ಹೊಸ ಕಾನೂನು ರಚನೆಗೆ ವಿಧಾನ ಪರಿಷತ್ತಿನಲ್ಲಿ ಬಹುಮತ ಅಗತ್ಯ

ಹೊಸ ಕಾನೂನು ರಚನೆಗೆ ವಿಧಾನ ಪರಿಷತ್ತಿನಲ್ಲಿ ಬಹುಮತ ಅಗತ್ಯ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್  ಸಭೆಯಲ್ಲಿ  ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜಯಕುಮಾರ್

ದಾವಣಗೆರೆ, ಮೇ 19 – ವಿಧಾನ ಪರಿಷತ್ತಿನಲ್ಲಿ ಹೊಸ ಕಾನೂನುಗಳನ್ನು ರಚನೆ ಮಾಡಲು ಹಾಗೂ ತಿದ್ದುಪಡಿ ಮಾಡಲು ಬಹುಮತ ಅಗತ್ಯವಿದ್ದು ಲೋಕಸಭಾ ಚುನಾವಣೆಯಲ್ಲಿ ಪ್ರೋತ್ಸಾಹಿಸಿದ ಹಾಗೇ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಕರೆ ನೀಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂಗವಾಗಿ ನಿನ್ನೆ ನಡೆದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಾವಣಗೆರೆ ಕ್ಷೇತ್ರಕ್ಕೆ ವಿಧಾನಸಭೆ, ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಮೂರನೇ ಬಾರಿಗೆ ಚುನಾವಣಾ ಉಸ್ತುವಾರಿಯಾಗಿರುವೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರ ಗೆಲುವು ಖಚಿತ ಎಂದು ಎಲ್ಲಾ ಸಮೀಕ್ಷೆಗಳು ತಿಳಿಸಿವೆ. ಇದಕ್ಕೆ ಪಕ್ಷದ ಕಾರ್ಯಕರ್ತರುಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಲ್ಕು ಸಾವಿರಕ್ಕೂ ಅಧಿಕ ಮತಗಳಿಗೆ, ಮುಂದಿನ ತಿಂಗಳು ನಡೆಯಲಿರುವ ಆಗ್ನೇಯ ಶಿಕ್ಷಕರ ಪದವೀಧರ ಕ್ಷೇತ್ರ ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ನಮ್ಮ ಅಭ್ಯರ್ಥಿ ಸೋಲ ಬಾರದು ಎಂದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗಳಿಗೆ ಖಡಕ್ ಎಚ್ಚರಿಕೆ ನೀಡಿರುವುದರಿಂದ ಈ ಚುನಾವಣೆಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.

ಜಗಳೂರಿನ ಶಾಸಕ ದೇವೇಂದ್ರಪ್ಪ ಅವರು ಮಾತನಾಡಿ, ಜೂನ್ 3 ರಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ. ನಾನು 33 ವರ್ಷಗಳ ಕಾಲ ನಳಂದ ಕಾಲೇಜಿನಲ್ಲಿ ಕೆಲಸ ಮಾಡಿರುವೆ. ಶಿಕ್ಷಕರ ಕ್ಷೇತ್ರದ ಪ್ರತಿ ಚುನಾವಣೆಯಲ್ಲಿಯೂ ಅನುಭವ ಇದ್ದು, ಅದೇ ಅನುಭವ ನನ್ನನ್ನು ಶಾಸಕರನ್ನಾಗಿ ಮಾಡಿದೆ.  ಜಗಳೂರು ಕ್ಷೇತ್ರದಲ್ಲಿ 280 ಮತಗಳಿದ್ದು, ಮೊದಲ ಪ್ರಾಶಸ್ತ್ಯದ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಬೇಕು  ಎಂದು ಕೇಳಿಕೊಂಡರು.

ಹಿರಿಯೂರಿನ ಮಾಜಿ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಐದು ಜಿಲ್ಲೆಗಳಿಂದ 11,222 ಹಳ್ಳಿಗಳಿವೆ. ಹಿಂದಿನ ಸಮಸ್ಯೆಗಳೆ ಬೇರೆ, ಈಗಿರುವ ಸಮಸ್ಯೆಗಳೆ ಬೇರೆ. ವೇತನದಲ್ಲಿ ತಾರತಮ್ಯ, ಬಡ್ತಿ, ಹೀಗೆ ಹತ್ತು ಹಲವಾರು ಬೇಡಿಕೆಗಳು ಈಡೇರಬೇಕಿದೆ. ಖಾಸಗಿ, ಅನುದಾನಿತ ಸಂಸ್ಥೆ, ಸರ್ಕಾರಿ ಶಾಲೆಗಳು, ಪಿ.ಯು.ಸಿ. ಪದವಿ, ಸ್ನಾತಕೋತ್ತರ, ಡಿಪ್ಲೋಮಾ, ಐ.ಟಿ.ಐ. ಕಾಲೇಜುಗಳಿಗೆ ಹೋಗಿ ಅಭ್ಯರ್ಥಿಯ ಪರ ಮತವನ್ನು ಕೇಳಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಪದವಿಧರ ಮತ್ತು ಶಿಕ್ಷಕರ ಘಟಕದ ಕುಬೇರಪ್ಪ, ಉಸ್ತುವಾರಿಗಳಾದ ಸದಾನಂದ ಡಂಗಣ್ಣ, ಷಣ್ಮುಖ ಶಿವಳ್ಳಿ, ನಂದಿಗಾವಿ ಶ್ರೀನಿವಾಸ್, ಡಿ.ಆರ್. ಪಾಟೀಲ್, ಎ.ಎಸ್ ವೀರಣ್ಣ, ಮುರುಗೇಂದ್ರಪ್ಪ, ರಾಮಲಿಂಗಪ್ಪ, ಕೆ.ಪಿ. ಪಾಲಯ್ಯ ಇತರರು ಉಪಸ್ಥಿತರಿದ್ದರು.

error: Content is protected !!