ಹೊನ್ನಾಳಿ ಕಾರ್ಯಕ್ರಮದಲ್ಲಿ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ವಿಶ್ಲೇಷಣೆ
ಹೊನ್ನಾಳಿ, ಫೆ.3 – ವೀರಶೈವ ಧರ್ಮಗ್ರಂಥಗಳನ್ನು ಆಧಾರವಾಗಿಟ್ಟಕೊಂಡು ನುರಿತ ವಿದ್ವಾಂಸರಿಂದ ಪುರೋಹಿತರು ಕೇಳುವ ಅನೇಕ ಪ್ರಶ್ನೆಗಳಿಗೆ ವಿಚಾರ ಸಂಕಿರಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಿದ್ದು, ಉತ್ತರಗಳನ್ನು ಕಂಡು ಕೊಳ್ಳುವ ಪ್ರಯತ್ನ ಮಾಡುವಂತೆ ಹಿರೇಕಲ್ಮಠದ ಶ್ರೀ ಚನ್ನಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಿನ್ನೆ ಇಲ್ಲಿ ಆರಂಭಗೊಂಡಿರುವ ಮೂರು ದಿನಗಳ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಅಧಿವೇಶನದಲ್ಲಿ ಇಂದು ಏರ್ಪಾಡಾಗಿದ್ದ 2ನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಭಕ್ತರ-ಭಗವಂತನ ಮಧ್ಯೆ ಪುರೋಹಿತರು ಕಾರ್ಯ ನಿರ್ವಹಿಸುತ್ತಾರೆ. ಇಬ್ಬರನ್ನೂ ತೃಪ್ತಿಪಡಿಸುವುದು ಪುರೋಹಿತರ ಕರ್ತವ್ಯವಾಗ ಬೇಕಿದೆ ಎಂದರು. ಭಕ್ತರು ಹಾಗೂ ಭಗವಂತ ತೃಪ್ತಿಯಾದರೆ ಮಾತ್ರ ಪುರೋಹಿತರು ಕೈಗೊಂಡ ಧಾರ್ಮಿಕ ವಿಧಿ ವಿಧಾನಗಳಿಗೆ ಸಾರ್ಥಕತೆ ಬರುತ್ತದೆ. ಕಾಟಾಚಾರದ ಕೈಂಕರ್ಯಗಳನ್ನು ಯಾವ ಕಾರಣಕ್ಕೂ ಮಾಡಬಾರದು ಎಂದು ತಿಳಿಸಿದರು.
ಯಾವುದೇ ಕಾಯಕ ಮಾಡಲಿ ಮಾಡುವ ಕೆಲಸದಲ್ಲಿ ಆಸಕ್ತಿ ಮತ್ತು ನಿಷ್ಠೆ ಇರಬೇಕು, ಎಲ್ಲಾ ಶುಭ ಕಾರ್ಯಗಳಲ್ಲಿ ಭಕ್ತರು ಪುರೋಹಿತರನ್ನು ನಂಬಿ ತಮ್ಮ ಮನೆಗಳಿಗೆ ಕರೆಸಿಕೊಳ್ಳುತ್ತಾರೆ. ನಂಬಿಕೆಗೆ ಧಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಬೇಡ ಜಂಗಮ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ. ಗಂಗಾಧರಯ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿದರು.
ಕತ್ತಿಗೆ ಮಠದ ಚನ್ನೇಶಯ್ಯಸ್ವಾಮಿ, ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತ್ರೀ ಮಠದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೃತ್ಯುಂಜಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಯಗಟಿ ಶಿವಲಿಂಗಸ್ವಾಮಿ, ಹಾಸನದ ದೇವರಾಜ ಶಾಸ್ತ್ರಿ, ಹಾಗೂ ಬೆಂಗಳೂರಿನ ಚಂದ್ರಶೇಖರ ಶಾಸ್ತ್ರಿ, ಚನ್ನೇಶ ಶಾಸ್ತ್ರಿ, ಪುಟ್ಟಯ್ಯ ಶಾಸ್ತ್ರಿ, ಬಸವರಾಜ ಶಾಸ್ತ್ರಿ, ಕೆ.ಜಿ. ಮಹದೇವಸ್ವಾಮಿ, ಸೋಮಶೇಖರಯ್ಯ ಶಾಸ್ತ್ರಿ ಮತ್ತಿತರರು ವಿವಿಧ ವಿಷಯಗಳ ಕುರಿತಂತೆ ಉಪನ್ಯಾಸ ನೀಡಿದರು.