ಜಗಳೂರು, ಮಾ.31- ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಸತ್ಯಮ್ಮ ದೇವಿ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ನೆರೆಹೊರೆಯ ಗ್ರಾಮಗಳಿಂದ ಆಗಮಿಸಿದ ಭಕ್ತ ಸಮೂಹ ರಥಕ್ಕೆ ಬಾಳೆ ಹಣ್ಣು, ತೆಂಗಿನಕಾಯಿ, ಉತ್ತತ್ತಿ ಸಮರ್ಪಿಸಿ ಭಕ್ತಿ ಪರ್ವ ಮೆರೆದರು. ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯ ನಡೆಸಲಾಯಿತು. ದೇವಿ ಬಳಿ ಸಂತಾನ, ಕಂಕಣ ಭಾಗ್ಯಗಳ ಹರಕೆ ಹೊತ್ತು ಸಫಲತೆ ಕಂಡವರು ತಮ್ಮ ಹರಕೆ ತೀರಿಸಿದರು. ಗ್ರಾಮದಲ್ಲಿ ಮೂರು ದಿನಗಳ ರಥೋತ್ಸವ ಜಾತ್ರೆ ಹಮ್ಮಿಕೊಳ್ಳಲಾಗಿದ್ದು, ರಥೋತ್ಸವದ ಮರುದಿನ ಬೆಲ್ಲದ ಗಾಡಿಯೊಂದಿಗೆ ಸರದಿ ಸಾಲಿನಲ್ಲಿ ಬೆಲ್ಲದ ಪಾನೀಯ ಹಂಚುವುದು ಸಾಮರಸ್ಯ ಜೀವನದ ಸಂಕೇತದ ಸಂಪ್ರದಾಯವಾಗಿದೆ.