ಸಂಘರ್ಷದ ಪರಿಹಾರಕ್ಕೆ ಸಾಮರಸ್ಯವೇ ಮದ್ದು

ಶರಣ ಸಂಗಮದಲ್ಲಿ ಬಸವ ಪ್ರಭು ಶ್ರೀ ವಿಶ್ಲೇಷಣೆ

ದಾವಣಗೆರೆ, ಮಾ.4- ಇಂದು ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಹಾರಕ್ಕೆ ಸಾಮರಸ್ಯವೇ ಮದ್ದು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ಲೇಷಿಸಿದರು. 

ಶ್ರೀಗಳು ನಿನ್ನೆ ನಗರದ ಶ್ರೀ ಶಿವಯೋಗ ಮಂದಿರದಲ್ಲಿ ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು. 

ಸಂಘರ್ಷವು ವ್ಯಕ್ತಿ-ವ್ಯಕ್ತಿಗಳ ನಡುವೆ ಉದ್ಭವಿಸಿ, ಮುಂದೆ ಧರ್ಮ-ಧರ್ಮಗಳ ನಡುವೆ, ದೇಶ-ದೇಶಗಳ ನಡುವೆ ಬೆಳೆಯುತ್ತಾ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಜಾತಿ ಮಾನವ, ಭೀತಿ ಮಾನವ ವಿಜೃಂಭಿಸುತ್ತಿದ್ದು, ಮನುಷ್ಯ ಅಧಿಕಾರ, ಅಂತಸ್ತು ಗಳಿಸಲು ಹೋರಾಡುತ್ತಿದ್ದಾನೆ. ಇಂತಹ ಬೆಳವಣಿಗೆಯಿಂದಾಗಿ ಇಂದು ಎಲ್ಲೆಡೆ ಜಾತಿ ಮಾನವ ಕಾಣಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು. 

ಮನುಷ್ಯ ಅಣು-ಪರಮಾಣು ಬಾಂಬುಗಳಿಂದ ಭಯೋತ್ಪಾದನೆಯ ಹಾದಿಯತ್ತ ಸಾಗುತ್ತಾ ಭೀತಿ ಮಾನವನಾಗುತ್ತಿದ್ದಾನೆ ಎಂದರು.

ಮಾನವ ಕುಲ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಪ್ರೀತಿ ಮಾನವನಾಗುತ್ತಾನೆ. ಮುಂದೆ ಅವನೇ ವಿಶ್ವಮಾನವನಾಗುತ್ತಾನೆ ಎಂದು ಹೇಳಿದರು.

ಅತಿಥಿಗಳಾಗಿ ಎಸ್.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ.ಎಂ.ಮಂಜುನಾಥ್ ಮತ್ತು ಕ್ಷತ್ರಿಯ ಮರಾಠ ಸಮಾ ಜದ ಅಧ್ಯಕ್ಷ ಮಾಲತೇಶರಾವ್ ಜಾಧವ್ ಇವರುಗಳು ಆಗಮಿಸಿದ್ದರು. 

ಬಸವಕಲಾ ಲೋಕದವರಿಂದ ವಚನ ಸಂಗೀತ ನಡೆಯಿತು. ಎನ್.ಜೆ.ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಕಣಕುಪ್ಪಿ ಮುರುಗೇಶ್ ವಂದಿಸಿದರು. ಕಾರ್ಯಕ್ರಮದ ನಂತರ ಭೂಮಿಕ ವನಿತಾ ರಂಗ ವೇದಿಕೆಯ ಸದಸ್ಯರು ಭಾರತಾಂಭೆ ಎಂಬ ನಾಟಕವನ್ನು ಅಭಿನಯಿಸಿದರು.

error: Content is protected !!