ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ

ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ - Janathavaniಚಳ್ಳಕೆರೆ, ಜು.25- ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೇ ಬಡ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಚಿತ್ರದುರ್ಗ  ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಇಲ್ಲಿನ ವೀರಶೈವ ಸೇವಾ ಸಮಾಜ ಸಂಘದ ವತಿಯಿಂದ  ಜಿಲ್ಲೆಯ ಶಾಸಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಚಿವ ಸುಧಾಕರ್ ಮಾತನಾಡುತ್ತಿದ್ದರು.

ವೀರಶೈವ ಸಮಾಜದಲ್ಲಿ  ಇರುವ ನನ್ನ ಸ್ನೇಹಿತರು, ಮುಖಂಡರ  ಆಶೀರ್ವಾದವೂ ನನಗೆ ಸಿಕ್ಕಿದೆ.  ಹಾಗಾಗಿ ನಾನು ಹಿರಿಯೂರಿನಲ್ಲಿ ಗೆದ್ದು ಮತ್ತೆ ಸಚಿವನಾಗಿ ನಿಮ್ಮ ಮುಂದೆ ಮಾತನಾಡುವ ಸೌಭಾಗ್ಯ ದೊರಕಿದೆ ಎಂದರು.

ಸನ್ಮಾನ ಸ್ವೀಕರಿಸಿದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ  ವೀರಶೈವ ಸಮಾಜ ಸದಾ ನನ್ನೊಂದಿಗೆ ಇದ್ದು, ನನ್ನ ಏಳಿಗೆ ಬಯಸುತ್ತಾ ಬಂದಿದೆ. ಸಮಾಜದ ಯುವ  ಮುಖಂಡರು  ಸ್ವಾರ್ಥಕ್ಕಾಗಿ ಏನನ್ನೂ ಕೇಳಿಲ್ಲ, ಆದರೆ ವೀರಶೈವ ಸಮಾಜದ ಅಭಿವೃದ್ಧಿಗೆ, ಬೇಡಿಕೆಗಳಿಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.

ಚಿತ್ರದುರ್ಗ ಶಾಸಕ ಕೆ.ಪಿ.ವೀರೇಂದ್ರ ಮಾತನಾಡಿ, ನಮ್ಮ ಸಮಾಜದ ಬಂಧುಗಳು ಸನ್ಮಾನ ಮಾಡುವ ವಿಚಾರ ತಿಳಿಸಿದಾಗ ನನಗೆ ಮುಜುಗರವಾಯಿತು. ಆದರೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಕಂಡು ಬೆರಗಾಗಿದ್ದೇನೆ ಎಂದು ಹೇಳಿದರು. ವೀರಶೈವ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡಬೇಕಿದೆ, ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವೆಂದರು.  

ಭದ್ರಾವತಿ ತಾಲ್ಲೂಕು ಗೋಣಿಬೀಡು ಗ್ರಾಮದ ಹಿರಿಯ ರಂಗಕಲಾವಿದ ಆರಾಧ್ಯ  ಜ್ಯೂನಿಯರ್  ಅಂಬರೀಶ್ ಪಾತ್ರದಲ್ಲಿ ಹಾಡಿಗೆ ನೃತ್ತಿಸಿದರು.

ವೇದಿಕೆ ಮೇಲೆ ತಾಲ್ಲೂಕು ವೀರಶೈವ ಸಮಾಜದ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಪ್ರಸನ್ನಕುಮಾರ್, ಖಜಾಂಚಿ ವಾಸುದೇವ, ಕಾರ್ಯದರ್ಶಿ ಈಶ್ವರಪ್ಪ, ನಿರ್ದೇಶಕರಾದ  ಕೆ.ಎಂ.ಕೊಟ್ರೇಶ್,  ಮಾತೃಶ್ರೀ, ಎಸ್.ಮಂಜುನಾಥ್, ಶಿವಕುಮಾರ್, ಇಂದುಶೇಖರ್, ಎನ್. ಸತೀಶ್ ಬಾಬು, ಹೆಚ್.ಮಂಜುನಾಥ್, ನಾಗರಾಜ್, ಮಧುರ, ಪ್ರಾಧ್ಯಾಪಕ ಜಿ.ವಿ.ರಾಜಣ್ಣ, ವಿಜಯೇಂದ್ರ, ವಿ. ಮುರುಗೇಶ್ ಮತ್ತಿತರರು ಹಾಜರಿದ್ದರು. 

 

error: Content is protected !!