ಆ ದಿನಗಳು…

ಮಾಯವಾದವೇ ಆ ದಿನಗಳು
ನೆಲ ಮುಗಿಲುಗಳ ಬೆಸೆದು
ಅಚ್ಚರಿಗೊಳಿಸಿದ ವಿಸ್ಮಯಗಳು
ಆ ದಿನಗಳು.

ಬಿಡದೆ ಜಿಟಿಜಿಟಿ ಹಿಡಿದು
ಸುರಿವಾ ಆ ಜಡಿ ಸೋನೆ
ಹೊಸಿಲು ದಾಟಲು ಬಿಡದೆ ಸುರಿಯುತ್ತಿತ್ತು…

ವರ್ಷಧಾರೆಗೆ ನೆನೆವ
ಮನೆಯ ಮೇಲ್ಸೂರಿನಲಿ
ಹಸಿರು ಬಣ್ಣದ ಪಾಚಿ ಕಟ್ಟುತ್ತಿತ್ತು…

ವರ್ಷಧಾರೆಯ ಕೊಡುಗೆ
ಕಾನನದ ಹಸಿರುಡುಗೆ
ವಸುಧೆಯುಡಿ ವರುಷಕ್ಕೆ ತುಂಬುತ್ತಿತ್ತು….

ಜರಿ ಹಳ್ಳ ಕೊಳ್ಳಗಳು
ತುಂಬಿ ಹರಿದೋಡಾಡಿ
ಇಳೆಯ ಎದೆ ಹಸಿರೊಡೆದು ಹರುಷದಲಿ ಬೀಗುತ್ತಿತ್ತು…

ಕಾಡಮಲ್ಲಿಗೆಗಳಿಂಪಿನಲಿ ಜೋಂಪಿಡಿಸಿ
ಹೊಂಗೆ ಹೂ ಪರಿಮಳಿಸಿ
ಹಾದಿಬದಿಯಲ್ಲೇ ಬ್ರಹ್ಮಕಮಲಗಳರಿಳಿ
ಇಂದ್ರನ್ಹೂದೋಟದಲಿ ಸಣ್ಣ ಸಂಚಾರವಿತ್ತು…

ಎಡಕೆ ಮಾವಲಸುಗಳು
ಬಲಕೆ ಹೊನ್ನುತ್ತತ್ತಿಗಳು
ಊರ ದಾರಿಯಲೇ ಹರುಷ ಹರಿಯುತ್ತಿತ್ತು…

ಎಲ್ಲಿ ಮರೆಯಾದವೋ ಆ ದಿನಗಳು
ಈ ದಿನಗಳ ಗದ್ದಲಕೆ
ಬೆದರೆಲ್ಲಿ ಹೋದವೋ ಆ ದಿನಗಳು.

ನೀರ ಬಿಂದುವಿನೊಳಗೆ
ಬಿಸಿಲ ಕಿರಣದ ಜಾಡು
ಕಾಡು ನುಂಗಿದ ನಾಡು

ಪುಂಡು ಮೋಡದ ಕದನ
ಗಗನಕೇರಿದ ಆಶಾ ಗೋಪುರಗಳ ಹೊಯ್ದಾಟ
ಈ ದಿನಗಳ ವಿಷಾದವಿದು…

ಋತು ಚಕ್ರ ಗತಿಯಲ್ಲಿ
ಬಾಹುಬಾಹುಗಳ ಕೂಡಿಸಿ
ಮೂಲೆಗಟ್ಟಿದ ಆ ದಿನಗಳ ನೆನಪುಗಳೇ
ನಮ್ಮೆದೆಯ ಜೋಗ ಜಲಪಾತ…

ನಮ್ಮ ನಾಳೆಗಳಿಗೆ
ನಾವೇ ತೋಡಿದ ಪ್ರಪಾತ…
ಅರಿವನರಿಯುವಾಳ ಅಂತರಂಗಕೆ ಬರದೆ
ಕಾಣಲಾರೆವು ಆ ದಿನಗಳ
ಜೀವ ತಣಿಸಿದ ಸಮ್ಮೋಹಕ ಕ್ಷಣಗಳ…


ಮಾರುತಿ ಬಾಲಣ್ಣನವರ
ರೈಲ್ವೆ ಇಲಾಖೆ, ದಾವಣಗೆರೆ.

error: Content is protected !!