ಹಸಿರೀಕರಣಕ್ಕಾಗಿ ಸಿದ್ಧವಾಗುತ್ತಿವೆ ಲಕ್ಷ ಬೀಜದ ಉಂಡೆ

ಹಸಿರೀಕರಣಕ್ಕಾಗಿ ಸಿದ್ಧವಾಗುತ್ತಿವೆ ಲಕ್ಷ ಬೀಜದ ಉಂಡೆ

ಕಿಸಾನ್ ಬಂಧು ವ್ಯವಸಾಯ, ಬೇಸಾಯ ನರ್ಸರಿ ಹಾಗೂ ನಮ್ಮ ದಾವಣಗೆರೆ ಸಂಸ್ಥೆಗಳ ಸಹಭಾಗಿತ್ವ

ದಾವಣಗೆರೆ, ಮೇ 30 – ಹಸಿರೀಕರಣಕ್ಕೆ ಉತ್ತೇಜನ ನೀಡಲು ನಗರದ ಕಿಸಾನ್ ಬಂಧು ವ್ಯವಸಾಯ ಬೇಸಾಯ ನರ್ಸರಿ ಹಾಗೂ ನಮ್ಮ ದಾವಣಗೆರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 1 ಲಕ್ಷ ಬೀಜದ ಉಂಡೆಗಳನ್ನು ರೂಪಿಸಲು ಮುಂದಾಗಿವೆ.

ನಮ್ಮ ದಾವಣಗೆರೆ ಸಂಸ್ಥೆಯ ಸದಸ್ಯರು ಪ್ರತಿದಿನ ಬೀಜದ ಉಂಡೆ ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರ ಜೊತೆ ಈಗ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳೂ ಕೈ ಜೋಡಿಸಿದ್ದಾರೆ.

ಬೀಜದ ಉಂಡೆ ಮಾಡುವ ಮೂಲಕ ಹಸಿರೀಕರಣ ಮಾಡುವುದು ಕಡಿಮೆ ವೆಚ್ಚದ ಹಾಗೂ ಸುಲಭ ಮಾರ್ಗವಾಗಿದೆ. ಇದಕ್ಕೆ ಹೆಚ್ಚು ಶ್ರಮದ ಅಗತ್ಯ ಬರುವುದಿಲ್ಲ. ಹೀಗಾಗಿ ವಿಶ್ವದಾದ್ಯಂತ ಬೀಜದ ಉಂಡೆಗಳ ಮಾರ್ಗ ಜನಪ್ರಿಯವಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಕಿಸಾನ್ ಬಂಧು ವ್ಯವಸಾಯ ಬೇಸಾಯ ನರ್ಸರಿಯ ಕಾರ್ತಿಕ್ ಪಾಟೀಲ್, ಶಾಮನೂರು ಹಾಗೂ ಕುಂದುವಾಡದ ನಡುವಿನ ಹೆದ್ದಾರಿ ಪಕ್ಕ ಇರುವ ನರ್ಸರಿಯಲ್ಲಿ ಪ್ರತಿದಿನ ಬೀಜದ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಈಗ 30 ಸಾವಿರ ಉಂಡೆಗಳು ಸಿದ್ಧವಾಗಿವೆ ಎಂದು ಹೇಳಿದ್ದಾರೆ.

ಇನ್ನೂ 70 ಸಾವಿರ ಉಂಡೆಗಳನ್ನು ರೂಪಿಸಲಾಗುವುದು. ಒಟ್ಟು ಲಕ್ಷ ಉಂಡೆ ರೂಪಿಸಿ ನಂತರ ಅವುಗಳನ್ನು ಸೂಕ್ತ ಜಾಗದಲ್ಲಿ ಹರಡಲಾಗುವುದು ಎಂದು ತಿಳಿಸಿದ್ದಾರೆ.

