ಮಠಾಧೀಶರ ನಿಲುವು ರೈತಪರವಿರಲಿ..ಸ್ವಾಹಾ.
ಮೋದಿ ಅವರಿಗೆ ಮಸೂದೆ ಹಿಂಪಡೆಯುವ ಬುದ್ಧಿ ಬರಲಿ…ಸ್ವಾಹಾ.
ರೈತರ ಹೋರಾಟಕ್ಕೆ ಯಶಸ್ಸು ಸಿಗಲಿ…ಸ್ವಾಹಾ.
ಪೋಲಿಸರು ರೈತರೊಡನೆ ಸಹಕರಿಸಲಿ… ಸ್ವಾಹಾ.
ರೈತ ಕುಲ ನಾಶ ಮಾಡುವ ಕುತಂತ್ರಿಗಳಿಗೆ ಬುದ್ಧಿ ಬರಲಿ.. .ಸ್ವಾಹಾ.
ರೈತರು ಹೆದ್ದಾರಿ ಮಧ್ಯದಲ್ಲಿ ಹೋಮಕುಂಡ ರಚಿಸಿ ಅಗ್ನಿಗೆ ಎಣ್ಣೆ ಹಾಕುತ್ತಾ ಮೇಲಿನಂತೆ ಮಂತ್ರೋಚ್ಛಾರಣೆ ಮಾಡಿದ್ದು ವಿಶೇಷವಾಗಿತ್ತು.
ರಾಣೇಬೆನ್ನೂರು, ಫೆ.6- ದೆಹಲಿಯಲ್ಲಿ ಎರಡು ತಿಂಗಳುಗಳಿಂದ ಚಳುವಳಿ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ತಾಲ್ಲೂಕಿನ ಮಾಕನೂರ ತಿರುವಿನ ಬಳಿ ರೈತರು ಹೆದ್ದಾರಿ ಬಂದ್ ಮಾಡಿ ಹೋಮ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ರೈತ ವಿರೋಧಿ ಕೃಷಿ ತಿದ್ದುಪಡಿ ಮಸೂದೆಗಳನ್ನು ತಂದು ರೈತ ಕುಲವನ್ನೇ ನಾಶಮಾಡಿ ಕಾರ್ಪೊರೇಟ್ ಕಂಪನಿಗಳಿಗೆ, ದೊಡ್ಡ ದೊಡ್ಡ ಉದ್ಯಮಿಗಳಿಗೆ ಮಣೆ ಹಾಕುತ್ತಿರುವ ಕೇಂದ್ರ ಸರ್ಕಾರ ಕೂಡಲೇ ಮಸೂದೆಗಳನ್ನು ಶಾಶ್ವತವಾಗಿ ಹಿಂದೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೇಂದ್ರದ ರೈತ ವಿರೋಧಿ ನೀತಿಯನ್ನು ಪ್ರತಿಯೊಬ್ಬ ಪ್ರಜೆಗಳು ಅರಿತಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗೆ ನಡೆದಿರುವ ಹೋರಾಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ದೊರಕಿದೆ. ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದು, ಈ ಅರಿವಿನೊಂದಿಗೆ ಆಡಳಿತ ನಡೆಸಿರಿ ಎಂದು ಹೇಳಲಾಯಿತು.
ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ, ಎಂ. ರಾಜಶೇಖರ, ಎಚ್.ಎಸ್. ಪಾಟೀಲ, ನಾಗರಾಜ ಮಾಳಿಗೇರ, ಜಮಾಲ ಸಾಬ, ಬಿ.ಕೆ. ತೋಟಗಂಟಿ, ಕೆ.ಎಚ್. ಹದಡಿ, ಹನುಮಂತಪ್ಪ, ದಿಳ್ಳೆಪ್ಪ ಮತ್ತಿತರರು ಭಾಗವಹಿಸಿದ್ದರು. ತಹಶೀಲ್ದಾರ್ ಶಂಕರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ರೈತರು ನಡುರಸ್ತೆಯಲ್ಲಿ ಹೋಮ ಮಾಡಿದರೂ ಸಹ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಡಿವೈಎಸ್ಪಿ ಟಿ.ವಿ. ಸುರೇಶ, ಗ್ರಾಮೀಣ ವೃತ್ತ ನಿರೀಕ್ಷಕ ಎಸ್.ಪಿ. ಚೌಗಲೆ ಸೂಕ್ತ ಕ್ರಮ ಕೈಗೊಂಡಿದ್ದರು.