ಸಂಕೋಲೆಯೊಳಗಿಂದ ಸಿಡಿದೆದ್ದು ಬಾ

ಬಂಧನಗಳಿವು ಬಹುರೂಪ ತಾಳಿ
ಬಂಧಿಸುವವು ಬಹುಜೀವಿಗಳ
ಕೆಲವು ಭೌತಿಕ ಸಂಕೋಲೆಗಳು
ಇನ್ನು ಕೆಲವು ಮಾನಸಿಕ ಸಂಕೋಲೆಗಳು..
ಕೈ ಕಾಲುಗಳಿಗೆ ಹಗ್ಗ ಸರಪಳಿ ಸಂಕೋಲೆ
ರಾಸುಜೀವಕ್ಕೆ ಮೂಗುದಾಣದ ಸಂಕೋಲೆ
ಸಾಕುನಾಯಿಯ ಕತ್ತಿಗೆ ಚರ್ಮದ ಸಂಕೋಲೆ
ಭೌತಿಕ ಸಂಕೋಲೆಗಳಿವು ಇಂದಲ್ಲಾ ನಾಳೆ ಕಳಚಿಕೊಂಡಾವು.
ಸಮಾಜ ಹೇರುವ ಮಾನಸಿಕ ಸಂಕೋಲೆಗಳು ನೂರಾರು
ಹಲವಾರು ರೀತಿಯವು
ಬಂಧಿಸಿ ಬಾಧಿಸುವವು ಹೇಳಲಾಗದ ಬಗೆಯಲಿ
ಅರ್ಥವಿಲ್ಲದ ಕೆಲವಾರು ಕಿತ್ತೆಸೆದು ಬರಲುತ್ತಮವು.
ಸಂಸಾರವೆಂದೆನಿತೆ ಸಂಕೋಲೆಗಳ ಬಳುವಳಿ
ಜಗದೊಡೆಯ ಜಗದೊಳುತ್ತ ಬೀಜಗಳಿವು
ಜಗಜೀವದೊಡನಾಟಕ್ಕನುವಾಗುವ ಸಂಕೋಲೆಗಳಿವು
ಇದ್ದರಡ್ಡಿಯೇನಿಲ್ಲ, ಇಲ್ಲದಿರೆ ಬಾಳು ಬರಿದೆಲ್ಲ…!
ತಂದೆ ತಾಯ್ಮಕ್ಕಳು, ಸಹಜಾತರು
ನಡುವಣದ ಕರುಳ ಸಂಕೋಲೆ
ಗೆಳೆಯ ಬಾಂಧವ್ಯದ ಸ್ನೇಹ ಸಂಕೋಲೆ
ಸಿಡಿದೆದ್ದು ಬರಲಾರದ ಸಂಕೋಲೆಗಳಿವು ಭವಬಂಧನಗಳಿವು…
ಪ್ರೇಮಿಗಳ ನಡುವೆ ಮೋಹ ಪಾಶದ ಸಂಕೋಲೆ ಸಮಾಜ ಒಪ್ಪಿದೊಡೆ
ಗಂಡಹೆಂಡಿರ ಪವಿತ್ರ ಸಂಕೋಲೆಯಾದೀತು
ಒಪ್ಪದೊಡೆ ಸಂಕೋಲೆ ಸಿಡಿದು ಬಿದ್ದೀತು
ಇಲ್ಲವೇ ಬಲಗೊಂಡು ಸಮಾಜದಿಂದ ಹೊರಬಂದೀತು.
ಮೇಲ್ಜಾತಿ ಕೀಳ್ಜಾತಿ ಎನುವ ಜಾತಿಭೇದದ ಸಂಕೋಲೆ
ನೀನ್ಕಪ್ಸ ನಾನ್ಬಿಳುಪು ಎನ್ನುವ ವರ್ಣಸಂಕೋಲೆ
ಪುರುಷ ದಬ್ಬಾಳಿಕೆಗೊಳಗಾಗಿ, ಅತ್ಯಾಚಾರಕ್ಕೀಡಾಗಿ
ಬಳಲಿ ಬಸವಳಿದ ಮಹಿಳೆಯುಟ್ಟಿರುವ ಸಂಕೋಲೆ.
ಸಿರಿವಂತ ಬಡವಂಗೆ ತೊಡಿಸಿರುವ ದಾಸ ಸಂಕೋಲೆ
ಪರಮಾತ್ಮನನುಮತಿಯಿಲ್ಲವೀ ಸಂಕೋಲೆಗಳಿಗೆ
ನರಲೋಕ ಸಂಕೋಲೆಗಳಿವು, ಭಗವಂತನನುವುಂಟು
ಸಿಡಿಲೆದ್ದು ಬರಲಿಂತ ಸಂಕೋಲೆಗಳೊಳಗಿಂದ.


ಅಣ್ಣಾಪುರ್‌ ಶಿವಕುಮಾರ್,  ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]

error: Content is protected !!