ಮಣ್ಣು ಹಾಗೂ ಗೊಬ್ಬರ ಬೆರೆಸಲಾಗುತ್ತದೆ. ಇದರಲ್ಲಿ ಬೀಜಗಳನ್ನು ತುಂಬಿ ಉಂಡೆ ಮಾಡಲಾಗುತ್ತದೆ. ಈ ಉಂಡೆಗಳನ್ನು ನಾಲ್ಕೈದು ದಿನ ಒಣಗಿಸಲಾಗುತ್ತದೆ. ಇದಕ್ಕಾಗಿ ನರ್ಸರಿಯಲ್ಲಿ ಮಣ್ಣು ಹಾಗೂ ಟ್ರೇ ಸಿದ್ಧವಿವೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕರು ಹಾಗೂ ಶಾಲಾ – ಕಾಲೇಜು ವಿದ್ಯಾರ್ಥಿಗಳು ಯಾರೂ ಬೇಕಾದರೂ ಈ ಕಾರ್ಯದಲ್ಲಿ ಕೈ ಜೋಡಿಸಬಹುದು ಎಂದು ಪಾಟೀಲ್ ಹೇಳಿದ್ದಾರೆ. ನಗರದ ಕುಂದುವಾಡ ರಸ್ತೆಯಲ್ಲಿರುವ ಸಪ್ತಗಿರಿ ಶಾಲೆಯ 250 ಮಕ್ಕಳು ಬೀಜದ ಉಂಡೆ ರೂಪಿಸುವ ಕೆಲಸದಲ್ಲಿ ಭಾಗಿಯಾಗಿದ್ದರು. ಮಕ್ಕಳು 15 ಸಾವಿರದಷ್ಟು ಉಂಡೆಗಳನ್ನು ಮಾಡಿದ್ದಾರೆ. ನಗರದ ಅಶ್ವಿನಿ ಕಾಲೇಜು ವಿದ್ಯಾರ್ಥಿಗಳು ಉಂಡೆ ರೂಪಿಸಿದ್ದಾರೆ ಎಂದು ತಿಳಿಸಿದರು.

ದೇಶೀ ತಳಿಗಳಾದ ಬೇವು, ಹೊಂಗೆ, ಆಲ, ಅರಳಿ, ಬಾಗೆ ಮುಂತಾದ 20 ರೀತಿಯ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪಾಟೀಲ್ ಹೇಳಿದರು.

ಈ ಬಗ್ಗೆ ಮಾತನಾಡಿರುವ ನಮ್ಮ ದಾವಣಗೆರೆ ಸಂಸ್ಥೆಯ ರೋಹಿತ್ ಜೈನ್, ಅರಣ್ಯ ಇಲಾಖೆಯನ್ನು ಸಂಪರ್ಕಿಸಿ, ಅವರು ಸೂಚಿಸುವ ಜಾಗದಲ್ಲಿ ಹಾಗೂ ಸೂಚಿಸುವ ರೀತಿಯ ಬೀಜಗಳನ್ನು ಹರಡಲಾಗುವುದು ಎಂದು ಹೇಳಿದರು.

ಮರಗಳು ನೆರಳು ಹಾಗೂ ಆಕ್ಸಿಜನ್‌ಗೆ ನೆರವಾಗುತ್ತವೆ. ಮನುಷ್ಯರಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೂ ಹಸಿರೀಕರಣ ಸಹಕಾರಿ. ಬಾತಿ ಗುಡ್ಡ, ಕೊಂಡಜ್ಜಿ ಕೆರೆ, ಆವರಗೆರೆ ಕೆರೆ ಸೇರಿದಂತೆ ಹಲವೆಡೆ ಬೀಜದ ಉಂಡೆಗಳನ್ನು ಹರಡುವ ಉದ್ದೇಶವಿದೆ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿರುವ ದಾವಣಗೆರೆ ವಿ.ವಿ. ಪ್ರಾಧ್ಯಾಪಕ ಡಾ. ಶಿಶುಪಾಲ್, ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ವಿದ್ಯಾರ್ಥಿಗಳ ಜೊತೆ ಸೇರಿ ಹೊಂಗೆ ಬೀಜದ 1,500 ಬೀಜದ ಉಂಡೆಗಳನ್ನು ತಯಾರಿಸಿದ್ದೇವೆ. ಈ ಉಂಡೆ ಬೀಜಗಳನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹರಡಲಾಗುವುದು ಎಂದು ಹೇಳಿದರು.

ಬೀಜದ ಉಂಡೆಯ ಈ ಅಭಿಯಾನದಲ್ಲಿ ವೈಶಾಕ್ ಪಾಟೀಲ್, ಜಗದೀಶ್ ಪಾಟೀಲ್,  ಕೊಟ್ರೇಶ್, ಮುರುಗೇಶ್, ಕೊಟ್ರೇಶ್ ಉತ್ತಂಗಿ ಮತ್ತಿತರರು ಸಾಥ್ ನೀಡಿದ್ದಾರೆ

error: Content is protected !!