವಿಶಾಲಾಕ್ಷಿ ಅವರು ಸರ್ವ ಪ್ರಯತ್ನ ಮಾಡುತ್ತಲೇ ಇದ್ದರು.. ಈ ತಿಕ್ಕಾಟದಲ್ಲಿ ದೋಣಿ ಮೇಲೆ ಕೆಳಗೆ ಆಗಿ ಎರಡು, ಮೂರು ಬಾರಿ ಅಲುಗಾಡಿ ಮುಳುಗುವಂತಾಯಿತು. ದೋಣಿಯಲ್ಲಿದ್ದವರೆಲ್ಲಾ ಅಂಗೈಯಲ್ಲಿ ಜೀವ ಹಿಡಿದು ಭಯಾನಕವಾಗಿ‌, ಹೃದಯವಿದ್ರಾವಕವಾಗಿ‌ ಕಿರುಚುತ್ತಾ‌ ದು:ಖಿಸಲಾರಂಭಿಸಿದರು. ಈ‌ ಭಯಂಕರ ವಿಪತ್ತಿನಿಂದ ಪಾರಾಗುವ ದಾರಿ‌ಯ ಬಗ್ಗೆ ತಮಗೆ ತಿಳಿದಂತೆ ಮಾತನಾಡುತ್ತಿದ್ದರು.. ನಾವಿಕನನ್ನು‌ ಏನಾದರೂ‌‌ ಮಾಡಪ್ಪಾ, ಈ‌ ಸಂಕಷ್ಟದಿಂದ ಹೇಗಾದ್ರೂ ಮಾಡಿ ನಮ್ಮನ್ನು‌ ಬದುಕಿಸಿ ಪುಣ್ಯ ಕೊಟ್ಟುಕೊಳ್ಳಪ್ಪಾ ಅಯ್ಯೋ‌ ‌ದೇವ್ರೇ, ಈಗೇನು ಗತಿ ಅಂತ‌ ಗೋಳಾಡಿದರು. ಈ ಮಧ್ಯೆ ನಾವಿಕ ಕೂಡಾ ದೋಣಿ‌‌ ಮುಳುಗುವಂತೆ ಆಗಿದ್ದು ನೋಡಿ ದೋಣಿಯ‌ ಒಳಗೆ ಇರುವವರೆಲ್ಲಾ ನೀರು ಪಾಲಾಗಿ, ಜಲಚರಗಳಿಗೆ ಆಹಾರವಾಗಿ ಬಿಡುತ್ತಾರೆ ಎಂದು ಅರಿತ. ಸಂದಿಗ್ಧಕ್ಕೆ ಒಳಗಾದ. ಈ‌ ಮಧ್ಯೆ ಮೊಸಳೆ ದೀಪುವನ್ನು ಭುಜದವರೆಗೂ ಎಳೆದಿತ್ತು, ದೀಪು ಕೂಡಾ ತನಗೆ  ಅಪಾಯ ಇದೆ‌ ಎಂದು‌  ಅರಿವಾಗಿ ಜೋರಾಗಿ ದುಃಖಿಸುತ್ತಾ ಅಮ್ಮಾ, ಅಮ್ಮಾ ಅಂತ ಭಯಾಕ್ರಾಂತನಾದ.

ಈ ಕಡೆ‌ ದೋಣಿಯಲ್ಲಿದ್ದ ಜನಗಳು ನಾವಿಕನನ್ನು ಕುರಿತು ‌ಈಗ‌ ನೀನೇ ನಮಗೆ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ದಾರಿ… ಹೆಚ್ಚು ಸಮಯವಿಲ್ಲ, ನಮ್ಮ ಜೀವದ‌ ಕ್ಷಣಗಣನೆ ಶುರುವಾಗಿದೆ ಅಂದರು.. ಎಲ್ಲರೂ ಮುಳುಗಿ ಹೋಗುತ್ತೇವೆ, ಮೊಸಳೆ ನಮ್ಮೆಲ್ಲರನ್ನೂ ‌‌ಎಳೆದು ತಿಂದುಬಿಡುತ್ತದೆಂದು ಕಂಗಾಲಾದರು. ಸಮಯ‌ ಮೀರಿದರೆ ಎಲ್ಲರೂ ನದಿ ಪಾಲಾಗಿ, ಜಲಚರಗಳ ಪಾಲಾಗುವುದು ಖಚಿತವೆಂದರಿತ ನಾವಿಕ ,ವಿಶಾಲಾಕ್ಷಿ ಯವರನ್ನು ಕುರಿತು ಹೇಳಿದ ಅಮ್ಮಾ ನಿಮಗೆ ನಾನು ಈಗ‌ ಹೇಳುವುದು ಕೇಳಿದರೆ ನಿಮಗೆ ನನ್ನನ್ನು ಇಲ್ಲೇ ಕೊಂದುಬಿಡುವಷ್ಟು ಕೆಂಡಾಮಂಡಲ ಕೋಪ ಹಾಗೂ ಕರುಳು‌ ಕತ್ತರಿಸಿದಂತಹ ನೋವು‌ ಆಗುತ್ತೆ, ಆದ್ರೆ ನನಗೂ‌ ಬೇರೆ ದಾರಿ ತೋಚುತ್ತಿಲ್ಲ, ಅಂದ.. ಏನಪ್ಪಾ ಹೇಳು ವಿಶಾಲಾಕ್ಷಿ ದುಃಖದಿಂದ ಕಣ್ಣೀರಿಟ್ಟರು.

