ರೈತ ಮುಖಂಡರ ಆಕ್ಷೇಪ
ದಾವಣಗೆರೆ, ಏ.4- ಬನಶಂಕರಿ ಬಡಾವಣೆ ವ್ಯಾಪ್ತಿಯಲ್ಲಿ ಭದ್ರಾ ನೀರು ಹರಿದು ಪೋಲಾ ಗುತ್ತಿರುವುದಕ್ಕೆ ರೈತ ಸಂಘವು ಆಕ್ಷೇಪಿಸಿದೆ.
ನಗರದ ಬನಶಂಕರಿ ಬಡಾವಣೆ ವ್ಯಾಪ್ತಿಯಲ್ಲಿ 20 ಎಕರೆ ಜಮೀನೆಲ್ಲಾ ಭೂ ಪರಿವರ್ತನೆ ಆಗಿ ನಗರ ಪ್ರದೇಶ ಆಗಿದೆ. ಈ ಪ್ರದೇಶಕ್ಕೆ ವಿನಾಕಾರಣ ಹೆಚ್ಚಿನ ನೀರನ್ನು ಹರಿಸುತ್ತಿದ್ದು, ಹರಿದು ಬಂದ ನೀರು ಖಾಲಿ ಜಾಗದಲ್ಲಿ ನಿಂತು ಪೋಲಾಗುತ್ತಿದೆ. ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆ ಗಮನಿಸಿ ನೀರು ಉಳಿಸಲು ಮುಂದಾಗದಿರುವುದು ಶೋಚನೀಯ ಎಂದು ರೈತ ಮುಖಂಡರಾದ ಬಲ್ಲೂರ್ ರವಿಕುಮಾರ್, ಕುಮಾರಸ್ವಾಮಿ ಅಣಬೇರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ಪ್ರದೇಶಕ್ಕೆ ಅವಶ್ಯ ಎಷ್ಟು ಪ್ರಮಾಣ ಇದೆಯೋ ಅಷ್ಟು ನೀರನ್ನು ಬಿಟ್ಟು ಉಳಿದ ನೀರನ್ನು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ಕೊಟ್ಟರೆ ರೈತರಿಗೆ ಅನುಕೂಲವಾಗಲಿದೆ. ಆದರೆ ಈ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ಇಂತಹ ಸರಿ, ತಪ್ಪುಗಳನ್ನು ನೋಡಲು ಭೇಟಿ ನೀಡಲು ಸಮಯವಿಲ್ಲವೇ ಅಥವಾ ವಾಹನದ ಕೊರತೆಯೇ. ನೀರಿಗಾಗಿ ಪರಿತಪಿಸುತ್ತಿರುವಾಗ ಪೋಲಾಗುವುದನ್ನು ತಡೆಯಲು ಅಲಕ್ಷ್ಯ ಸರಿಯೇ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.