ಪ್ರಜ್ಞಾವಂತರು ಎನಿಸಿಕೊಂಡ ಮತದಾರರು ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ಅತ್ಯಮೂಲ್ಯವಾದ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕಾಗಿದೆ
ಆಕಾಂಕ್ಷಿಗಳು, ಅಭ್ಯರ್ಥಿಗಳು ಜನಸೇವೆ ಎಂದು ತಮ್ಮ ವೈಯಕ್ತಿಕ ಜೀವನದ ಸುಖವನ್ನೆಲ್ಲಾ ತೊರೆದು ಜನಾರ್ದ ನನ ಸೇವೆ ಮಾಡದಿರೆ ನಮ್ಮ ಜೀವನವೇ ಬರಡು ಎನ್ನುವ ಮನೋಸ್ಥಿತಿಯಲ್ಲಿ ಎಲ್ಲಾ ಪಕ್ಷ ಗಳಲ್ಲೂ ಅವಕಾಶಕ್ಕಾಗಿ ಪರಿತಪಿಸುತ್ತಿದ್ದಾರೆ. ಅವಕಾಶ ಸಿಕ್ಕವರಂತೂ ಯುದ್ಧಕ್ಕೆ ಹೊರಟ ಸೇನಾನಿಯಂತೆ `ದೇಶ ಸೇವೆಯೇ ಈಶ ಸೇವೆ’ ಎಂದು ಭಾವಿಸಿ, ತಮ್ಮ ತಮ್ಮ ಪಕ್ಷಗಳ ಭರವಸೆಯ ಮಹಾಪೂರವನ್ನೇ ಸುರಿಸುತ್ತಾ, ಸ್ಫುಟಿಸುತ್ತಾ ಮುಗ್ಧ ಮಹಾಜನತೆಯನ್ನು ಮರಳು ಮಾಡುವಲ್ಲಿ ಮಗ್ನರಾಗಿದ್ದಾರೆ.
ಅವಕಾಶ ಸಿಗದವರು ಕೆಲವರು ಭಾವುಕ ರಾದರೆ ಕೆಲವರು ರೋಷದಿಂದ ಬಂಡಾಯದ ಬಿಸಿ ತೋರಿಸುವುದಾಗಿ ಆರ್ಭಟಿಸುತ್ತಿದ್ದಾರೆ. ಇನ್ನು ಕೆಲವರಂತೂ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಬಹುತೇಕ ಎಲ್ಲಾ ಆಕಾಂಕ್ಷಿ ಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಇಚ್ಛೆ ಪೂರೈಸಿಕೊಂಡು ಅಭ್ಯರ್ಥಿಗಳಾಗಿ ಪರಿವರ್ತನೆ ಗೊಳ್ಳುವಲ್ಲಿ ಯಶಸ್ವಿಯಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇಷ್ಟೆಲ್ಲಾ ಅಭಿಲಾಷೆ, ಭಾವುಕತನ, ರೋಷಾಗ್ನಿ, ಮಂಗನಾಟ ಎಲ್ಲವೂ ಜನ ಸೇವೆಗಾಗಿಯೇ ಹೊರತು, ಸ್ವಾರ್ಥದ ಪ್ರತಿಷ್ಠೆ ಹಾಗೂ ಲಾಭಕ್ಕಾಗಿ ಅಲ್ಲವೇ ಎಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಇನ್ನು ಚುನಾವಣಾ ಕಣಕ್ಕೆ ಇಳಿದ ಮೇಲೆ ಜನಸೇವೆಯ ಪ್ರಮುಖ ಭಾಗವಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳ ಪಕ್ಷಿ ನೋಟವನ್ನು ಪ್ರಜೆಗಳ ಮುಂದಿಟ್ಟು ಅವರ ಮನವೊಲಿಸಿ ಮತ ಯಾಚಿಸುವುದನ್ನು ಬಿಟ್ಟು ಎದುರಾಳಿಯನ್ನು, ಅವರ ಪಕ್ಷವನ್ನು ಟೀಕಿಸುವುದನ್ನು ಪ್ರಚಾರದ ಮುಖ್ಯ ಅಜೆಂಡವಾಗಿಸಿಕೊಂಡು ಬಹುತೇಕ ಎಲ್ಲಾ ಅಭ್ಯರ್ಥಿಗಳು ಒಬ್ಬರ ಮರ್ಯಾದೆ ಇನ್ನೊಬ್ಬರು ತೆಗೆದು ಬೀಗುತ್ತಿರುವುದು ವಿಪರ್ಯಾಸದ ಸಂಗತಿ. ತಮ್ಮ ಪಕ್ಷದ ಧ್ಯೇಯೋದ್ದೇಶಗಳೇನು? ತಮ್ಮ ಪಕ್ಷ ಹಿಂದೆ ಮಾಡಿರುವ ಕೆಲಸಗಳೇನು? ಮುಂದೆ ಮಾಡುವ ಯೋಜನೆಗಳಾವುವು? ಯಾವುದು ಅವಶ್ಯ, ಯಾವುದು ಅತ್ಯವಶ್ಯ, ಯಾವುದು ಅನಾವಶ್ಯ? ಎಂಬ ಚಿಂತನೆಯನ್ನು ಜನತೆಯ ಜೊತೆ ಚರ್ಚಿಸಿ, ಜನತೆಯ ಅಭಿಲಾಷೆಯಂತೆ ಕಾರ್ಯ ಪ್ರವೃತ್ತರಾಗುವುದಾಗಿ ಭರವಸೆ ಕೊಟ್ಟು ಮತ ಬೇಡುವುದು ಉತ್ತಮ.