ಅಮ್ಮಾವ್ರೇ‌‌ ನಂಗೂ ಮಕ್ಕಳು ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಮರೀ ಇದಾರೆ, ಆ ದೇವ್ರು ನಂಗೆ‌ ಯಾಕೆ ಇಂತಹ ಪರಿಸ್ಥಿತಿ ತಂದಿಟ್ಟನೋ ಗೊತ್ತಿಲ್ಲ, ಆ‌ ದೊಡ್ಡ‌ಬಂಡೆಗಲ್ಲಿನಂತಾ ಮೊಸಳೆಯ ಹಿಡಿತದಿಂದ ಮಗುವನ್ನು ಬಿಡಿಸಲು ಆಗುತ್ತಿಲ್ಲ.. ಈಗ‌ ಮಿಕ್ಕ ಪ್ರಯಾಣಿಕರು ಸುರಕ್ಷಿತವಾಗಿರಬೇಕಂದ್ರೆ‌  ‌‌‌‌‌‌‌‌ನೀವೇ‌ ನಿಮ್ಮ ಕೈಯಾರೆ ಮಗನನ್ನು ಮೊಸಳೆಗೆ ಆಹಾರವಾಗಿ ಕೊಡಲೇಬೇಕು.. ಇದು ಇಲ್ಲಿರುವ ಎಲ್ಲರ ಅಳಿವು, ಉಳಿವಿನ‌ ಜೀವದ ಪ್ರಶ್ನೆ…

ಇದನ್ನು ಕೇಳಿ ವಿಶಾಲಾಕ್ಷಿ ಅಲ್ಲೇ ಕುಸಿದರು, ಕ್ಷಣ ಕ್ಷಣಕ್ಕೂ ‌‌‌‌‌‌‌ಆತಂಕ ಹೆಚ್ಚುತ್ತಿತ್ತು.. ಅಯ್ಯೋ‌., ಭಗವಂತಾ ಇದೆಂಥ ಅಗ್ನಿ ಪರೀಕ್ಷೆ… ಏಕೆ ಈ ರೀತಿ ನನ್ನನ್ನು ಒರೆಗೆ ಹಚ್ಚುತ್ತಿರುವೆ?.. ನನ್ನ ‌‌‌‌‌‌‌‌‌‌ಯಾವ ಜನ್ಮದ ಪಾಪ ಕರ್ಮ ಇದು? ಎಂದು ಎದೆಯೊಡೆದ ಅವರ ಆಕ್ರಂದನ ಮುಗಿಲು ಮುಟ್ಟಿತು..

ಎಲ್ಲರಿಗೂ ಅವರವರ ಜೀವದ ಯೋಚನೆ..ಇದೊಂದು ಬಾರಿ ದಡಮುಟ್ಟಿಸು ದೇವ್ರೇ, ಮುಂದೆ ಹೇಗೋ ಬದುಕಿ‌ಕೊಳ್ಳುತ್ತೇವೆ ಅಂತ ಆ ಕಾಣದ‌ ದೇವರಲ್ಲಿ ಮೊರೆಹೊಕ್ಕರು.. ಸುತ್ತಮುತ್ತಲೂ ಬೇರೆ ಯಾವ ದೋಣಿಯೂ ಕಾಣಲಿಲ್ಲ.

