ತಡರಾತ್ರಿಯಲಿ ಧಾವಂತದಲಿ
ಮನೆ ಕಡೆ ನಡೆದಿರುವ ಮಾನಿನಿಯರ ಎಡೆತಾಗಿ
ತಡೆಯುವ ರಾಕ್ಷಸರ ಸಂಹಾರ
ಮಾಡಲು ದಾರಿ ಯಾವುದು?
ಎದುರಾದ ಅಪಾಯದ ಮುನ್ನುಡಿಯ ಅರಿತು ಬೆದರುವ
ಹೆಣ್ಣುಗಳ ಆರ್ತನಾದ ಕೇಳದ
ಕಿವುಡು ಕಿರಾತಕರು ಅವರ ಕತ್ತಲೆಯಲ್ಲಿ
ಬೆತ್ತಲು ಮಾಡಿ ಮಾನಹರಣದ ಹೀನ ಕೃತ್ಯವೆಸಗುವರು.
ತನ್ನ ತಾ ಕಾಪಾಡಲಸಾಧ್ಯವಾದ
ದುರ್ಬಲತೆಯ ದೇವನೇಕೆ ಸೃಷ್ಟಿಸಿಹನು ಹೆಣ್ಣಿನಲಿ ಅವಳ
ಅಂಗರಚನೆಯೇ ಕುಕ್ಕುವುದೇಕೆ
ಕಾಮುಕರ ಕಣ್ಣಿನಲಿ.
ಹುಲಿಗಳಂತೆ ಎರಗಿ ಹೆಣ್ಣಿನ
ತನು ಮನವ ಹಣ್ಣು ಮಾಡುವ
ದುರುಳರ ಪೈಶಾಚಿಕ ನಡೆಗೆ
ಜೀವಂತ ಶವವಾಗಿ ಹೆಣ್ಣುತನವ
ಕಳೆದುಕೊಳ್ಳುವುದು.
ಚಿರಕಾಲದ ಅಗ್ನಿಕುಂಡವೊಂದು
ಅವಳ ಮನದಿ ಬೇಯುತಿರುವುದು
ಮಾತೃ ಸ್ವರೂಪಿ ಹೆಣ್ಣೆಂದು ಕಾಣುವ ಸಮಾಜದಿ ಇಂತಹ
ಘೋರಕೃತ್ಯವೇ
ರಕ್ಕಸರ ಹೆತ್ತ ಮಾತೃಪಿತೃಗಳಿಗೆ
ಈ ರೀತಿ ಅಪಮಾನವೇ
ಕ್ಷಮಿಸಲನರ್ಹರು ಕಿರಾತಕರು
ಎಂ.ಎಸ್.ಮಂಜುಳ ಮಂಜಪ್ಪ
ದಾವಣಗೆರೆ.