ದಾವಣಗೆರೆ, ಮಾ.7- ಇಲ್ಲಿನ ವಿನೋಬನಗರದ ಲೇಖಕಿ ಶ್ರೀಮತಿ ಉಮಾದೇವಿ ಹಿರೇಮಠ ಅವರ ಆತಿಥ್ಯದಲ್ಲಿ ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಈಚೆಗೆ ಕವಿ ಡಾ. ಆನಂದ್ ಋಗ್ವೇದಿ ಹಾಗೂ ಕವಯತ್ರಿ ಶ್ರೀಮತಿ ಉಮಾದೇವಿ ಅವರ ಹುಟ್ಟುಹಬ್ಬ, ಚುಟುಕು ವಾಚನ, ಸಾಂಸ್ಕೃತಿಕ ಸಮ್ಮಿಲನ ಆಯೋಜಿಸಲಾಗಿತ್ತು. ಲೇಖಕ ಮಹಾಂತೇಶ್ ಬಿ. ನಿಟ್ಟೂರ್ ಅವರು ಶ್ರೀಮತಿ ಉಮಾದೇವಿ ಹಿರೇಮಠ ಅವರ `ಕಾಡಬೇಡ ನನ್ನ’ ಕವನ ಸಂಕಲನ ಹಾಗೂ ಡಾ. ಆನಂದ್ ಋಗ್ವೇದಿಯವರ `ಕರಕೀಯ ಕುಡಿ’ ಕಥಾ ಸಂಕಲನದ ಭಾವಾವಲೋಕನ ಮಾಡಿ ಎರಡೂ ಕೃತಿಗಳ ಸಮಾಜಮುಖಿ ಚಿಂತನೆ, ಭಾವ ಬೆಸುಗೆಯ ಒಳ ಹೊರಹುಗಳನ್ನು ವಿವರಿಸಿದರು.
ಸಮಾಜ ಸೇವಕಿ ಶ್ರೀಮತಿ ಮಹಾದೇವಮ್ಮ ಅವರು ಗೀತ ಗಾಯನ ಹಾಗೂ ಗಂಗಾಧರ ಬಿ.ಎಲ್. ನಿಟ್ಟೂರ್ ಅವರು ನೃತ್ಯದ ಮೂಲಕ ಮನರಂಜಿಸಿದರು.
ಆಹ್ವಾನಿತ ಕವಿ ಮಿತ್ರರಾದ ರಾಜೇಂದ್ರಪ್ರಸಾದ್ ನೀಲಗುಂದ, ಗಂಗಾಧರ ಬಿ ಎಲ್ ನಿಟ್ಟೂರ್, ಪಾಪುಗುರು, ಎನ್. ಎಸ್. ಸತೀಶ್, ತಾರೇಶ್ ಕೆ.ಪಿ ಅಣಬೇರು, ವೀರೇಶ್ ಬಿ., ಜಿ.ಎಂ. ಮಲ್ಲಮ್ಮ ನಾಗರಾಜ್, ಸುಭಾಷಿಣಿ ಮಂಜುನಾಥ್, ಅನ್ನಪೂರ್ಣ ಪಾಟೀಲ್, ಶೈಲಜಾ ಪಾಟೀಲ್ ಅವರು ಸ್ವರಚಿತ ಚುಟುಕು ವಾಚಿಸಿದರು.