ಹೆಚ್ಚು ‌‌‌‌‌ಸಮಯ ಕಳೆದರೆ ಇನ್ನೂ‌ ಏನೇನು ವಿಪತ್ತು ಗಳನ್ನು ಎದುರಿಸಬೇಕೋ.. ನಾವಿಕ‌ ವಿಶಾಲಾಕ್ಷಿಯವರಿಗೆ ಹೇಳಿದ ಮಾತು ಕೇಳಿ ಎಲ್ಲರಿಗೂ ಬರಸಿಡಿಲು ಬಡಿದಂತಾಯಿತು. ಯಾರೂ ಏನೂ‌ ಮಾತನಾಡದೆ ಗರಬಡಿದವರಂತೆ, ಈಗ‌ ವಿಶಾಲಾಕ್ಷಿ ಏನು ಮಾಡುತ್ತಾರೋ ಎಂದು ಯೋಚಿಸುತ್ತಿದ್ದರು.. ಯಾರಿಗೂ ವಿಶಾಲಾಕ್ಷಿಯವರನ್ನು ಮಾತನಾಡಿಸುವ ಧೈರ್ಯವೂ  ಇರಲಿಲ್ಲ.. ಇತ್ತ ವಿಶಾಲಾಕ್ಷಿ ಕೂಡಾ ರಕ್ತಕಣ್ಣೀರಿನಲ್ಲಿ ಮುಳುಗಿದ್ದರು ಕ್ಷಣಗಳು ಯುಗವಾದಂತಿತ್ತು..ಮಗನನ್ನು  ಯಮರಾಜನ  ಪಾಶದಿಂದ ಬಿಡಿಸಲು  ಹರಸಾಹಸಪಟ್ಟರು, ನೋಡುತ್ತಾ ಇದ್ದಂತೆ ಮತ್ತೊಮ್ಮೆ ಮೊಸಳೆ ದೋಣಿಯನ್ನು ಏರಿಬಂದು ಬಿಡುತ್ತೇನೋ ಎಂಬಂಥ ಉಗ್ರರೂಪದ ಆಕ್ರಮಣ ನೋಡಿ ಇನ್ನು ತಡಮಾಡದೇ ಒಂದು ನಿರ್ಧಾರ‌ ಮಾಡಲೇಬೇಕೆಂದು‌  ಇದ್ದಕ್ಕಿದ್ದಂತೆ ಕಣ್ಣೀರು‌ ಒರೆಸಿಕೊಂಡು, ನೋಡುನೋಡುತ್ತಿದ್ದಂತೆಯೇ ಇದುವರೆಗೂ ‌‌‌‌‌‌‌‌‌‌‌‌‌‌‌‌ಯಮ ರೂಪಿ‌ ಮೊಸಳೆಯ ಜೊತೆ‌ ನಡೆಸಿದ್ದ ಪ್ರಾಣಯುದ್ಧಕ್ಕೆ ತೆರೆಯೆಳೆದು ಎದೆಯನ್ನು‌ ಬಂಡೆಗಲ್ಲಿನಂತೆ‌ ಧೃಡ‌ವಾಗಿಸಿ‌, ಕಲ್ಲು ಮನಸ್ಸು ಮಾಡಿ  ರಕ್ತಸಿಕ್ತ ಮಗನ‌ ಕೈ‌ಬಿಟ್ಟು‌ ಕುಸಿದರು..ಅವಾಕ್ಕಾದ ಮಿಕ್ಕ ಪಯಣಿಗರೆಲ್ಲ ಗರಬಡಿದವರಂತಾದರು.

ನಾವಿಕ ಕೂಡ ವಿದ್ಯುದಾಘಾತವಾದಂತ್ತಿದ್ದ… ರಕ್ತದ ರುಚಿ ಕಂಡಿದ್ದ ಮೊಸಳೆ ಮಗುವನ್ನು  ಬಾಯಲ್ಲಿ, ತೀಕ್ಷ್ಣವಾಗಿ, ಹರಿತವಾಗಿದ್ದ ಕೋರೆ ಹಲ್ಲುಗಳ ಮಧ್ಯೆ ಕಚ್ಚಿಕೊಂಡು‌ ಹೋಗಿದ್ದನ್ನು ನೋಡುತ್ತಾ ದಿಗ್ಭ್ರಮೆಗೊಳಗಾದರು. ನಾವಿಕ ಪುನಃ ಬೇರೆ ಮೊಸಳೆಗಳ  ಆಕ್ರಮಣ ಆಗಬಹುದೆಂದು ಊಹಿಸಿ ಆದಷ್ಟು ಬೇಗನೇ ದಡ ಸೇರಬೇಕೆಂದು ಹುಟ್ಟು‌ಹಾಕತೊಡಗಿದ. ಮಗುವಿನ ಆಕ್ರಂದನ ಕ್ಷೀಣವಾಗಿ …. ಹರಿಯುತ್ತಿದ್ದ ನೀರಿನೊಂದಿಗೆ‌ ಲೀನವಾಯಿತು.

