ಶುಚಿತ್ವ ಕಾರ್ಯ ವಿಶೇಷ ದಿನಗಳಿಗೆ ಸೀಮಿತವಾಗದೇ ನಿತ್ಯವೂ ಆಗಬೇಕು
ಹರಿಹರ, ಮೇ 15- ಸ್ವಚ್ಛತೆಗೆ ಆದ್ಯತೆ ನೀಡ ಬೇಕಿದ್ದ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ, ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆಯ ಆವರಣ ಸಂಪೂರ್ಣ ಹದಗೆಟ್ಟಿದೆ.
ಹೌದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಬರುವಂತಹ ತಾಲ್ಲೂಕು ವ್ಯಾಪ್ತಿಯ ರೋಗಿಗಳು ಇಲ್ಲಿನ ದುಸ್ಥಿತಿ ಗಮನಿಸಿ ತಮ್ಮ ಆರೋಗ್ಯ ಗುಣಮುಖವಾಗುವ ಬಗ್ಗೆ ಚಿಂತಿಸುತ್ತಿದ್ದಾರೆ.
ಎಲ್ಲೆಂದರಲ್ಲಿ ಕಸದ ರಾಶಿ, ಹೂಳು ತುಂಬಿದ ಚರಂಡಿ ಮತ್ತು ಪ್ಲಾಸ್ಟಿಕ್ ಹಾಳೆಗಳಿಂದ ಆಸ್ಪತ್ರೆಯ ಮಡಿಲು ಮಲಿನವಾಗುತ್ತಿದೆ. ವಿಶೇಷ ದಿನಗಳಲ್ಲಿ ಮಾತ್ರ ಆಸ್ಪತ್ರೆಯ ಆವರಣ ಸ್ವಚ್ಚಗೊಳಿಸುವ ಇವರು, ಉಳಿದ ದಿನಗಳಲ್ಲಿ ಶುಚಿಗೊಳಿಸಲು ನಿರಾಸಕ್ತಿ ತೋರುತ್ತಿದ್ದಾರೆ.
ಬೆಳಕಿನ ಸಂಕಷ್ಟ
ಆಸ್ಪತ್ರೆಗೆ ರಾತ್ರಿ ವೇಳೆ ಬೆಳಕಿನ ಸಂಕಷ್ಟ ಎದುರಾಗಿದೆ. ಇಲ್ಲಿನ ಎರಡೂ ಬದಿಯ ರಸ್ತೆಗಳಲ್ಲಿ ನಿತ್ಯವೂ ಕತ್ತಲೆ ಆವರಿಸುತ್ತಿದ್ದು, ಈ ಕತ್ತಲೆಯಲ್ಲಿ ಆಸ್ಪತ್ರೆಯೆಡೆಗೆ ಹೆಜ್ಜೆ ಹಾಕಲು ರೋಗಿಗಳು ಹಿಂಜರಿಯುತ್ತಿದ್ದಾರೆ.
ಚರಂಡಿ ಸ್ವಚ್ಛತೆ, ಒಡೆದ ಪೈಪ್ ದುರಸ್ತಿ ಹಾಗೂ ಬೀದಿ ದೀಪ ಸರಿಪಡಿಸುವುದಕ್ಕೆ ಪೌರಾಯುಕ್ತರ ಗಮನಕ್ಕೆ ತಂದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.
– ಡಾ.ಹನುಮಾನಾಯ್ಕ್, ಮುಖ್ಯ ವೈದ್ಯಾಧಿಕಾರಿ
ಆಸ್ಪತ್ರೆ ಮುಂಭಾಗದಲ್ಲಿನ ಶುದ್ಧ ಕುಡಿ ಯುವ ನೀರಿನ ಘಟಕ, ನೀರು ಫಿಲ್ಟರ್‌ಗೊಳಿಸಿ ಹೊರಹಾಕುವ ತ್ಯಾಜ್ಯವನ್ನು ಮರಕ್ಕೆ ನೀರುಣಿ ಸುವ ನೆಪದಲ್ಲಿ ಬೇಕಾಬಿಟ್ಟಿ ಹರಿಸಿದ್ದರಿಂದ ಆಸ್ಪತ್ರೆಯ ಅಂಗಳ ಕೆಸರುಮಯವಾಗಿದೆ.
ಒಂದೆಡೆ ಹಕ್ಕಿಗಳ ಹಿಕ್ಕೆ ಮತ್ತು ಅದರ ದುರ್ವಾಸನೆಯ ಕಾಟಕ್ಕೆ ಜನರು ಮೂಗು ಮುಚ್ಚಿಕೊಳ್ಳಬೇಕಾದ ಪ್ರಸಂಗ ಎದುರಾಗಿದ್ದು, ಮರದ ನೆರಳಿನಲ್ಲಿ ಕೂರುವ ಆಸನಗಳು ಗಲೀಜಾಗಿದ್ದು, ಸಾರ್ವಜನಿಕರಿಗೆ ಕೂರದಂತೆ ಎಚ್ಚರಿಸುತ್ತಿವೆ.
ಹಂದಿಗಳ ತಾಣ : ಸುಮಾರು 4 ತಿಂಗಳ ಹಿಂದೆಯೇ ಒಡೆದಿದ್ದ ಪೈಪಿನಿಂದ ನಿತ್ಯವೂ ನೀರು ಸೋರಿಕೆಯಾಗುತ್ತಿದ್ದು, ಅಲ್ಲಿ ಹಂದಿಗಳ ಗುಂಪೆ ಮಲಗಿರುತ್ತವೆ ಮತ್ತು ಆ ಕೊಚ್ಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚುತ್ತಿರುವುದಕ್ಕೆ ಆಸ್ಪತ್ರೆಯ ಜನ ಬೇಸತ್ತಿದ್ದಾರೆ.
ಉದ್ಯಾನವನವಾಗಿ ಪರಿವರ್ತಿಸಿ: ಆಸ್ಪತ್ರೆಯ ಮುಂಭಾಗದಲ್ಲಿ ಸಾಕಷ್ಟು ಸ್ಥಳವಿದ್ದು, ಪಾರ್ಕ್ ಮಾಡಲು ಯೋಗ್ಯವಾಗಿದೆ. ಈ ಜಾಗದಲ್ಲಿ ಪಾರ್ಕ್ ವ್ಯವಸ್ಥೆ ಕಲ್ಪಿಸಿದರೆ ಬಿಡುವಿನ ಸಮಯದಲ್ಲಿ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ವಾಕಿಂಗ್ ಮಾಡಲು ಅನುಕೂಲವಾಗಲಿದೆ.
ಸಾರ್ವಜನಿಕ ಹಿತ ಕಾಪಾಡುವ ದೃಷ್ಟಿ ಯಿಂದ ಸ್ಥಳೀಯ ಶಾಸಕರು ಮತ್ತು ಆಸ್ಪತ್ರೆಯ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.