ವ್ಯತಿರಿಕ್ತವಾಗಿ ಪಕ್ಷಗಳು ತಮ್ಮದೇ ಆದ ಪೊಳ್ಳು ಭರವಸೆಗಳ ಪಟ್ಟಿ ತಯಾರಿಸಿ, ಮುಗ್ಧ ಜನತೆಯ ಮನವೊಲಿಸಿ, ಯಶಸ್ವಿಯಾಗುತ್ತಿರುವುದು ಕಟು ಸತ್ಯ ಹಾಗೂ ನಮ್ಮ ದೇಶದಲ್ಲಿ ಪ್ರಜ್ಞಾವಂತರ ಸಂಖ್ಯೆಗಿಂತ ಮುಗ್ಧರ ಸಂಖ್ಯೆ ಹೆಚ್ಚಾಗಿದ್ದು, ಬಹಳಷ್ಟು ಪ್ರಜ್ಞಾವಂತರು ಮತಗಟ್ಟೆಗೆ ಬಂದು ಮತ ಚಲಾಯಿಸದೆ ಕಾಫಿ ಕಟ್ಟೆಗಳಲ್ಲಿ ಟೀಕೆ ಮಾಡುವುದೇ ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿರುವುದು ಖೇದದ ಸಂಗತಿ.
ಇದೇ ಜಾಡನ್ನು ಹಿಡಿದು ರಾಜಕೀಯ ಪಕ್ಷಗಳು ಮತ್ತು ಬಹುತೇಕ ರಾಜಕಾರಣಿಗಳು ಮುಗ್ಧರ ಮನವೊಲಿಸಲು ಪೊಳ್ಳು ಭರವಸೆಗಳ ಮಹಾ ಪೂರವನ್ನೇ ಹರಿಸಿ, ಆಸೆ-ಆಮಿಷ ತೋರಿಸಿ ಮುಗ್ಧರ ಮತ ಗಳಿಸಿ, ಯಶಸ್ವಿಯಾಗಿ 5 ವರ್ಷ ನಿರಂತರ ಜನಸೇವೆ ಸೋಗು ಹಾಕಿ ಕೇವಲ ನಾಲ್ಕೈದು ವರ್ಷಗಳಲ್ಲಿ ತಲೆಮಾರಿಗಾಗುವಷ್ಟು ಮಾಡಿ ಕೊಳ್ಳುವಲ್ಲಿ ಸಫಲರಾಗಿ, ಮತ್ತೆ ಮುಂದಿನ ಚುನಾವಣೆಗೆ (ಜನ ಸೇವೆಗೆ) ಅಣಿಯಾಗುವುದು ವಾಡಿಕೆ.
ಪ್ರಜ್ಞಾವಂತರು ಎನಿಸಿಕೊಂಡ ಮತದಾ ರರು ಎಚ್ಚೆತ್ತು ಇನ್ನಾದರೂ ಪ್ರಜ್ಞಾವಂತರಾಗಿ ತಮ್ಮ ಅತ್ಯಮೂಲ್ಯವಾದ ಮತವನ್ನು ಕಡ್ಡಾಯ ವಾಗಿ ಚಲಾಯಿಸುವುದರ ಮೂಲಕ ಸಚ್ಚಾರಿತ್ರ್ಯ, ಸ್ವಾಭಿಮಾನ, ಸೇವಾ ಮನೋಭಾವ ಹಾಗೂ ದೂರ ದೃಷ್ಟಿಯುಳ್ಳ ಪರಿಣಿತ ಅಭ್ಯರ್ಥಿಗಳ ಆಯ್ಕೆಗೆ ತಮ್ಮ ಕೊಡುಗೆ ಅನಿವಾರ್ಯವೆಂ ಬುದನ್ನು ಮನಗಂಡು ಕಾಫಿ ಕಟ್ಟೆಯ ಮಾತು ಗಳನ್ನು ಮತಗಟ್ಟೆ ಮತಗಳಾಗಿ ಪರಿವರ್ತಿಸಿ ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಿ ಕ್ಷೇತ್ರಗಳ ಅಭಿವೃದ್ಧಿಗೆ ಪರೋಕ್ಷವಾಗಿ ತಾವೂ ಕಾರಣಕರ್ತರೆಂಬ ಮನೋಭಾವನೆಯೊಂದಿಗೆ ಸರ್ವರೂ ಮತ ಚಲಾಯಿಸಬೇಕಾಗಿದೆ.
-ಐಗೂರು ಚಂದ್ರಶೇಖರ್