ವಿಶಾಲಾಕ್ಷಿ ಕಲ್ಲಿನ ಬೊಂಬೆಯಂತೆ ಮಗನು‌ ಕುಳಿತಿದ್ದ ಸ್ಥಳದಲ್ಲೇ‌ ಇದ್ದರು.ಸ್ವಲ್ಪ ಸಮಯ ಕಳೆದು.. ರಮಾ ನೋಡಿ, ನನಗೆ, ನಾನು ನನ್ನ ‌‌‌‌‌‌‌ಮಗನನ್ನ ಕಳಿಸಿ, ನಿಮ್ಮೆಲ್ಲರನ್ನೂ ಪ್ರಾಣಾಪಾಯದಿಂದ ಉಳಿಸಿದೆನೆಂಬ ಅಪಾರ ಸಂತಸವಿದೆ. ನನ್ನ ಜನ್ಮ ಸಾಫಲ್ಯವಾಗಿದೆ ಎಂದು ಭಾವಿಸುತ್ತೇನೆಂದು‌ ದುಃಖಿಸುತ್ತಾ, ಭಾವೋದ್ವೇಗದಿಂದ ಬಿಕ್ಕಿ ಬಿಕ್ಕಿ ಅತ್ತರು…. ಮಗನನ್ನು ಕಳಿಸಿದ ಸ್ಥಳದಲ್ಲೇ‌ ನಿಂತು ಹೇಳಿದರು. ಇನ್ನು ನಾನು ಬದುಕಿ ಏನು ಸಾಧಿಸಬೇಕು ಛೇ ಛೇ .. ಜೀವನದಲ್ಲಿ ಇಂತಹ ಒಂದು ದುರಂತದ ‌ಕ್ಷಣ ಬರುತ್ತದೆಂದು ಯಾರು ಅಂದುಕೊಳ್ಳುತ್ತಾರೆ ಹೇಳಿ.. ನನಗೆ ಇನ್ನು ಬದುಕುವ ಆಸೆ ಲವಲೇಶವೂ ಇಲ್ಲ.. ನನ್ನ ಇಹಲೋಕದ ಯಾತ್ರೆ ಮುಗಿಸಿ, ನನ್ನ “ಕಣ್ಮಣಿ‌ ದೀಪು” ವಿನ ಜೊತೆಯೇ ಇದ್ದು‌ ಬಿಡುತ್ತೇನೆ ನನ್ನನ್ನು‌ ಯಾರೂ‌ ತಡೆಯಬೇಡಿ ಎಂದವರೇ ದಡಾರ್ ಎಂದು ನೀರಿಗೆ ಧುಮುಕಿದರು.. ನೋಡು ನೋಡುತ್ತಿದ್ದಂತೆ ಕೈಯಾಡಿಸುತ್ತಾ ಮುಳುಗಿ ಜಲಸಮಾಧಿಯಾದರು.. ಅನಿರೀಕ್ಷಿತವಾಗಿ ‌‌‌‌ಆದ ಈ ಘಟನೆಯಿಂದ  ಎಲ್ಲರ ಮನಸ್ಸೂ ಘಾಸಿಗೊಂಡು, ನೊಂದು ಬೆಂದಿತ್ತು.. ನೀರವ ಸ್ಮಶಾನ ಮೌನ ತಾಂಡವವಾಡಿತು. ಪಂಚಭೂತಗಳು‌ ಈ‌ ಘೋರ ದುರಂತಕ್ಕೆ ಸಾಕ್ಷಿಯೆಂಬಂತೆ ಆಗತಾನೇ ಅಸ್ತಮಿಸುತ್ತಿದ್ದ‌ ಸೂರ್ಯನ ಕೆನ್ನೀರಿನ ಬೆಳಕು, ಸುಯ್ಗುಡುವ ಗಾಳಿಯ, ಜುಳುಜುಳು ಹರಿಯುವ ನೀರಿನ ಮತ್ತು ನಾವಿಕ ಹುಟ್ಟು ಹಾಕುತ್ತಿದ್ದ ರೊಂಯ್ ರೊಂಯ್.. ಶಬ್ದ ಮಾತ್ರವೇ‌ ಕೇಳಿ ಬರುತ್ತಿತ್ತು.


ಸುಮನಾ
[email protected]

error: Content is protected !!