ಹರಪನಹಳ್ಳಿ, ಫೆ.17- ಹರಪನಹಳ್ಳಿ ಹಾಗೂ ಜಗಳೂರಿನ ಗಡಿ ಗ್ರಾಮವಾದ ಮತಿಗಟ್ಟಿಹಳ್ಳಿಯ ರಸ್ತೆ ತೀರ ಹದಗೆಟ್ಟಿದ್ದು, ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ವಾಹನ ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಹಿಂದುಳಿದ ಗ್ರಾಮವಾದ ಮತಿಗಟ್ಟಿಹಳ್ಳಿಯಲ್ಲಿ ಸುಮಾರು 500 ಜನಸಂಖ್ಯೆ ಇದ್ದು ಮುಸ್ಲಿಮರೇ ಹೆಚ್ಚಾಗಿ ವಾಸವಿದ್ದಾರೆ. ಅಸಗೋಡಿನಿಂದ 3 ಕಿ.ಮೀ. ದೂರದಲ್ಲಿರುವ ಈ ಗ್ರಾಮದಿಂದ ಪ್ರತಿಯೊಂದು ಕೆಲಸಕ್ಕೂ ಅಸಗೋಡಿಗೆ ಹೋಗಬೇಕಾಗಿದೆ. ದಿನನಿತ್ಯ ಇದೇ ದಾರಿಯಲ್ಲಿ ಸಂಚರಿಸ ಬೇಕಿದ್ದು, ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳು ಸಹ ಇದೇ ದಾರಿ ಯಲ್ಲಿ ಸಂಚರಿಸಲಿದ್ದು, ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಮತಿಗಟ್ಟಿಹಳ್ಳಿಯ ಚಂದ್ರಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರಸ್ತೆ ಕಿತ್ತು ಹೋಗಿದ್ದು , ಬೈಕ್ , ಕಾರು ಈ ರಸ್ತೆ ಮೂಲಕ ಸಂಚರಿಸಿದರೆ ಪಂಕ್ಚರ್ ಆಗುವುದು ಸತ್ಯ. ದಿನ ನಿತ್ಯ ಇದೇ ರಸ್ತೆಯನ್ನು ಬಳಸಿಕೊಂಡು ಅಸಗೋಡಿಗೆ ಹೋಗಬೇಕು. ಗ್ರಾಮದ ಮುಖಂಡರು ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ತಾಲ್ಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ಕೊಟ್ಟರೂ ರಸ್ತೆ ದುರಸ್ತಿಯಾಗಿಲ್ಲ. ಹನುಮನಹಳ್ಳಿ ಮತ್ತು ರಾಮನಗರದವರು ಕೂಡ ಇದೆ ರಸ್ತೆಯಲ್ಲಿ ಸಂಚರಿಸಬೇಕು. ಆದ್ದರಿಂದ ಈ ರಸ್ತೆಯನ್ನು ಅತಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.