ಹರಪನಹಳ್ಳಿ, ಜ.2- ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಪಟ್ಟಣದ ವಿವಿಧ ಶಾಲೆಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಹಾಜರಾತಿ, ಸೌಕರ್ಯ ಪರಿಶೀಲಿಸಿದರು. ಮೊದಲಿಗೆ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ, ಶಾಲಾರಂಭದ ಪರಿಸ್ಥಿತಿ ಪರಿಶೀಲಿಸಿದರು.
ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ತರಗತಿಗೆ ಹೋದಾಗ 10-12 ವಿದ್ಯಾರ್ಥಿಗಳು ಹಾಜರಿದ್ದರು. ಪೋಷಕರ ಮನವೊಲಿಸಿ ಮಕ್ಕಳ ಹಾಜರಾತಿ ಹೆಚ್ಚಿಸಿ ಎಂದು ಶಿಕ್ಷಕರಿಗೆ ತಿಳಿಸಿದರು.
ನಂತರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ, 10 ತಿಂಗಳು ಆದನಂತರ ಬರುತ್ತಿದ್ದೀರಾ, ಹೇಗೆ ಅನಿಸುತ್ತದೆ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿನಿಯರು ಖುಷಿ ಆಗೈತಿ ಎಂದು ಮುಗುಳ್ನಕ್ಕರು.
ಆಗ ಶಾಸಕರು ಹಾಗಾದರೆ ಚೆನ್ನಾಗಿ ಓದಿ ಎಂದು ಹೇಳಿ ನೋಟ್ಸ್‌ಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಕೆ.ಲಿಂಗಾನಂದ ಅವರು ಗ್ರಂಥಾಲಯವಿದೆ, ಅಲ್ಲಿ ಕುಳಿತು ಪುಸ್ತಕಗಳನ್ನು ಓದಲು 40 ಕುರ್ಚಿಗಳ ಅವಶ್ಯಕತೆ ಇದೆ ಎಂದು ಬೇಡಿಕೆ ಇಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಎಸ್ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆರ್.ಲೋಕೇಶ್, ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ರಾಘವೇಂದ್ರ ಶೆಟ್ಟಿ, ಕೆಂಗಳ್ಳಿ ಪ್ರಕಾಶ್, ಯು.ಪಿ.ನಾಗರಾಜ್, ಎಂ.ಸಂತೋಷ್, ಮುಖ್ಯ ಶಿಕ್ಷಕರು, ಶಿಕ್ಷಕರು ಇತರರು ಹಾಜರಿದ್ದರು.